ಬೆಂಗಳೂರು: ನಗರದಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧಿ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಓಂಕಾರೇಶ್ವರ್ ಅವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಕಲಿ ಔಷಧಿ ಜಾಲಕ್ಕೆ ಸಂಬಂಧಿಸಿದ ಕೃಪಾ ಹೆಲ್ತ್ ಕೇರ್ ಏಜೆನ್ಸಿಯ ಪರವಾನಗಿಯನ್ನು ಅಮಾನತು ಮಾಡದಿರುವುದು ಅಧಿಕಾರಿಯ ವಿರುದ್ಧದ ಕ್ರಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ವೀರೇಶ್ ಜೈನ್ಗೆ ಕೃಪಾ ಹೆಲ್ತ್ ಕೇರ್ ಏಜೆನ್ಸಿ ಸಂಬಂಧ ಹೊಂದಿದೆ ಎನ್ನಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ನಕಲಿ ಔಷಧಿಗಳ ಜಾಲದ ಹಿಂದೆ ಇನ್ನಷ್ಟು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
