ಬೊಗಸೆಗೆ ದಕ್ಕಿದ್ದು-79 : ನಕಲಿ-ಮೋಸದ “ನ-ಮೋ” ಯೋಜನೆಗಳು!

“..ಮೋದಿ ಸರಕಾರದ ರಂಗುರಂಗಿನ ಬಹುತೇಕ ಯೋಜನೆಗಳಲ್ಲಿ ಹೆಚ್ಚಿನವು ಹಿಂದಿನ ಸರಕಾರದಿಂದ ಕದ್ದು, ತೆಳುಗೊಳಿಸಿ, ನೇಮ್ ಪ್ಲೇಟ್ ಬದಲಿಸಿದ ಯೋಜನೆಗಳಾಗಿವೆ. ಅವುಗಳಲ್ಲಿ ಹೆಚ್ಚಿನವು ಟೊಳ್ಳಾಗಿವೆ- ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು ಎಂಬ ಮಾತಿನಂತೆ!..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಕಳೆದ ದಶಕದಲ್ಲಿ ಬಿಜೆಪಿ ಸರಕಾರವು ಆಡಳಿತದಲ್ಲಿ ಪುನರ್ ನಾಮಕರಣ ಮತ್ತು ರಾಜಕೀಯ ಬ್ರ್ಯಾಂಡಿಂಗ್‌ನಲ್ಲಿ ವಿಶ್ವದಲ್ಲೇ ಕುಖ್ಯಾತಿಯನ್ನು ಗಳಿಸಿದೆ. ಹಿಂದಿನಿಂದಲೂ ನಡೆದು ಕೊಂಡುಬಂದಿರುವ ಕೇಂದ್ರ ಸರಕಾರಿ ಯೋಜನೆಗಳನ್ನು ಮಾತ್ರವಲ್ಲದೇ, ರಾಜ್ಯ ಸರಕಾರಗಳ ಯೋಜನೆಗಳನ್ನೂ ಕೇವಲ ಹೆಸರು ಬದಲಾವಣೆಯಿಂದ ಮತ್ತು ಆಡಳಿತಾತ್ಮಕ ವಿಧಾನಗಳಿಂದ ಮೋದಿ ಮತ್ತು ಬಿಜೆಪಿಯನ್ನು ಮತದಾರರಿಗೆ ಮಾರಾಟ ಮಾಡುವ ಹೈ-ಆಕ್ಟೇನ್ ಮಾರ್ಕೆಟಿಂಗ್ ಅಭಿಯಾನಗಳಾಗಿ ಮಾರ್ಪಡಿಸಲಾಗಿದೆ. ಇದು ಹಿಂದೂ ಪುರಾಣ, ಹಿಂದೂತ್ವ, ಸನಾತನ, ಬಿಜೆಪಿ, ದೇಶ ಮತ್ತು ಮೋದಿ ಎಂದರೆ ಒಂದೇ ಮೂಲದವು ಎಂದು ಪರೋಕ್ಷವಾಗಿ ಬಿಂಬಿಸುವ, ವಿವಿಧತೆಯನ್ನು ಕೊಲ್ಲುವ ಮತ್ತು ಅಧಿಕಾರದ ಕೇಂದ್ರೀಕರಣವನ್ನು ಪ್ರದಿಪಾದಿಸುವ ಆಕರ್ಷಕ ಹೆಸರುಗಳ, ಪದಗಳ ಆಟದ (word play), “ನಮೋ” ಬ್ರ್ಯಾಂಡಿಂಗ್ ಮತ್ತು ಕಣ್ಕಟ್ಟಿನ ಒಂದು ಸರಣಿ ಜನಮರುಳು ಸಂಚು. ಸರಕಾರಿ ಯೋಜನೆಗಳನ್ನು ಜನರ ಹಣದ ಬದಲಾಗಿ ಮೋದಿಯ, ಬಿಜೆಪಿಯ ಸ್ವಂತ ಪಿತ್ರಾರ್ಜಿತ ಆಸ್ತಿಯಿಂದ, ಅವರ ಕೃಪಾ ಕಟಾಕ್ಷ ಮತ್ತು ಔದಾರ್ಯದಿಂದ ನಡೆಸಲಾಗುತ್ತಿದೆಯೋ ಎಂಬಂತೆ, ಮೋದಿ ಒಬ್ಬ “ದಾನಶೂರ ಕರ್ಣ” ಮತ್ತು ಪ್ರಜೆಗಳು ಕೈಚಾಚುವ ಬಿಕನಾಸಿ ನಿರ್ಗತಿಕರೋ ಎಂಬಂತೆ ಬಿಂಬಿಸಲಾಗುತ್ತಿದೆ.

ವರ್ಡ್‌ಪ್ಲೇ ಸರ್ಕಸ್ ಮತ್ತು “ನಮೋ” ಬ್ರ್ಯಾಂಡ್
ಸರಕಾರದ ಕಾರ್ಯತಂತ್ರದ ಮುಖ್ಯಾಂಶ ಎಂದರೆ, “ಮಿಷನ್-ಮೋಡ್, ಮಿಷನ್ ಮೋದಿ” ಬ್ರ್ಯಾಂಡಿಂಗ್. ಅವುಗಳಿಗೆ ನಮೋ, ಭಾರತ್, ಇಂಡಿಯಾ ಮತ್ತು ಪುರಾಣದ ಹೆಸರುಗಳು, ಸಂಸ್ಕತದ ಪದಗಳು, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್-ಅಪ್ ಇಂಡಿಯಾದಂತಹ ಇಂಗ್ಲೀಷ್ ಪದಗಳನ್ನು ಬಳಸಿ ಒಟ್ಟಿನಲ್ಲಿ ಒಂದು ರೀತಿಯ ಸನಾತನ ಸಾಂಸ್ಕೃತಿಕ ಕಥಾನಕ ಮತ್ತು ಅಭಿವೃದ್ಧಿಯ ಭ್ರಮೆಯನ್ನು  ಹುಟ್ಟಿಸುವ ಮಾಯಾಜಾಲ ಬೀಸಲಾಗಿದೆ. ಈ “ವರ್ಡ್‌ಪ್ಲೇ ಸರ್ಕಸ್” ಎರಡು ಉದ್ದೇಶಗಳನ್ನು ಪೂರೈಸುತ್ತದೆ: ಇದು ಸಂಕೀರ್ಣ ನೀತಿ ಗುರಿಗಳನ್ನು ಮೋದಿ ಪ್ರಚಾರದ ಘೋಷಣೆಗಳಾಗಿ ಸರಳಗೊಳಿಸುತ್ತದೆ ಮತ್ತು ಎಲ್ಲಾ ರಾಜ್ಯ ಚಟುವಟಿಕೆಗಳನ್ನೂ ತನ್ನ ಲೆಕ್ಕಕ್ಕೆ ಸೇರಿಸಿಕೊಂಡು ಮೋದಿ ನೇತೃತ್ವದಲ್ಲಿ “ನವ ಭಾರತ”ದ ನಿರ್ಮಾಣದ ಭ್ರಮೆಯನ್ನು ಸೃಷ್ಟಿಸುತ್ತದೆ.

​ಈ ಕಾರ್ಯಕ್ರಮಗಳ ವ್ಯಕ್ತೀಕರಣವು ಮುಖ್ಯವಾಗಿ ಎದ್ದು ಕಾಣುವ ಪ್ರವೃತ್ತಿ. “ನಮೋ” ಸಂಕ್ಷಿಪ್ತ ರೂಪ ಮತ್ತು “ಪ್ರಧಾನ ಮಂತ್ರಿ”, “ನಮೋ ಭಾರತ್” ರೈಲುಗಳಿಂದ ಹಿಡಿದು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ (RTS) ಮರುಬ್ರಾಂಡಿಂಗ್‌ವರೆಗೆ- ಪ್ರಧಾನ ಮಂತ್ರಿಯ ಚಿತ್ರ ಮತ್ತು ಗುರುತು ಸರಕಾರಿ ಯೋಜನೆಗಳ ಅವಿಭಾಜ್ಯ ಅಂಗವಾಗಿದೆ. ಈ ವ್ಯಕ್ತಿ ಕೇಂದ್ರಿತ ಪ್ರಚಾರ ಪ್ರವೃತ್ತಿಯು ಪಿಎಂ-ಕಿಸಾನ್ ಮತ್ತು ಪಿಎಂ-ಆವಾಸ್‌ನಂತಹ ಯೋಜನೆಗಳಲ್ಲಿ ಹೆಚ್ಚು ಗೋಚರಿಸುತ್ತದೆ. ಇವುಗಳು ಹೆಚ್ಚಾಗಿ ಪ್ರಧಾನ ಮಂತ್ರಿಯ ಹೆಸರು ಮತ್ತು ಮುಖವನ್ನು ಹೊಂದಿರುತ್ತವೆ. ಎಲ್ಲಿ ನೋಡಿದರೂ ಒಂದು ಮುಸುಡು ಕಾಣಬೇಕು, ಅಷ್ಟೇ! ಅಲ್ಲಿ ಸ್ಥಳೀಯ (ರಾಜ್ಯ) ಸರಕಾರಗಳು 40 ಶೇಕಡಾ ವರೆಗೆ ಹಣವನ್ನು ಒದಗಿಸಿ ಮತ್ತು ಸಂಪೂರ್ಣ ಆಡಳಿತ ಯಂತ್ರವನ್ನು ಒದಗಿಸಿದರೂ, ಅದನ್ನು ಕೇಂದ್ರದ, ಪ್ರಧಾನಿಯ ವೈಯಕ್ತಿಕ ಯೋಜನೆ ಎಂಬಂತೆ ಬಿಂಬಿಸಿ, ಆತನ ಮುಖವನ್ನು ಪ್ರದರ್ಶಿಸಿ ಪುಕ್ಕಟೆ ಪ್ರಚಾರ ಪಡೆಯಲಾಗುತ್ತದೆ. “ನೀನು ಕೊಡುವ ಜುಜುಬಿ ಹಣಕ್ಕಾಗಿ ನಮ್ಮ ಯೋಜನೆಗಳಿಗೆ ನಿನ್ನ ಹೆಸರು, ಚಿತ್ರ ನಾವ್ಯಾಕೆ ಹಾಕಬೇಕು?” ಎಂದು ಸಡ್ಡು ಹೊಡೆದಿರುವ ಕೇರಳ ಮತ್ತು ತಮಿಳುನಾಡಿನಂತ ರಾಜ್ಯ ಸರಕಾರಗಳು ತಮ್ಮದೇ ಹೆಸರಿನಲ್ಲಿ ಉತ್ತಮವಾದ ವಸತಿ ಮತ್ತು ಆರೋಗ್ಯ ಯೋಜನೆಗಳನ್ನು ರೂಪಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಾರ್ವಜನಿಕವಾಗಿಯೇ ಇಂತಾ ಹೇಳಿಕೆ ನೀಡಿದ್ದಾರೆ.

ಹಳೆಯ ವೈನ್, ಹೊಸ ಬಾಟಲಿಗಳು
​ಪ್ರಸ್ತುತ ಸರಕಾರದ “ಪ್ರಮುಖ” ಕಾರ್ಯಕ್ರಮಗಳ ಗಮನಾರ್ಹ ಭಾಗವು ವಾಸ್ತವವಾಗಿ ಹಿಂದಿನ ಆಡಳಿತಗಳು ಪ್ರಾರಂಭಿಸಿದ ಉಪಕ್ರಮಗಳ ಪರಿಷ್ಕೃತ ಆವೃತ್ತಿಗಳಾಗಿವೆ. “ಆಲಂಕಾರಿಕ” ಹೆಸರುಗಳನ್ನು ಇಡುವ ಮೂಲಕ, ಪ್ರಸ್ತುತ ಆಡಳಿತವು ಹಿಂದಿನ ಸರಕಾರಗಳು ಸಾಧಿಸಿದ ಪ್ರಗತಿಯನ್ನು ತನ್ನದೆಂದು ಹೇಳುವ ನಾಚಿಕೆಗೇಡಿನ ಕೆಲಸದಲ್ಲಿ ತೊಡಗಿದೆ. ​ಉದಾಹರಣೆಗೆ, “ಸ್ವಚ್ಛ ಭಾರತ ಮಿಷನ್” ಎಂಬ ಭಾರೀ ಪ್ರಚಾರದ ಯೋಜನೆ 2012ರ “ನಿರ್ಮಲ್ ಭಾರತ್” ಅಭಿಯಾನದ ಪುನರಾರಂಭ. ಇದರ ಯಶಸ್ಸು ಮೋದಿಯ ನಕಲಿ ಫೊಟೋ ಶೂಟ್ ಪ್ರಚಾರಕ್ಕೆ ಸೀಮಿತವಾಗಿದ್ದು, ಹಣ ಹೊಡೆಯುವ ಯೋಜನೆಗಳಲ್ಲಿ ಒಂದಾಗಿದೆ. ಆದರೆ, ದೇಶಕ್ಕೆ ಎಲ್ಲೆಡೆ ಕಾಣುವ ಕಸದ ಗುಪ್ಪೆಗಳು, ಮುಚ್ಚಿಹೋಗಿ ನಾರುವ ಚರಂಡಿಗಳಿಂದ ಮುಕ್ತಿ ಸಿಕ್ಕಿಲ್ಲ “ನಮಾಮಿ ಗಂಗಾ” ಯೋಜನೆಯಿಂದ ಗಂಗಾನದಿ ಎಷ್ಟು ಶುದ್ಧವಾಯಿತೆಂದರೆ, ಮೋದಿಯ ಸ್ನಾನದ ಶೂಟಿಂಗಿಗೆಂದೇ ನದಿಯೊಳಗೆ ಕೃತಕ ಈಜುಕೊಳ ನಿರ್ಮಿಸಬೇಕಾಯಿತು. ಅದೇ ರೀತಿ, 2016ರಲ್ಲಿ ಪ್ರಾರಂಭಿಸಲಾದ “ಪಿಎಂ ಆವಾಸ್” ಯೋಜನೆ (ಗ್ರಾಮೀಣ) ದೀರ್ಘಕಾಲದಿಂದ ಇದ್ದ “ಇಂದಿರಾ ಆವಾಸ್” ಯೋಜನೆಯ ಹೊಸರೂಪ. “ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ”ಯನ್ನು 2015ರಲ್ಲಿ “ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ” ಎಂದು ಮರುನಾಮಕರಣ ಮಾಡಲಾಯಿತು. ಇದು ಒಂದು ದಶಕಕ್ಕೂ ಹೆಚ್ಚು ಕಾಲ ಚಾಲನೆಯಲ್ಲಿದ್ದ ಗ್ರಾಮೀಣ ವಿದ್ಯುದೀಕರಣ ಗುರಿಗಳ ಹಿಂದಿನ ಸರಕಾರಗಳ ಸಾಧನೆಯನ್ನು ತನ್ನದೆಂದು ತೋರಿಸಿಕೊಂಡಿತು. “ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನ್ಯೂವಲ್ ಮಿಷನ್” (JNNURM) ಎಂಬ ಹೆಸರನ್ನು “ಅಟಲ್ ಮಿಷನ್ ಫಾರ್ ರಿಜ್ಯುವಿನೇಷನ್ ಎಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್” (AMRUT) ಎಂದು ಬದಲಾಯಿಸಲಾಯಿತು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರು ಕಿತ್ತು RAM-G ಪದವನ್ನು ತರಲು ಆಜೀವಿಕಾ (?) ಮತ್ತು ಸಂಸ್ಕೃತ, ಇಂಗ್ಲೀಷ್ ಪದಗಳ ಕಲಸುಮೇಲೋಗರ ಹೆಸರನ್ನು ಕೃತಕವಾಗಿ ಉತ್ಪಾದಿಸಲಾದುದು ಎಲ್ಲರಿಗೂ ಗೊತ್ತಿದೆ.

ಬಹಳ ಪ್ರಸಿದ್ಧವಾದ “ಮೇಕ್ ಇನ್ ಇಂಡಿಯಾ” ಅಭಿಯಾನವು 2011ರ ರಾಷ್ಟ್ರೀಯ ಉತ್ಪಾದನಾ ನೀತಿಯ ಕದ್ದ ಆವೃತ್ತಿ. “ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ”ವನ್ನು 2015ರಲ್ಲಿ “ಸ್ಕಿಲ್ ಇಂಡಿಯಾ” ಎಂದು ಮರುನಾಮಕರಣ ಮಾಡಲಾಯಿತು. ಇತ್ತೀಚೆಗೆ, 2021ರಲ್ಲಿ, ದಶಕಗಳಿಂದ ಇದ್ದ ಮಧ್ಯಾಹ್ನದ ಊಟದ ಯೋಜನೆಯನ್ನು “ಪಿಎಂ ಪೋಷಣ್” ಎಂಬ ಹೊಸ ಬ್ರ್ಯಾಂಡಿಂಗ್ ಅಡಿಯಲ್ಲಿ ತರಲಾಯಿತು. ಅಗತ್ಯ ಆರೋಗ್ಯ ಸೇವೆ ಕೂಡ ಇಂತಾ ಬದಲಾವಣೆಯನ್ನು ಕಂಡಿತು. 2008ರ “ಜನೌಷಧಿ” ಯೋಜನೆಯನ್ನು 2015ರಲ್ಲಿ “ಪಿಎಂ ಜನೌಷಧಿ” ಯೋಜನೆ ಎಂದು ಮರುನಾಮಕರಣ ಮಾಡಲಾಯಿತು. ಪಿಂಎಂ ಹೆಸರು ತುರುಕಿದ್ದಷ್ಟೇ ಹೊಸತು. ಹೀಗೆ ಯಾರ್ಯಾರದೋ ಮಕ್ಕಳಿಗೆ ತಮ್ಮ ಹೆಸರಿಟ್ಟು ಮೆರೆಯುವ ವಂಚಕತನವನ್ನು ನೀವು ಸಾಕಷ್ಟು ಕಾಣಬಹುದು.

ದತ್ತಾಂಶ ತಿರುಚುವಿಕೆ ಮತ್ತು ಕಣ್ಕಟ್ಟು
ಸರಕಾರದ ಯಶಸ್ಸಿನ ಕತೆಗಳು ಕೇವಲ ದತ್ತಾಂಶ ತಿರುಚುವಿಕೆ ಮತ್ತು ಕಣ್ಕಟ್ಟು ಎಂದು ಸ್ವತಂತ್ರ ಸಂಶೋಧಕರು ಆಗಾಗ ತೋರಿಸಿಕೊಡುತ್ತಿದ್ದಾರೆ. ಬಹು ಆಯಾಮದ ಬಡತನ ಸೂಚ್ಯಂಕ (Multidimensional Poverty Index)ದ ವಂಚನೆಯು ಇವುಗಳಲ್ಲಿ ಹೆಚ್ಚು ಆತಂಕಕಾರಿಯಾಗಿದೆ. ಸರಕಾರವು 25 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದಾಗಿ ಹೇಳಿಕೊಂಡಿರುವುದು ಒಂದು ದೊಡ್ದ ಸುಳ್ಳು. ಕೇವಲ “ಜನ ಧನ್” ಬ್ಯಾಂಕ್ ಖಾತೆಗಳನ್ನು ತೆರೆಯುವುದರ ಮೂಲಕ ಮಾತ್ರವೇ ಜನರನ್ನು ಆರ್ಥಿಕವಾಗಿ ಶಕ್ತರು ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಲಕ್ಷಾಂತರ ಖಾತೆಗಳು ಇಂದೂ ನಿಜಕ್ಕೂ ಝೀರೋ ಬ್ಯಾಲೆನ್ಸ್ ಹೊಂದಿದ್ದು, ನಿಷ್ಕ್ರಿಯವಾಗಿವೆ. ಅಂದರೆ, ಬಡವರನ್ನು ಬಡವರಾಗಿಯೇ ಉಳಿಸಿ, ಅನುಕೂಲವಂತರೆಂದು ಮರುನಾಮಕರಣ ಮಾಡುವ ಕಣ್ಣಟ್ಟು.

​ಅದೇ ರೀತಿ, “ಮೇಕ್ ಇನ್ ಇಂಡಿಯಾ” ಉಪಕ್ರಮವು 2025ರ ವೇಳೆಗೆ ಉತ್ಪಾದನಾ ವಲಯದ ಜಿಡಿಪಿಯನ್ನು 25 ಶೇಕಡಾ ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಹಾಗಿದ್ದರೂ, ಪ್ರಸ್ತುತ ದತ್ತಾಂಶವು ಅದು ಸ್ಥಗಿತಗೊಂಡಿದೆ ಅಥವಾ ಸರಿಸುಮಾರು 14 ಶೇಕಡಾಕ್ಕೆ ಇಳಿದಿದೆ ಎಂದು ತೋರಿಸುತ್ತದೆ. ಉದ್ಯೋಗ ವಲಯದಲ್ಲಿ, ಸರಕಾರವು “ಮುದ್ರಾ” ಯೋಜನೆಯ ಮೂಲಕ ಭಾರೀ ಉದ್ಯೋಗ ನೀಡಿಕೆ ಸಂಖ್ಯೆಗಳನ್ನು ಹೇಳಿಕೊಂಡರೂ, ಸ್ವತಂತ್ರ ಸಮೀಕ್ಷೆಗಳು ಹೆಚ್ಚಿನ ಸಾಲಗಳು “ಶಿಶು” (Infant) ವರ್ಗದ ಅಡಿಯಲ್ಲಿ ಬರುತ್ತವೆ ಎಂದು ತೋರಿಸುತ್ತವೆ. ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಲು ಅವು  ತುಂಬಾ ಚಿಕ್ಕದಾಗಿದೆ ಮತ್ತು ವ್ಯವಹಾರ ವಿಸ್ತರಣಾ ನಿಧಿಗಳಾಗಿ ಕೆಲಸ ಮಾಡಲು ಸಾಲ ನೀಡುವ ಬದಲು, ಕೇವಲ ಬದುಕುಳಿಯಲು ನೀಡುವ ಸಾಲವಾಗಿಬಿಟ್ಟಿದೆ.

ಭ್ರಷ್ಟಾಚಾರ ಮತ್ತು ಪಾರದರ್ಶಕತೆ ಅಂತರ
ಸರಕಾರವು “ಸ್ವಚ್ಛ” ವ್ಯವಹಾರದ ಪೋಸು ನೀಡುತ್ತಿದ್ದರೂ, ಪಾರದರ್ಶಕತೆ ಮಾತ್ರ ಸೊನ್ನೆ. ಉದಾಹರಣೆಗೆ, ಪಿಎಂ ಕೇರ್ಸ್ (PM-CARES) ನಿಧಿಯನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಲೆಕ್ಕಪರಿಶೋಧನೆ ಮಾಡುವುದಿಲು ಮತ್ತು ಮಾಹಿತಿ ಹಕ್ಕು (RTI) ಪ್ರಶ್ನೆಗಳಿಂದ ಅದನ್ನು ರಕ್ಷಿಸಲಾಗಿದೆ. ಟೀಕಾಕಾರರು ಇದನ್ನು- ಪ್ರಧಾನ ಮಂತ್ರಿ ಕಚೇರಿಯನ್ನು ಬಳಸಿಕೊಂಡು ಸಾರ್ವಜನಿಕ ಹೊಣೆಗಾರಿಕೆಯಿಲ್ಲದೆ ಶತಕೋಟಿ ಹಣವನ್ನು ಸಂಗ್ರಹಿಸುವ ಅಪಾರದರ್ಶಕ ಟ್ರಸ್ಟ್ ಎಂದು ವಿವರಿಸಿದ್ದಾರೆ ಮತ್ತು ಅದರ ಮತ್ತು ಚುನಾವಣಾ ಬಾಂಡ್ ಮಾಫಿಯಾ ವಸೂಲಿ ಬಗ್ಗೆ ಈಗಾಗಲೇ, ಇಲ್ಲಿಯೇ ಸಾಕಷ್ಟು ಓದಿದ್ದೇವೆ.

​ಇದಲ್ಲದೆ, “ಆಯುಷ್ಮಾನ್ ಭಾರತ್” (PM-JAY)ನ 2023ರ CAG ಲೆಕ್ಕಪರಿಶೋಧನೆಯು ಬೃಹತ್ ಅಕ್ರಮಗಳನ್ನು ಬಹಿರಂಗಪಡಿಸಿತು. 7.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಒಂದೇ ಮೊಬೈಲ್ ಸಂಖ್ಯೆಗೆ (9999999999) ಜೋಡಿಸಿಲಾಗಿದೆ! ಮೋದಿ ಇದ್ದರೆ, ಎಲ್ಲವೂ ಸಾಧ್ಯ! ಆಸ್ಪತ್ರೆ ದಾಖಲೆಗಳಲ್ಲಿ ಅಧಿಕೃತವಾಗಿ ಸತ್ತಿದ್ದಾರೆ ಎಂದು ಘೋಷಿಸಲಾದ ರೋಗಿಗಳ ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದೂ ವರದಿ ಬಹಿರಂಗಪಡಿಸಿದೆ. ಸತ್ತವರಿಗೆ ಚಿಕಿತ್ಸೆ ನೀಡಿ ಹಣ ದೋಚುವ ಕಲೆಯೂ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಸಿದ್ಧಿಸಿದೆ.

ಯಶಸ್ಸು vs. ವೈಫಲ್ಯಗಳು: ಒಂದು ವಾಸ್ತವ ಪರಿಶೀಲನೆ
ಸರಕಾರದ ಕೆಲವು ಯೋಜನೆಗಳು ಯಶಸ್ವಿಯಾಗಿವೆ ಎಂಬುದು ನಿಜ. ಏಕೀಕೃತ ಪಾವತಿ ಇಂಟರ್ಫೇಸ್ (UPI) ವಿಸ್ತರಣೆಯು ಡಿಜಿಟಲ್ ಸಾರ್ವಜನಿಕ ಸರಕುಗಳ ವ್ಯವಹಾರದಲ್ಲಿ ನಿಜವಾದ ಬದಲಾವಣೆಯನ್ನು ತಂದಿದೆ. ಆದರೆ, ಇದು ಜನ ಸಾಮಾನ್ಯರ ಜೀವನದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ನಗದು ರಹಿತ- cashless ವ್ಯವಹಾರ ಇಂದೂ ದೂರದ ಮರೀಚಿಕೆ. ಇತ್ತೀಚಿನ ಮೋದಿಯ ಚುರುಮುರಿ ಫೊಟೋ ಶೂಟ್ ಪ್ರಹಸನದಲ್ಲಿ ಮೋದಿ “ಹತ್ತು ರೂಪಾಯಿ” ನಗದು ನೀಡಿದ್ದು ಇದಕ್ಕೆ ಒಂದು ಪರಿಣಾಮಕಾರಿ ರೂಪಕ. ವಿದ್ಯಾವಂತರೂ ಸೇರಿದಂತೆ ಬಹುತೇಕ ಜನರು ಡಿಜಿಟಲ್ ವಿಷಯಗಳಲ್ಲಿ ಅಶಿಕ್ಷಿತರಾಗಿರುವುದರಿಂದ ಕೋಟ್ಯಂತರ ರೂ.ಗಳ ಡಿಜಿಟಲ್ ವಂಚನೆ ನಿತ್ಯವೂ ಅನಿಯಂತ್ರಿತವಾಗಿ ನಡೆಯುತ್ತಿದೆ. ಇದರ ಹಲವಾರು ಮಾಫಿಯಾ ತಂಡಗಳೇ ರಾಜಕೀಯ ಕೃಪಾಕಟಾಕ್ಷದಲ್ಲಿ ಕಾರ್ಯಾಚರಿಸುತ್ತಿವೆ. ಮಧ್ಯರಾತ್ರಿಯ ನೋಟು ರದ್ದತಿಯ ಮರುದಿನದ ಪತ್ರಿಕೆಗಳಲ್ಲಿ- ಸಂಶಯವೇ ಇಲ್ಲದಂತೆ ನಡೆದ ವಂಚನೆಯ ಪ್ರತೀಕವಾಗಿ- ಪ್ರಧಾನಿ ಮೋದಿಯೇ ರೂಪದರ್ಶಿಯಾಗಿದ್ದ “ಪೇಟಿಎಂ” ಜಾಹೀರಾತು ಪ್ರಕಟವಾಯಿತು. ಅದೇ ಪೇಟಿಎಂ ಈಗ ಹಲವು ಅವ್ಯವಹಾರಗಳಿಗಾಗಿ ಕೆಲವು ವ್ಯವಹಾರಗಳ ನಿಷೇಧಕ್ಕೆ ಗುರಿಯಾಗಿದೆ.

“ಉಜ್ವಲ” ಯೋಜನೆಯು ಎಂಟು ಕೋಟಿ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು ಯಶಸ್ವಿಯಾಗಿ ಒದಗಿಸಿದ್ದರೂ, ಉತ್ತರದ ಹೆಚ್ಚಿನ ಗ್ರಾಮೀಣ ಕುಟುಂಬಗಳು ಮತ್ತೆ ಅನಿಲ ಮರು ಪೂರೈಕೆ ಮಾಡಿಕೊಳ್ಳದೇ ಸಾಂಪ್ರದಾಯಿಕ ಉರುವಲು ಬಳಸುತ್ತಿರುವ ವರದಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆ.

​”ಸ್ಕಿಲ್ ಇಂಡಿಯಾ” ಆಲಂಕಾರಿಕ ಹೆಸರಿನ ಹೊರತಾಗಿಯೂ ಇದು ಹಲವಾರು ಹಗರಣಗಳ ವೇದಿಕೆಯಾಗಿದೆ. ತರಬೇತಿ ನೀಡುವವರ ಮತ್ತು ಪಡೆದವರ ಸರಿಯಾದ ಲೆಕ್ಕವೇ ಇಲ್ಲ! ತರಬೇತಿ ಪಡೆದ ಅಭ್ಯರ್ಥಿಗಳ ಉದ್ಯೋಗ ನೇಮಕಾತಿ ದರಗಳು ತೀರಾ ಕಡಿಮೆ. ಅನೇಕ ವಲಯಗಳಲ್ಲಿ ಇದು 20 ಶೇಕಡಾಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ. ಸರಿಯಾದ ಕೌಶಲ ನೀಡದೇ ಹಣ ಗುಳುಂ ಮಾಡಲಾಗುತ್ತಿದೆ ಅಥವಾ ಒದಗಿಸಲಾಗುತ್ತಿರುವ “ಕೌಶಲ”ವು ಮಾರುಕಟ್ಟೆ ಬೇಡಿಕೆಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಒಟ್ಟಿನಲ್ಲಿ ಮೋದಿ ಸರಕಾರದ ರಂಗುರಂಗಿನ ಬಹುತೇಕ ಯೋಜನೆಗಳಲ್ಲಿ ಹೆಚ್ಚಿನವು ಹಿಂದಿನ ಸರಕಾರದಿಂದ ಕದ್ದು, ತೆಳುಗೊಳಿಸಿ, ನೇಮ್ ಪ್ಲೇಟ್ ಬದಲಿಸಿದ ಯೋಜನೆಗಳಾಗಿವೆ. ಅವುಗಳಲ್ಲಿ ಹೆಚ್ಚಿನವು ಟೊಳ್ಳಾಗಿವೆ- ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು ಎಂಬ ಮಾತಿನಂತೆ! ಜೊತೆಗೆ ಅವು ಪಾರದರ್ಶಕತೆ ಇಲ್ಲದ ಭ್ರಷ್ಟಾಚಾರದ ಕೂಪಗಳಾಗಿವೆ. ಯಾರಿಗಾದರೂ ಸಂಶಯವಿದ್ದರೆ, ಮುಂದೆ ಲೆಕ್ಕಪರಿಶೋಧನಾ ವರದಿಗಳನ್ನು ಆಧರಿಸಿ ಕೆಲವೊಂದು ಯೋಜನೆಗಳ ಜಾತಕವನ್ನು ಒಂದೊಂದಾಗಿ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು