Friday, June 14, 2024

ಸತ್ಯ | ನ್ಯಾಯ |ಧರ್ಮ

ಪರಿಷತ್ ಚುನಾವಣೆ: ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯ, ಸ್ವತಂತ್ರ ಸ್ಪರ್ಧೆ

ಉಡುಪಿ: ಬಂಡಾಯವೆದ್ದಿರುವ ಉಡುಪಿಯ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಮುಂಬರುವ ಜು.3ರಂದು ನಡೆಯಲಿರುವ ಎಂಎಲ್‌ಸಿ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ರಘುಪತಿ ಭಟ್ ಅವರು ಈ ಭಾಗದ ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅವರಿಗೆ ಟಿಕೆಟ್ ನಿರಾಕರಿಸಿ ಯಶಪಾಲ್ ಸುವರ್ಣರನ್ನು ಕಣಕ್ಕಿಳಿಸಿತ್ತು. ಅಂದಿನಿಂದ ರಘುಪತಿ ಭಟ್‌ ನ್ಯೂಟ್ರಲ್‌ ಮೋಡಿನಲ್ಲಿದ್ದರು. ಆದರೆ ಈಗ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಹಠಾತ್‌ ಬಂಡಾಯವನ್ನು ಘೋಷಿಸಿದ್ದಾರೆ.

ತನ್ನ ಬದಲಿಗೆ ಸುವರ್ಣರಿಗೆ ಟಿಕೆಟ್‌ ನೀಡಿದ್ದ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಕಣ್ಣೀರಿಡುತ್ತಾ ಘೋಷಿಸಿದ್ದರು.

ಭಟ್ಟರು ಪ್ರಸ್ತು ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದ ಎಂಎಲ್‌ಸಿ ಟಿಕೆಟ್ ನಿರೀಕ್ಷೆಯಲ್ಲಿದ್ದರು ಮತ್ತು ಅದಕ್ಕಾಗಿ ತೀವ್ರ ಲಾಬಿಯನ್ನೂ ನಡೆಸಿದ್ದರು ಆದರೆ ಪಕ್ಷವು ಡಾ. ಧನಂಜಯ ಸರ್ಜಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಇತ್ತೀಚೆಗೆ ಪಕ್ಷಕ್ಕೆ ಎಂಟ್ರಿ ಕೊಟ್ಟಿರುವ ಧನಂಜಯ್ ಸರ್ಜಿಗೆ ತಮ್ಮಂತಹ ಪಕ್ಷದ ಹಳೆಯ ನಾಯಕರನ್ನು ಕಡೆಗಣಿಸಿ ಟಿಕೆಟ್‌ ಕೊಟ್ಟಿರುವುದಕ್ಕೆ ರಘುಪತಿ ಭಟ್‌ ಕಿಡಿ ಕಾರಿದ್ದಾರೆ.

ಅವರು ಈ ಹಿಂದೆ ತಾನೇ ಸೇರಿಸಿದ್ದ 38,000 ಹೊಸ ಮತದಾರರ ಬೆಂಬಲದ ನಿರೀಕ್ಷೆಯಲ್ಲಿದ್ದರು.

ಬಿಜೆಪಿಗೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ ಭಟ್, ಶಿಕ್ಷಕರು ಮತ್ತು ಪದವೀಧರರ ಕಲ್ಯಾಣಕ್ಕಾಗಿ ತಮ್ಮ ಬದ್ಧತೆಯ ಕಾರಣಕ್ಕಾಗಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮೇ 16 ರಂದು ನಾಮಪತ್ರ ಸಲ್ಲಿಕೆಯಾಗಲಿದ್ದು, ಸಂಭಾವ್ಯ ಪರಿಣಾಮಗಳ ಹೊರತಾಗಿಯೂ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಭಟ್ ಪ್ರತಿಪಾದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು