ರೈತರ ಪ್ರತಿಭಟನೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ಆಗ್ರಹಿಸಿ ರೈತರು ‘ದೆಹಲಿ ಚಲೋ’ ಮೆರವಣಿಗೆಗೆ ಕರೆ ನೀಡಿ ವಾರ ಕಳೆಯುತ್ತಾ ಬಂದಿದೆ. ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ರಾಷ್ಟ್ರ ರಾಜಧಾನಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರನ್ನು ಹರಿಯಾಣ-ದೆಹಲಿ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಇದರಿಂದಾಗಿ ಒಂದು ವಾರದಿಂದ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ನಡೆದಿದೆ. ಎಂಎಸ್‌ಪಿ ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ರೈತ ಸಂಘಗಳು ಕೇಂದ್ರದ ಮುಂದಿಟ್ಟಿವೆ.
ಏತನ್ಮಧ್ಯೆ, ಕೇಂದ್ರ ಸಚಿವರು ಈಗಾಗಲೇ ಮೂರು ಬಾರಿ ರೈತ ಸಂಘಗಳ ಮುಖಂಡರನ್ನು ಭೇಟಿ ಮಾಡಿದ್ದು, ಭಾನುವಾರ ನಾಲ್ಕನೇ ಬಾರಿ ಅವರೊಂದಿಗೆ ಸಚಿವರು ಚರ್ಚಿಸಿದರು. ಕೇಂದ್ರವು ಕನಿಷ್ಟ ಬೆಂಬಲ ಬೆಲೆ (MSP) ಯೋಜನೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ನೀಡಿದರು.
ಇನ್ನೆರಡು ದಿನಗಳಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಮುಖಂಡರು ಘೋಷಿಸಿದರು. ಅಲ್ಲಿಯವರೆಗೆ ದೆಹಲಿ ಚಲೋ ಮಾರ್ಚ್ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಗೃಹ ಸಚಿವ ನಿತ್ಯಾನಂದ ರಾಯ್ ಅವರು ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳ ಕುರಿತು ಭಾನುವಾರ ಇಲ್ಲಿ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದರು.
ಸಭೆಯ ನಂತರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಸಮಿತಿಯು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮತ್ತು ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರಿ ಸಂಸ್ಥೆಗಳ ಮೂಲಕ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಖರೀದಿಸಲು ಪ್ರಸ್ತಾಪಿಸಿದೆ. NCCF (National Cooperative Consumers Federation) ಮತ್ತು NAFED (ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ) ನಂತಹ ಸಹಕಾರ ಸಂಘಗಳು ದ್ವಿದಳ ಧಾನ್ಯಗಳ ರೈತರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತೇವೆ ಮತ್ತು ಮುಂದಿನ ಐದು ವರ್ಷಗಳವರೆಗೆ MSP ನಲ್ಲಿ ಅವರ ಬೆಳೆಗಳನ್ನು ಖರೀದಿಸುತ್ತೇವೆ ಎಂದು ಹೇಳಿದರು.
ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಘೋಷಿಸಲಾಗಿದೆ. ಕೇಂದ್ರದ ಪ್ರಸ್ತಾವನೆಯನ್ನು ಫೆ.19-20ರಂದು ನಮ್ಮ ವೇದಿಕೆಗಳಲ್ಲಿ ಚರ್ಚಿಸಿ ತಜ್ಞರ ಅಭಿಪ್ರಾಯ ಪಡೆದು ಅದರಂತೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದರು.