Thursday, June 13, 2024

ಸತ್ಯ | ನ್ಯಾಯ |ಧರ್ಮ

ಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು|ಭಾಗ 2

ಬಲಪಂಥೀಯ ರಾಜಕಾರಣ ವಿಜೃಂಭಿಸಲಾರಂಭಿಸಿದ 2014 ರ ನಂತರ ಸಿನಿಮಾವೊಂದನ್ನು ಮಾಡುವುದು ಬಹಳ ಸವಾಲಿನ ಮತ್ತು ಅಪಾರ ಆರ್ಥಿಕ ನಷ್ಟದ ಕೆಲಸವಾಗುತ್ತಿದೆ. ಈ ಬಗೆಗಿನ ಅನೇಕ ಒಳನೋಟಗಳನ್ನು ಸಿನಿಮಾ ವಿದ್ಯಾರ್ಥಿಯೇ ಅಗಿರುವ ವಿವೇಕ ಅವರು ಮೂರು ಭಾಗಗಳಲ್ಲಿ ನೀಡಿದ್ದಾರೆ. ಎರಡನೆಯ ಭಾಗ ಇಲ್ಲಿದೆ. ನಾವು ಎಚ್ಚರಗೊಳ್ಳಬೇಕಾದ ಸಮಯವಿದು. ಸಿನೆಮಾ ಕ್ಷೇತ್ರದ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ಬಲಪಂಥೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಿದೆ.

ಸೆನ್ಸಾರ್ ಮಂಡಳಿ

ಆಡಳಿತ ನಡೆಸುತ್ತಿರುವವರ ಕೈಯ್ಯಲ್ಲಿ ಕಲೆಯನ್ನು ನೇರವಾಗಿ ನಿಯಂತ್ರಿಸುವ ಏಜೆನ್ಸಿ ಇರುತ್ತದೆ. ಅದನ್ನೇ ಸೆನ್ಸಾರ್ ಮಂಡಳಿ ಎನ್ನುವುದು. Ministry of Information & Broadcastingನ ಅಡಿಯಲ್ಲಿ ಈ ಅಂಗಸಂಸ್ಥೆ ಕೆಲಸ ಮಾಡುತ್ತದೆ. ಇದರ ನಿಯಂತ್ರಣ ಸಂಪೂರ್ಣವಾಗಿ ಒಕ್ಕೂಟ ಸರ್ಕಾರದವರ ಬಳಿ ಇರುತ್ತದೆ. ಹೀಗೆ, ಈ ಮಂಡಳಿಯ ಸಂಪ್ರದಾಯವಾದಿತನವನ್ನು ನೀವು ಆಗಾಗ ಅಲ್ಲಿ ಇಲ್ಲಿ ಓದಿರಬಹುದು. ಇಮ್ತಿಯಾಝ್ ಅಲಿ ನಿರ್ದೇಶಿಸಿದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಎಂಬ ಚಿತ್ರದಲ್ಲಿ ‘intercourse’ ಎಂಬ ಅತಿಸಾಮಾನ್ಯ ಪದವನ್ನು ಈ ಮಂಡಳಿಯ ಮಡಿವಂತರು ಕತ್ತರಿ ಹಾಕುವಂತೆ ಮಾಡಿದರು. 7-8ನೇ ತರಗತಿಯ ಜೀವಶಾಸ್ತ್ರ ಓದುತ್ತಿರುವ ಮಕ್ಕಳಿಗೂ ಗೊತ್ತಿರುವ ಹಾಗೂ ಎಲ್ಲರಿಗೂ ಗೊತ್ತಿರಬೇಕಾದ ಪದವದು. ಆದರೆ ಸಂಸ್ಕೃತಿ ಹಾಗು ಮರ್ಯಾದೆಯ ಹೆಸರಲ್ಲಿ ಅದಕ್ಕೆ ಕತ್ತರಿ ಹಾಕಲೇಬೇಕಾಯಿತು. ಹೀಗೆ ಉದಾಹರಣೆಗಳನ್ನು ಕೊಡುತ್ತಿದ್ದರೆ ದೊಡ್ಡ ಪಟ್ಟಿಯೇ ಮಾಡಬಹುದು ಆದರೆ ನನಗೆ ಪಟ್ಟಿ ಮಾಡುವುದಕ್ಕಿಂತ ಈ ಮನಸ್ಥಿತಿಯ ಹಿಂದಿರುವ ಅಜೆಂಡಾ ಏನು ಎಂದು ತಿಳಿಯುವ ಇಚ್ಛೆಯಿದೆ.

ಆಂಧಿ ಚಿತ್ರ

ಸರ್ಕಾರಗಳೂ ಒಂದಲ್ಲ ಒಂದು ರೀತಿಯಲ್ಲಿ ಮುಕ್ತಮಾತನ್ನು ಸ್ವಲ್ಪ ದೂರ ನಿಂತೇ ಕೇಳಿಸಿಕೊಳ್ಳುವವು. ಗುಲ್ಝಾರ್ ಅವರ ನಿರ್ದೇಶನದಲ್ಲಿ ಸುಚಿತ್ರಾ ಸೆನ್ ಹಾಗು ಸಂಜೀವ್ ಕುಮಾರ್ ನಟಿಸಿದ್ದ ‘ಆಂಧಿ’ ಚಿತ್ರವೂ ಸಹ ಇಂದಿರಾ ಗಾಂಧಿಯವರ ಆಪ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಸುಚಿತ್ರಾ ಸೆನ್ ಪಾತ್ರವು ಇಂದಿರಾ ಗಾಂಧಿಯ ಜತೆಗೆ ಸಾಮ್ಯತೆ ಹೊಂದಿದೆ ಎಂಬುದು ಅವರ ವಾದವಾಗಿತ್ತು. ಇದರಿಂದಾಗಿ ಅವರ ಘನತೆಗೆ ಧಕ್ಕೆ ಬರುತ್ತದೆ ಹಾಗು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆಪಾದನೆಯಿಂದ ಚಿತ್ರದ ಬಿಡುಗಡೆಗೆ ತೊಂದರೆಯಾಯಿತು. ಆಗ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ನಂತರ ‘ಆಂಧಿ’ ಚಿತ್ರವು ದೂರದರ್ಶನದಲ್ಲಿ ಬರಲು ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತು ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬರಬೇಕಾಯಿತು. ಇರಲಿ, ಸುಮಾರು 50 ವರ್ಷಗಳ ಹಿಂದಿನ ಈ ಘಟನೆ ಇಂದು ನಡೆಯುತ್ತಿರುವುದಕ್ಕಿಂತ ಭಿನ್ನವಾದದ್ದು. ಇಂದಿನ ಸ್ಥಿತಿಗತಿ ತುಸು ಹೆಚ್ಚೇ ಸಂಕೀರ್ಣ ಹಾಗು ಸೂಕ್ಷ್ಮವಾಗಿದೆ. ಮೊದಲೇ ಹೇಳಿದ ಹಾಗೆ ಸೆನ್ಸಾರ್ ಮಂಡಳಿಯು ನಮ್ಮ ದೇಶದಲ್ಲಿ ಚಿತ್ರಗಳನ್ನು ಸಾರ್ವಜನಿಕ ಪ್ರದರ್ಶನಕ್ಕೂ ಮುಂಚೆ ನೋಡಿ ಯಾವ ವಯೋಮಿತಿಯವರು ಈ ಸಿನಿಮಾ ನೊಡಬೇಕೆಂದು ನಿರ್ಧಾರ ಮಾಡುತ್ತದೆ. ಆದರೆ ಈ ಮಂಡಳಿಯು ಯಾವ ವಯೋಮಿತಿಯವರು ನೋಡಬೇಕೆಂಬುದರ ಜತೆಗೆ ಅವರು ‘ಏನು’ ನೋಡಬೇಕು ಎಂಬುದನ್ನೂ ನಿರ್ಧರಿಸುತ್ತಿರುವುದರಿಂದ, ಜಾವೇದ್ ಅಖ್ತರ್ ಹೇಳಿದ ಮಾತು ಅಕ್ಷರಶಃ ನಿಜ ಎನಿಸುತ್ತದೆ.

ಇಂದಿನ ಸ್ಥಿತಿಗತಿ ಹೇಗೆ ಭಿನ್ನ?

ಕೇದಾರನಾಥ್

ಇಂದಿನ ಸ್ಥಿತಿಗತಿ ಹೇಗೆ ಭಿನ್ನ ಎಂದರೆ ಕಾನೂನಾತ್ಮಕವಾಗಿ ಸಿನಿಮಾಗಳ ನಿಷೇಧ ಮಾಡುವುದು ಒಂದೆಡೆಯಾದರೆ, ಇನ್ನೊಂದೆಡೆ ಯಾವುದೇ ನಂಬಲರ್ಹ ಸಾಂವಿಧಾನಿಕ ಸ್ಥಾನ ಇಲ್ಲದ ಸಂಸ್ಥೆಗಳ ಆಟಾಟೋಪಗಳು. ಬಹಳ ಚಿತ್ರಗಳು ಈ ರೀತಿಯ ಸಮಸ್ಯೆಗೆ ಸಿಲುಕಿವೆ. ಅಭಿಶೇಕ್ ಶರ್ಮಾ ನಿರ್ದೇಶನದ ‘ಕೇದಾರನಾಥ್’ ಚಿತ್ರ ಒಂದು ಉದಾಹರಣೆ. ಚಿತ್ರದ ನಾಯಕ ಯಾತ್ರಿಕರನ್ನು ಕೇದಾರನಾಥ್ ಬೆಟ್ಟದಲ್ಲಿ ಹೊತ್ತು ಸಾಗುವ ಒಬ್ಬ ಮುಸಲ್ಮಾನ ಯುವಕ. ನಾಯಕಿ ಯಾತ್ರೆಗಾಗಿ ಬಂದಿರುವ ಒಬ್ಬ ಹಿಂದೂ ಯುವತಿ. ಧರ್ಮದ ಅಂಧಕಾರದಲ್ಲಿ ತೇಲುತ್ತಿರುವ ಕಟ್ಟರ್ ಬಲಪಂಥೀಯರಿಗೆ ಇಷ್ಟು ಸಾಕಿತ್ತು. ಮುಸ್ಲಿಂ ಯುವಕ ಹಾಗು ಹಿಂದೂ ಹುಡುಗಿಯ ಪ್ರೇಮ ಕಥನ. ಬಿಜೆಪಿ ಹಾಗು ಆರ್.ಎಸ್.ಎಸ್ ದಶಕಗಳಿಂದ ಹಬ್ಬಿಸುತ್ತಿರುವ ‘ಲವ್ ಜಿಹಾದ್’ ಎಂಬ ಕಪೋಲಕಲ್ಪಿತ ವಿದ್ಯಮಾನವನ್ನು ಈ ಚಿತ್ರಕ್ಕೆ ತಳುಕು ಹಾಕಿ ಬಿಡುಗಡೆಗೆ ಅಡ್ಡಿಪಡಿಸಲಾಯಿತು. ಬಲಪಂಥೀಯರಿಗೆ ಗಂಟಲಿನಲ್ಲಿ ಕಬಾಬ್ ತರಹ ಸಿಕ್ಕಿಕೊಂಡ ಹೆಸರೆಂದರೆ ‘ಸಾರಾ ಅಲಿ ಖಾನ್’. ಮುಸಲ್ಮಾನ ಧರ್ಮದ ನಾಯಕಿ ಹಿಂದೂ ಧಾರ್ಮಿಕ ಸ್ಥಳದ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಅವರ ಸಂಕುಚಿತ ಮನಸ್ಸನ್ನು ಎಲ್ಲಿಲ್ಲದೇ ಘಾಸಿ ಮಾಡಿತ್ತು. ಆದರೆ ನಮ್ಮ ದೇಶದ ಜನರು ಪ್ರತಿರೋಧ ತೋರಲು ಸರ್ವಸಮರ್ಥರು ಎಂಬ ಮಾತು ಮತ್ತೆ ನಿಜವಾಯಿತು. ಜನರು ಆ ಚಿತ್ರವನ್ನು ಹಾಡಿ ಹೊಗಳಿ ಕೊಂಡಾಡಿದರು.

