Monday, September 9, 2024

ಸತ್ಯ | ನ್ಯಾಯ |ಧರ್ಮ

ಬಿಹಾರದಲ್ಲಿ ಯೂಟ್ಯೂಬ್ ನೋಡಿಕೊಂಡು ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯ: ಬಾಲಕ ಸಾವು

ಸರನ್: ಯೂಟ್ಯೂಬ್ ವಿಡಿಯೊ ನೋಡಿಕೊಂಡು ಪಿತ್ತಕೋಶದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ನಕಲಿ ವೈದ್ಯನೊಬ್ಬ ನಡೆಸಿದ್ದು, ಬಾಲಕ ಮೃತಪಟ್ಟಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ದಾಖಲಾಗಿದೆ.

ಬಾಲಕನ ಪ್ರಾಣ ತೆಗೆದ ನಕಲಿ ವೈದ್ಯ ಅಜಿತ್ ಕುಮಾರ್ ಪುರಿಯನ್ನು ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಕುಮಾರ್ ಆಶಿಶ್ ತಿಳಿಸಿದ್ದಾರೆ.

ಮೃತ ಬಾಲಕನನ್ನು ಸರನ್ ಜಿಲ್ಲೆಯ ಬೌಲಾಪುರ ಗ್ರಾಮದ ಗೋಲು ಅಲಿಯಾಸ್ ಕೃಷ್ಣ ಕುಮಾರ್ ಎಂದು ಗುರುತಿಸಲಾಗಿದೆ.ಗೋಲು ಹೊಟ್ಟೆನೋವಿನಿಂದ ಬಳಲುತ್ತಿದ್ದರಿಂದ ಆತನ ಪೋಷಕರು ಧರ್ಮಬಾಗಿ ಬಜಾರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.

‘ಆಸ್ಪತ್ರೆಗೆ ದಾಖಲಾಗಿದ್ದ ಗೋಲುಗೆ ನಕಲಿ ವೈದ್ಯ ಯೂಟ್ಯೂಬ್ ನೋಡಿಕೊಂಡು ಪಿತ್ತಕೋಶದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ಶಸ್ತ್ರಚಿಕಿತ್ಸೆ ಬಳಿಕ ಗೋಲು ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಆತನನ್ನು ಆಸ್ಪತ್ರೆ ಸಿಬ್ಬಂದಿ ಪಟ್ಲಾಗೆ ಕಳುಹಿಸಿದ್ದು, ಅಲ್ಲಿ ಆತ ಸಾವಿಗೀಡಾಗಿದ್ದಾನೆ’ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಮೃತ ಬಾಲಕನ ತಾತ ಪ್ರಹ್ಲಾದ್ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,‘ನಕಲಿ ವೈದ್ಯ ಪುರಿ, ಡೀಸೆಲ್ ತರಲು ನನ್ನನ್ನು ಹೊರಗೆ ಕಳುಹಿಸಿದ. ನನ್ನ ಪತ್ನಿ ಅಲ್ಲಿಯೇ ಇದ್ದರು. ನಾನು ವಾಪಸ್ ಬಂದಾಗ ಪುರಿ ಯೂಟ್ಯೂಬ್ ವಿಡಿಯೊ ನೋಡಿಕೊಂಡು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಅವರು ನಮ್ಮ ಬಳಿ ಅನುಮತಿ ಪಡೆದಿರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ತೀವ್ರ ಅಸ್ವಸ್ಥನಾಗಿದ್ದ ಗೋಲುನನ್ನು ಪಟ್ನಾಗೆ ಕರೆದೊಯ್ದಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page