ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ACB) ನಕಲಿ ಫಾರ್ಮಸಿ ನೋಂದಣಿ ಜಾಲವನ್ನು ಭೇದಿಸಿದ್ದು, ದೆಹಲಿ ಔಷಧ ಮಂಡಳಿಯ (DPC) ಮಾಜಿ ಉದ್ಯೋಗಿ ಸೇರಿದಂತೆ 47 ಜನರನ್ನು ಬಂಧಿಸಿದೆ.
ಅಧಿಕಾರಿಯೊಬ್ಬರು ಬುಧವಾರ ಈ ಮಾಹಿತಿಯನ್ನು ನೀಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ (ACB) ಮಧುರ್ ವರ್ಮಾ ಅವರ ಪ್ರಕಾರ, ಮಾಜಿ ರಿಜಿಸ್ಟ್ರಾರ್ ಕುಲದೀಪ್ ಸಿಂಗ್ ಖಾಸಗಿ ಕಂಪನಿಯೊಂದರ ಜೊತೆಗೂಡಿ ಈ ಹಗರಣ ನಡೆಸಿದ್ದಾರೆ. ಈ ಕಂಪನಿಯನ್ನು ‘ಫಾರ್ಮಸಿಸ್ಟ್‌ಗಳ’ ಆನ್‌ಲೈನ್ ನೋಂದಣಿಗಾಗಿ ನೇಮಿಸಲಾಗಿತ್ತು ಆದರೆ ಇದನ್ನು ಮಾಡುವ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಮತ್ತು ನಿಗದಿತ ಪ್ರಕ್ರಿಯೆಯನ್ನು ಸಹ ಉಲ್ಲಂಘಿಸಲಾಗಿದೆ.
ಒಟ್ಟು 4,928 ಫಾರ್ಮಸಿಸ್ಟ್‌ಗಳ ನೋಂದಣಿಯ ತನಿಖೆ ಮುಂದುವರೆದಿದ್ದು, ಇದುವರೆಗೆ 35 ನಕಲಿ ಫಾರ್ಮಸಿಸ್ಟ್‌ಗಳನ್ನು ಬಂಧಿಸಲಾಗಿದೆ. ಯಾವುದೇ ಟೆಂಡರ್ ಇಲ್ಲದೆ ಖಾಸಗಿ ಕಂಪನಿ ವಿಎಂಸಿ ಮೂಲಕ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಕಲಿ ಡಿಪ್ಲೊಮಾಗಳು ಮತ್ತು ತರಬೇತಿ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡುವ ಮೂಲಕ ನಕಲಿ ನೋಂದಣಿಗಳನ್ನು ಮಾಡಲಾಗಿತ್ತು.
ಡಿಪಿಸಿ ಅಧಿಕಾರಿಗಳು ಮತ್ತು ಡಿಪ್ಲೊಮಾ ಕಾಲೇಜುಗಳ ನಡುವೆ ಸಮನ್ವಯ ಸಾಧಿಸುತ್ತಿದ್ದ ಮಧ್ಯವರ್ತಿ ಸಂಜಯ್ ಮೂಲಕ ಲಂಚವನ್ನು ಪಡೆಯಲಾತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಮಾಜಿ ರಿಜಿಸ್ಟ್ರಾರ್ ಕುಲದೀಪ್ ಸಿಂಗ್ ಹುದ್ದೆಯನ್ನು ತೊರೆದ ನಂತರವೂ 232 ನೋಂದಣಿಗಳನ್ನು ಅನುಮೋದಿಸಿದ್ದಾರೆ. ನಕಲಿ ಪ್ರಮಾಣಪತ್ರಗಳನ್ನು ಮುದ್ರಿಸಿದ ಮುದ್ರಣ ಅಂಗಡಿ ಮಾಲೀಕರು ಮತ್ತು ಇತರ ಆರೋಪಿಗಳ ಶಾಮೀಲು ಬಹಿರಂಗವಾಗಿದೆ. ಎಸಿಬಿ ತನಿಖೆ ಮುಂದುವರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