Friday, June 14, 2024

ಸತ್ಯ | ನ್ಯಾಯ |ಧರ್ಮ

Fact Check: ನಿಜಕ್ಕೂ ದಲ್ವೀರ್ ಭಂಡಾರಿ ICJ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಆಯ್ಕೆಯಾಗಿದ್ದಾರೆಯೇ?

ಭಾರತೀಯ ಮೂಲದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರನ್ನು ಮುಂದಿನ 9 ವರ್ಷಗಳ ಕಾಲ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸಂದೇಶವೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ಸ್ಥಾನಕ್ಕೆ ಆಯ್ಕೆಯಾಗಲು ಅವರು 193 ಮತಗಳಲ್ಲಿ 183 ಮತಗಳನ್ನು ಗಳಿಸಿದರು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಗ್ರೇಟ್ ಬ್ರಿಟನ್ 71 ವರ್ಷಗಳಿಂದ ಈ ಸ್ಥಾನವನ್ನು ಹೊಂದಿದೆ ಮತ್ತು ಇದು ಭಾರತ ಮತ್ತು ಜೋಧಪುರಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ ಎಂದು ಸಂದೇಶವು ಹೇಳುತ್ತದೆ. ಇದು ನಿಜವೇ? ನಿಜವಲ್ಲದಿದ್ದರೆ ನಿಜವೇನು? ತಿಳಿಯುವ ಬನ್ನಿ

ಬ್ರೇಕಿಂಗ್ ನ್ಯೂಸ್ : ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆ! *
ಭಾರತಕ್ಕೆ ಭರ್ಜರಿ ಗೆಲುವು!!! ಪ್ರಧಾನಿ ಮೋದಿಯವರ ಚಾಣಕ್ಯ ರಾಜತಾಂತ್ರಿಕತೆ. ವಿಶ್ವ ವೇದಿಕೆಯಲ್ಲಿ ಬ್ರಿಟನ್‌ನ ಸೋಲು. ಪ್ರಧಾನಿ ಮೋದಿಜಿ ಜಗತ್ತಿನಾದ್ಯಂತ ಸಂಬಂಧಗಳನ್ನು ಹೇಗೆ ಬೆಳೆಸಿಕೊಂಡಿದ್ದಾರೆ ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ. ನ್ಯಾಯಮೂರ್ತಿ ದಲ್ವೀರ್ ಭಂಡಾರಿ – “ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ” ಯಾಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು 193 ಮತಗಳಲ್ಲಿ 183 ಮತಗಳನ್ನು ಪಡೆದರು (ಪ್ರತಿ ದೇಶದಿಂದ ಒಬ್ಬರು ಪ್ರತಿನಿಧಿಸುತ್ತಾರೆ) ಮತ್ತು ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರನ್ನು ಸೋಲಿಸಿದರು. ಅವರು ಬ್ರಿಟನ್‌ನ ಈ ಹುದ್ದೆಯ ಮೇಲಿನ 71 ವರ್ಷಗಳ ಏಕಸ್ವಾಮ್ಯವನ್ನು ಮುರಿದರು.


ಇದನ್ನು ಸಾಧಿಸಲು ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ 6 ತಿಂಗಳಿಂದ ಶ್ರಮಿಸುತ್ತಿದೆ! ಎಲ್ಲಾ 193 ದೇಶಗಳ ಪ್ರತಿನಿಧಿಗಳನ್ನು ಸಂಪರ್ಕಿಸುವುದು ಮತ್ತು ಸುಲಭವಾಗಿ ಗೆಲ್ಲುವ ಖಚಿತವಾದ ಬ್ರಿಟಿಷ್ ಅಭ್ಯರ್ಥಿಯ ಬಗ್ಗೆ ಭಾರತದ ನಿಲುವನ್ನು ವಿವರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. 11 ಸುತ್ತಿನ ಮತದಾನದಲ್ಲಿ, ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183 ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 15 ಮತಗಳನ್ನು ಪಡೆದರು.
ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು 9 ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿರುತ್ತಾರೆ. ಈ 183 ದೇಶಗಳು ಭಾರತಕ್ಕೆ ಮತ ಹಾಕಿದ್ದಾರೆ, ಇವರು ಯಾರೂ “ಕುರುಡು ಮೋದಿ ಭಕ್ತರಲ್ಲ”! ಅವರೆಲ್ಲ ವಿಚಾರವಂತರು,ನಮ್ಮ ಸ್ವಾತಂತ್ರ್ಯದ 70 ವರ್ಷಗಳ ನಂತರ ನಮ್ಮ ಪ್ರಧಾನಿ ಮೋದಿಜಿ ಪ್ರಪಂಚದಾದ್ಯಂತದ ದೇಶಗಳೊಂದಿಗೆ ಎಷ್ಟು ಸೌಜನ್ಯ, ಗೌರವಾನ್ವಿತ ಮತ್ತು ಉತ್ತಮ ಸಂಬಂಧವನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ.
ಇಂಥ ಶ್ರೇಷ್ಠ ವಿಷಯಗಳನ್ನು ಭಾರತೀಯ ಸುದ್ದಿ ಮಾದ್ಯಮಗಳು ಪ್ರಸಾರ ಮಾಡಲ್ಲ, ಅವರಿಗೆ ಮೋದಿ ವಿರುದ್ಧದ ಸುದ್ದಿ ಬೇಕು, ಅದನ್ನೇ ಅವರು ಹುಡುಕಿ ಪ್ರಸಾರ ಮಾಡುವುದು .
️ವಿನಂತಿ – ನಿಮ್ಮ ಇತರ ಸ್ನೇಹಿತರಿಗೆ ಕೂಡ ಕಳುಹಿಸಿ

ಭಾರತ ಮಾತಾ ಜೈ…

ಬಹುಶಃ ಇಂತಹದ್ದೊಂದು WHATSAPP FORWARD ನಿಮ್ಮ ಮೊಬೈಲಿಗೂ ಬಂದಿರಬಹುದು. ಅದನ್ನು ಕಳಹಿಸಿರುವುದು ನಿಮ್ಮ ನಂಬಿಕಸ್ಥ ಸ್ನೇಹಿತರೇ ಆಗಿರುವುದರಿಂದ ನೀವೂ ಅದನ್ನು ಒಂದಷ್ಟು ನಿಮ್ಮ ಸ್ನೇಹಿತರ ಮತ್ತು ಕುಟುಂಬದ ಗ್ರೂಪುಗಳಿಗೆ ಫಾರ್ವರ್ಡ್‌ ಕೂಡಾ ಮಾಡಿರುತ್ತೀರಿ. ಆದರೆ ಈ ಮಾಹಿತಿ ನಿಜಕ್ಕೂ ನಂಬಲರ್ಹವೇ? ಅಲ್ಲವೆನ್ನುತ್ತದೆ SSC online blog. ಹಾಗಿದ್ದರೆ ನಿಜವೇನು? ಬನ್ನಿ ತಿಳಿದುಕೊಳ್ಳೋಣ

ಈ ಮಾಹಿತಿ ಸಂಪೂರ್ಣ ಸುಳ್ಳು, ಮತ್ತು ಮೊದಲನೆಯದಾಗಿ, ಐಸಿಜೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್ನುವಂತಹ ಸ್ಥಾನವೇ ಇಲ್ಲ. ಅಲ್ಲಿರುವುದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರ.

ಎರಡನೆಯದಾಗಿ, ಐಸಿಜೆಯ ಅಧಿಕೃತ ವೆಬ್‌ಸೈಟ್ ಮೇಲ್ನೋಟಕ್ಕೇ ಐಸಿಜೆಯ ಪ್ರಸ್ತುತ ಅಧ್ಯಕ್ಷ US ನ ನ್ಯಾಯಮೂರ್ತಿ ಜೋನ್ ಡೊನೊಗ್ಯೂ ಅವರು ಎಂದು ತೋರಿಸುತ್ತದೆ. ಅವರು 2021ರ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು 2010ರಿಂದ ನ್ಯಾಯಾಲಯದ ಸದಸ್ಯರಾಗಿದ್ದಾರೆ.

Justice Dalveer Bhandari ಕೂಡ  ಐಸಿಜೆ ಸದಸ್ಯರು ಮತ್ತು ಅವರು 1012ರಿಂದ ಈ ಸ್ಥಾನದಲ್ಲಿದ್ದಾರೆ. ಅವರು 2017ರಲ್ಲಿ (ನವೆಂಬರ್, 2017ರಲ್ಲಿ ಚುನಾಯಿತರಾಗಿ ಈ ಸ್ಥಾನಕ್ಕೆ ಫೆಬ್ರವರಿ, 2018 ರಲ್ಲಿ ನೇಮಕಗೊಂಡರು) 9 ವರ್ಷಗಳ ಅವಧಿಗೆ ಸದಸ್ಯರಾಗಿ (ಅಧ್ಯಕ್ಷರಾಗಿ ಅಲ್ಲ) ಪುನರಾಯ್ಕೆಯಾದರು.

193ರಲ್ಲಿ 183 ಮತಗಳಿಗೂ ನ್ಯಾಯಮೂರ್ತಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. 193 ಜನರು 11 ಸುತ್ತಿನಲ್ಲಿ ಮತ ಚಲಾಯಿಸಿದ ನಂತರ ಭದ್ರತಾ ಮಂಡಳಿಯಲ್ಲಿರುವ 15 ಜನರೂ ಮತ ಚಲಾಯಿಸಿ ಕೊನೆಗೆ ಇಬ್ಬರೂ ಬಿಕ್ಕಟ್ಟಿಗೆ ಸಿಲಿಕಿದ್ದರು. ಆಗ ಬ್ರಿಟಿಷ್ ಅಭ್ಯರ್ಥಿ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು ಮತ್ತು ಇದರೊಂದಿಗೆ ನ್ಯಾಯಮೂರ್ತಿ ಭಂಡಾರಿಯವರು ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183 ಮತ್ತು ಭದ್ರತಾ ಮಂಡಳಿಯ ಎಲ್ಲಾ 15 ಮತಗಳನ್ನು ಪಡೆದರು. ಆದರೆ ಇದಕ್ಕೂ ಅಧ್ಯಕ್ಷ ಪದವಿಯ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.

ಈಗ ಇನ್ನೊಂದು ರಹಸ್ಯವನ್ನ ಬೇಧಿಸೋಣ ಬನ್ನಿ. ಈ ಐಸಿಜೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನ್ಯಾಯಾಲಯದ ಸದಸ್ಯರು ಪ್ರತಿ ಮೂರು ವರ್ಷಗಳಿಗೊಮ್ಮೆ ರಹಸ್ಯ ಮತದಾನದ ಮೂಲಕ ಚುನಾಯಿಸುತ್ತಾರೆ. ಪ್ರಸ್ತುತ ವೈರಲ್ ಆಗಿರುವ ಸಂದೇಶದಲ್ಲಿ ತಿಳಿಸಿರುವಂತೆ 193 ಸದಸ್ಯರು ಇರುವದಿಲ್ಲ. ಅದೆಲ್ಲ ಬರೀ ಬೊಗಳೆ. ಅಲ್ಲದೆ, ಐಸಿಜೆಯ ಅಧ್ಯಕ್ಷರ ಅವಧಿ ಮೂರು ವರ್ಷಗಳಾದರೆ, ಆದರೆ ಸದಸ್ಯರ ಅವಧಿ ಒಂಬತ್ತು ವರ್ಷಗಳು, ಹೀಗಾಗಿ ಹೇಗೆ ನೋಡಿದರೂ ಈ ಸುದ್ದಿ ಸುಳ್ಳು ಎನ್ನುವುದು ಸಾಬೀತಾಗುತ್ತದೆ.

“ಗ್ರೇಟ್ ಬ್ರಿಟನ್ 71 ವರ್ಷಗಳ ಕಾಲ ಈ ಸ್ಥಾನವನ್ನು ಹೊಂದಿತ್ತು” ಎಂಬ ವಿಷಯ ಕೂಡಾ ಹಸಿ ಹಸಿ ಸುಳ್ಳು. ಏಕೆಂದರೆ ಅಮೆರಿಕದ ನ್ಯಾಯಮೂರ್ತಿ ಜೋನ್ ಡೊನೊಗ್ಯು ಈ ಸ್ಥಾನಕ್ಕೆ ಆಯ್ಕೆಯಾಗುವ ಮೊದಲು, ಸೊಮಾಲಿಯಾದ ಅಬ್ದುಲ್ ಖಾವಿ ಯೂಸುಫ್ ಐಸಿಜೆಯ ಅಧ್ಯಕ್ಷರಾಗಿದ್ದರು ಮತ್ತು ಅವರಿಗಿಂತ ಮೊದಲು ಫ್ರಾನ್ಸ್ ನ ರೋನಿ ಅಬ್ರಹಾಂ ಈ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಈ ಸಂಸ್ಥೆಯ ಅಧ್ಯಕ್ಷರ ಅಧಿಕಾರಾವಧಿ ಕೇವಲ ಮೂರು ವರ್ಷಗಳು ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಧೀಶರನ್ನು ಕೊನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು 2006-09ರ ನಡುವೆ.

ಈಗ “ಭಾರತ ಮತ್ತು ಜೋಧಪುರಕ್ಕೆ ಹೆಮ್ಮೆಯ ಕ್ಷಣ” ಎಂಬ ಕೊನೆಯ ವಾಕ್ಯಕ್ಕೆ ಬರೋಣ. ಈ ವೈರಲ್ ಸಂದೇಶದಲ್ಲಿ ಜೋಧಪುರ ನಗರವನ್ನು ಉಲ್ಲೇಖಿಸಲು ಕಾರಣ ಬಹುಶಃ ನ್ಯಾಯಮೂರ್ತಿ ಭಂಡಾರಿ ಅವರ ಜನ್ಮಸ್ಥಳ ಜೋಧಪುರವಾಗಿರುವುದು. ಜೋಧಪುರ ಮತ್ತು ದೇಶದ ಉಳಿದ ಭಾಗಗಳ ನಿವಾಸಿಗಳು ಐಸಿಜೆ ಸದಸ್ಯರಾಗಿ ಪುನರಾಯ್ಕೆಗೊಂಡಿದ್ದಕ್ಕಾಗಿ ಅವರ ಬಗ್ಗೆ ನಿಜವಾಗಿಯೂ ಬಹಳ ಹೆಮ್ಮೆ ಪಡುತ್ತಾರೆ. ನಕಲಿ ಫಾರ್ವಡಡಡ್‌ಗಳು ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ದೇಶವನ್ನು ಪ್ರತಿನಿಧಿಸುವ ಭಾರತೀಯ ಮೂಲದ ನ್ಯಾಯಾಧೀಶರಾಗಿ ಅವರಿಗೆ ಮತ್ತು ಅವರ ಪರಂಪರೆಗೆ ಅಪಚಾರ ಮಾಡಿದಂತೆಯೇ ಹೊರತು ಇನ್ನೇನೂ ಅಲ್ಲ. ಇನ್ನಾದರೂ ದಯವಿಟ್ಟು ಕೋಣ ಈದೈತೆ ಎಂದು ಯಾರಾದರೂ ಹೇಳಿದಾಗ ಕೊಟ್ಟಿಗೆಯಲ್ಲಿ ಕಟ್ಟು ಎಂದು ಹೇಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡೋಣ.

ಲೇಖನ ಕೃಪೆ: www.scconline.com

Related Articles

ಇತ್ತೀಚಿನ ಸುದ್ದಿಗಳು