ಸಂಜಯ ಭನ್ಸಾಲಿ ಅವರ ‘ಪದ್ಮಾವತಿ’ ಚಿತ್ರ

ಆದರ ನಿಜವಾದ ಅಜೆಂಡಾ ಏನು ಎಂಬುದರ ಒಂದು ಆಖ್ಯಾನ ಕೊಡಲು ಬಯಸುತ್ತೇನೆ. ಬಲಪಂಥೀಯರಿಗೆ ಒಂದು ವಿಷಯ ಚೆನ್ನಾಗಿ ಅರ್ಥವಾಗಿದೆ, ಅದೇನೆಂದರೆ ಯಾವುದೇ ಚಿತ್ರ, ಕಲೆ ಅಥವಾ ಪ್ರದರ್ಶನವನ್ನು ಅಡ್ಡಿಪಡಿಸುವುದು ಅಷ್ಟು ಸುಲಭವಲ್ಲ. ಆದರೆ, ಅಡ್ಡಿಪಡಿಸಲಾಗದಿದ್ದರೂ ಸಹ ಆದಷ್ಟೂ ತಮ್ಮ ಬತ್ತಳಿಕೆಯಲ್ಲಿರುವ ಕಲ್ಪಿತ ವಿಷಯಗಳನ್ನು ಸಿನಿಮಾಗೆ ತಳುಕು ಹಾಕಿ ಸಮಾಜದ ಮುಖ್ಯವಾಹಿನಿ ಆ ವಿಷಯಗಳನ್ನು ತರುವುದು ಅವರ ಉದ್ದೇಶ. 2018 ರ ಸಂಜಯ ಭನ್ಸಾಲಿ ಅವರ ‘ಪದ್ಮಾವತಿ’ ಚಿತ್ರ ಇದಕ್ಕೆ ದೊಡ್ಡ ಉದಾಹರಣೆ. ಕರ್ಣಿ ಸೇನಾ ಎಂಬ ಗುಂಪೊಂದು ಚಿತ್ರೀಕರಣದ ಜಾಗಕ್ಕೆ ನುಗ್ಗಿ ಧಾಂಧಲೆ ಮಾಡಿ ಭನ್ಸಾಲಿ ಅವರ ಮೇಲೆ ಹಲ್ಲೆಯೂ ನಡೆಸಿತ್ತು. ಇಡೀ ದೇಶವೇ ತಿರುಗಿ ನೋಡುವ ಹಾಗೆ ಒಂದು ವಿವಾದವನ್ನು ಶುರು ಮಾಡಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವ ಸೆನ್ಸಾರ್ ಮಂಡಳಿ ಸಿನಿಮಾದ ರಕ್ಷಣೆಗೆ ನಿಲ್ಲಬೇಕಿತ್ತೋ ಅದು ನಿಲ್ಲಲಿಲ್ಲ. ಆಗ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಾಗಿದ್ದವರು ಪ್ರಸೂನ್ ಜೋಶಿಯವರು. ಪ್ರಸೂನ್ ಅವರಿಗಿರುವ ಮೋದಿ ಪ್ರೀತಿ ಎಂಥದ್ದು ಎಂದು ನಿಮಗೆಲ್ಲಾ ತಿಳಿದಿದೆ. ಹೀಗೆ ತಮ್ಮ ತಮ್ಮ ವಿಚಾರಧಾರೆಯನ್ನು ನಂಬುವ ಜನರನ್ನು ಅಂಗಸಂಸ್ಥೆಗಳಲ್ಲಿ ಕೂರಿಸಿ ಪ್ರದರ್ಶನ ಕಲೆಯನ್ನು ಹತೋಟಿಗೆ ತೆಗೆದುಕೊಳ್ಳುವ ಭರದಲ್ಲಿ ಸಮಾಜದ ಚೌಕಟ್ಟು ಒಡೆಯುತ್ತಿರುವ ಇವರ ಧೋರಣೆ ನೀವು ನೋಡುತ್ತಲೇ ಇದ್ದೀರಿ. ಇವೆಲ್ಲವೂ ಒಂದು ವರ್ಗದ ಜನರನ್ನು ಕಾರ್ಯನಿರತರನ್ನಾಗಿಸಿ ಅವರ ಗಮನವನ್ನು ಬೇರೆಡೆ ಹೋಗುವ ಹಾಗೆ ಮಾಡುವ ಮೋಸದ ವಿಚಾರಧಾರೆ. ‘ಹೇ ಅಲ್ಲಿ ನೋಡು’ ಎಂದು  ಬೇರೆಡೆ ತೋರಿಸಿ ಪಕ್ಕದಲ್ಲಿದ್ದುಕೊಂಡೇ ತಲೆಗೆ ಹೊಡೆಯುವ ವಿಚಾರಧಾರೆ.

(ಮುಂದುವರೆಯುವುದು)

ವಿವೇಕ,  ಬೆಂಗಳೂರು.

ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ವಿವೇಕ್‌,6 ವರ್ಷಗಳಿಂದ ಸಿನಿಮಾ ರಂಗದಲ್ಲಿ ಬರಹಗಾರನಾಗಿ ಹಾಗು ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ಇದರ ನಡುವೆ ಮುಂಬಯಿನಲ್ಲಿ ನೆಲೆಸಿ ಇರಾಸ್ಇಂಟರ್ನ್ಯಾಶನಲ್ ಸ್ಟುಡಿಯೋಗೆ ಚಿತ್ರಕಥಾ ಬರಹಗಾರನಾಗಿ ಕೆಲಸಮಾಡಿದ್ದಾರೆ.ಎಲ್ಲಕಿಂತ ಹೆಚ್ಚಾಗಿ ಇವರು ಸಿನಿಮಾ ವಿದ್ಯಾರ್ಥಿ.

ಇದನ್ನು ಓದಿದ್ದೀರಾhttps://peepalmedia.com/shifts-in-the-film-world-due-to-extreme-right-wing-attitudes-part-one/ http://ಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು | ಭಾಗ ಒಂದು

Related Articles

ಇತ್ತೀಚಿನ ಸುದ್ದಿಗಳು