“ಹೊರಗಿಡು”ವುದು ಮತ್ತು “ಒಳಗೊಳ್ಳು”ವುದು

ಡಾ.ನಿತ್ಯಾನಂದ ಬಿ ಶೆಟ್ಟಿ ಮತ್ತು ನವೀನ್ ಸೂರಿಂಜೆ ಅವರ ಕುರಿತು ದಿನೇಶ್ ಅಮೀನ್ ಮಟ್ಟು ಅವರ ಟೀಕೆಗಳ ಬಗ್ಗೆ ವಾಸುದೇವ ಉಚ್ಚಿಲ ಅವರ ಬರಹದಲ್ಲಿ

ಯಕ್ಷಗಾನದ ಚೌಕಿಪೂಜೆಗೆ ಬ್ರಾಹ್ಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ನವೀನ್ ಸೂರಿಂಜೆ ಅವರ ಮಾತುಗಳು, ಅದಕ್ಕೆ ಕಾರಣವಾಗಿದ್ದ ನಿತ್ಯಾನಂದ ಶೆಟ್ಟಿಯವರ ಅಧ್ಯಯನ ಗ್ರಂಥದ ಪುಟದ ಉಲ್ಲೇಖ, ನವೀನ್ ಸೂರಿಂಜೆ ಯವರ ಮಾತುಗಳನ್ನು ಆಕ್ಷೇಪಿಸಿ ಕಟೀಲು ಕ್ಷೇತ್ರದ ಹರಿನಾರಾಯಣ ಆಸ್ರಣ್ಣನವರ ಮಾಡಿದ ಟೀಕೆಗಳು ಇವತ್ತು ಸಾರ್ವಜನಿಕ ಚರ್ಚೆಯಲ್ಲಿವೆ.

ಇವುಗಳ ಹಿನ್ನೆಲೆಯಲ್ಲಿ ಮಾಧ್ಯಮ ಬರಹಗಾರ ದಿನೇಶ್ ಅಮೀನ್ ಮಟ್ಟು ಅವರು ನಿತ್ಯಾನಂದ ಶೆಟ್ಟಿಯವರನ್ನೂ ನವೀನ್ ಸೂರಿಂಜೆ ಯವರನ್ನು ಕಟು ಟೀಕೆಗೆ ಒಳಪಡಿಸಿದ್ದಾರೆ. ನಿತ್ಯಾನಂದರನ್ನಂತೂ ತೀರಾ ಅವಹೇಳನಕಾರಿಯಾಗಿ ಟೀಕಿಸಿದ್ದಾರೆ.ಈ ಟೀಕೆಗಳು ಪ್ರಕಟವಾಗಿರುವುದು ಸಾರ್ವಜನಿಕ ವಲಯದ ಆನ್ ಲೈನ್ ಮಾಧ್ಯಮಗಳಲ್ಲಿ.

“ಅಭಿಮತ” ಮತ್ತು “ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್” ಜೊತೆಯಾಗಿ ನಿತ್ಯಾನಂದ ಶೆಟ್ಟರ “ಅಳವು ಅರಿಯದ ಭಾಷೆ” ಎಂಬ ಅಧ್ಯಯನ ಗ್ರಂಥದ ಹಿನ್ನೆಲೆಯಲ್ಲಿ “ಕರಾವಳಿಯ ಸಾಂಸ್ಕೃತಿಕ ರಾಜಕಾರಣ” ಕುರಿತಾದ ಒಂದು ದಿನದ ವಿಚಾರಸಂಕಿರಣದಲ್ಲಿ ಯಕ್ಷಗಾನದ ಕೋಮುವಾದೀಕರಣ ಹೇಗೆ ಕರಾವಳಿಯ ಜನಜೀವನವನ್ನು ಕಲುಷಿತ ಗೊಳಿಸುವುದರಲ್ಲು ಪೋಷಕ ಪಾತ್ರ ವಹಿಸಿತು ಎಂಬುದು ಚರ್ಚೆಯ ವಿಷಯವಾಗಿತ್ತು. “ಅಭಿಮತ” ವು ಈ ಹಿಂದೆ “ಜನನುಡಿ” ಯಂಥ ಸಾಂಸ್ಕೃತಿಕ ಉತ್ಸವಗಳನ್ನು ಐದು ಬಾರಿ ನಡೆಸಿದೆ. ಇದರ ಆಯೋಜಕರಲ್ಲಿ ನವೀನ್ ಅವರೂ ಒಬ್ಬರು.ದಿನೇಶ್ ಅಮೀನ್ ಅವರು ಆ ಉತ್ಸವಗಳಿಗೆ ಸಲಹೆಗಾರರೂ ಆಗಿದ್ದರು. ಆ” ಜನನುಡಿ” ಉತ್ಸವಗಳಲ್ಲಿ ಉಮೇದಿನಿಂದ ಭಾಗವಹಿಸುತ್ತಲೂ ಇದ್ದರು. ನಿತ್ಯಾನಂದ ಶೆಟ್ಟರು ಅದರಲ್ಲಿ ಯಾವತ್ತೂ ಭಾಗವಹಿಸಿದಂತಿಲ್ಲ. ಹಾಗಂತ ಅವರನ್ನು “ಅಭಿಮತ” ಮತ್ತು “ಜನನುಡಿ” ಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಅರ್ಥವಲ್ಲವಲ್ಲ? ಅವರು ಬರೆದ ಕೃತಿ ಜನಸಾಂಸ್ಕೃತಿಕ ಚಳುವಳಿಗೆ ಪೂರಕವಾಗಿದೆ ಎಂದು ಆಯೋಜಕರಿಗೆ ಅನಿಸಿ ಆ ಬಗ್ಗೆ ಸಂವಾದ ಇಟ್ಟುಕೊಂಡಿದ್ದಾರೆ. ನಿತ್ಯಾನಂದ ಶೆಟ್ಟಿಯವರು ಈ ಹಿಂದೆ ಏನು ಬರೆದಿದ್ದರು ಅಥವಾ ಅವರ ನಡೆಗಳು ಹೇಗಿದ್ದುವು ಎನ್ನುವುದು ಮುಖ್ಯವಾಗುವುದಿಲ್ಲ. ಅದನ್ನು ನಿತ್ಯಾನಂದ ಶೆಟ್ಟಿಯವರೂ ಹೇಳದೆ ಉಳಿದಿಲ್ಲ. ಆಯೋಜಕರಿಗೂ ಅವರ ಬಗ್ಗೆ ತಕರಾರುಗಳಿವೆ.

ಒಂದು ಜನಸಾಂಸ್ಕೃತಿಕ ಚಳವಳಿಯ ನಡೆಯಲ್ಲಿ ಎಲ್ಲರನ್ನೂ “ಹೊರಗಿಡು” ವುದೇ ಪ್ರಧಾನವಾಗಬಾರದು.”ಒಳಗೊಳ್ಳು”ವಿಕೆಯೂ ಬೇಕು. ಇಂಥದೊಂದು ದ್ವಂದ್ವಾತ್ಮಕ‌ ಗ್ರಹಿಕೆ ರಾಜಕೀಯ ಚಳುವಳಿಯನ್ನು ಮಾತ್ರವಲ್ಲ , ಸಾಂಸ್ಕೃತಿಕ ಚಳುವಳಿಯನ್ನು ಮುನ್ನಡೆಸಲೂ ಬೇಕಾಗಿದೆ.

ಜನಕೇಂದ್ರಿತ ಚಳುವಳಿಯಲ್ಲಿ ಮಾಧ್ಯಮ ಮತ್ತು ಸಾಹಿತ್ಯ ರಂಗಗಳಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಹಾಗೂ ನವೀನ್ ಸೂರಿಂಜೆ ಅವರು ವಹಿಸುತ್ತಿರುವ ಪಾತ್ರಕ್ಕಾಗಿ ನಮಗೆ ಅವರ ಬಗ್ಗೆ ಹೆಮ್ಮೆ ಇದೆ. ನಮ್ಮ ಅರಿವನ್ನು ವಿಸ್ತರಿಸುವ ವಿದ್ವತ್ಪೂರ್ಣ ಕೃತಿಯೊಂದನ್ನು ಡಾ. ನಿತ್ಯಾನಂದ ಶೆಟ್ಟಿಯವರು ನೀಡಿದ್ದಾರೆ. ವಿದ್ವಾಂಸರನ್ನು ಅವಹೇಳನಗೊಳಿಸುವುದರಿಂದ ನಾವೇ ಸಣ್ಣವರಾಗುತ್ತೇವೆ. ಅವರಿಂದ ಚಳುವಳಿ ಪಡೆದುಕೊಳ್ಳಬಹುದಾದದ್ದು ಇನ್ನೂ ಇರಬಹುದು. ಸಾರ್ವಜನಿಕವಾಗಿ ವ್ಯಕ್ತಿಗಳ ಬಗ್ಗೆ ನಾವು ಮಾಡುವ ಟೀಕೆಗಳು ಚಳುವಳಿಯಲ್ಲಿ ಒಂದು ಅರಾಜಕತೆಯನ್ನು ಉಂಟುಮಾಡಬಹುದು.ನಮ್ಮ ವೈರಿಗಳಾದ ಕೋಮುವಾದ ಮತ್ತು ಇನ್ನಷ್ಟು ದಮನಕಾರಿಯಾದ ಫ್ಯಾಸಿಸಮ್ಮನ್ನು ಎದುರಿಸಬೇಕಾದ ಜನಸಾಂಸ್ಕೃತಿಕ ಏಕತೆಗಾಗಿ ಪ್ರಯತ್ನಿಸೋಣ.

ಪಿ. ಲಂಕೇಶ್ ಅವರಿಗೆ ಯು ಆರ್ ಅನಂತಮೂರ್ತಿ , ಗಿರೀಶ್ ಕಾರ್ನಾಡ್ ಅವರ ನಡೆಗಳ ಬಗ್ಗೆ ಅಸಮಾಧಾನಗಳಿದ್ದುವು ; ಆದರೆ ಅವರಿಬ್ಬರ ಪ್ರತಿಭೆಯ ಬಗ್ಗೆ ಬೆರಗು ಹಾಗೂ ಪ್ರಶಂಸೆಯೂ ಇದ್ದವು.

Related Articles

ಇತ್ತೀಚಿನ ಸುದ್ದಿಗಳು