ಮಧ್ಯಪ್ರದೇಶದ ಫತೇಹ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ಬಿಜೆಪಿ ಮುಖಂಡ ಮತ್ತು ಆತನ ಸಹಚರರು ರೈತನೊಬ್ಬನನ್ನು ಅಮಾನವೀಯವಾಗಿ ಕೊಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೃತ ರೈತ ರಾಮ್ ಸ್ವರೂಪ್ ಧಾಕಡ್ ಅವರು ತಮ್ಮ ಪತ್ನಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆರೋಪಿ ಬಿಜೆಪಿ ಮುಖಂಡ ಮಹೇಂದ್ರ ನಾಗರ್ ದೀರ್ಘಕಾಲದಿಂದ ಸ್ಥಳೀಯ ಸಣ್ಣ ರೈತರಿಗೆ ತಮ್ಮ ಜಮೀನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದನು. ಧಾಕಡ್ ಇದಕ್ಕೆ ನಿರಾಕರಿಸಿದ ಕಾರಣವೇ ಈ ದಾಳಿ ನಡೆದಿದೆ ಎಂದು ಸಂತ್ರಸ್ತರ ಕುಟುಂಬ ಗಂಭೀರ ಆರೋಪ ಮಾಡಿದೆ.
ದೂರಿನ ಪ್ರಕಾರ, ಮಹೇಂದ್ರ ನಾಗರ್ ಮತ್ತು ಆತನ ಸುಮಾರು 20 ಸಹಚರರು ಧಾಕಡ್ ಅವರನ್ನು ಸುತ್ತುವರೆದು, ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದರು. ಆ ನಂತರ, ಅವರ ದೇಹದ ಮೇಲೆ ಥಾರ್ ಜೀಪ್ ಅನ್ನು ಹರಿಸಿದರು. ಪೋಷಕರ ರಕ್ಷಣೆಗೆ ಧಾವಿಸಿದ ಧಾಕಡ್ ಅವರ ಹೆಣ್ಣುಮಕ್ಕಳ ಮೇಲೂ ಆರೋಪಿಗಳು ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದುಹಾಕಿದ್ದಾರೆ.
ಈ ಘಟನೆಯನ್ನು ವಿವರಿಸಿರುವ ರೈತನ ಮಗಳು, “ಅವರು ನನ್ನ ಮೇಲೆ ಕುಳಿತು ಹಲ್ಲೆ ಮಾಡಿದರು, ನನ್ನ ಬಟ್ಟೆ ಹರಿದು ಹಾಕಿದರು ಮತ್ತು ಗುಂಡು ಕೂಡ ಹಾರಿಸಿದರು. ನನ್ನ ತಾಯಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರು ನನ್ನ ತಂದೆಯ ಮೇಲೆ ಕಾರು ಹರಿಸಿದರು” ಎಂದು ಹೇಳಿಕೆ ನೀಡಿದ್ದಾರೆ. ಸಂತ್ರಸ್ತರ ಸಹೋದರ ರಾಮ್‌ಕುಮಾರ್ ಪ್ರಕಾರ, ಈ ದೌರ್ಜನ್ಯ ಸುಮಾರು ಒಂದು ಗಂಟೆಯ ಕಾಲ ನಡೆದಿತ್ತು ಮತ್ತು ಆರೋಪಿಗಳು ಟ್ರ್ಯಾಕ್ಟರ್ ಹಾಗೂ ಕಾರು ಎರಡನ್ನೂ ಹರಿಸಿದರು.
ಘಟನೆ ನಡೆದ ನಂತರವೂ ಆರೋಪಿಗಳು ತಮ್ಮ ಕ್ರೌರ್ಯವನ್ನು ಮುಂದುವರೆಸಿದರು. ಗಾಯಗೊಂಡ ಧಾಕಡ್ ಅವರ ದೇಹವನ್ನು ಬಂದೂಕು ತೋರಿಸಿ ಒಂದು ಗಂಟೆಯ ಕಾಲ ಆಸ್ಪತ್ರೆಗೆ ಸಾಗಿಸಲು ಬಿಡಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಅಂತಿಮವಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಗಣೇಶಪುರ ಗ್ರಾಮದ ನಿವಾಸಿಗಳ ಪ್ರಕಾರ, ಮಹೇಂದ್ರ ನಾಗರ್‌ನ ಬೆದರಿಕೆಯಿಂದಾಗಿ ಈ ಹಿಂದೆ ಸುಮಾರು 25 ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಗ್ರಾಮ ತೊರೆದಿದ್ದರು.
ಈ ಘಟನೆ ಸಂಬಂಧ ಮಹೇಂದ್ರ ನಾಗರ್, ಆತನ ಕುಟುಂಬದ ಮೂವರು ಮಹಿಳೆಯರು ಮತ್ತು ಇತರ 14 ಜನರ ವಿರುದ್ಧ ಕೊಲೆ ಮತ್ತು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. “ಸಂತ್ರಸ್ತರ ಕುಟುಂಬದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ,” ಎಂದು ಫತೇಹ್‌ಗಢ ಠಾಣಾಧಿಕಾರಿ ಜಯನಾರಾಯಣ ಶರ್ಮಾ ತಿಳಿಸಿದ್ದಾರೆ.
ಈ ಮಧ್ಯೆ, ಬಮೋರಿ ಕಾಂಗ್ರೆಸ್ ಶಾಸಕ ಋಷಿ ಅಗರ್ವಾಲ್ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಮಧ್ಯಪ್ರದೇಶದಲ್ಲಿ ಹಿಂಸಾಚಾರ ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮುಖ್ಯಮಂತ್ರಿಯವರೇ ಗೃಹ ಸಚಿವರಾಗಿದ್ದರೂ, ಪೊಲೀಸರು ಅಧಿಕಾರದಲ್ಲಿರುವವರ ಭಯದಿಂದ ಕೆಲಸ ಮಾಡುತ್ತಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
