ಕಲಬುರಗಿ: ಅಂಬೇಡ್ಕರ್‌ ಹಾಗೂ ಸಂವಿಧಾನದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದ ಫೇಸ್‌ಬುಕ್ ಖಾತೆ ಅಡ್ಮಿನ್ ಬಂಧನ

ಕಲಬುರಗಿ: ಅಂಬೇಡ್ಕರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಇತರ ನಾಯಕರ ವಿರುದ್ಧ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಫೇಸ್‌ಬುಕ್ ಖಾತೆ ಅಡ್ಮಿನ್ (ನಿರ್ವಾಹಕ) ಒಬ್ಬನನ್ನು ಬಂಧಿಸಲಾಗಿದೆ.

‘ಗುಲಾಮರ ಅಪ್ಪ’ ಹೆಸರಿನ ಸಾಮಾಜಿಕ ಜಾಲತಾಣದ ಪುಟದಲ್ಲಿ ನಾಯಕರ ಬಗ್ಗೆ ಅವಮಾನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದಕ್ಕಾಗಿ ಕಲಬುರಗಿ ಉಪನಗರ (ಸಬರ್ಬನ್) ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರಿನ ವಿದ್ಯಾಮಾನ್ಯ ನಗರ ನಿವಾಸಿ ಆನಂದ್ ಅಂಜನಪ್ಪ (40) ಎಂದು ಗುರುತಿಸಲಾಗಿದೆ.

ಆನಂದ್ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಹಿರಿಯ ಐಟಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿಯು ‘ಗುಲಾಮರ ಅಪ್ಪ’ ಹೆಸರಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಕಲಬುರಗಿ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು