ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 13, 2024) ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಜರ್ ಕ್ರಮದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಮೇಲೆ ತನ್ನ ತೀರ್ಪನ್ನು ನೀಡಿತು ಮತ್ತು ಇದು ತಪ್ಪು ವಿಧಾನ ಎಂದು ಾದು ಹೇಳಿದೆ.
ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ತೀರ್ಪು ನೀಡುವಾಗ ಕವಿ ಪ್ರದೀಪ್ ಅವರ ಕವಿತೆಯನ್ನು ಉಲ್ಲೇಖಿಸಿ, ಮನೆಯೆನ್ನುವುದು ಎಲ್ಲರಿಗೂ ಮಹತ್ವದ್ದು, ಹೀಗಿರುವಾಗ ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಒಬ್ಬರ ಮನೆಯನ್ನು ಒಡೆದರೆ ಅವರ ಇಡೀ ಕುಟುಂಬಕ್ಕೆ ಶಿಕ್ಷೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಹಿಂದಿ ಕವಿ ಪ್ರದೀಪ್ ಅವರ ಕವಿತೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಗವಾಯಿ, ‘ಮನೆ ಒಂದು ಕನಸು, ಅದನ್ನು ಎಂದಿಗೂ ಒಡೆಯಲಾಗದು’ ಎಂದು ಹೇಳಿದರು. ಕವಿಯು ಕವಿತೆಯಲ್ಲಿ ಹೀಗೆ ಹೇಳಿದ್ದಾರೆ – ಸ್ವಂತ ಮನೆ, ಸ್ವಂತ ಅಂಗಳ, ಇದೇ ಕನಸಿನಲ್ಲಿ ಜನರು ಬದುಕುತ್ತಾರೆ. ಮನೆಯ ಕನಸು ಎಂದಿಗೂ ನಶಿಸಬಾರದು ಎಂಬುದು ಮಾನವ ಹೃದಯದ ಬಯಕೆ. ಆರೋಪಿ ಅಥವಾ ಅಪರಾಧಿಯ ಮನೆ ಕೆಡವುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಯಾರೋ ಒಬ್ಬ ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಅವನ ಮನೆ ಕೆಡವುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಗವಾಯಿ ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಕಾನೂನನ್ನು ಕೈಗೆತ್ತಿಕೊಂಡು ಅನಿಯಂತ್ರಿತವಾಗಿ ವರ್ತಿಸುವ ಅಧಿಕಾರಿಗಳನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಖು ಎಂದಿದೆ.
ಕಾರ್ಯಾಂಗ ಇಂತಹ ಕ್ರಮಕ್ಕೆ ಅವಕಾಶ ನೀಡುವುದು ಕಾನೂನಿನ ನಿಯಮಕ್ಕೆ ವಿರುದ್ಧ ಮತ್ತು ಇದು ಅಧಿಕಾರ ವಿಭಜನೆಯ ತತ್ವಕ್ಕೂ ವಿರುದ್ಧವಾಗಿದೆ ಏಕೆಂದರೆ ಶಿಕ್ಷೆ ವಿಧಿಸುವುದು ನ್ಯಾಯಾಂಗದ ಕೆಲಸ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾರನ್ನಾದರೂ ಅಪರಾಧಿ ಎಂದು ನಿರ್ಣಯಿಸುವುದು ಸರ್ಕಾರದ ಕೆಲಸವಲ್ಲ ಮತ್ತು ಕೇವಲ ಆರೋಪದ ಮೇಲೆ ಯಾರೊಬ್ಬರ ಮನೆಯನ್ನು ಕೆಡವಿದರೆ ಅದು ಕಾನೂನಿನ ಮೂಲ ತತ್ವದ ಮೇಲೆ ದಾಳಿಯಾಗುತ್ತದೆ ಎಂದು ನ್ಯಾಯಮೂರ್ತಿ ಗವಾಯಿ ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಸ್ವತಃ ನ್ಯಾಯಾಧೀಶರಾಗಲು ಮತ್ತು ಆರೋಪಿಯ ಆಸ್ತಿಯನ್ನು ನೆಲಸಮಗೊಳಿಸುವ ನಿರ್ಧಾರವನ್ನು ಹೊರಡಿಸಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.