Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಪಾಲರಿಗೆ ನಕಲಿ ದೂರು : ಪೊಲೀಸರಿಂದ ತನಿಖೆ ; ತಿರುಮಂತ್ರವಾಗುತ್ತಾ ತಂತ್ರಗಾರಿಕೆ?

ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಭ್ರಷ್ಟಾಚಾರದ ಆರೋಪದ ಪ್ರಕರಣ ಈಗ ಆರೋಪದ ತಂತ್ರ ಹೆಣೆದವರಿಗೇ ತಿರುಮಂತ್ರ ಆಗುವ ಸಾಧ್ಯತೆ ಹೆಚ್ಚಾಗಿದೆ. ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆದ ದೂರಿ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳೇ ಸ್ಪಷ್ಟನೆ ಕೊಡುತ್ತಿದ್ದಂತೆ, ಪತ್ರ, ಪತ್ರದಲ್ಲಿ ಸೂಚಿಸಿದ ಅಧಿಕಾರಿಗಳು ಹಾಗೂ ಅವರ ಸಹಿ ಅಷ್ಟೂ ನಕಲಿ ಅನ್ನೋ ವಿಷಯ ಹೊರಬಿದ್ದಿದೆ.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಸರ್ಕಾರವನ್ನು ತರಾಟೆಗೆ ತಗೆದುಕೊಳ್ಳುತ್ತಿದ್ದರೆ ಕೆಲವೊಂದರಲ್ಲಿ ಮಾತ್ರ ಪ್ರತಿಪಕ್ಷಗಳೇ ಪೇಚಿಗೆ ಸಿಲುಕುವಂತಾಗಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಬರೆದಿರುವ ದೂರಿನ ಪತ್ರ ಸಹ ಈಗ ಪ್ರತಿಪಕ್ಷಗಳಿಗೇ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಸಧ್ಯ ಈ ಪ್ರಕರಣದಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್ ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ಹಿಂದಿನ ದಿನ ಲಂಚದ ಆರೋಪ ಕೇಳಿಬಂದಿತ್ತು. ಸಚಿವರು 8 ರಿಂದ 10 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಜಿಲ್ಲೆಯ ಏಳು ಸಹಾಯಕ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಆರೋಪಿಸಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ದೂರಿನ ಪತ್ರ ಕೂಡಾ ರವಾನೆಯಾಗಿತ್ತು.

ದೂರಿನ ಪ್ರತಿಯ ಗಂಭೀರತೆ ಹೇಗಿತ್ತು ಎಂದರೆ ಮಂಡ್ಯ, ಮಳ್ಳವಳ್ಳಿ, ಕೆ ಆರ್ ಪೇಟೆ, ನಾಗಮಂಗಲ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವರ ಕೃಷಿ ಸಹಾಯಕ ಅಧಿಕಾರಿಗಳು ರಾಜ್ಯಪಾಲರಿಗೆ ಸಲ್ಲಿಸಿದ ದೂರಲ್ಲಿ, ‘ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಬಿಜೆಪಿ ನಾ ಮುಂದು ತಾ ಮುಂದು ಎಂಬಂತೆ ಟ್ವಿಟ್ ಮೇಲೆ ಟ್ವಿಟ್ ಮಾಡಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿತ್ತು.

ರಾಜ್ಯ ಬಿಜೆಪಿ ಘಟಕ, ‘ಭ್ರಷ್ಟ #ATMSarkara ದ ಮತ್ತೊಂದು ಕರ್ಮಕಾಂಡ ಅಧಿಕಾರಿಗಳಿಂದ ಬಯಲು! ಸ್ವಾಮಿ ಸಿದ್ದರಾಮಯ್ಯ ರವರೇ, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ರಾಜೀನಾಮೆ ಪಡೆಯಲು “ರಾಹು”ಕಾಲಕ್ಕಾಗಿ ಕಾಯುತ್ತಿದ್ದೀರಾ..? ಬಾಯಿ ಬಿಡಿ ಸ್ವಾಮೀ..!’ ಎಂದು ಟ್ವೀಟ್ ಮಾಡಿತ್ತು.

ಆದರೆ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿ ಆಗ್ತಿದ್ದಂತೆ, ಎಚ್ಚೆತ್ತುಕೊಂಡ ಮಂಡ್ಯ ಜಿಲ್ಲೆಯ ಅಧಿಕಾರಿಗಳು ನಮ್ಮ ಕಡೆಯಿಂದ ಯಾವುದೇ ದೂರು ಅರ್ಜಿ ಹೋಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೆ ಅಲ್ಲದೆ ದೂರಿನ ಪತ್ರ, ಪತ್ರದಲ್ಲಿ ಸೂಚಿಸಿದ ಅಧಿಕಾರಿಗಳು ಹಾಗೂ ಅವರ ಸಹಿ ಅಷ್ಟೂ ನಕಲಿ ಅನ್ನೋ ವಿಷಯ ಹೊರಬಿದ್ದಿದೆ.

ಅದಾದ ನಂತರ ಬಿಜೆಪಿ ಪಕ್ಷವನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ತಮ್ಮ ಜಾಲತಾಣದ ಖಾತೆಯ ಮುಖಾಂತರ ಖಡಕ್ ಸವಾಲನ್ನು ಹಾಕಿದ್ದಾರೆ. ‘ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆ. @bjp4karnataka ದ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ “ಬ್ರದರ್ರೋ”?’ ಎನ್ನುವ ಮೂಲಕ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷಕ್ಕೂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಅಷ್ಟೆ ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಜೊತೆಗೆ ಮಂಡ್ಯದ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸರ್ಕಾರದ ಮೇಲೆ ತಪ್ಪು ಅಭಿಪ್ರಾಯ ಹುಟ್ಟುವಂತೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ದೂರು ನೀಡಿದ್ದಾರೆ.

ದೂರನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖುದ್ದು ಅಡಿಷನಲ್ ಎಸ್ ಪಿ ತಿಮ್ಮಯ್ಯ ಅವರು ಮಂಡ್ಯ ಕೃಷಿ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದು, ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಆ ಬಳಿಕ ಮಂಡ್ಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲೂ ಮಾಹಿತಿ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು