Wednesday, September 11, 2024

ಸತ್ಯ | ನ್ಯಾಯ |ಧರ್ಮ

ವಿಶ್ವ ಆತ್ಮಹತ್ಯೆ ತಡೆ ದಿನ | ಭಾರತದಲ್ಲಿ ಪ್ರತಿ 4 ಸೆಕೆಂಡಿಗೆ ಒಬ್ಬರಂತೆ ವರ್ಷಕ್ಕೆ 1.80 ಲಕ್ಷ ಜನರಿಂದ ಆತ್ಮಹತ್ಯೆ!

ಅಭಿವೃದ್ಧಿ ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು, ಖಿನ್ನತೆಗೊಳಗಾದ ವಿದ್ಯಾರ್ಥಿಗಳು ತಮ್ಮೊಳಗಿನ ಭಯ ಹೋಗಲಾಡಿಸಿ, ಮಾನಸಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ “ಆತ್ಮಹತ್ಯೆ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿ” ಎಂಬ ಘೋಷ ವಾಕ್ಯದಡಿ ಮಂಗಳವಾರ ಏರ್ಪಡಿಸಲಾಗಿದ್ದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ಜಾಗೃತಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದ ಬಗ್ಗೆ ಜಿಗುಪ್ಸೆ, ಕೌಟುಂಬಿಕ ಕಲಹ, ವ್ಯಯಕ್ತಿಕ ಸಮಸ್ಯೆ, ಬಡತನ, ಆರ್ಥಿಕ ಸಮಸ್ಯೆ ಸೇರಿದಂತೆ ಇನ್ನಿತರ ಕ್ಷುಲ್ಲಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು ತಮ್ಮ ಅಮೂಲ್ಯ ಜೀವನ ಮೃತ್ಯುಪಾಶಕ್ಕೆ ತಳ್ಳದೆ ಎಲ್ಲಾ ರೀತಿಯ ಮಾನಸಿಕ ಖಿನ್ನತೆಗಳನ್ನು ಧೈರ್ಯದಿಂದ ಎದುರಿಸಿ ಜೀವನ ನಡೆಸಬೇಕು ಎಂದರು.

ಸಮಾಜದ ಎಲ್ಲಾ ವಿಭಾಗಗಲ್ಲಿ ಆತ್ಮಹತ್ಯೆ ಘಟನೆಗಳು ನಡೆಯುತ್ತಲಿದ್ದು, ಅದರಲ್ಲಿ ಹೆಚ್ಚಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮಗಿರುವ ಒತ್ತಡವನ್ನು ನಿಗ್ರಹಿಸಿಕೊಳ್ಳಲು ಹತ್ತಿರದ ಮನೋವೈದ್ಯರೊಡನೆ ಸಮಾಲೋಚನೆ ಮಾಡಿ ಆತ್ಮಹತ್ಯೆಯಿಂದ ದೂರ ಉಳಿಯಬೇಕು ಎಂದು ತಿಳಿಸಿದರು.

ಮಕ್ಕಳು ಪರೀಕ್ಷೆ-ಫಲಿತಾಂಶಗಳ ಕುರಿತು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಪ್ರಚೋದನೆಗೆಗೊಳಗಾಗದೇ ಆತ್ಮಸ್ಥೆöÊರ್ಯದಿಂದ ಎದುರಿಸಬೇಕು ಎಂದರು.

ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ಕುಟುಂಬದಲ್ಲಿ ಯಾರಾದರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಮಾನಸಿಕ ಆರೋಗ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ಪ್ರತಿ 4 ಸೆಕೆಂಡ್‌ಗೆ ಒಬ್ಬರಂತೆ 1.80 ಲಕ್ಷ ಜನರು ವಾರ್ಷಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಯಿದೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಖಿನ್ನತೆಗಳಗಾದರೊಡನೆ ಸಮಾಲೋಚನೆ ನಡೆಸಿ ಕಳೆದ ನಾಲ್ಕು ವರ್ಷಗಳಿಂದ 547 ಜನರ ಮನಃಪರಿವರ್ತನೆ ಮಾಡಿ ಆತ್ಮಹತ್ಯೆಯಿಂದ ದೂರಗೊಳಿಸಿರುವುದು ಸಂತಸದ ವಿಷಯವಾಗಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನರೋಗ ತಜ್ಞ ಡಾ.ರೋಹನ್ ವನಗುಂದಿ ಕಾರ್ಯಕ್ರಮ ಕುರಿತ ವಿಶೇಷ ಉಪನ್ಯಾಸ ನೀಡುತ್ತಾ, ವೈಯಕ್ತಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನದಲ್ಲಿ ಎಲ್ಲಾ ವರ್ಗದ ಜನರಿಗೆ ಒತ್ತಡ ಬರುವುದು ಸಹಜ ಅದನ್ನು ಸಮತೋಲನ ಭಾವನೆಯಿಂದ ನಿರ್ವಹಿಸಬೇಕು ಎಂದರು.

ಜನಸಾಮಾನ್ಯರು ದೈಹಿಕವಾಗಿ ಸದೃಢರಾಗಲು ವ್ಯಾಯಾಮ, ಕಸರತ್ತು, ಡಯಟ್‌ನಂತಹ ಜೀವನ ಶೈಲಿಗೆ ಮೊರೆಹೋಗುತ್ತಾರೆ. ಆದರೆ ಮಾನಸಿಕವಾಗಿ ಆರೋಗ್ಯದಿಂದಿರಲು ಯೋಗ, ಧ್ಯಾನ, ದೃಢವಾದ ಆತ್ಮವಿಶ್ವಾಸ ಹಾಗೂ ಧನಾತ್ಮಕ ಯೋಚನೆಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ವಯಸ್ಕರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದು, ಸಮಸ್ಯೆಗಳಿಗೆ ಸಾವು ಒಂದೇ ಪರಿಹಾರವಾಗಿರುವುದಿಲ್ಲ. ನಿಜ ಜೀವನದ ಕುರಿತು ಮನದಟ್ಟಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾನಸಿಕ ಖಾಯಿಲೆಗೆ ಭಯಬೀತರಗಾದೆ ನಿಮ್ಮಲ್ಲಿರುವ ಗೊಂದಲ, ಪ್ರಶ್ನೆಗಳಿಗೆ ನಿಮ್ಮ ನೆರೆಹೊರೆಯವ ಹತ್ತಿರ ಮಾತನಾಡಿ, ಭಾವಾನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು ಜೀವನ ನಡೆಸಬೇಕು ಅಥವಾ ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್‌ನ ಉಚಿತ ಸಹಾಯವಾಣಿ 14416 ಗೆ ಕರೆಮಾಡಿ 24/7 ಸಮಯದಲ್ಲಿ ನಿಮ್ಮ ವ್ಯಯಕ್ತಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಗಳಿದ್ದಲ್ಲಿ ತಜ್ಞರ ಸಲಹೆ ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು.

ಈ ವೇಳೆ ಆತ್ಮಹತ್ಯೆಗೆ ಕಾರಣ ಖಿನ್ನತೆ ಹಾಗೂ ಟೆಲಿ ಮನಸ್‌ನ ಕರಪತ್ರ ಬಿಡುಗಡೆಗೊಳಿಸಲಾಯಿತು.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ಪಿಐ ಟಿ.ಸುಭಾಷ್ ಚಂದ್ರ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್.ದಾಸಪ್ಪನವರ, ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಶ್ರೀನಿವಾಸುಲು, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ಮಿಕ್‌ನ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ, ಪ್ರಾಂಶುಪಾಲರಾದ ಶ್ರೀಶೈಲ ಗೌಡ ಬಾಣಾಪುರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page