ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಮತ್ತು ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್‌ಗೆ ಆರು ಬಾರಿ ಪೆರೋಲ್ ನೀಡಿದ ಜೈಲು ಅಧಿಕಾರಿ ಬಿಜೆಪಿ ಶಾಸಕರಾಗಿ ಗೆದ್ದಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನ ಜೈಲು ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಸುನಿಲ್ ಸಾಂಗ್ವಾನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಮನೀಶಾ ಸಾಂಗ್ವಾನ್ ವಿರುದ್ಧ 1,957 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ ದಾದ್ರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಸೋಮವೀರ್ ಸಂಗ್ವಾನ್ ಗೆದ್ದಿದ್ದರು. 2019ರಲ್ಲಿ, ಇಂಡಿಯನ್ ನ್ಯಾಷನಲ್ ಲೋಕದಳದ ರಾಜದೀಪ್ ಫೋಗಟ್ ಈ ಸ್ಥಾನವನ್ನು ಗೆದ್ದರು.
ಏತನ್ಮಧ್ಯೆ, ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಕಳೆದ ಎರಡು ವರ್ಷಗಳಲ್ಲಿ ಹತ್ತು ಬಾರಿ ಪೆರೋಲ್ ನೀಡಲಾಗಿದೆ. ಇತ್ತೀಚೆಗೆ ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 21 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು. ಅಲ್ಲದೆ, ಅಕ್ಟೋಬರ್ 5 ರಂದು ನಡೆದ ಹರಿಯಾಣ ಚುನಾವಣೆಯಲ್ಲಿ ಮತ ಚಲಾಯಿಸಲು ರಾಮ್ ರಹೀಮ್ ಅಕ್ಟೋಬರ್ 2 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಈ ಹಿನ್ನಲೆಯಲ್ಲಿ ಆರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ತಮ್ಮ ಬೆಂಬಲಿಗರು ಹಾಗೂ ಹಿಂಬಾಲಕರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದಾನೆ ಎಂಬ ವರದಿಗಳು ಬಂದಿವೆ.
ಮತ್ತೊಂದೆಡೆ, ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನಲ್ಲಿ ರಾಮ್ ರಹೀಮ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಅವನನ್ನು ಜೈಲಿನಿಂದ ಬಿಡುಗಡೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಚುನಾವಣಾ ಆಯೋಗಕ್ಕೆ ಈ ಕುರಿತು (ಇಸಿ) ದೂರು ನೀಡಲಾಗಿದೆ.