Thursday, July 17, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಯ ಸುರೇಶ್ ಕುಮಾರ್ ಅವರ ಹಿಂದುತ್ವ, ಪಕ್ಷನಿಷ್ಠೆ ಬಗೆಗಿನ ‘ಹೂತಿಟ್ಟ’ ಸಂಶಯಗಳು !

ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರ ನೈತಿಕತೆಯ ಬಗೆಗಿನ ಜನರ ಸಂಶಯಗಳನ್ನು ಅವರು ಮೊದಲು ಕ್ಲೀಯರ್ ಮಾಡಿಕೊಳ್ಳಬೇಕು. ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣವನ್ನು ಕೇರಳಕ್ಕೆ ವರ್ಗಾಯಿಸಿ ಎಂದು ಹಿರಿಯ ವಕೀಲ ಕೆ ವಿ ಧನಂಜಯ್ ಅವರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಬಿಜೆಪಿಯ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ‘ಸಂಶಯ’ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಅವರಿಗೆ ಮೂಡಿದ ‘ಸಂಶಯ’ವೇ ಸುರೇಶ್ ಕುಮಾರ್ ಬಗ್ಗೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.

ಸಂಶಯ 1. ಸುರೇಶ್ ಕುಮಾರ್ ಅವರು ಬಿಜೆಪಿಯ ಕಟ್ಟಾಳು ಆಗಿದ್ದರೆ ಕೆ ವಿ ಧನಂಜಯ್ ಪತ್ರ ಅವರಿಗೆ ಅಸ್ತ್ರವಾಗಬೇಕಿತ್ತು. ನೂರಾರು ಶವ ಹೂತಂತಹ ಗಂಭೀರ ಪ್ರಕರಣದಲ್ಲೂ ರಾಜ್ಯದ ಕಾಂಗ್ರೆಸ್ ಸರ್ಕಾರ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಿರಿಯ ವಕೀಲ ಕೆ ವಿ ಧನಂಜಯ್ ಅವರ ಪತ್ರ ಸಾರಿ ಹೇಳುತ್ತದೆ. ರಾಜ್ಯದ ಗೃಹ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಹಿರಿಯ ವಕೀಲರು ಎತ್ತಿರುವ ಆಕ್ಷೇಪವು ಬಿಜೆಪಿಯ ಸುರೇಶ್ ಕುಮಾರ್ ಅವರಿಗೆ ಅಪಥ್ಯವಾಗಿದ್ದು ಹೇಗೆ ? ರಾಜ್ಯದ ಜನರ ವಿಶ್ವಾಸವನ್ನು ಈ ಕಾಂಗ್ರೆಸ್ ಸರ್ಕಾರ ಕಳೆದುಕೊಂಡಿದೆ ಎಂದು ಹೇಳಲು ಕೆ ವಿ ಧನಂಜಯ್ ಅವರ ಪತ್ರವನ್ನು ಬಿಜೆಪಿಯ ಸುರೇಶ್ ಕುಮಾರ್ ಯಾಕೆ ಬಳಸಿಕೊಂಡಿಲ್ಲ ?

