Home ದೇಶ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ: ರೈತರಿಗೆ ಮೋದಿ ಸರ್ಕಾರದಿಂದ ದ್ರೋಹ? ಫ್ಯಾಕ್ಟ್‌ ಶೀಟ್‌ ಬಿಡುಗಡೆ ಮಾಡಿದ ವೈಟ್‌...

ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ: ರೈತರಿಗೆ ಮೋದಿ ಸರ್ಕಾರದಿಂದ ದ್ರೋಹ? ಫ್ಯಾಕ್ಟ್‌ ಶೀಟ್‌ ಬಿಡುಗಡೆ ಮಾಡಿದ ವೈಟ್‌ ಹೌಸ್

0

ಐದು ವರ್ಷಗಳ ಹಿಂದೆ ಮೂರು ಕಪ್ಪು ಕೃಷಿ ಕಾಯ್ದೆಗಳನ್ನು ತರುವ ಮೂಲಕ ರೈತರನ್ನು ವಂಚಿಸಿದ್ದ ಕೇಂದ್ರದ ಮೋದಿ ಸರ್ಕಾರ, ಈಗ ಭಾರತ-ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದದ ಮೂಲಕ ಮತ್ತೊಮ್ಮೆ ಅನ್ನದಾತರಿಗೆ ದ್ರೋಹ ಎಸಗಿದೆ ಎಂದು ವಿಮರ್ಶಕರು ಆರೋಪಿಸುತ್ತಿದ್ದಾರೆ. ಈ ಒಪ್ಪಂದದಿಂದ ರೈತರಿಗೆ ಯಾವುದೇ ನಷ್ಟವಿಲ್ಲ ಮತ್ತು ಭಾರತೀಯ ಕೃಷಿ ಹಾಗೂ ಡೈರಿ ಉತ್ಪನ್ನಗಳಿಗೆ ಸಂಪೂರ್ಣ ರಕ್ಷಣೆ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ಘೋಷಿಸಿದ್ದರು. ಆದರೆ, ಸೋಮವಾರ ವೈಟ್‌ಹೌಸ್ ಬಿಡುಗಡೆ ಮಾಡಿದ ‘ಫ್ಯಾಕ್ಟ್‌ ಶೀಟ್: ದಿ ಯುನೈಟೆಡ್ ಸ್ಟೇಟ್ಸ್ ಅಂಡ್ ಇಂಡಿಯಾ ಅನೌನ್ಸ್ ಹಿಸ್ಟಾರಿಕ್ ಟ್ರೇಡ್ ಡೀಲ್’ ಎಂಬ ವರದಿಯು ಕೇಂದ್ರ ಸಚಿವರ ವಾದಗಳೆಲ್ಲ ಸುಳ್ಳು ಎಂಬುದನ್ನು ಬಹಿರಂಗಪಡಿಸಿದೆ.


ನಮ್ಮ ಕೃಷಿಗೆ ಸಂಚಕಾರ

ವಾಣಿಜ್ಯ ಒಪ್ಪಂದದಿಂದ ರೈತರಿಗೆ ತೊಂದರೆಯಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ವೈಟ್‌ಹೌಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಶೂನ್ಯ ಸುಂಕದೊಂದಿಗೆ (Zero Tariff) ಭಾರತಕ್ಕೆ ಆಮದು ಮಾಡಿಕೊಳ್ಳಲು ಮೋದಿ ಸರ್ಕಾರ ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಕೆಲವು ವಿಧದ ಬೇಳೆಕಾಳುಗಳು, ಒಣ ಧಾನ್ಯಗಳು (DDGS), ಪಶು ಆಹಾರಕ್ಕಾಗಿ ಬಳಸುವ ಕೆಂಪು ಜೋಳ, ಟ್ರೀ ನಟ್ಸ್, ಸಂಸ್ಕರಿಸಿದ ತಾಜಾ ಹಣ್ಣುಗಳು ಮತ್ತು ಸೋಯಾಬಿನ್ ಎಣ್ಣೆಯಂತಹ ಉತ್ಪನ್ನಗಳ ಮೇಲೆ ಶೂನ್ಯ ಅಥವಾ ಅತ್ಯಲ್ಪ ಸುಂಕದೊಂದಿಗೆ ಆಮದು ಮಾಡಿಕೊಳ್ಳಲು ಭಾರತ ಸಮ್ಮತಿಸಿದೆ ಎಂದು ಅಮೆರಿಕ ತಿಳಿಸಿದೆ. ವಿಶೇಷವೆಂದರೆ, ಕಳೆದ ಶುಕ್ರವಾರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಬೇಳೆಕಾಳುಗಳ ಪ್ರಸ್ತಾಪವಿರಲಿಲ್ಲ, ಆದರೆ ಈಗಿನ ವರದಿಯಲ್ಲಿ ಅವುಗಳ ಮೇಲಿನ ಸುಂಕ ರದ್ದತಿಯ ಉಲ್ಲೇಖವಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಸಚಿವರ ಸುಳ್ಳು ಭರವಸೆಗಳು

ಈ ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆಯೇ ದೇಶದ ರೈತರಲ್ಲಿ ಆತಂಕ ಶುರುವಾಗಿದೆ. ಅಮೆರಿಕದ ಕೃಷಿ ಉತ್ಪನ್ನಗಳಿಗೆ ಮುಕ್ತ ಅವಕಾಶ ನೀಡಿದರೆ ನಮ್ಮ ಗತಿ ಏನು ಎಂಬುದು ಕೋಟ್ಯಂತರ ರೈತರ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಭಾನುವಾರ ಮಾತನಾಡಿ, “ನಮ್ಮಲ್ಲಿ ಹಸಿರು ಬಟಾಣಿ, ಕಾಬೂಲಿ ಚನ್ನಾ ಮತ್ತು ಹೆಸರು ಬೇಳೆ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ, ಹೀಗಿರುವಾಗ ಅಮೆರಿಕದಿಂದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದ್ದರು. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಅಮೆರಿಕದ ಬೇಳೆಕಾಳುಗಳಿಗೆ ದೇಶದೊಳಗೆ ಅನುಮತಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ವೈಟ್‌ಹೌಸ್‌ನ ಅಧಿಕೃತ ವರದಿಯು ಸಚಿವರ ಈ ಎಲ್ಲಾ ಮಾತುಗಳು ಅಬದ್ಧ ಎಂಬಂತೆ ಬಿಂಬಿಸಿದೆ.


You cannot copy content of this page

Exit mobile version