Friday, February 27, 2026

ಸತ್ಯ | ನ್ಯಾಯ |ಧರ್ಮ

9 ರೂ ಬ್ಯಾಂಕ್ ಸಾಲ ತೀರಿಸಿದ ಬೆಳೆಗಾರ, ಲೋನ್ ಕಟ್ಟಿ 66 ಪೈಸೆ ವಾಪಸ್ ಕೇಳಿದ ಗ್ರಾಹಕ

ಹಾಸನ : ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ವಿಚಿತ್ರ ಹಾಗೂ ಅಷ್ಟೇ ಮಾರ್ಮಿಕವಾದ ಘಟನೆಯೊಂದು ನಡೆದಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟು ಓಡುವವರ ಬಗ್ಗೆ ತಲೆಕೆಡಿಸಿಕೊಳ್ಳದ ಬ್ಯಾಂಕುಗಳು, ಸಾಲ ಮರುಪಾವತಿಸುವ ಬಡ ರೈತರಿಗೆ ಕೇವಲ ಪೈಸೆಗಳ ಲೆಕ್ಕದಲ್ಲಿ ಹೇಗೆ ಕಿರುಕುಳ ನೀಡುತ್ತವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಸಕಲೇಶಪುರದ ಬೆಳೆಗಾರರಾದ ಚೊಕ್ಕಣ್ಣಗೌಡ ಎಂಬುವವರು ವರ್ಷಗಳ ಹಿಂದೆ ಇದೇ ಬ್ಯಾಂಕ್‌ನಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದರ ಅಸಲು ಮತ್ತು ಬಡ್ಡಿಯನ್ನು ಅವರು ಸಂಪೂರ್ಣವಾಗಿ ಮರುಪಾವತಿಸಿದ್ದರು. ಆದರೆ, ನಿನ್ನೆ ಏಕಾಏಕಿ ಅವರಿಗೆ ಬ್ಯಾಂಕ್‌ನಿಂದ ಕರೆ ಬಂದಿದ್ದು, ಅವರ ಖಾತೆಯಲ್ಲಿ ಇನ್ನೂ 9 ರೂಪಾಯಿ 34 ಪೈಸೆ ಬಾಕಿ ಉಳಿದಿದೆ, ಕೂಡಲೇ ಅದನ್ನು ಪಾವತಿಸಿ ಸಾಲ ಕ್ಲಿಯರ್ ಮಾಡಬೇಕು ಎಂದು ಸೂಚಿಸಲಾಗಿತ್ತು.

ಬ್ಯಾಂಕ್ ಸಿಬ್ಬಂದಿಯ ಈ ನಡೆಯಿಂದ ಬೇಸತ್ತ ಚೊಕ್ಕಣ್ಣಗೌಡರು ತಕ್ಷಣವೇ ಶಾಖೆಗೆ ಧಾವಿಸಿ, 10 ರೂಪಾಯಿಯ ನೋಟನ್ನು ಮುಂದಿಟ್ಟರು. ಬ್ಯಾಂಕ್‌ನವರು ರಶೀದಿಯಲ್ಲಿ 9 ರೂಪಾಯಿ 34 ಪೈಸೆ ಎಂದು ನಮೂದಿಸಿ ಸಾಲ ಚುಕ್ತ ಮಾಡಿಕೊಂಡರು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಬ್ಯಾಂಕಿನವರು ಪೈಸೆ ಲೆಕ್ಕದಲ್ಲಿ ಸಾಲ ಕೇಳಿದ ಮೇಲೆ, ನನಗೂ ಪೈಸೆ ಲೆಕ್ಕದಲ್ಲೇ ನ್ಯಾಯ ಸಿಗಬೇಕು ಎಂದು ಪಟ್ಟು ಹಿಡಿದ ಅವರು, ತಾವು ನೀಡಿದ 10 ರೂಪಾಯಿಯಲ್ಲಿ ಬಾಕಿ ಉಳಿಯುವ 66 ಪೈಸೆಯನ್ನು ವಾಪಸ್ ನೀಡುವಂತೆ ಆಗ್ರಹಿಸಿದರು.

ಈ ವಿಚಿತ್ರ ಸನ್ನಿವೇಶದಿಂದ ಬ್ಯಾಂಕ್ ಸಿಬ್ಬಂದಿ ತಬ್ಬಿಬ್ಬಾದರು. ತಾವು ಕರೆ ಮಾಡಿಲ್ಲ, ಇದು ಕಂಪ್ಯೂಟರೈಸ್ಡ್ ಟೆಲಿ ಕಾಲ್‌ನಿಂದ ಆಗಿರಬಹುದು ಎಂದು ಸಬೂಬು ಹೇಳಿ ಅವರನ್ನು ಕಳುಹಿಸಲು ಪ್ರಯತ್ನಿಸಿದರು. ಆದರೆ, ಸಾಮಾನ್ಯ ರೈತರಿಗೆ ಕ್ಷುಲ್ಲಕ ಮೊತ್ತಕ್ಕಾಗಿ ಕಿರಿಕಿರಿ ನೀಡುವ ಬ್ಯಾಂಕ್ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ ಚೊಕ್ಕಣ್ಣಗೌಡರು, “ಬಡ ರೈತರು ಸಾಲ ಕಟ್ಟಿದರೂ ಬಿಡದೆ ಪೀಡಿಸುವ ನೀವು, ಸಾವಿರಾರು ಕೋಟಿ ಲೂಟಿ ಮಾಡಿದವರನ್ನು ಏನು ಮಾಡುತ್ತೀರಿ? ನನ್ನ 66 ಪೈಸೆ ನನಗೆ ವಾಪಸ್ ಕೊಟ್ಟು ನ್ಯಾಯ ಒದಗಿಸಿ” ಎಂದು ಪಟ್ಟು ಹಿಡಿದ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page