ಸಂಶಯ 2. ಮಾಜಿ ಕಾನೂನು ಸಚಿವರಿಗೆ ಕಾನೂನಿನ ಅರಿವಿಲ್ಲವೇ ? ಸುಪ್ರಿಂ ಕೋರ್ಟ್ ಮಾರ್ಗದರ್ಶನಗಳ ಜ್ಞಾನವಿಲ್ಲವೇ ? ಆರೋಪಿ ಪ್ರಭಾವಶಾಲಿಯಾಗಿದ್ದಾಗ, ಆರೋಪಿಯ ಹಿಂದೆ ಸರ್ಕಾರವೇ ನಿಂತಿದ್ದಾಗ ಅಂತಹ ಪ್ರಕರಣವನ್ನು ಆ ರಾಜ್ಯದಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗಾಯಿಸಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದು ಜನತಾ ಪಕ್ಷ, ಜನಸಂಘದ ಅಧ್ಯಕ್ಷರಾಗಿ ಸದ್ಯ ಬಿಜೆಪಿಯಲ್ಲಿರುವ ಸುಬ್ರಮಣಿಯನ್ ಸ್ವಾಮಿಯವರು.. ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿಟ್ಟ ಪ್ರಕರಣದಲ್ಲಿ ಪ್ರಭಾವಶಾಲಿಗಳು ಇರುವುದನ್ನು ಯಾರೂ ಅಲ್ಲಗೆಳೆಯಲ್ಲ. (ನನ್ನಂತಹ ನೂರು ಡಿಕೆಶಿಗಳು ಹೆಗ್ಗಡೆ ಪರ ನಿಲ್ತೇವೆ ಅಂತ ಡಿಸಿಎಂ ಡಿ ಕೆ ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದರು) ಅಂದ ಮೇಲೆ ಪ್ರಕರಣ ಕೇರಳಕ್ಕೆ ವರ್ಗಾಯಿಸೋದು ಸರಿ ಇದೆ. ಕೇರಳ ಬೇಡ ಎಂದರೆ ತಮಿಳುನಾಡು ರಾಜ್ಯದಲ್ಲಿ ವಿಚಾರಣೆ ನಡೆಯಲಿ.

ಸಂಶಯ 3. ದೂರುದಾರ ಸಾಕ್ಷಿಯೇ ನಾಪತ್ತೆಯಾಗುವ ಸಂಭವ ಇದೆ ಅಂತ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯೇ ಖುದ್ದು ಮಾಹಿತಿ ನೀಡುತ್ತಾರೆ. ಇದು ಪ್ರತಿಪಕ್ಷದ ಬಿಜೆಪಿಯ ನಾಯಕರಾಗಿರುವ ಸುರೇಶ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದ ವಿರುದ್ದದ ಅಸ್ತ್ರವಾಗಿರಬೇಕಿತ್ತು. ಒಬ್ಬ ದೂರುದಾರ, ಸಾಕ್ಷಿಯನ್ನು ರಕ್ಷಿಸಲಾಗದ, ನಾಪತ್ತೆಯಾಗದಂತೆ ಸೆಕ್ಯೂರ್ ಮಾಡಲಾಗದ ರಾಜ್ಯ ಸರ್ಕಾರಕ್ಕೆ ಸುರೇಶ್ ಕುಮಾರ್ ಛೀಮಾರಿ ಹಾಕಬೇಕಿತ್ತು. ಆದರೆ ಸುರೇಶ್ ಕುಮಾರ್ ರಾಜ್ಯ ಸರ್ಕಾರದ ಪರ ವಹಿಸಿರುವುದು ಸಂಶಯ ಮೂಡಿಸುತ್ತದೆ.

ಸಂಶಯ 4. ಹಿಂದೂ ಪರ, ಹಿಂದುತ್ವ ಪರ, ಹಿಂದೂ ಸಂಪ್ರದಾಯ, ಸನಾತನ ಪರ ಎಂದು ಹೇಳಿಕೊಳ್ಳುವ ಸುರೇಶ್ ಕುಮಾರ್ ಮತ್ತು ಇತರ ಹಿಂದುತ್ವವಾದಿಗಳ ನಿಲುವಿನ ಬಗೆಗೇ ಅನುಮಾನ ಮೂಡುತ್ತದೆ. ಅಕ್ರಮವಾಗಿ ಹೂತಿಡಲಾಗಿದೆ ಎಂದು ಹೇಳಲಾಗಿರುವ ನೂರಾರು ಶವಗಳು ಹಿಂದೂಗಳದ್ದೇ ಆಗಿದೆ. ಒಂದೇ ಒಂದು ಶವ ಬಿಜೆಪಿಗರು ಹೇಳುವ “ಅನ್ಯಧರ್ಮ”ಕ್ಕೆ ಸಂಬಂಧಪಟ್ಟಿದ್ದಲ್ಲ. ನೂರಾರು ಹಿಂದೂಗಳ ಮಾರಣ ಹೋಮ ನಡೆದಿದೆ ಎಂದು ಭಾವಿಸಿ ಯಾಕೆ ತನಿಖೆಗೆ ಆಗ್ರಹಿಸುತ್ತಿಲ್ಲ. ಪ್ರಭಾವಿಗಳು ಇಲ್ಲವೆಂದರೆ ಬಿಜೆಪಿ ಯಾಕೆ ಹಿಂದುತ್ವ ರಾಜಕಾರಣ ಮಾಡುತ್ತಿಲ್ಲ ?

ಸಂಶಯ 5. ಸುರೇಶ್ ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ದಿನಾಂಕ 13.02.2023 ರಂದು ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘ಬ್ರಾಹ್ಮಣರು ಪವಿತ್ರ ಸಂಪ್ರದಾಯ ಬಿಡಬಾರದು’ ಎಂದು ಕರೆಕೊಟ್ಟಿದ್ದರು. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, “ಧರ್ಮನಿಷ್ಠ ಹಿಂದೂ ಬ್ರಾಹ್ಮಣಳಾಗಿ, ತನ್ನ ಮಗಳ ಅಂತಿಮ ವಿಧಿಗಳನ್ನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಮಗಳ ಅಂತ್ಯಕ್ರಿಯೆಯ ವಿಧಿಗಳನ್ನು ಘನತೆಯಿಂದ ನಡೆಸಲು ಸಾಧ್ಯವಾಗುವಂತೆ ಅವಳ ಕಳೇಬರವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡಿ” ಎಂದು ವೃದ್ದ ಸುಜಾತ ಭಟ್ ಕೇಳಿಕೊಂಡಿದ್ದಾರೆ. ಮೇಲ್ವರ್ಗಗಳು ಜಾತಿ ಸಂಘಟನೆ ಮಾಡಬಾರದು, ಮಾಡಿದರೂ ಬ್ರಾಹ್ಮಣ ಸಭಾ ಸೇರಿದಂತೆ ಎಲ್ಲಾ ಜಾತಿ ಸಂಘಟನೆಗಳು ತಮ್ಮ ಜಾತಿಯ ದುರ್ಬಲರಿಗಾಗಿ ಕೆಲಸ ಮಾಡಬೇಕು‌. ಇಲ್ಲದಿದ್ದರೆ ಅಂತಹ ಜಾತಿ ಸಂಘಟನೆಗಳು ಅಪಾಯಕಾರಿ. ನೀವು ಬ್ರಾಹ್ಮಣ ಜಾತಿ ಸಂಘಟನೆಯಲ್ಲಿ ಆಡಿದ ಮಾತು ದುರ್ಬಲ, ವಯೋವೃದ್ದೆ ಬ್ರಾಹ್ಮಣ್ತಿ ಸುಜಾತ ಭಟ್ ಪರವಾಗಿ ಇರಬಹುದೇ ?

ರಾಜಕಾರಣಿಯಾಗಿರುವ ಸುರೇಶ್ ಕುಮಾರ್ ಬಗೆಗಿನ ನೈತಿಕ ಸಂಶಯಗಳು ನಿವಾರಣೆಯಾದರೆ, ಹಿರಿಯ ಖ್ಯಾತ ವಕೀಲರಾದ ಕೆ ವಿ ಧನಂಜಯ್ ಅವರ ಬಗೆಗಿನ ಸಂಶಯಕ್ಕೆ ಕಾನೂನು, ತೀರ್ಪುಗಳ ಉಲ್ಲೇಖದಿಂದೊಂದಿಗೆ ಉತ್ತರ ನೀಡಬಹುದು. ಸುರೇಶ್ ಕುಮಾರ್ ಅವರ ನೈತಿಕತೆಯ ಬಗೆಗಿನ ಜನರ ಸಂಶಯಗಳನ್ನು ಅವರು ಮೊದಲು ಕ್ಲೀಯರ್ ಮಾಡಿಕೊಳ್ಳಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page