Saturday, June 15, 2024

ಸತ್ಯ | ನ್ಯಾಯ |ಧರ್ಮ

ಪಾಕಿಸ್ತಾನದ ಪರ ಘೋಷಣೆ ಕೂಗಿದರೆ ಉಗ್ರ ಕ್ರಮ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಉಗ್ರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.


ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದದ ಸಿಎಂ, ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ್ದಾರೆ ಎನ್ನಲಾದ ಆಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ, ಈ ಬಗ್ಗೆ ಗಂಭೀರ ಕ್ರಮ ವಹಿಸಲಾಗುವುದು. ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ವಿಧಾನಸೌಧದಲ್ಲಿ ಈ ಘಟನೆ ನಡೆದಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೂಗುವವರಿಗೆ ಎಲ್ಲಿಯಾದರೂ ಕೂಗುತ್ತಾರೆ, ರಾಷ್ಟ್ರದ ವಿರುದ್ಧ ಕೂಗುವವರ ವಿರುದ್ಧ ಉಗ್ರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


ರಾಜ್ಯಸಭೆಗೆ ನಿನ್ನೆ ಚುನಾವಣೆ ನಡೆದಿದ್ದು, ಕರ್ನಾಟಕದಿಂದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಓರ್ವ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರು ಜಯ ಗಳಿಸಿದ್ದರು. ನಾಸಿರ್ ಹುಸೇನ್ ಗೆಲುವಿನ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ‘ಪಾಕಿಸ್ತಾನ್‌ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ಕನ್ನಡದ ಬಹುತೇಕ ಟಿವಿ ಚಾನಲ್‌ಗಳು ವರದಿ ಮಾಡಿದ್ದು, ಬಿಜೆಪಿ ನಾಯಕರೂ ಕೂಡ ಇದೇ ಆರೋಪ ಮಾಡಿದ್ದು, ಉಗ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು