Tuesday, March 18, 2025

ಸತ್ಯ | ನ್ಯಾಯ |ಧರ್ಮ

ಸುಳ್ಳು ಮತಾಂತರ ಪ್ರಕರಣ: 15 ತಿಂಗಳುಗಳ ಹೋರಾಟದಲ್ಲಿ ಗೆದ್ದು ಬಂದ ಉತ್ತರ ಪ್ರದೇಶದ ದಲಿತ ಮೆಕ್ಯಾನಿಕ್

* ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರ ದಾಳಿಯ ನಂತರ, ಸೋನು ಸರೋಜ್ ಮತ್ತು ಅವರ ಕುಟುಂಬದ ಮೇಲೆ ರಾಜ್ಯದ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಉತ್ತರ ಪ್ರದೇಶ ಪೊಲೀಸರಿಂದ ಮತ್ತೊಂದು ದಾಳಿ ನಡೆಯುತ್ತದೆ.

* ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು ಕಾನೂನು ಹೋರಾಟಗಳಲ್ಲಿ ಗೆದ್ದ ಜನರ ಕುರಿತಾದ ಸರಣಿ ವರದಿಗಳಲ್ಲಿ ಇದು ಮೊದಲ ಲೇಖನ.

ಮೂಲ ವರದಿ: ಒಮರ್‌ ರಾಶಿದ್ | ಕನ್ನಡಾನುವಾದ:‌ ಸುನೈಫ್ ವಿಟ್ಲ

35 ವರ್ಷದ ಸೋನು ಸರೋಜ್ ಎಂಬ ವ್ಯಕ್ತಿಗೆ 2023 ಜೂನ್ 25ರ ಭಾನುವಾರ ಇತರ ಭಾನುವಾರಗಳ ಮುಂಜಾನೆಯಂತೆಯೇ ಪ್ರಾರಂಭವಾಗಿತ್ತು. ಆತನ ಕುಟುಂಬ, ದೂರದ ಸಂಬಂಧಿಕರು ಮತ್ತು ನೆರೆಯ ಹಳ್ಳಿಗಳ ಜನರು ಉತ್ತರ ಪ್ರದೇಶದ ರಾಯ್ ಬರೇಲಿಯ ಕೊದ್ರಾ ಗ್ರಾಮದಲ್ಲಿ ತನ್ನ ಮನೆಯ ಹಿಂದುಗಡೆ ನಿರ್ಮಿಸಿದ್ದ ಶೆಡ್ ಬಳಿ ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸುವ ಸಭೆಯಲ್ಲಿ ಭಾಗವಹಿಸಲೆಂದು ಸೇರಿದ್ದರು. ಮೆಕ್ಯಾನಿಕ್ ಆಗಿದ್ದ ದಲಿತ ಸಮುದಾಯದ ಸರೋಜ್ ಜೀವನ್ ದ್ವಾರ ಪ್ರಾರ್ಥನಾ ಭವನ ಎಂಬ ಆ ತಾತ್ಕಾಲಿಕ ಪ್ರಾರ್ಥನಾ ಕೇಂದ್ರದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಅದನ್ನು ಸೊಸೈಟಿಯ ರೂಪದಲ್ಲಿ ನೋಂದಾಯಿಸಲಾಗಿತ್ತು. ಆದರೆ ಅಂದು, ಆ ದಿನ ನಿಧಾನಕ್ಕೆ ಸಾಮಾನ್ಯ ಭಾನುವಾರಕ್ಕಿಂತ ಭಿನ್ನವಾದ ಬಣ್ಣ ಪಡೆದುಕೊಳ್ಳುತ್ತಿತ್ತು.

ಪ್ರಾರ್ಥನಾ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಸುಮಾರು 250ರಷ್ಟು ಸ್ವಯಂಸೇವಕರು ಅದಕ್ಕೂ ಅರ್ಧ ಗಂಟೆ ಮೊದಲೇ ಆ ಶೆಡ್‌ ತರದ ಪ್ರಾರ್ಥನಾ ಭವನದ ಬಳಿ ಸೇರಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಜನರು ಇನ್ನೂ ಬರುತ್ತಲೇ ಇದ್ದರು. ಅಷ್ಟರಲ್ಲಿ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅದರ ಯುವ ಘಟಕವಾದ ಬಜರಂಗದಳಕ್ಕೆ ಸೇರಿದ 10–15 ಹಿಂದುತ್ವವಾದಿ ಜನರ ಗುಂಪೊಂದು ಸರೋಜ್‌ ಅವರ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಗಲಾಟೆ ಎಬ್ಬಿಸುತ್ತಾರೆ. “ಅವರು ತಮ್ಮ ಕೈಯಲ್ಲಿ ಲಾಠಿ ಮತ್ತು ದಂಡಗಳನ್ನು ಹಿಡಿದುಕೊಂಡಿದ್ದರು. ಯಾವ ಎಚ್ಚರಿಕೆಯನ್ನೂ ನೀಡದೆ ನಮ್ಮ ಮೇಲೆ ಹಲ್ಲೆ ನಡೆಸಿದರು.” ಎಂದು ಸರೋಜ್‌ ಹೇಳುತ್ತಾರೆ.

ಸೋನು ಸರೋಜ್

ಸರೋಜ್‌ ಅವರ ಸೋದರಳಿಯನ ಮೇಲೆ ಮೂವರು ಗಂಡಸರ ತಂಡ ಹಲ್ಲೆ ನಡೆಸುತ್ತದೆ. ಆಗ ಸ್ನಾನದ ಮನೆಯಲ್ಲಿದ್ದ ಸರೋಜ್ ಅವರ ಪತ್ನಿ ಪ್ರಭಾ (ಹೆಸರು ಬದಲಾಯಿಸಲಾಗಿದೆ) ತಡೆಯಲು ಮುಂದೆ ಬಂದಾಗ, ಕೇಸರಿ ಸ್ಕಾರ್ಫ್ ಧರಿಸಿದ್ದ ಕೆಲವು ದುಷ್ಕರ್ಮಿಗಳು ಅವರ ಮೇಲೆಯೂ ದೈಹಿಕ ಹಲ್ಲೆ ನಡೆಸುತ್ತಾರೆ. ದುಷ್ಕರ್ಮಿಗಳಲ್ಲಿ ಒಬ್ಬ ಲಾಠಿಯಿಂದ ಆಕೆಯ ತಲೆಗೆ ಬಲವಾಗಿ ಹೊಡೆದ ಕಾರಣ ಆಕೆಗೆ ಗಂಭೀರ ಗಾಯವಾಗುತ್ತದೆ. ಅಲ್ಲಿನ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಹುನ್ನಾರದೊಂದಿಗೆ ಸರೋಜ್ ಅನಧಿಕೃತವಾಗಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುದು ಆ ದುಷ್ಕರ್ಮಿಗಳ ಆರೋಪವಾಗಿತ್ತು.

ಕೆಲವು ಕ್ಷಣಗಳ ನಂತರ, ಪೊಲೀಸರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸುತ್ತಾರೆ. ಆದರೆ, ಪೊಲೀಸರು ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸಿಆರ್‌ಪಿಸಿ ಸೆಕ್ಷನ್ 151 ಬಳಸಿಕೊಂಡು ಸರೋಜ್ ಅವರನ್ನೇ ಬಂಧಿಸಿ ಜೈಲಿಗಟ್ಟುತ್ತಾರೆ. ಒಬ್ಬ ವ್ಯಕ್ತಿಯು ಶಿಕ್ಷಾರ್ಹ ಅಪರಾಧವೆಸಗಲು ಪಿತೂರಿ ನಡೆಸುತ್ತಿದ್ದಾನೆ/ಳೆ ಎಂದು ಪೊಲೀಸರಿಗೆ ಮನದಟ್ಟಾದರೆ, ವಾರೆಂಟ್‌ ಅಥವಾ ಮ್ಯಾಜಿಸ್ಟ್ರೇಟ್‌ ಆದೇಶವಿಲ್ಲದೆ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಈ ಸೆಕ್ಷನ್‌ ಪೊಲೀಸರಿಗೆ ನೀಡುತ್ತದೆ. ಅಂದು ಸಂಜೆಯ ಹೊತ್ತಿಗೆ, 2020ರಲ್ಲಿ ಯೋಗಿ ಆದಿತ್ಯನಾಥ್‌ ಸರಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕ್ರೂರ ಕಾನೂನು, ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್‌ 3 ಮತ್ತು 5(1) ಅಡಿಯಲ್ಲಿ ಸಲೂನ್‌ ಪೊಲೀಸ್‌ ಠಾಣೆಯಲ್ಲಿ ಸರೋಜ್‌ ವಿರುದ್ಧ FIR ದಾಖಲಾಗುತ್ತದೆ. ವಿಹೆಚ್‌ಪಿ ಸದಸ್ಯ ಸಂಜಯ್‌ ಕುಮಾರ್‌ ತಿವಾರಿ ಎಂಬ ವ್ಯಕ್ತಿಯ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಸರೋಜ್‌ ಆಮಿಷಗಳನ್ನು ಒಡ್ಡುವ ಮೂಲಕ ಮತ್ತು ವಂಚನೆಗಳನ್ನು ಎಸಗುವ ಮೂಲಕ ಬಡ ಹಿಂದೂಗಳನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಮತ್ತು ಅದಕ್ಕಾಗಿ ಆತ “ಚಂಗಾಯಿ ಸಭಾ” ಅಥವಾ ವಿಶೇಷ ಚಿಕಿತ್ಸಕ ಸಭೆಗಳನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು.

ಕಿರುಕುಳ ನೀಡಲೆಂದೇ ಒಂದು ಕಾನೂನು

ನವೆಂಬರ್‌ 2020ರ ನಂತರ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು 835ಕ್ಕೂ ಹೆಚ್ಚಿನ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಸಲ್ಪಟ್ಟಿರುವ ಒಟ್ಟು 2700 ಜನರಲ್ಲಿ ಸರೋಜ್‌ ಕೂಡ ಒಬ್ಬರು. (ಜುಲೈ 31, 2024ರ ವರೆಗಿನ ಅಧಿಕೃತ ಅಂಕಿಅಂಶಗಳ ಪ್ರಕಾರ). ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗರ ನಡುವಿನ ಪ್ರೇಮ ಮತ್ತು ವಿವಾಹಗಳನ್ನು ತಡೆಗಟ್ಟಲು, ಅದನ್ನು ಅಪರಾಧೀಕರಿಸಲು, ಮುಸ್ಲಿಂ ಗಂಡಸರನ್ನು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಸಂಘ ಪರಿವಾರ ಸತತವಾಗಿ ನಡೆಸುತ್ತಿದ್ದ ಹಿಂಸಾತ್ಮಕ ಚಟುವಟಿಕೆಗಳಿಗೆ ಮತ್ತು ಅದರ ಕಾರ್ಯಕ್ರಮಗಳಿಗೆ ಕಾನೂನಿನ ಬಲ ನೀಡಲೆಂದು ಈ ಕಾನೂನನ್ನು ಜಾರಿಗೆ ತರಲಾಗಿತ್ತು. ಕೇಸರಿ ಪಕ್ಷ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಕಿರುಚಿಕೊಳ್ಳುವ “ಲವ್‌ ಜಿಹಾದ್”‌ ಎಂಬ ಸುಳ್ಳು ಸೃಷ್ಟಿಯು ಕಾನೂನಿನ ಮೂಲಕ ಇನ್ನೂ ಸಾಬೀತಾಗಿಲ್ಲ ಎಂಬುದು ವಾಸ್ತವ. ಆದರೂ ಕೂಡ, ಬಡ ಮತ್ತು ಅಂಚಿನಲ್ಲಿರುವ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಹಿಂದೂಗಳೆಂದೇ ಪರಿಗಣಿಸಲ್ಪಟ್ಟಿರುವ ದಲಿತ, ಬುಡಕಟ್ಟು ಮತ್ತು ಹಿಂದುಳಿದ ಜಾತಿಗಳ ಮೇಲೆ ಈ ಕಾನೂನನ್ನು ವ್ಯವಸ್ತಿತವಾಗಿ ಮತ್ತು ಎಗ್ಗಿಲ್ಲದೆ ಬಳಸಲಾಗಿದೆ. ಬ್ರಾಹ್ಮಣ್ಯ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಜನರಿಗೆ ಕಿರುಕುಳ ನೀಡಲೆಂದೇ ಈ ಕಾನೂನಿಡಿಯಲ್ಲಿ ಸರಕಾರವು ಪ್ರಕರಣ ದಾಖಲಿಸಿಕೊಳ್ಳುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು, ವಿರೋಧ ಪಕ್ಷಗಳು ಮತ್ತು ವಕೀಲರುಗಳು ಆರೋಪಿಸುತ್ತಿದ್ದಾರೆ.

ದಲಿತ ಸಮುದಾಯದ ಪಾಸಿ ಉಪಜಾತಿಯಲ್ಲಿ ಜನಿಸಿದ ಸರೋಜ್‌, ತಮ್ಮ ಮೇಲಿನ ಈ ದೌರ್ಜನ್ಯಕ್ಕೆ ಪ್ರಮುಖ ಕಾರಣ ತನ್ನ ಜಾತಿ ಗುರುತು ಎಂದು ಹೇಳುತ್ತಾರೆ. ರಾಜ್ಯದ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿ ಸಮುದಾಯವಾದ ಪಾಸಿಗಳು, ಲಕ್ನೋದ ಪಕ್ಕದಲ್ಲಿರುವ ಅವಧ್ ಪ್ರದೇಶಗಳಲ್ಲಿ ಸುದೀರ್ಘವಾದ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದ್ದಾರೆ. ರಾಯ್ ಬರೇಲಿಯಲ್ಲಿರುವ ಸರೋಜ್ ಅವರ ಹುಟ್ಟೂರು ಸಲೂನ್, ಲಕ್ನೋದಿಂದ ಸುಮಾರು 110 ಕಿ.ಮೀ ಆಗ್ನೇಯಕ್ಕಿದೆ.

