Monday, January 12, 2026

ಸತ್ಯ | ನ್ಯಾಯ |ಧರ್ಮ

ಮೋದಿಯನ್ನು ಕುಮಾರಸ್ವಾಮಿ ಟೀಕಿಸಿದಷ್ಟು ಕಾಂಗ್ರೆಸ್‌ ಕೂಡಾ ಟೀಕಿಸಿಲ್ಲ: ಎನ್. ಚಲುವರಾಯಸ್ವಾಮಿ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಹಿಂದೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ಗಿಂತಲೂ ಕಟುವಾಗಿ ಟೀಕೆ ಮಾಡಿದ್ದ ಈ ನಾಯಕರು, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಆದರೆ ಇಂದು ತಮ್ಮ ಸ್ವಂತ ಹಿತಾಸಕ್ತಿಗಾಗಿ ಅದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗದಿದ್ದರೆ ನರೇಗಾ ವಿಚಾರದಲ್ಲಿ ಬಿಜೆಪಿಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು, ಈಗ ಅವರಿಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಸಮರ್ಥಿಸಿಕೊಂಡ ಸಚಿವರು, “ಸಿದ್ದರಾಮಯ್ಯ ಒಬ್ಬ ಯಶಸ್ವಿ ಮತ್ತು ಸ್ಥಿರ ನಾಯಕ. ಆದರೆ ಕುಮಾರಸ್ವಾಮಿ ಅವರು ತಾವೇ ಒಪ್ಪಿಕೊಂಡಂತೆ ಒಬ್ಬ ‘ಸಾಂದರ್ಭಿಕ ಶಿಶು’. ಅವರು ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆಯೇ ಹೊರತು ಜನರ ಅಥವಾ ಕಾರ್ಯಕರ್ತರ ಹಿತಕ್ಕಾಗಿ ಅಲ್ಲ” ಎಂದು ಹೇಳಿದರು.

ಸಂಪುಟ ಪುನಾರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸದ್ಯಕ್ಕೆ ಇಂತಹ ಯಾವುದೇ ಬದಲಾವಣೆಗಳು ಅಪ್ರಸ್ತುತ, ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ” ಎಂದು ಸ್ಪಷ್ಟಪಡಿಸಿದರು.

ಗಾಂಧೀಜಿಯವರ ಹೆಸರನ್ನು ಯೋಜನೆಗಳಿಂದ ಕೈಬಿಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಚಿವರು ಖಂಡಿಸಿದರು. “ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ, ಮುಂದೆ ಅಂಬೇಡ್ಕರ್ ಅವರ ಹೆಸರನ್ನು ತೆಗೆದರೂ ಆಶ್ಚರ್ಯವಿಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು, ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಸ್ಥಳೀಯ ಶಾಸಕರು ಇದರ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page