Monday, July 28, 2025

ಸತ್ಯ | ನ್ಯಾಯ |ಧರ್ಮ

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆ: ಬಿಜೆಪಿ ಹಿಡಿತದಲ್ಲಿ ಗೌಡರ ಕುಟುಂಬ

ಬೆಂಗಳೂರು: ಪೆನ್‌ ಡ್ರೈವ್‌ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜಾತ್ಯತೀತ ಜನತಾದಳ ಪಕ್ಷದಿಂದ  ಕೊನೆಗೂ ಉಚ್ಚಾಟನೆ ಮಾಡಲಾಗಿದೆ.

 ಆರು ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿರುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣ ಅವರ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೆ ದೊಡ್ಡಗೌಡರು ಈ ಕ್ರಮ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜಾ.ದಳ ಮೈತ್ರಿಗೆ ಹಿನ್ನಡೆಯಾಗಬಹುದು ಎಂಬ ಆತಂಕದಲ್ಲಿ ಹಾಗೂ ಬಿಜೆಪಿ ಮುಖಂಡರ ಒತ್ತಡದಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಪ್ರಜ್ವಲ್‌ ಪ್ರಕರಣದ ಮೂಲಕ ತಿರುಗೇಟು ನೀಡಲು ಮುಂದಾಗಿದೆ. ಈ ಕಾರಣದಿಂದಲೇ ರಾಜಕೀಯವಾಗಿ ಇದು ಪ್ರಬಲಗೊಳ್ಳುವ ಮುನ್ನವೇ ಪ್ರಜ್ವಲ್‌ ವಿರುದ್ದ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

 ಚುರುಕುಗೊಂಡ ಎಸ್‌ಐಟಿ ತನಿಖೆ

ಹಾಸನದಲ್ಲಿ ಹಲವಾರು ಮಹಿಳೆಯರ ಮೇಲೆ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ಧಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ದೂರು ಕೂಡ ದಾಖಲಾಗಿದ್ದು, ಮೊಕದ್ದಮೆ ದಾಖಲಿಸಿ ಹಾಸನ ಪೊಲೀಸರು ತನಿಖೆ ಆರಂಭಿಸಿದ್ದರು. ಅಲ್ಲದೇ ಕರ್ನಾಟಕ ಸರ್ಕಾರವೂ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಎಸ್‌ಐಟಿ ತನಿಖೇಗೆ ವಹಿಸಿದೆ. ಹಿರಿಯ ಪೊಲೀಸ್‌ ಅಧಿಕಾರಿ ಬಿ.ಕೆ. ಸಿಂಗ್‌ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, ಐಪಿಎಸ್‌ ಅಧಿಕಾರಿಗಳಾದ ಸೀಮಾ ಲಾಟ್ಕರ್‌ ಹಾಗೂ ಡಾ.ಸುಮನಾ ಪನ್ನೇಕರ್‌ ಅವರು ಸಮಿತಿಯಲ್ಲಿದ್ದಾರೆ. ಈ ತಂಡವೂ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದೆ.

ಅವರದೇ ಶಾಸಕರಿಂದ ಪತ್ರ

ಪ್ರಜ್ವಲ್‌ ರೇವಣ್ಣ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರದ್ದೇ ಪಕ್ಷದ ಶಾಸಕ ಹಾಗೂ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣುಗೌಡ ಕಂದಕೂರ ಪತ್ರ ಬರೆದಿದ್ದರು. ಪಕ್ಷದ ಹಿತದೃಷ್ಟಿಯಿಂದ ಪ್ರಜ್ವಲ್‌ ವಿರುದ್ದ ಕ್ರಮ ತೆಗೆದುಕೊಂಡು ಪಕ್ಷದಿಂದ ಹೊರಹಾಕಿ. ಪಕ್ಷದ ನೈತಿಕತೆ ಹೆಚ್ಚಿಸಿ ಎನ್ನುವ ಒತ್ತಾಯವನ್ನು ಅವರು ಮಾಡಿದ್ದರು.

ಲೈಂಗಿಕ ಹಗರಣದಲ್ಲಿ ಸಿಲುಕಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದ ಹಾಲಿ ಸಂಸದ ಹಾಗೂ ಹಾಸನದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಛಾಟಿಸಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆದೇಶ ಹೊರಡಿಸಿದ್ದಾರೆ.

ಕಳೆದ ನಾಲ್ಕು-ಐದು ದಿನಗಳಿಂದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆನ್ನಲಾದ ಲೈಂಗಿಕ ಹಗರಣದ ಪೆನ್ ಡ್ರೈವ್ ಬಾರೀ ಸದ್ದು ಮಾಡಿತ್ತು. ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಲೈಂಗಿಕ ಹಗರಣದ ಕುರಿತು ಮಾತನಾಡಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದರು. ಪ್ರಜ್ವಲ್ ರೇವಣ್ಣಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ಒಂದು ದಿನದಲ್ಲೇ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page