Tuesday, March 25, 2025

ಸತ್ಯ | ನ್ಯಾಯ |ಧರ್ಮ

ಬಿದ್ದು ಹೋದ ದಲಿತ ಕಾರ್ಮಿಕನ ವಿರುದ್ಧದ ಸುಳ್ಳು ಮತಾಂತರ ಪ್ರಕರಣ


ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು ಕಾನೂನು ಹೋರಾಟಗಳಲ್ಲಿ ಗೆದ್ದ ಜನರ ಕುರಿತಾದ ಸರಣಿ ವರದಿಗಳಲ್ಲಿ ಇದು ಎರಡನೆಯ ಲೇಖನ. ಒಮರ್ ರಾಶಿದ್ ಅವರ ಬರಹದ ಅನುವಾದ

ಮೊದಲ ಲೇಖನವನ್ನು ಇಲ್ಲಿ ಓದಿ.

ನವದೆಹಲಿ: ತನ್ನ ಬದುಕಿನ ಬಂಡಿಯನ್ನೇ ಮುಂದಕ್ಕೆಳೆಯಲು ಹೆಣಗಾಡುತ್ತಿರುವ ಒಬ್ಬ ನಿವೃತ್ತ ದಲಿತ ಕಟ್ಟಡ ನಿರ್ಮಾಣ ಕಾರ್ಮಿಕ. ಆತ ಬಡ ಹಿಂದೂಗಳಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದ. ಇದು ಹರಿ ಶಂಕರ್‌ ಮೇಲಿರುವ ಆರೋಪ. ಈ ಅಸಂಬದ್ದತೆಯನ್ನು ಅರಗಿಸಿಕೊಳ್ಳಲು ಈಗಲೂ ಆತನಿಂದ ಸಾಧ್ಯವಾಗಿಲ್ಲ.

“ನಾನು ವಾಸವಿರುವುದು ಒಂದು ಹರಕಲು ಗುಡಿಸಲಿನಲ್ಲಿ. ಅಂತಹಾ ನಾನು ಅದು ಹೇಗೆ ಜನರಿಗೆ ದುಡ್ಡು ಹಂಚಿ ಅವರನ್ನು ಪ್ರಲೋಭಿಸುವುದು? ನನ್ನ ಬಳಿ 30,000 ರೂಪಾಯಿ ಹಣ ಇರುತ್ತಿದ್ದರೆ, ಅದನ್ನು ಬೇರೆ ಯಾರಿಗೋ ಕೊಡುವ ಮೊದಲು ನನ್ನ ಸ್ವಂತ ಬದುಕನ್ನು ಬದಲಾಯಿಸಲು ಆ ಹಣವನ್ನು ಬಳಸುವುದಿಲ್ಲವೇ?” ಎಂಬುದು ಶಂಕರ್‌ ಅವರ ಸರಳ ಪ್ರಶ್ನೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಣ್ಣದೊಂದು ಒಂಟಿ ಕೋಣೆಯ ಗುಡಿಸಲಿನಲ್ಲಿ ಶಂಕರ್ ಅವರ ವಾಸ. ಗುಡಿಸಲನ್ನೇ ಸ್ವಲ್ಪ ವಿಶಾಲಗೊಳಿಸಲೆಂದು ಗುಡಿಸಲಿಗೆ ಹೊಂದಿಕೊಂಡಂತೆ ಒಂದು ಶೆಡ್ ನಿರ್ಮಿಸಿದ್ದಾರೆ. ಆ ಶೆಡ್‌ಗೆ ಸರಿಯಾದ ಗೋಡೆಗಳೇ ಇಲ್ಲ. ಪ್ಲಾಸ್ಟಿಕ್ ಶೀಟ್‌ ಮತ್ತು ಹೊದಿಕೆಗಳನ್ನು ಬಳಸಿಕೊಂಡು ಅದಕ್ಕೊಂದು ತಾತ್ಕಾಲಿಕ ಗೋಡೆಯ ಹಾಗೆ ಮಾಡಿಕೊಂಡಿದ್ದಾರೆ. ಅದೇ ಶೆಡ್‌ನ ಒಂದು ಭಾಗದ ನೆಲದಲ್ಲಿ ಅಡುಗೆಯನ್ನೂ ಮಾಡಿಕೊಳ್ಳುತ್ತಾರೆ.

60 ವರ್ಷದ ಶಂಕರ್ ವಿರುದ್ಧ 2021ರಲ್ಲಿ ಉತ್ತರ ಪ್ರದೇಶದ ಅಕ್ರಮ ಮತಾಂತರ ನಿಷೇಧ ಕಾಯ್ದೆ 2021ರ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. “ಪ್ರೇತಬಾಧೆ” ತೊಲಗಿಸುವ ಭರವಸೆ ನೀಡುವ ಮೂಲಕ ಅಜಂಗಢದ ಒಂದು ಪ್ರದೇಶದಲ್ಲಿ ಬಡ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.

ಇದರ ಜೊತೆಗೆ, ಹಿಂದೂ ದೇವ–ದೇವತೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪವನ್ನು ಕೂಡ ಅವರ ವಿರುದ್ಧ ಹೊರಿಸಲಾಗಿತ್ತು. ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಬಲಪಂಥೀಯ ಕಾರ್ಯಕರ್ತನೊಬ್ಬನ ದೂರಿನ ಮೇರೆಗೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆದರೆ, ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಸೆಪ್ಟೆಂಬರ್ 2024ರಲ್ಲಿ ಅಜಮ್‌ಗಢದ ನ್ಯಾಯಾಲಯವು ಶಂಕರ್‌ ಅವರನ್ನು ಅಕ್ರಮ ಮತಾಂತರದ ಆರೋಪದಿಂದ ಖುಲಾಸೆಗೊಳಿಸುತ್ತದೆ. ಸದರಿ ಅಕ್ರಮ ಮತಾಂತರ ಆರೋಪವು ಸಂಶಯಾಸ್ಪದವಾಗಿದೆ ಎಂದು ನ್ಯಾಯಾಲಯವು ಕಂಡುಕೊಳ್ಳುತ್ತದೆ. ಜೊತೆಗೆ ಪೊಲೀಸರ ತನಿಖೆಯು ಸರಿಯಾದ ದಾರಿಯಲ್ಲಿಲ್ಲ ಮತ್ತು ಪೂರ್ತಿ ವಿರೋಧಾಭಾಸಗಳಿಂದ ತುಂಬಿದೆ ಎಂದು ನ್ಯಾಯಾಲಯವು ಬೊಟ್ಟು ಮಾಡುತ್ತದೆ.

ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಶಂಕರ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸುತ್ತದೆ. ನ್ಯಾಯಾಲಯವು 19 ಪುಟಗಳ ತೀರ್ಪು ಪ್ರಕಟಿಸುವಾಗ ಶಂಕರ್ ಆರು ತಿಂಗಳ ಜೈಲುವಾಸ ಕಳೆದು ಜಾಮೀನಿನ ಮೇಲೆ ಹೊರಬಂದಿದ್ದರು.

ಶಂಕರ್‌ ಅವರ ವಯಸ್ಸು ಮತ್ತು ಗ್ರಾಮೀಣ ಹಿನ್ನೆಲೆಯನ್ನು ಪರಿಗಣಿಸಿ, ನ್ಯಾಯಾಲಯವು ಅವರನ್ನು ಮತ್ತೆ ಜೈಲಿಗೆ ಕಳುಹಿಸದೆ, ಒಂದು ವರ್ಷದ ಕಾಲ ಜಾಮೀನನ್ನು ವಿಸ್ತರಿಸಲು ಆದೇಶಿಸುತ್ತದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರರುವುದು) ಮತ್ತು 504 (ಇತರರನ್ನು ಪ್ರಚೋದಿಸುವ ಮೂಲಕ ಸಾರ್ವಜನಿಕ ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿಯಲ್ಲಿ ಶಂಕರ್ ಅವರನ್ನು ಅಪರಾಧಿಯೆಂದು ಪರಿಗಣಿಸಲಾಗಿತ್ತು. ಇದು ಶಂಕರ್‌ ತನ್ನ ಬದುಕಿನ ಇಳಿವಯಸ್ಸಿನಲ್ಲಿ ವಿನಾಕಾರಣ ಕಳಂಕ ಹೊರುವಂತೆ ಮಾಡಿತ್ತು. ಆದರೆ ಪ್ರಮುಖ ಆರೋಪವಾಗಿದ್ದ ಅಕ್ರಮ ಮತಾಂತರ ಪ್ರಕರಣ ಸುಳ್ಳು ಎಂದು ಸಾಬೀತಾಗುವ ಮೂಲಕ ಅವರು ಮತ್ತೊಂದು ವಿಧದಲ್ಲಿ ಗೆದ್ದು ಬಂದರು.

“ಸತ್ಯ ಗೆದ್ದಿತು. ಯಾರ ಬಗ್ಗೆಯಾದರೂ (ಯೇಸು ಕ್ರಿಸ್ತನ) ಮಾತನಾಡಿದ ಮಾತ್ರಕ್ಕೆ ಅದು ಮತಾಂತರಕ್ಕೆ ಸಮನಾಗುವುದಿಲ್ಲ. ಹಿಂದೂ ದೇವತೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪವೂ ಆಧಾರರಹಿತ. ಎಲ್ಲವೂ ಸುಳ್ಳು.” ಎಂದು ಶಂಕರ್ ಹೇಳುತ್ತಾರೆ.

ಬದಲಾಗುತ್ತಲೇ ಹೋದ ಆರೋಪಗಳು
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರವು ಧಾರ್ಮಿಕ ಮತಾಂತರವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವ ಹೊಸ ಕಾನೂನನ್ನು ಜಾರಿಗೆ ತಂದಿತ್ತು. ಆ ಕಾನೂನಿನ ಪ್ರಕಾರ ಮದುವೆಯ ಉದ್ಧೇಶಕ್ಕೋಸ್ಕರ ಅಥವಾ ತಪ್ಪು ನಿರೂಪಣೆಯ ಮೂಲಕ, ಬಲವಂತವಾಗಿ, ಅನಗತ್ಯ ಪ್ರಭಾವ ಬಳಸಿಕೊಂಡು, ಬಲಾತ್ಕಾರವಾಗಿ, ಆಮಿಷ ಒಡ್ಡಿ ಅಥವಾ ಇತರ ವಂಚನೆಗಳ ಮೂಲಕ ಮತಾಂತರ ನಡೆಸಲಾಗಿದೆ ಎಂದು ಕಂಡುಬಂದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸ ಬಹುದಾಗಿತ್ತು. ಈ ಹೊಸ ಮತ್ತು ಕಠಿಣ ಕಾನೂನು ಜಾರಿಗೆ ಬಂದ ಒಂಬತ್ತು ತಿಂಗಳ ಬಳಿಕ, ಆಗಸ್ಟ್ 31, 2021ರಂದು ಶಂಕರ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು. ಈ ಕಾನೂನಿನಲ್ಲಿದ್ದ ಗೊಂದಲವು ಕಾನೂನುಬದ್ಧ ಮತ್ತು ಕಾನೂನುಬಾಹಿರ ಮತಾಂತರಗಳ ನಡುವಿನ ಗೆರೆಯನ್ನು ಅಳಿಸಿ ಹಾಕಿತ್ತು. ಅದನ್ನೇ ಬಳಸಿಕೊಂಡು ದುಷ್ಕರ್ಮಿಗಳಿಗೆ ಮತ್ತು ಪೊಲೀಸರಿಗೆ ಜನರ ಮೇಲೆ ಎಗ್ಗಿಲ್ಲದೆ ಕಿರುಕುಳ ನೀಡಲು ಪರವಾನಗಿ ನೀಡಿತ್ತು.

ಕಳೆದ ವರ್ಷ, ಸರಕಾರವು ಗರಿಷ್ಠ ಶಿಕ್ಷೆಯನ್ನು 10 ವರ್ಷದಿಂದ ಜೀವಾವಧಿ ಶಿಕ್ಷೆಗೆ ಹೆಚ್ಚಿಸಿ ಕಾನೂನಿಗೆ ತಿದ್ದುಪಡಿ ಮಾಡಿತ್ತು. ಜೊತೆಗೆ “ಯಾವುದೇ ವ್ಯಕ್ತಿ”ಗೆ ದೂರು ದಾಖಲಿಸಲು ಅವಕಾಶ ನೀಡುವ ಮೂಲಕ ಮತಾಂಧರ ಗುಂಪುಗಳಿಗೆ ಮತ್ತಷ್ಟು ಅಧಿಕಾರ ನೀಡಿತ್ತು. ಜಾಮೀನು ಪ್ರಕ್ರಿಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿತ್ತು.
2020ರ ಕೊನೆಯಲ್ಲಿ ಈ ಕಾನೂನು ಜಾರಿಗೆ ಬಂದಾಗಿನಿಂದ, ಆಡಳಿತಾರೂಢ ಕೇಸರಿ ಪಕ್ಷದ ಸಿದ್ಧಾಂತಕ್ಕೆ ಸಂಬಂಧಿಸಿದ ಬಲಪಂಥೀಯ ಕಾರ್ಯಕರ್ತರು ಮುಸ್ಲಿಮರ ಮೇಲೆ ಮತ್ತು ಕೆಳಜಾತಿಯ ಹಿಂದೂಗಳು ಕ್ರಿಶ್ಚಿಯನ್ ಆಚರಣೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಅಥವಾ ಸಾಂಪ್ರದಾಯಿಕ ಹಿಂದೂ ಧರ್ಮದಿಂದ ವಿಮುಖರಾಗಿದ್ದಾರೆಂದು ಅವರ ಮೇಲೆ ಎಫ್‌ಐಆರ್ ದಾಖಲಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಸುಳ್ಳು ಆರೋಪಗಳು ಮತ್ತು ದುರ್ಬಲ ಸಾಕ್ಷಿಗಳನ್ನು ಹೊಂದಿರುವಂತವು. ಇದು ಒಂದು ರೀತಿಯಲ್ಲಿ ಅಲ್ಪಸಂಖ್ಯಾತ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಕಿರುಕುಳ ನೀಡುವ ಸಂಘಟಿತ ತಂತ್ರದ ಭಾಗವೇ ಆಗಿದೆ.

ಶಂಕರ್ ಅವರದ್ದು ಒಂದು ವಿಶಿಷ್ಟ ಪ್ರಕರಣವಾಗಿತ್ತು.
ಸಂಘ ಪರಿವಾರದ ಹಲವು ಘಟಕಗಳೊಂದಿಗೆ ಸಂಬಂಧ ಹೊಂದಿರುವ ಹಣ್ಣಿನ ವ್ಯಾಪಾರಿ ಮತ್ತು ಅಜಮ್‌ಗಢದ ಬಲಪಂಥೀಯ ಕಾರ್ಯಕರ್ತ ಜಿಟ್ಟು ಸೋಂಕರ್ ಅವರ ದೂರಿನ ಮೇರೆಗೆ ಶಂಕರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಊರಾದ ಸರಾಯ್ ಮಂದ್ರಾಜ್‌ಗೆ ಮೂರು ತಿಂಗಳಿನಿಂದ ಭೇಟಿ ನೀಡುತ್ತಿದ್ದಾರೆ ಮತ್ತು ಆ ವ್ಯಕ್ತಿ ಜನರಿಗೆ “ದೆವ್ವ ಮತ್ತು ಪ್ರೇತಾತ್ಮಗಳನ್ನು ಬಿಡಿಸುವ” ಭರವಸೆ ನೀಡುತ್ತಿದ್ದಾರೆ ಎಂಬುದು ಶಂಕರ್ ಅವರಂತೆಯೇ ದಲಿತರಾಗಿರುವ ಸೋಂಕರ್ ಮಾಡಿದ್ದ ಆರೋಪ. ನಂತರ ಸೋಂಕರ್ ಆ ವ್ಯಕ್ತಿಯನ್ನು ಶಂಕರ್ ಎಂದು ಗುರುತಿಸುತ್ತಾರೆ. ಆ ವ್ಯಕ್ತಿ, ಪಕ್ಕದ ಪ್ರದೇಶವಾದ ಕರ್ತಾಲ್‌ಪುರದ ದಲಿತ ಕೇರಿಯಲ್ಲೂ ಸಕ್ರಿಯರಾಗಿದ್ದರು. ಅಲ್ಲಿ ಆ ವ್ಯಕ್ತಿಯು ತನ್ನ “ಭ್ರಮಾತ್ಮಕ ಸಂಗತಿಗಳು” ಮತ್ತು ಇತರ ಆಮಿಷಗಳ ಮೂಲಕ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ “ಮತಾಂತರಿಸುತ್ತಿದ್ದರು” ಎಂದು ದೂರಿನಲ್ಲಿ ಹೇಳಲಾಗಿದೆ.

ಆಗಸ್ಟ್ 31, 2021, ಮಂಗಳವಾರದಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಶಂಕರ್ ತನ್ನ ಪ್ರದೇಶದ ಜನರಿಗೆ ಬೈಬಲ್‌ ಮತ್ತು ಇತರ ಕ್ರಿಶ್ಚಿಯನ್ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿರುವುದನ್ನು ತಾನು ಕಂಡಿದ್ದೆ ಎಂದು ಸೋಂಕರ್ ಆರೋಪಿಸುತ್ತಾರೆ. ಹಿಂದೂ ದೇವ–ದೇವತೆಗಳನ್ನು ಅವಮಾನಿಸಲು ಶಂಕರ್ “ಅಶ್ಲೀಲ” ಭಾಷೆ ಬಳಸುತ್ತಿದ್ದರು ಎಂದೂ ಸೋಂಕರ್ ಆರೋಪಿಸುತ್ತಾರೆ. ಸ್ಥಳೀಯರು ಅವರ ಭಾಷೆಯ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಶಂಕರ್ ಅವರಿಗೆ ತಲಾ 500 ರೂಪಾಯಿಗಳ “ಆಮಿಷ” ಒಡ್ಡಿದರು. ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ, “ಪ್ರಭು ಈಶು” (ಯೇಸು) ಅವರ ಎಲ್ಲಾ “ಸಂಕಷ್ಟ ಮತ್ತು ದಾರಿದ್ರ್ಯ”ವನ್ನು ನಿವಾರಿಸುತ್ತಾನೆ ಎಂದು ಹೇಳುವ ಮೂಲಕ ಪ್ರಲೋಭಿಸಿದರು ಎಂದು ಸೋಂಕರ್‌ ಮುಂದುವರಿದು ತನ್ನ ಆರೋಪದಲ್ಲಿ ಉಲ್ಲೇಖಿಸುತ್ತಾರೆ.

ನಂತರ, ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಾಗ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ತನಗೆ 30,000 ರೂಪಾಯಿಗಳನ್ನು ನೀಡುವುದಾಗಿ ಶಂಕರ್ ಆಮಿಷವೊಡ್ಡಿದ್ದರು ಎಂಬ ಹೊಸ ಆರೋಪವನ್ನು ಸೋಂಕರ್‌ ಮುಂದಿಡುತ್ತಾರೆ. ಸ್ಥಳೀಯ ನಿವಾಸಿ ನಿರ್ಮಲಾ ದೇವಿ ಅವರ ಮನೆಯಲ್ಲಿ ಶಂಕರ್ ಜನರನ್ನು ಮತಾಂತರಿಸುತ್ತಿದ್ದರು. ಶಂಕರ್ ಮತ್ತು ನಿರ್ಮಲ್ ದೇವಿ ತನ್ನನ್ನು ದೆವ್ವ ಬಿಡಿಸುವ ಕಾರ್ಯಕ್ಕೆಂದು ಅವರ ಮನೆಗೆ ಕರೆಸಿಕೊಂಡರು. ಸೋಂಕರ್‌ ನಿರ್ಮಲಾ ದೇವಿಯ ಮನೆಗೆ ತಲುಪಿದಾಗ ಅವರಿಬ್ಬರು ಅದಾಗಲೇ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅದಾಗಲೇ ಅಲ್ಲಿ ಕೆಲವು ಮಹಿಳೆಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದರು ಎಂದು ಸೋಂಕರ್ ಸೇರಿಸುತ್ತಾರೆ. ಅವರು ಸೋಂಕರ್‌ಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲೆಂದು 30,000 ರೂಪಾಯಿಗಳನ್ನು ನೀಡುತ್ತಾರೆ. ಆದರೆ ಅದನ್ನು ವಿರೋಧಿಸಿ ಹಣವನ್ನು ತಿರಸ್ಕರಿಸಿದಾಗ, ಶಂಕರ್ ಸೋಂಕರ್‌ ಅವರ ಖಾತಿಕ್ ಹಿನ್ನೆಲೆಗೆ ಸಂಬಂಧಿಸಿದ ಜಾತಿ ನಿಂದನೆಗಳಿಂದ ಬೈಯುತ್ತಾರೆ ಎಂದು ದೂರುತ್ತಾರೆ. ಖಾತಿಕ್ ಎಂಬುದು ಉತ್ತರ ಪ್ರದೇಶದ ಒಂದು ದಲಿತ ಉಪಜಾತಿ.

ನಂಬಿಕೆಯ ಮೇಲೆ ನಿರ್ಮಿಸಲಾದ ಜೀವನ
ಆದರೆ ಶಂಕರ್‌ಗೆ ಆ ದಿನದ ನೆನಪು ಬೇರೆಯದೇ ರೀತಿಯಲ್ಲಿದೆ. ಇಲ್ಲಿ ಶಂಕರ್‌ ಮೇಲಿನ ಆರೋಪಗಳ ಹಿಂದಿನ ಸಂದರ್ಭಗಳನ್ನು ಸರಿಯಾಗಿ ಗ್ರಹಿಸಲು, ಅವರ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಶಂಕರ್ ಚಾಮರ್ ದಲಿತ ಸಮುದಾಯಕ್ಕೆ ಸೇರಿದವರು. ಔಪಚಾರಿಕವಾಗಿ ಮತಾಂತರಗೊಳ್ಳದಿದ್ದರೂ ಕಳೆದ ಎರಡು ದಶಕಗಳಲ್ಲಿ, ಅಂದರೆ ವಿಶೇಷವಾಗಿ ಅವರ ಮದುವೆಯ ನಂತರ, ತಮ್ಮನ್ನು ತಾವು ಯೇಸುಕ್ರಿಸ್ತನಿಗೆ ಅರ್ಪಿಸಿಕೊಳ್ಳಲು ಪ್ರಾರಂಭಿಸಿದ್ದರು. ಇಬ್ಬರು ಪಾದ್ರಿಗಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ಅವರು ಯೇಸುವಿನ ಮೇಲೆ ನಂಬಿಕೆ ಮತ್ತು ಯೇಸುವಿನ ಸಂದೇಶಕ್ಕೆ ತೆರೆದುಕೊಂಡಿದ್ದರು.

ಅವರು ತಮ್ಮ ಕಟ್ಟಡ ನಿರ್ಮಾಣ ಕೆಲಸದ ಬಿಡುವಿನ ವೇಳೆಗಳಲ್ಲಿ “ಸೇವೆ” (ನಂಬಿಕೆಯ ಕಾರಣಕ್ಕಾಗಿ ನಿಸ್ವಾರ್ಥ ಕೆಲಸಗಳು) ಮತ್ತು ಯೇಸುವಿನ ಪ್ರಾರ್ಥನಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದರು. ಮೂಢನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳುವುದು, ಕಾಯಿಲೆಗಳನ್ನು, ಸಂಕಷ್ಟಗಳನ್ನು ನಿವಾರಿಸಲು ಅವೈಜ್ಞಾನಿಕ ವಿಧಾನಗಳಲ್ಲಿ ವಿಶ್ವಾಸ ಇಡುವುದು ಇವೆಲ್ಲ ಈ ನಂಬಿಕೆ ಆಧಾರಿತ ಚಿಕಿತ್ಸಾ ವ್ಯವಸ್ಥೆಯ ಮೂಲ ಅಂಶಗಳು.
ಹಲವು ವಿಶ್ವಾಸಿಗಳು ಈ ಪ್ರದೇಶದಲ್ಲಿ ಯೇಸುವಿಗೆ ಪ್ರಾರ್ಥನೆ ಸಲ್ಲಿಸಲೆಂದು ತಮ್ಮದೇ ಆದ ಪ್ರಾರ್ಥನಾ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ. ಆದರೆ ಆರ್ಥಿಕ ಸಂಕಷ್ಟದ ಕಾರಣದಿಂದ ಶಂಕರ್‌ ತರಹದ ಕೆಲವರು ಮನೆ ಮನೆಗೆ ತೆರಳಿ ಸೇವೆಗಳನ್ನು ನೀಡುತ್ತಾರೆ. ಅಂತವರು ಸಣ್ಣ ಮಟ್ಟದ ಸೇವೆಗಳಲ್ಲಿ ನಿರತರಾಗುತ್ತಾರೆ. ಜನರು ಸಾಮಾನ್ಯವಾಗಿ, ತಮ್ಮ ಅನಾರೋಗ್ಯ, ಆರ್ಥಿಕ ಸಂಕಷ್ಟ ಅಥವಾ “ಪ್ರೇತ ಬಾಧೆ” ಮೊದಲಾದ ತೊಂದರೆಗಳಿಗೆ, ಶಂಕರ್ ಅವರನ್ನು ತಮ್ಮ ಮನೆಗಳಿಗೆ ಕರೆಸಿಕೊಂಡು ಪ್ರಾರ್ಥನೆಗಳು ಮತ್ತು ಚಿಕಿತ್ಸಕ ಸೇವೆಗಳನ್ನು ನಡೆಸುತ್ತಿದ್ದರು. ಅವರ ಕೆಲಸದ ಒಂದು ಭಾಗವೆಂದರೆ ವಾರಣಾಸಿಯಿಂದ ಆಜಂಘಢಕ್ಕೆ ಪ್ರಯಾಣ ಮಾಡುವುದು. ಅವರು ಮೋಟಾರ್‌ಸೈಕಲ್‌ನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಯಾಣ ಮಾಡಬೇಕಾಗಿ ಬರುತ್ತಿತ್ತು.

ಆಗಸ್ಟ್ 31, 2021ರಂದು, ಕಳೆದ ನಾಲ್ಕು ವರ್ಷಗಳಿಂದ “ಪ್ರೇತಬಾಧೆಯಿಂದ ತೊಂದರೆಗೊಳಗಾಗಿದ್ದ” 15 ವರ್ಷದ ಬಾಲಕಿಗಾಗಿ ಪ್ರಾರ್ಥನೆ ನಡೆಸಲು ಅಜಮ್‌ಗಢದಲ್ಲಿರುವ ನಿರ್ಮಲಾ ದೇವಿ ಅವರ ಮನೆಗೆ ತೆರಳಿದ್ದೆ ಎಂದು ಶಂಕರ್ ಹೇಳುತ್ತಾರೆ. ಶಂಕರ್ ಈ ಹಿಂದೆ “ಪ್ರೇತಬಾಧೆಯಿಂದ ಬಳಲುತ್ತಿದ್ದ” ಮಹಿಳೆಯನ್ನು “ಗುಣಪಡಿಸಿದ್ದ” ಕಥೆ ಆ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿತ್ತು. ಹಾಗಾಗಿ ನಿರ್ಮಲಾ ದೇವಿ ಪರಿಹಾರಕ್ಕಾಗಿ ಶಂಕರ್‌ ಅವರನ್ನು ಎದುರು ನೋಡುತ್ತಿದ್ದರು. ಅಂತಹ ಜನರು ತಮ್ಮ ಸಂಪರ್ಕಕ್ಕೆ ಬಂದ ನಂತರ ಹಿಂದೂ ಸ್ವಾಮೀಜಿಗಳ ಪೂಜಾ ಕಾರ್ಯಕ್ರಮ ಅಥವಾ ಸತ್ಸಂಗಗಳಿಗೆ ಹೋಗುವುದನ್ನು ನಿಲ್ಲಿಸಿ ಕಲೀಶಿಯಾಗಳು ಅಥವಾ ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರಗಳತ್ತ ಮುಖ ಮಾಡತೊಡಗಿದ್ದರು ಎಂದು ಶಂಕರ್ ಹೇಳುತ್ತಾರೆ. ಇದು ಈ ಪ್ರದೇಶದ ಹಿಂದುತ್ವ ಶಕ್ತಿಗಳನ್ನು ಕೆರಳಿಸಿತ್ತು. ಜನರ ಸಂಕಷ್ಟಗಳನ್ನು ತಾವು ಅದು ಹೇಗೆ ನಿವಾರಿಸುತ್ತೀರಿ ಎಂದು ಕೇಳಿದಾಗ, “ನಾವು ಅಲ್ಲಿ ಹೋಗಿ ಪ್ರಾರ್ಥನೆಯನ್ನಷ್ಟೇ ನೆರವೇರಿಸುತ್ತೇವೆ. ಉಳಿದದ್ದನ್ನು ಪರಮೇಶ್ವರ (ಭಗವಂತ) ನೋಡಿಕೊಳ್ಳುತ್ತಾನೆ” ಎಂದು ಶಂಕರ್ ಹೇಳಿದರು.
ಶಂಕರ್ ಅಂತಹ ಪ್ರಾರ್ಥನಾ ಸೇವೆಗಳನ್ನು ನಡೆಸಿಕೊಡುವಾಗ ಜೊತೆಗೊಂದು ಸಣ್ಣ ಕಾಣಿಕೆ ಡಬ್ಬಿಯನ್ನು ಕೊಂಡೊಯ್ಯುತ್ತಾರೆ. ಸಾಮಾನ್ಯವಾಗಿ ಬಡವರ ಮನೆಗಳಲ್ಲಿಯೇ ಇಂತಹ ಕಾರ್ಯಗಳು ನಡೆಯುವುದರಿಂದ ಸಿಗುವ ಕಾಣಿಕೆಗಳು ಕೂಡ ನಾಮಮಾತ್ರವೇ ಆಗಿರುತ್ತವೆ. ಪ್ರಸ್ತುತ ಘಟನೆ ನಡೆದ ದಿನ, ಶಂಕರ್ ನಿರ್ಮಲಾ ದೇವಿಯವರ ಮನೆಯಲ್ಲಿದ್ದರು. ಆಗ ಇಬ್ಬರು ಅಪರಿಚಿತರು ಅನಿರೀಕ್ಷಿತವಾಗಿ ಮನೆಯ ಒಳಗೆ ಬರುತ್ತಾರೆ. ಅವರ ಸಹಚರರು ಮನೆಯ ಹೊರಗೆ ಕಾಯುತ್ತಿದ್ದರು. “ಆ ವ್ಯಕ್ತಿಗಳಲ್ಲಿ ಒಬ್ಬ ಬೈಬಲ್‌ನ ಪುಟಗಳನ್ನು ತಿರುವಿ ನೋಡಿದ. ನಂತರ ಪ್ರಾರ್ಥನೆಯಲ್ಲಿ ತಾನು ಕೂಡ ಪಾಲ್ಗೊಳ್ಳಲು ಬಯಸುವುದಾಗಿ ಹೇಳಿದ. ಅಷ್ಟರಲ್ಲಿ ಜೊತೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ನಮ್ಮ ವೀಡಿಯೋ ಮಾಡತೊಡಗಿದ. ಅವರು ಒಂದೆರಡು ನಿಮಿಷಗಳ ನಂತರ ಹಾಗೆಯೇ ಹೊರಟುಹೋದರು.

ಆದರೆ, ಅವರು ಹಿಂದೂ ಸಂಘಟನೆಗೆ ಸೇರಿದ ಜನರ ದೊಡ್ಡದೊಂದು ಗುಂಪಿನೊಂದಿಗೆ ಮರಳಿ ಬಂದು ನನ್ನ ಮೇಲೆ ಮತಾಂತರದ ಆರೋಪ ಮಾಡಿದರು” ಎಂದು ಶಂಕರ್ ಆ ಘಟನೆಯನ್ನು ವಿವರಿಸುತ್ತಾರೆ.
ಶಂಕರ್ ಸಾಮಾನ್ಯವಾಗಿ ಮಂಗಳವಾರದಂದು ತಮ್ಮ ಪ್ರಾರ್ಥನಾ ಸೇವೆಗಳನ್ನು ಮಾಡುತ್ತಿದ್ದರು. ಅವರಿಗೆ ಬಿಡುವಿಲ್ಲದ ದಿನಗಳಲ್ಲಿ, ಫೋಟೋ ಡಿಸೈನ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಮಗ ಉಜ್ವಲ್ ಆ ಕೆಲಸವನ್ನು ನೆರವೇರಿಸುತ್ತಿದ್ದರು. “ನನ್ನ ತಂದೆಯನ್ನು ಗುರಿಯಾಗಿಸಿಕೊಂಡಿದ್ದರು. ಜಿಟ್ಟು ಸೋಂಕರ್ ತರದ ಜನರು ನನ್ನ ತಂದೆಯ ಪ್ರಾರ್ಥನಾ ಸಭೆಗಳಿಗೆ ಬಂದು ಎಲ್ಲವನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದರು. ಜೊತೆಗೆ ಆಗಾಗ್ಗೆ ನಮ್ಮನ್ನು ಕೆಣಕುತ್ತಿದ್ದರು. “ನೀವು ಹಿಂದೂ ಆಗಿದ್ದರೆ, ಕ್ರಿಸ್ತನನ್ನು ಏಕೆ ನಂಬುತ್ತೀರಿ? ನೀವು ಕ್ರಿಸ್ತನನ್ನು ಆರಾಧಿಸುವುದಾದರೆ, ಕ್ರಿಶ್ಚಿಯನ್ ಹೆಸರನ್ನು ಇಟ್ಟುಕೊಳ್ಳಿ.

ಮೀಸಲಾತಿಯನ್ನು ಬಿಟ್ಟುಕೊಡಿ” ಎಂದೆಲ್ಲ ಅವರು ಹೇಳುತ್ತಿದ್ದರೆಂದು ಉಜ್ವಲ್ ನೆನೆಯುತ್ತಾರೆ. ಹಿಂದುತ್ವ ಶಕ್ತಿಗಳು ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರ ಮೇಲೆಯೇ ಇಂತಹ ಕಾನೂನುಗಳ ಮೂಲಕ ಕಿರುಕುಳ ನೀಡುತ್ತಿವೆ ಎಂಬುದು ಉಜ್ವಲ್‌ ಅವರ ಖಚಿತ ಅಭಿಪ್ರಾಯ. “ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗುವವರು ಹೆಚ್ಚಾಗಿ ಕೆಳಜಾತಿಯ ಜನರು” ಎಂದು ಉಜ್ವಲ್‌ ಹೇಳುತ್ತಾರೆ.

ಒಪ್ಪಲಾಗದ ಕಥೆ
ಆದಿತ್ಯನಾಥ್ ಸರ್ಕಾರದ ಪ್ರಾಸಿಕ್ಯೂಷನ್ ತಂಡವು ಶಂಕರ್ ವಿರುದ್ಧ ನಾಲ್ಕು ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುತ್ತದೆ: ಸೋಂಕರ್, ಆತನ ಗೆಳೆಯ ರಾಜನ್ ಚೌಬೆ, ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿದ್ದ ಚರ್ಮರೋಗ ತಜ್ಞ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿ ಪರಿಜತ್ ಬರ್ನ್ವಾಲ್ ಹಾಗೂ ಪ್ರಕರಣದ ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಕುಶ್ವಾಹ.
ಶಂಕರ್‌ ಬಳಿಯಿಂದ ಕ್ರಿಸ್ತನ ಕುರಿತಾದ ಭೋಜ್‌ಪುರಿ ಭಕ್ತಿಗೀತೆಗಳ ಪುಸ್ತಕ, ಬೈಬಲ್‌ನ ಪ್ರತಿಗಳು, ಇತರ ಕೆಲವು ದಾಖಲೆಗಳು ಮತ್ತು 12 ಧಾರ್ಮಿಕ ಗ್ರಂಥಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೊಂಡಿದ್ದರು.

ವಿಚಾರಣೆಯ ಸಮಯದಲ್ಲಿ, ಪ್ರಕರಣದಲ್ಲಿ ಸಾರ್ವಜನಿಕ ಸಾಕ್ಷಿಯೆಂದು ಪರಿಗಣಿಸಬಹುದಾದ ಇಬ್ಬರೂ ಕೂಡ ಸೋಂಕರ್ನ ಸ್ನೇಹಿತರು ಎಂದು ಶಂಕರ್ ನ್ಯಾಯಾಲಯದ ಗಮನಸೆಳೆಯುತ್ತಾರೆ. ಅವರಲ್ಲಿ ರಾಜನ್ ಚೌಬೆ ಎಂಬ ವ್ಯಕ್ತಿಯು ಸೋಂಕರ್ ಕಟ್ಟಿದ ಕತೆಯನ್ನು ಎಫ್‌ಐಆರ್ ಆಗಿ ಪರಿವರ್ತಿಸಿದ ವ್ಯಕ್ತಿ. ವಿಚಾರಣಾ ನ್ಯಾಯಾಧೀಶರು ಇದನ್ನು ಗಮನಿಸುತ್ತಾರೆ. ಜೊತೆಗೆ ಎಫ್‌ಐಆರ್‌ನಲ್ಲಿ ಇತರ ಹಲವು ವಿರೋಧಾಭಾಸಗಳನ್ನು ಕಂಡುಕೊಂಡ ಕಾರಣ ಅದನ್ನು “ಸಂಶಯಾಸ್ಪದ” ಎಂದು ತೀರ್ಪು ನೀಡುತ್ತಾರೆ.

ಶಂಕರ್, ತಾನು ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡಿಲ್ಲವೆಂದೂ ಆದ್ದರಿಂದಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ತಾನು ಅಧಿಕಾರ ಹೊಂದಿಲ್ಲವೆಂದೂ ಸಾಬೀತುಪಡಿಸಲು ತನಗೆ ಸರ್ಕಾರವೇ ನೀಡಿದ್ದ ಹಿಂದೂ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ.
ಆದರೆ, ಮತಾಂತರವು “ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ವಿರುದ್ಧವೆಂದು” ಮಾತ್ರವಲ್ಲ ಮತಾಂತರವು “ದೇಶದ ಭದ್ರತೆಗೆ ಬೆದರಿಕೆಯನ್ನೂ” ಒಡ್ಡುತ್ತದೆ ಎಂದು ಸರ್ಕಾರಿ ವಕೀಲರು ವಾದಿಸುತ್ತಾರೆ. “ಮತಾಂತರವನ್ನು ತಡೆಯದಿದ್ದರೆ, ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ” ಎಂದು ಜಿಲ್ಲಾ ಸರ್ಕಾರಿ ವಕೀಲ ಪ್ರಿಯದರ್ಶಿ ಪಿಯೂಷ್ ತ್ರಿಪಾಠಿ ನ್ಯಾಯಾಲಯದಲ್ಲಿ ಹೇಳುತ್ತಾರೆ. ಅವರು ತಮ್ಮ ಮಾತಿನಲ್ಲಿ ಕಳೆದ ವರ್ಷ ಜುಲೈನಲ್ಲಿ ಶಂಕರ್‌ ತರಹದ್ದೇ ಆರೋಪ ಎದುರಿಸಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸುವಾಗ ಅಲಹಾಬಾದ್‌ ಹೈಕೋರ್ಟಿನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಪುನರಾವರ್ತಿಸುತ್ತಾರೆ. ಆದರೆ, ಅದರ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಗರ್ವಾಲ್ ಅವರ ವಿವಾದಾತ್ಮಕ ಪದಗಳ ಬಳಕೆ ಅಥವಾ ಉಲ್ಲೇಖವನ್ನು ನಿರ್ಬಂಧಿಸಿತ್ತು.

ಅಜಮ್‌ಗಢ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಶುಕ್ಲಾ ಅವರು ಪ್ರಾಸಿಕ್ಯೂಷನ್‌ ಹೆಣೆದ ಕಥೆ ಮತ್ತು ಪೊಲೀಸ್ ತನಿಖೆಯು ದೋಷಪೂರಿತವಾಗಿದೆ ಹಾಗೂ ಹಲವು ವಿರೋಧಾಭಾಸಗಳಿಂದ ಕೂಡಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ.

“ಪ್ರಾಸಿಕ್ಯೂಷನ್ ಕಥೆಯು ಅಸಂಗತತೆಗಳಿಂದ, ದೋಷಗಳಿಂದ ಮತ್ತು ವಿರೋಧಾಭಾಸಗಳಿಂದ ತುಂಬಿದೆ. ಇದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಆದ್ದರಿಂದಲೇ ಅನುಮಾನಾಸ್ಪದವಾಗಿ ಕಾಣುತ್ತಿದೆ” ಎಂದು ಅವರು ತಮ್ಮ ಆದೇಶದಲ್ಲಿ ಹೇಳುತ್ತಾರೆ.

ಶಂಕರ್ ಅವರು ನೀಡುತ್ತಿದ್ದರು ಎನ್ನಲಾದ ಹಣಕಾಸಿನ ಪ್ರಚೋದನೆಗಳಲ್ಲಿನ ವಿರೋಧಾಭಾಸಗಳನ್ನು ನ್ಯಾಯಾಧೀಶರು ಬೊಟ್ಟು ಮಾಡುತ್ತಾರೆ. ಎಫ್‌ಐಆರ್‌ನಲ್ಲಿ, ಸೋಂಕರ್ ಅವರು ಶಂಕರ್ ಜನರಿಗೆ ತಲಾ 500 ರೂಪಾಯಿಗಳನ್ನು ನೀಡುತ್ತಿದ್ದದಾಗಿ ಹೇಳಿದ್ದರು. ಆದರೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಾಗ ಸೋಂಕರ್‌, ತಾನು 30,000 ರೂಪಾಯಿಗಳನ್ನು ವೈಯಕ್ತಿಕವಾಗಿ ಪಡೆದಿರುವುದಾಗಿ ಹೇಳಿದ್ದ. ಯಾವುದೇ ಹಣಕಾಸಿನ ಆಮಿಷಕ್ಕೆ ಸ್ಪಷ್ಟ ಪುರಾವೆಗಳಿಲ್ಲ ಎಂದು ನ್ಯಾಯಾಧೀಶ ಶುಕ್ಲಾ ಗಮನಿಸುತ್ತಾರೆ.

ಸೋಂಕರ್‌ ಅವರ ಹೇಳಿಕೆಯು ಪೊಲೀಸ್‌ ತನಿಖಾಧಿಕಾರಿಯ ಹೇಳಿಕೆಯೊಂದಿಗೆ ತಾಳೆಯಾಗುತ್ತಿರಲಿಲ್ಲ. ಆಗಸ್ಟ್ 31, 2021ರಂದು ಬೆಳಿಗ್ಗೆ 11 ಗಂಟೆಗೆ ಶಂಕರ್ ಅವರನ್ನು ಬಂಧಿಸುವಾಗ ಅವರಿಂದ ಹಣ ಅಥವಾ ಇತರ ವಸ್ತು ವಶಪಡಿಸಿಕೊಂಡಿರಲಿಲ್ಲ ಎಂದು ಸೋಂಕರ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ತನಿಖಾಧಿಕಾರಿಯಾಗಿದ್ದ ಸಬ್ಇನ್ಸ್‌ಪೆಕ್ಟರ್ ಕುಶ್ವಾಹ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಬಂಧನ ಮತ್ತು ವಶಪಡಿಸಿಕೊಂಡ ವಸ್ತುಗಳ ದಾಖಲೆಯಲ್ಲಿ ಬಂಧನವನ್ನು ಸೆಪ್ಟೆಂಬರ್ 1 ಎಂದು ನಮೂದಿಸಿದ್ದರು. ಜೊತೆಗೆ 12 ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತೋರಿಸಿದ್ದರು. ಶಂಕರ್ ಅವರನ್ನು ಸಾರ್ವಜನಿಕ ಸ್ಥಳದಿಂದ (ಕರ್ತಾಲ್‌ಪುರ ಟ್ರೈಜಂಕ್ಷನ್) ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಹೇಳಿಕೊಂಡಿದ್ದರೂ, ಆ ಘಟನೆಗೆ ಒಬ್ಬ ಸ್ವತಂತ್ರ ಸಾಕ್ಷಿಯನ್ನು ಹಾಜರುಪಡಿಸಲು ಅವರು ವಿಫಲರಾಗಿದ್ದರು. ಸಾಕ್ಷಿಗಳಾಗಿ ತನಿಖಾಧಿಕಾರಿಯ ಅಧೀನದಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ಸಂದೀಪ್ ಸಿಂಗ್ ಮತ್ತು ಪವನ್ ಕುಮಾರ್ ಅವರನ್ನು ಹಾಜರುಪಡಿಸಲಾಗಿತ್ತು.

ನ್ಯಾಯಾಧೀಶ ಶುಕ್ಲಾ ಅವರು ಈ ಪ್ರಕರಣದಲ್ಲಿ ಪೊಲೀಸರು ನಿಯಮಗಳ ಪ್ರಕಾರ ನಡೆದುಕೊಂಡಿಲ್ಲವೆಂದು ಗಮನಿಸುತ್ತಾರೆ. ಆ ಮೂಲಕ ಪ್ರಾಸಿಕ್ಯೂಷನ್ ಕಥೆಯು “ಸಂಶಯಾಸ್ಪದ”ವೆಂಬ ತೀರ್ಮಾನಕ್ಕೆ ನ್ಯಾಯಾಧೀಶರು ತಲುಪುತ್ತಾರೆ. ಯಾವುದೇ ಸಹಿಯಿಲ್ಲದ ಬಂಧನ ಮತ್ತು ರಿಕವರಿ ಮೆಮೋ, ತನಿಖಾಧಿಕಾರಿಯೇ ಪ್ರಕರಣದಲ್ಲಿ ಸಾಕ್ಷಿಯಾಗಿರುವುದು ಮೊದಲಾದ ಕಾರಣದಿಂದ ಇದು ಅನುಮಾನಾಸ್ಪದವೆಂದು ನ್ಯಾಯಾಧೀಶರು ಪರಿಗಣಿಸುತ್ತಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಶಂಕರ್ ಅವರನ್ನು ದೋಷಿ ಎಂದು ತೀರ್ಪು ನೀಡುವಾಗ ನ್ಯಾಯಾಲಯವು ಸೋಂಕರ್ ಮತ್ತು ಅಜಮ್‌ಗಢದ ವೈದ್ಯ ಪರಿಜತ್ ಬರ್ನ್ವಾಲ್ ಅವರ ಸಾಕ್ಷ್ಯಗಳನ್ನು ಅವಲಂಬಿಸಿತ್ತು.

ಪೊಲೀಸರ ಮತ್ತು ಇಂತಹ ಕಿಡಿಗೇಡಿಗಳ ಭಯದಿಂದ ಶಂಕರ್ ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಜೀವನದ ಮೇಲೆ ಬಹಳವೇ ಪರಿಣಾಮ ಬೀರಿದೆ. ಇದರಿಂದಾಗಿ ಅವರು ಪ್ರಾರ್ಥನಾ ಸಭೆಗಳನ್ನು ಮತ್ತು “ಸೇವೆ”ಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದಾರೆ. ಅವರೀಗ ಬಹುತೇಕ ಮನೆಯಲ್ಲಿಯೇ ಸಮಯ ಕಳೆಯುತ್ತಾರೆ.

ಆದರೆ ಈ ಎಲ್ಲ ಅಗ್ನಿಪರೀಕ್ಷೆಯು ನಂಬಿಕೆಯ ಮೇಲಿನ ಅವರ ದೃಢವಿಶ್ವಾಸವನ್ನು ಅಲ್ಲಾಡಿಸುವಲ್ಲಿ ವಿಫಲವಾಗಿದೆ. “ಜನರಿಗೆ ಮತಾಂತರ ಪ್ರಮಾಣಪತ್ರಗಳನ್ನು ನೀಡುವುದು ಕಲೆಕ್ಟರ್‌ ಕೆಲಸ. ನಂಬಿಕೆ ಇಡುವುದು ಮತ್ತು ಕ್ರಿಶ್ಚಿಯನ್ ಆಗುವುದು ಎರಡು ಭಿನ್ನ ಸಂಗತಿಗಳು. ನಾವು ವಿಶ್ವಾಸಿಗಳು, ಇಸಾಯಿಗಳು (ಕ್ರೈಸ್ತರು) ಅಲ್ಲ,” ಎಂದು ಶಂಕರ್‌ ಹೇಳುತ್ತಾರೆ.

  • ಬಲಿಪಶುವಿನ ಅನಾಮಧೇಯತೆಯನ್ನು ರಕ್ಷಿಸಲು ಹೆಸರು ಬದಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page