ಮತಾಂತರ ನಿಷೇಧ ಕಾನೂನು ಜಾರಿಗೆ ಬಂದ ನಂತರ, ಈ ತನಕ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರವೇ ತಾರ್ಕಿಕ ಅಂತ್ಯ ಕಂಡಿವೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ನವೆಂಬರ್ 2020 ರಿಂದ ಜುಲೈ 31, 2024 ರವರೆಗೆ, ಪೊಲೀಸರು 835 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 1,682 ಜನರನ್ನು ಕಾನೂನುಬಾಹಿರ ಮತಾಂತರದ ಆರೋಪ ಹೊರಿಸಿ ಬಂಧಿಸಿದ್ದಾರೆ. ಇವುಗಳಲ್ಲಿ ಕೇವಲ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಇಲ್ಲಿಯವರೆಗೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ಹೇಳುತ್ತದೆ. ಮತ್ತೊಂದೆಡೆ, ಬರೇಲಿಯ ನ್ಯಾಯಾಲಯವು ಇಬ್ಬರು ಹಿಂದೂ ಪುರುಷರನ್ನು ಕಾನೂನುಬಾಹಿರ ಮತಾಂತರ ಆರೋಪದಿಂದ ಖುಲಾಸೆಗೊಳಿಸಿದ್ದಲ್ಲದೆ, ನಕಲಿ ಗೋರಕ್ಷಕರ ಆಧಾರರಹಿತ ಸುಳ್ಳು ಆರೋಪದ ಮೇಲೆ ಬಂಧಿಸಿದ್ದಕ್ಕಾಗಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಿದ ಕಥೆಯನ್ನು ಆಗಸ್ಟ್‌ 2024 ರಲ್ಲಿ ದಿ ವೈರ್ ಹೊರ ತರುವ ತನಕ ಪ್ರಕರಣದಿಂದ ಖುಲಾಸೆಗೊಂಡವರ ಬಗ್ಗೆ ವರದಿಗಳೇ ಬರುತ್ತಿರಲಿಲ್ಲ.

ಇಂತಹ ಸುಳ್ಳು ಆರೋಪಗಳು ಹೊರಿಸಲ್ಪಟ್ಟ ನಂತರ ನ್ಯಾಯಾಲಯಗಳು ಕಾನೂನು ಕ್ರಮಗಳನ್ನು ಪೂರೈಸಿದ ಕೆಲವೇ ಕೆಲವು ಪ್ರಕಣಗಳಲ್ಲಿ ಸರೋಜ್‌ ಅವರ ಪ್ರಕರಣವೂ ಒಂದು. ಸರೋಜ್‌ ವಿರುದ್ಧ ಪ್ರಕರಣ ದಾಖಲಾಗಿ ಸುಮಾರು 15 ತಿಂಗಳುಗಳ ನಂತರ, ಸೆಪ್ಟೆಂಬರ್‌ 2024ರಲ್ಲಿ ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಹೇಳಿ ಸ್ಥಳೀಯ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು. ವಿಚಾರಣಾ ಹಂತವನ್ನು ತಲುಪುವ ಮೊದಲೇ, ಪ್ರಾಸಿಕ್ಯೂಷನ್‌ ಹೆಣೆದ ಸುಳ್ಳು ಪ್ರಕರಣವು ಹೇಗೆ ಕುಸಿದು ಬಿತ್ತು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ಸರೋಜ್‌ ಅವರ ಪತ್ನಿ ಪ್ರಭಾ ಅವರ ತಲೆಗೆ ಬಿದ್ದ ಹೊಡೆತದ ಪರಿಣಾಮವನ್ನು ಈಗಲೂ ಅನುಭವಿಸುತ್ತಿರುವ ಕುರಿತು ಅವರು ನೆನೆಯುತ್ತಾರೆ. ಹಿಂದಿನಂತೆ ಕೆಲಸ ಮಾಡಲು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಮನೆ ಮತ್ತು ನಾಲ್ವರು ಮಕ್ಕಳನ್ನು ನೋಡಿಕೊಳ್ಳಲು ಆಕೆ ಹೆಣಗಾಡುತ್ತಿದ್ದಾರೆ. ಸರೋಜ್‌ ದಂಪತಿಗೆ 13 ಮತ್ತು 9 ವರ್ಷದ ಇಬ್ಬರು ಹೆಣ್ಣುಮಕ್ಕಳು ಹಾಗೂ 16 ಮತ್ತು 7 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. “ನನ್ನ ಹೆಂಡತಿಯ ತಲೆ ಒಡೆದಿತ್ತು. ನಮ್ಮ ಮೇಲೆ ದಾಳಿ ನಡೆದು ಮೂರ್ನಾಲ್ಕು ತಿಂಗಳ ನಂತರ ನಮಗೆ ನಿಜವಾದ ಸಮಸ್ಯೆಗಳು ಪ್ರಾರಂಭವಾದವು. ನಾನು ಆಕೆಯನ್ನು ಒಂದು ವಾರದವರೆಗೆ ರಾಯ್ ಬರೇಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆಕೆ ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಅವಳ ದೃಷ್ಟಿ ಕುಗ್ಗಿದೆ. ಕೆಲವೊಮ್ಮೆ, ಅವಳು ದೀರ್ಘಸಮಯ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಅವಳೀಗ ಹಳೆಯ ವ್ಯಕ್ತಿಯೇ ಅಲ್ಲ.” ಎಂದು ಸರೋಜ್ ಹತಾಶೆಯಿಂದ ಹೇಳುತ್ತಾರೆ.

ಹಲ್ಲೆಗೊಳಗಾದ ಪ್ರಭಾ

ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕೆ ತೆರಬೇಕಾದ ಬೆಲೆ

ಸರೋಜ್ ಒಬ್ಬ ಹಿಂದೂ ದಲಿತನಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಅವರು ಯೇಸುಕ್ರಿಸ್ತನ ತಾತ್ವಿಕತೆ ಮತ್ತು ಬೋಧನೆಗಳಿಂದ ಬಹಳವೇ ಪ್ರಭಾವಿತರಾಗಿದ್ದಾರೆ. ಸರೋಜ್‌ ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಯೇಸುಕ್ರಿಸ್ತನ ಬಗ್ಗೆ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು. ನಂತರ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಆರಂಭದಲ್ಲಿ, ಪ್ರಯಾಗ್‌ರಾಜ್‌ನಲ್ಲಿರುವ ಸಮಾನ ಮನಸ್ಕ ಜನರು ಸರೋಜ್ ಅವರನ್ನು ಕ್ರಿಸ್ತನ ಕಡೆಗೆ ಆಕರ್ಷಿಸಿದರು. ಆದರೆ ನಿಯಮಿತವಾಗಿ ಸಭೆಗಳು ಮತ್ತು ಪ್ರಾರ್ಥನಾ ಕಾರ್ಯಕ್ರಮಗಳಿಗಾಗಿ ಅಲ್ಲಿಯ ತನಕ ಪ್ರಯಾಣಿಸುವುದು ಕಷ್ಟಕರ ಮತ್ತು ದುಬಾರಿಯೂ ಆಗಿತ್ತು. ಆದ್ದರಿಂದ, ಒಂದು ದಿನ, ಅವರು ತಮ್ಮ ಸ್ವಂತ ಮನೆಯಲ್ಲಿ, ತನ್ನ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನಾ ಸಭೆಗಳನ್ನು ನಡೆಸಲು ನಿರ್ಧರಿಸುತ್ತಾರೆ. ಆದರೆ, ಅದರಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಕಂಡು ಅವರು ಚಕಿತರಾಗುತ್ತಾರೆ. ಹಾಗಾಗಿ, ನಿಯಮಿತವಾಗಿ ಈ ಸಭೆಗಳನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸುತ್ತಾರೆ. ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗತೊಡಗಿದಂತೆ ಅವರು ಪ್ರಾರ್ಥನೆಗಾಗಿ ಸಣ್ಣದೊಂದು ಶೆಡ್‌ ನಿರ್ಮಿಸುತ್ತಾರೆ. ಸರೋಜ್ ಔಪಚಾರಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳದೆ, ತನ್ನ ಹಿಂದೂ ಗುರುತನ್ನು ಮುಂದುವರಿಸುತ್ತಿದ್ದರೂ, ಅವರು ಯೇಸುವಿನ ಚಿಕಿತ್ಸಕ ಶಕ್ತಿಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ಯೇಸುಕ್ರಿಸ್ತನೊಂದಿಗಿನ ತನ್ನ ಸಾಮೀಪ್ಯವು ತನ್ನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿತು ಮತ್ತು ಮದ್ಯಪಾನದಂತಹ ಅನೇಕ ದುರ್ಗುಣಗಳನ್ನು ತೊಡೆದುಹಾಕಲು ಸಹಾಯ ಮಾಡಿತು ಎಂದು ಸರೋಜ್ ನಂಬುತ್ತಾರೆ.

“ಪೊಲೀಸರು ನಮ್ಮ ಶೆಡ್‌ ಬಳಿಯಿಂದ ಹಾದು ಹೋಗುತ್ತಿದ್ದರು, ಆದರೆ ಅವರು ಎಂದೂ ನಮಗೆ ತೊಂದರೆ ನೀಡಲಿಲ್ಲ” ಎಂದು ಅವರು ಹೇಳುತ್ತಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆರಂಭದಲ್ಲಿ ನನಗೆ ಕೆಲವು ಅಡೆತಡೆಗಳಿದ್ದವು. ಇದು ಇತರ ಧರ್ಮಗಳಂತೆಯೇ ಕೆಲವು ಪರಿಹಾರಗಳು ಮತ್ತು ಆಚರಣೆಗಳನ್ನು ಮಾತ್ರ ಸೂಚಿಸುತ್ತವೆ ಎಂದು ನಾನು ಭಾವಿಸಿದ್ದೆ. ಪ್ರೇತಬಾಧೆ ದೂರ ಮಾಡುವಂತಹ ಅದೇ ಗೀಳು ಇಲ್ಲೂ ಇದೆ ಎಂದು ಅನಿಸಿತ್ತು. ಆದರೆ ಯೇಸುವಿನ ಸಂದೇಶ ಸಂಪೂರ್ಣವಾಗಿ ವಿಭಿನ್ನವಾಗಿತ್ತು.”

ಸರೋಜ್ ವಿರುದ್ಧದ ಎಫ್‌ಐಆರ್ ಕೇವಲ ಅಸ್ಪಷ್ಟ ಆರೋಪಗಳನ್ನು ಮಾತ್ರ ಆಧರಿಸಿದ್ದಾಗಿತ್ತು. ಪೊಲೀಸ್ ದೂರಿನಲ್ಲಿ, ತಿವಾರಿ ಯಾವುದೇ ನಿರ್ದಿಷ್ಟ ಕಾನೂನುಬಾಹಿರ ಮತಾಂತರದ ಘಟನೆಯನ್ನು ಉಲ್ಲೇಖಿಸಿರಲಿಲ್ಲ. ಅಥವಾ ಮತಾಂತರಕ್ಕೆ ಒಳಗಾದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ಕಳೆದ ಐದು ವರ್ಷಗಳಿಂದ, ಸರೋಜ್ ಅವರು ಅಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಮಂಗಳವಾರ ಮತ್ತು ಭಾನುವಾರದಂದು ಕೊದ್ರಾದಲ್ಲಿ “ಚಂಗಾಯಿ ಸಭೆಗಳನ್ನು” ಆಯೋಜಿಸುತ್ತಿದ್ದಾರೆ ಎಂಬುದು ತಿವಾರಿಯ ಆರೋಪವಾಗಿತ್ತು. ಈ ಸಭೆಗಳ ಮೂಲಕ, ಸರೋಜ್ ಹಿಂದೂ ಧರ್ಮದ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ “ದಾರಿತಪ್ಪಿಸುತ್ತಿದ್ದಾರೆ ಮತ್ತು ಜನರನ್ನು ಗೊಂದಲಗೊಳಿಸುತ್ತಿದ್ದಾರೆ” ಎಂಬುದು ತಿವಾರಿಯ ಆರೋಪ.

ಯೇಸುವಿನ ಬೋಧನೆಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಶಿಕ್ಷಿಸಲು ಮತ್ತು ಅಂತಹ ಪ್ರಾರ್ಥನಾ ಸಭೆಗಳಲ್ಲಿ ಇತರರು ಭಾಗವಹಿಸದಂತೆ ತಡೆಯಲು ಬಲಪಂಥೀಯ ಕಾರ್ಯಕರ್ತರು ತನ್ನನ್ನು ಗುರಿಯಾಗಿಸಿಕೊಂಡಿದ್ದರೆಂದು ಸರೋಜ್ ಹೇಳುತ್ತಾರೆ. “ನನಗೆ ಯಾರೊಂದಿಗೂ ಯಾವುದೇ ದ್ವೇಷ ಅಥವಾ ಸಂಘರ್ಷವಿರಲಿಲ್ಲ. ಆದರೆ ಅದು ನನ್ನ ಜಾತಿಯ ಕಾರಣದಿಂದಾಗಿತ್ತು ಎಂದು ನಾನು ಭಾವಿಸುತ್ತೇನೆ. ನೆರೆಹೊರೆಯಲ್ಲಿ ಕಾರು ನಿಲ್ಲಿಸಿಕೊಂಡು, ಇಷ್ಟೊಂದು ಜನರು ಅದು ಹೇಗೆ ಪ್ರಾರ್ಥನಾ ಸಭೆಗೆ ಆಕರ್ಷಿತರಾಗುತ್ತಾರೆ ಎಂದು ಕೆಲವರಿಗೆ ಅಸೂಯೆ ಹುಟ್ಟಿತ್ತು.” ಎಂದು ಅವರು ಹೇಳುತ್ತಾರೆ.

ಸರೋಜ್ ಅವರ ಕ್ರಿಶ್ಚಿಯನ್ ತಾತ್ವಿಕತೆಯೊಂದಿಗಿನ ಹೊಸ ಆದರೆ ಸಂಕೀರ್ಣವಾದ ಈ ಬಾಂಧವ್ಯದಲ್ಲಿ ಜಾತಿ ದಬ್ಬಾಳಿಕೆಯ ವಿರುದ್ಧದ ದಲಿತರ ಐತಿಹಾಸಿಕವಾದ ನಿರಂತರ ಪ್ರತಿರೋಧ ಮತ್ತು ಘನತೆಯ ಹುಡುಕಾಟವೂ ಇದೆ. ಸಭೆಗಳನ್ನು ನಡೆಸಲು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಲಿಲ್ಲ ಎಂದು ಅವರು ಒಪ್ಪಿಕೊಂಡರೂ, ಧಾರ್ಮಿಕ ಮತಾಂತರದ ಆರೋಪವನ್ನು ಅವರು ನಿರಾಕರಿಸುತ್ತಾರೆ. ಜೊತೆಗೆ ಯೇಸುವಿನಲ್ಲಿ “ನಂಬಿಕೆ” ಇಡುವುದನ್ನು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಔಪಚಾರಿಕವಾಗಿ ಮತಾಂತರವಾಗುವುದನ್ನು ಪ್ರತ್ಯೇಕವಾಗಿ ಕಾಣಬೇಕೆಂದು ಅವರು ಹೇಳುತ್ತಾರೆ.

“ಕೆಳಜಾತಿಯ ಜನರು ಚರ್ಚ್‌ಗಳಿಗೆ ಹೋಗಲು ಪ್ರಾರಂಭಿಸುವಾಗ, ಅವರು ಮುನ್ನಡೆ ಸಾಧಿಸಲು ಮತ್ತು ಶಿಕ್ಷಣ ಪಡೆಯಲು ಪ್ರಾರಂಭಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುತ್ತಾರೆ ಮತ್ತು ಮುಖ್ಯವಾಗಿ, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕಲಿಯುತ್ತಾರೆ” ಎಂಬುದು ಸರೋಜ್ ಅವರ ಸ್ಪಷ್ಟ ಮಾತು. ಆದರೆ ಸಮಾಜದಲ್ಲಿರುವ ಊಳಿಗಮಾನ್ಯ ಮತ್ತು ಜಾತಿವಾದಿ ಅಂಶಗಳು ಇದನ್ನು ಸಹಿಸುವುದಿಲ್ಲ ಎಂದೂ ಅವರು ಹೇಳುತ್ತಾರೆ. “ನಾವು ಅನಕ್ಷರಸ್ಥರಾಗಿ ಮತ್ತು ಅಜ್ಞಾನಿಗಳಾಗಿ ಉಳಿಯಬೇಕೆಂದು ಅವರು ಬಯಸುತ್ತಾರೆ. ಶಾಲೆಗಳಲ್ಲಿ ಓದುವ ಬದಲು ನಾವು ಅವರ ಹೊಲಗಳಲ್ಲಿ ಕೆಲಸ ಮಾಡಬೇಕೆಂಬುದೇ ಅವರ ಬಯಕೆ.”

ಈ ಪ್ರಕರಣದ ಹಿಂದೆ ವೈಯಕ್ತಿಕ ದ್ವೇಷವೂ ಇತ್ತೆಂದು ಸರೋಜ್‌ ಹೇಳುತ್ತಾರೆ. ಜೂನ್‌ 15, 2023ರಂದು, ಅಂದರೆ ಘಟನೆ ನಡೆಯುವ ಹತ್ತು ದಿನಗಳ ಮೊದಲು, ತಿವಾರಿ ತಮ್ಮ ಬೈಕ್‌ ರಿಪೇರಿಗೆಂದು ಸರೋಜ್‌ ಅವರ ಗ್ಯಾರೇಜಿಗೆ ಬಂದಿದ್ದ. ಬೈಕ್‌ ರಿಪೇರಿಗಾಗಿ ಸರೋಜ್‌ 600 ರೂಪಾಯಿಗಳನ್ನು ಕೇಳಿದ್ದರು. ಆದರೆ, ಸರೋಜ್‌ ಹಣ ಪಾವತಿಸುವಂತೆ ಕೇಳಿಕೊಂಡಾಗ, ತಿವಾರಿ ಕೆಂಡಾಮಂಡಲನಾಗಿ ಪ್ರತಿಕ್ರಿಯೆ ನೀಡಿದ್ದರು ಮತ್ತು ತನ್ನ ಭಜರಂಗದಳದ ಹಿನ್ನೆಲೆಯನ್ನು ಹೇಳಿಕೊಂಡು “ನನ್ನ ಬಳಿ ಹಣ ಕೇಳುತ್ತೀಯಾ ಪಿ…. (ಜಾತಿವಾದಿ ಬೈಗುಳ)” ಎಂದು ಬೈಯ್ದಿದ್ದ. ಇದನ್ನು ಸರೋಜ್‌ ಜಾಮೀನು ಅರ್ಜಿ ಸಲ್ಲಿಸುವಾಗ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸುತ್ತಾರೆ.  ಘಟನೆಯ ಮುಂದುವರಿಕೆಯಾಗಿಯೇ ತಿವಾರಿ ತನ್ನ ಮೇಲೆ ಸುಳ್ಳಾರೋಪ ಹೊರಿಸಿದ್ದನೆಂದು ಸರೋಜ್‌ ಹೇಳುತ್ತಾರೆ.

ಪೊಲೀಸರೇ ಉಲ್ಲಂಘಿಸುತ್ತಿರುವ ಮತಾಂತರ ನಿಷೇಧ ಕಾನೂನು

ಸಿಆರ್‌ಪಿಸಿಯ ಸೆಕ್ಷನ್ 227ರ ಅಡಿಯಲ್ಲಿ ಸರೋಜ್ ಬಿಡುಗಡೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಸೆಕ್ಷನ್‌ ಪ್ರಕಾರ, ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಕ್ರಿಮಿನಲ್ ಮೊಕದ್ದಮೆಗೆ ಸಾಕಷ್ಟು ಆಧಾರವಿಲ್ಲ ಎಂದು ನ್ಯಾಯಾಲಯ ಭಾವಿಸಿದರೆ ನ್ಯಾಯಾಧೀಶರಿಗೆ ಆರೋಪಿಯನ್ನು ಬಿಡುಗಡೆಗೊಳಿಸುವ ಅಧಿಕಾರವಿದೆ. ಸೆಪ್ಟೆಂಬರ್ 21, 2024ರಂದು ಪ್ರಕರಣದ ಅರ್ಹತೆಯ ಕುರಿತು ವಿವರವಾದ ಚರ್ಚೆಯ ನಂತರ, ರಾಯ್ ಬರೇಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಕುಮಾರ್ ಪಾಂಡೆ ಸರೋಜ್ ಅವರ ಬಿಡುಗಡೆ ಅರ್ಜಿಯನ್ನು ಅಂಗೀಕರಿಸುತ್ತಾರೆ. ಕಾನೂನುಬಾಹಿರ ಮತಾಂತರದ ಆರೋಪದಡಿಯಲ್ಲಿ ಸರೋಜ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ.

ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿರುವ ಹಿಂದುತ್ವವಾದಿ ಬಲಪಂಥೀಯ ವ್ಯಕ್ತಿಗಳು

ಸರೋಜ್ ವಿರುದ್ಧದ ಪ್ರಕರಣವು ಉತ್ತರ ಪ್ರದೇಶದ ಮತಾಂತರ ನಿಷೇಧ ಕಾನೂನಿನ ಕೆಲವು ಮುಖ್ಯ ಅಂಶಗಳನ್ನು ಉಲ್ಲಂಘಿಸಿದೆ. ಕಾನೂನಿನ ಸೆಕ್ಷನ್ 3ರ ಪ್ರಕಾರ ತಪ್ಪು ನಿರೂಪಣೆ, ಬಲವಂತ, ವಂಚನೆ, ಅನಗತ್ಯ ಪ್ರಭಾವ, ಆಮಿಷ, ದಬ್ಬಾಳಿಕೆ ಅಥವಾ ಅಭ್ಯಾಸದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನಿಷೇಧಿಸುತ್ತದೆ. ಮೇಲಿನ ಅಪರಾಧಕ್ಕೆ ಸೆಕ್ಷನ್ 5(1) ಶಿಕ್ಷೆಯನ್ನು ಕೂಡ ಸೂಚಿಸುತ್ತದೆ. ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ. ಐದು ವರ್ಷಗಳವರೆಗೂ ಇದನ್ನು ವಿಸ್ತರಿಸಬಹುದು. ಬಲಿಪಶುವಾದ ವ್ಯಕ್ತಿ ಮಹಿಳೆ, ಅಪ್ರಾಪ್ತ, ದಲಿತ ಅಥವಾ ಬುಡಕಟ್ಟು ಜನಾಂಗದವರಾಗಿದ್ದರೆ, ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ. ಇದನ್ನು ಹತ್ತು ವರ್ಷಗಳವರೆಗೂ ವಿಸ್ತರಿಸಬಹುದು ಮತ್ತು 25,000 ರೂ. ದಂಡವನ್ನೂ ವಿಧಿಸಬಹುದು. ಕಾನೂನಿನ ಸೆಕ್ಷನ್ 2(1) ಕಾನೂನುಬದ್ಧವಾಗಿ ಮತಾಂತರವನ್ನು ನಡೆಸಲು ಯಾರು ಅಧಿಕಾರ ಹೊಂದಿದ್ದಾರೆ ಎಂಬುದನ್ನು ವ್ಯಾಖ್ಯಾನಿಸುತ್ತದೆ. “ಧರ್ಮ ಪರಿವರ್ತಕ” ಅಂದರೆ ಯಾವುದೇ ಧರ್ಮದ ವ್ಯಕ್ತಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವ ಯಾವುದೇ ಕ್ರಿಯೆಯನ್ನು ಮಾಡುವವನು ಮತ್ತು ಆತ ಫಾದರ್, ಕರ್ಮಕಾಂಡಿ, ಮೌಲ್ವಿ ಅಥವಾ ಮುಲ್ಲಾ ಮುಂತಾದ ಯಾವುದೇ ಹೆಸರಿನ ವ್ಯಕ್ತಿಯೂ ಆಗಿರಬಹುದು ಎಂದು ಕಾನೂನು ಹೇಳುತ್ತದೆ. ಸರೋಜ್ ತಾನೊಬ್ಬ “ಧರ್ಮ ಪರಿವರ್ತಕ” ಅಲ್ಲ ಮತ್ತು ಆದ್ದರಿಂದಲೇ ಜನರನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವ ಅಧಿಕಾರ ತನಗಿಲ್ಲ ಎಂದು ವಾದಿಸುತ್ತಾರೆ.

ಮುಖ್ಯವಾಗಿ, ಕಾನೂನುಬಾಹಿರ ಮತಾಂತರದ ವಿರುದ್ಧ ದೂರು ದಾಖಲಿಸಲು ಯಾರು ಅಧಿಕಾರ ಹೊಂದಿದ್ದಾರೆ ಎಂಬುದನ್ನು ವ್ಯಾಖ್ಯಾನಿಸುವ 2021 ರ ಕಾಯ್ದೆಯ ಸೆಕ್ಷನ್ 4ರೊಂದಿಗೆ ಎಫ್‌ಐಆರ್ ತಾಳೆಯಾಗುವುದಿಲ್ಲ. ಕಾನೂನಿನ ಸೆಕ್ಷನ್ 4 ರಲ್ಲಿ “ನೊಂದ ವ್ಯಕ್ತಿ, ಅವನ/ಳ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತಸಂಬಂಧ, ಮದುವೆ ಅಥವಾ ದತ್ತು ಸ್ವೀಕಾರದ ಮೂಲಕ ಅವನಿಗೆ/ಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ” ಎಫ್‌ಐಆರ್ ದಾಖಲಿಸಬಹುದು ಎಂದು ಹೇಳುತ್ತದೆ.

ಅದಾಗ್ಯೂ, ಅಲಹಾಬಾದ್ ಹೈಕೋರ್ಟ್‌ನ ಹಲವಾರು ಜ್ಞಾಪನೆಗಳ ಹೊರತಾಗಿಯೂ, ಉತ್ತರ ಪ್ರದೇಶದ ಪೊಲೀಸರು ಮೂರನೇ ವ್ಯಕ್ತಿಗಳಿಗೆ – ವಿಶೇಷವಾಗಿ ತೀವ್ರವಾದಿ ಹಿಂದುತ್ವ ಶಕ್ತಿಗಳಿಗೆ, ಭಾರತೀಯ ಜನತಾ ಪಕ್ಷದ ಸದಸ್ಯರುಗಳಿಗೆ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ – ಅವರು ಯಾವುದೇ ರೀತಿಯಲ್ಲಿ ತೊಂದರೆಗೊಳಗಾಗದಿದ್ದರೂ ಅಥವಾ ಬಲವಂತದ ಮತಾಂತರಕ್ಕೆ ಬಲಿಯಾಗದಿದ್ದರೂ ಸಹ ದೂರು ದಾಖಲಿಸಲು ನಿರ್ಲಜ್ಜವಾಗಿ ಅವಕಾಶ ನೀಡುತ್ತಿದ್ದಾರೆ. ಈ ಕಾನೂನು ಸಮಸ್ಯೆಯನ್ನು ನಿಭಾಯಿಸಲೆಂದು, ಆದಿತ್ಯನಾಥ್ ಸರ್ಕಾರವು ಜುಲೈ 2024ರಲ್ಲಿ ಕಾನೂನಿನ ಸೆಕ್ಷನ್ 4 ಅನ್ನು ತಿದ್ದುಪಡಿ ಮಾಡಿ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಆ ಮೂಲಕ “ಯಾವುದೇ ವ್ಯಕ್ತಿ”ಗೆ ಕಾನೂನುಬಾಹಿರ ಮತಾಂತರದ ವಿರುದ್ಧ ದೂರು ದಾಖಲಿಸಲು ಅವಕಾಶ ಮಾಡಿಕೊಡುತ್ತದೆ. ಅಂದರೆ, ಒಬ್ಬ ವ್ಯಕ್ತಿ ತಾನು ನೊಂದವನಲ್ಲದಿದ್ದರೂ ಅಥವಾ ನೊಂದವರ ಸಂಬಂಧಿಯಲ್ಲದಿದ್ದರೂ ಸಹ ದೂರು ದಾಖಲಿಸಬಹುದು.

ಸರೋಜ್ ವಿರುದ್ಧದ ಎಫ್‌ಐಆರ್ ಒಂದು “ಕಾನೂನುಬಾಹಿರ ಡಾಕ್ಯುಮೆಂಟ್”

ಸರೋಜ್ ಅವರ ಪ್ರಕರಣದಲ್ಲಿ, ಕಾನೂನುಬಾಹಿರ ಮತಾಂತರಕ್ಕೆ ಬಲಿಪಶುವಾದ ವ್ಯಕ್ತಿಗಳು ಇರಲಿಲ್ಲ ಅಥವಾ ಯಾವುದೇ ನೊಂದ ವ್ಯಕ್ತಿ ಎಫ್‌ಐಆರ್ ದಾಖಲಿಸಿರಲಿಲ್ಲ. ತನಿಖೆಯ ಸಮಯದಲ್ಲಿ, ಸರೋಜ್ ಅವರಿಂದ ಹಳೆಯ ಒಡಂಬಡಿಕೆಯ ಪ್ರತಿ, ಬಿಲೀವರ್ಸ್ ಬೈಬಲ್ ಕಾಮೆಂಟರಿ ನ್ಯೂ ಟೆಸ್ಟಮೆಂಟ್ (ಭಾಗ 1)ರ ಪ್ರತಿ, ಒಂದು ಡೈರಿ, ಒಂದು ರಿಜಿಸ್ಟರ್ ಮತ್ತು ಒಂಬತ್ತು ಲಕೋಟೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು. ಡೈರಿಯಲ್ಲಿ ಪ್ರಾರ್ಥನಾ ಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದ ಜನರ ಹೆಸರುಗಳು ಮತ್ತು ಫೋನ್ ಸಂಖ್ಯೆಗಳನ್ನು ಬರೆದಿಡಲಾಗಿತ್ತು ಎಂದು ಸರೋಜ್ ಹೇಳುತ್ತಾರೆ.

ಪ್ರಾಸಿಕ್ಯೂಷನ್ ಅರೆ ಡಜನ್‌ಗೂ ಹೆಚ್ಚು ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು – ಮೇವಾ ಲಾಲ್ ಭಾರತಿ, ವಿನೋದ್ ಮೌರ್ಯ, ಸುರೇಶ್ ಸಿಂಗ್, ಕುಲೈ, ದ್ವಿಜ, ಸೀತಾ ಪಟೇಲ್, ಸೂರಜ್ ಪಾಲ್ ಕೌಶಲ್. ಅವರಲ್ಲಿ ಬಹುತೇಕರು ಬಜರಂಗದಳಕ್ಕೆ ಸೇರಿದವರು. ಸರೋಜ್ ಅವರು “ಚಂಗಾಯಿ ಸಭೆಗಳನ್ನು” ನಡೆಸುತ್ತಿದ್ದರು, ಅಲ್ಲಿ ಅವರು ಕ್ರಿಶ್ಚಿಯನ್ ನಂಬಿಕೆ ಮತ್ತು ಕ್ರಿಸ್ತನ ಬಗ್ಗೆ “ಹೆಚ್ಚು ಮಾತನಾಡುತ್ತಿದ್ದರು” ಮತ್ತು ಹಿಂದೂ ದೇವರುಗಳ ಬಗ್ಗೆ ಟೀಕಿಸುತ್ತಿದ್ದರು ಎಂದು ಅವರೆಲ್ಲ ಒಂದೇ ರಾಗದಲ್ಲಿ ಸಾಕ್ಷಿ ಹೇಳಿದ್ದರು.

ಆದರೆ, ನ್ಯಾಯಾಧೀಶರು ಈ ಹೇಳಿಕೆಗಳಿಗೆ ಯಾವ ಬೆಲೆಯನ್ನೂ ನೀಡುವುದಿಲ್ಲ. ತನಿಖಾಧಿಕಾರಿಯು ನೊಂದ ಅಥವಾ ಮೋಸದಿಂದ ಮತಾಂತರಗೊಂಡ ಒಬ್ಬನೇ ಒಬ್ಬ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಲು ವಿಫಲರಾಗಿದ್ದಾರೆ ಎಂಬುದರ ಕಡೆಗೆ ನ್ಯಾಯಾಧೀಶರು ಗಮನ ಸೆಳೆಯುತ್ತಾರೆ. ನ್ಯಾಯಾಧೀಶರಾದ ಪಾಂಡೆ ತಮ್ಮ ಆದೇಶದಲ್ಲಿ, ಪ್ರಾಸಿಕ್ಯೂಷನ್ ಹಾಜರುಪಡಿಸಿದ ಯಾವುದೇ ಸಾಕ್ಷಿಗಳು ಕಾನೂನುಬಾಹಿರ ಮತಾಂತರದ ಬಗ್ಗೆ ಮಾತನಾಡಲಿಲ್ಲ ಎಂದು ಬೊಟ್ಟು ಮಾಡುತ್ತಾರೆ. ಸರೋಜ್ ತನ್ನ ಮನೆಯಲ್ಲಿ ಜನರನ್ನು ಒಟ್ಟುಗೂಡಿಸಿ ಕ್ರಿಶ್ಚಿಯನ್ ಧರ್ಮವನ್ನು ಕೊಂಡಾಡುತ್ತಿದ್ದರು ಎಂದು ಮಾತ್ರ ದಾಖಲಿಸಿದ್ದಾರೆಂದು ಅವರು ಹೇಳುತ್ತಾರೆ.

ಸರೋಜ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ “ಕಾನೂನುಬಾಹಿರ ಡಾಕ್ಯುಮೆಂಟ್” ಎಂದು ನ್ಯಾಯಾಧೀಶ ಪಾಂಡೆ ತೀರ್ಮಾನಿಸುತ್ತಾರೆ. ಈ ವಿಷಯದಲ್ಲಿ ತಿವಾರಿ ಅವರಿಗೆ ದೂರು ದಾಖಲಿಸುವ ಹಕ್ಕಿಲ್ಲ ಮತ್ತು ಸರೋಜ್ ವಿರುದ್ಧ ಎಫ್‌ಐಆರ್ ದಾಖಲಿಸುವ ಹಕ್ಕು ಪೊಲೀಸರಿಗೆ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳುತ್ತಾರೆ. ತಿವಾರಿ ಅವರು ನೊಂದ ವ್ಯಕ್ತಿಯಾಗಿರಲಿಲ್ಲ ಅಥವಾ ಯಾವುದೇ ನೊಂದ ವ್ಯಕ್ತಿಯ ಸಂಬಂಧಿಯೂ ಆಗಿರಲಿಲ್ಲ.

ಎಫ್‌ಐಆರ್‌ನಲ್ಲಿ ಯಾವ ವ್ಯಕ್ತಿ ಅಥವಾ ಸಮುದಾಯವನ್ನು ಮತಾಂತರಿಸಲಾಗುತ್ತಿದೆ ಎಂಬುದರ ಕುರಿತೂ ಸ್ಪಷ್ಟಣೆಯಿಲ್ಲ ಎಂಬುದನ್ನೂ ನ್ಯಾಯಾಧೀಶರು ಗಮನಿಸುತ್ತಾರೆ. ಸರೋಜ್ ಅವರು ತಪ್ಪು ನಿರೂಪಣೆ, ಆಮಿಷ, ಬಲಪ್ರಯೋಗ, ಅನಗತ್ಯ ಪ್ರಭಾವ ಅಥವಾ ಒತ್ತಡದ ಮೂಲಕ ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸಿದ್ದಾರೆ ಅಥವಾ ಮತಾಂತರಿಸಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ನ್ಯಾಯಾಧೀಶರಾದ ಪಾಂಡೆ ಗಮನಿಸುತ್ತಾರೆ. ಬೈಬಲ್‌ನಂತಹ ಧಾರ್ಮಿಕ ಪುಸ್ತಕಗಳನ್ನು ಒಬ್ಬ ವ್ಯಕ್ತಿಯ ಮನೆಯಿಂದ ವಶಪಡಿಸಿಕೊಂಡ ಮಾತ್ರಕ್ಕೆ 2021ರ ಕಾಯ್ದೆಯಡಿಯಲ್ಲಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಧೀಶರು ಒತ್ತಿ ಹೇಳುತ್ತಾರೆ.

ಗದ್ದಲದ ನಂತರ ನಡೆದ ಪ್ರಾರ್ಥನಾ ಸಭೆ

ಮತಾಂತರ ವಿರೋಧಿ ಪ್ರಕರಣವು ಸರೋಜ್ ಅವರ ಹೋರಾಟದ ಒಂದು ಭಾಗ ಮಾತ್ರ. ಬಲಪಂಥೀಯ ಕಾರ್ಯಕರ್ತರು ಅವರ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದ ನಂತರ, ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲು ಸರೋಜ್‌ ಬಹಳವೇ ಹೆಣಗಾಡಿದ್ದರು. ಅವರು ಕಛೇರಿಯಿಂದ ಕಛೇರಿಗೆ ಅಲೆದಾಡಿದ್ದರು. ಕೊನೆಗೆ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರ ನಂತರ ಫೆಬ್ರವರಿ 2024 ರಲ್ಲಿ, ಏಳು ಜನರು ಮತ್ತು ಗುರುತಿಸಲಾಗದ ಇತರ ಹತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಆರೋಪಿಗಳಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಸುರೇಶ್ ಸಿಂಗ್ ಮತ್ತು ಅವರ ಸಹಚರರು ಎಂದು ಹೇಳಲಾಗುವ ಪಪ್ಪು ಕೌಶಲ್, ರಾಮ್ ಸಜೀವನ್, ಸತೀಶ್ ಜೋಶಿ, ಅಮನ್ ಸಿಂಗ್, ಶಿವ ಮತ್ತು ಧೀರಜ್ ಕೌಶಲ್ ಸೇರಿದ್ದಾರೆ. ಅವರುಗಳ ವಿರುದ್ಧ ಕೊಲೆಯತ್ನ, ಹಲ್ಲೆ ಮತ್ತು ಧಾರ್ಮಿಕ ಸಭೆಗಳಿಗೆ ತೊಂದರೆ ನೀಡುವುದು ಸೇರಿದಂತೆ ಇತರ ಅಪರಾಧಗಳನ್ನು ಹೊರಿಸಲಾಗುತ್ತದೆ. ಮತಾಂತರದ ಸುಳ್ಳು ಆರೋಪದಿಂದ ಸರೋಜ್‌ ಅವರನ್ನು ಖುಲಾಸೆಗೊಳಿಸಲಾಗಿದ್ದರೂ, ಈ ಪ್ರಕರಣದಲ್ಲಿ ನ್ಯಾಯ ದೊರೆಯುವ ಭರವಸೆಯನ್ನು ಅವರು ಹೊಂದಿಲ್ಲ.

ದಿ ವೈರ್ ತಿವಾರಿ ಅವರನ್ನು ಮಾತನಾಡಿಸಿತು. ಆತ ಸರೋಜ್‌ ಮೇಲೆ ದೂರು ದಾಖಲಿಸಿದ್ದು ತಾನಲ್ಲ, ಬದಲಿಗೆ ಸುರೇಶ್‌ ಸಿಂಗ್‌ ಎಂದು, ಇಷ್ಟೊಂದು ದಾಖಲೆಗಳು ಇರುವಾಗಲೇ, ಮತ್ತೊಂದು ಸುಳ್ಳಿನ ಕತೆಯನ್ನು ಹೇಳಿದ. ಅದರ ನಂತರ ಯಾವ ಪ್ರತಿಕ್ರಿಯೆಯನ್ನೂ ನೀಡಲು ತಯಾರಾಗಲಿಲ್ಲ. ಆತ ಸುರೇಶ್‌ ಸಿಂಗ್‌ ಅನ್ನು ಸಂಪರ್ಕಿಸಲು ತಿಳಿಸಿದ, ಆದರೆ ಆತ ಸಂಪರ್ಕಕ್ಕೆ ಸಿಗಲಿಲ್ಲ.

ಇದು ದಿ ವೈರ್‌ನಲ್ಲಿ ಪ್ರಕಟವಾಗಿರುವ ಒಮರ್‌ ರಾಶಿದ್‌ರವರ A Dalit Mechanic in UP Spent 15 Months Fighting a False ‘Conversion’ FIR – and Won ನ ಕನ್ನಡಾನುವಾದ

ಕನ್ನಡಾನುವಾದ:‌ ಸುನೈಫ್ ವಿಟ್ಲ

Related Articles

ಇತ್ತೀಚಿನ ಸುದ್ದಿಗಳು

You cannot copy content of this page