Friday, June 14, 2024

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದಲ್ಲಿ ನಿಲ್ಲದ ರೈತರ ಆತ್ಮಹತ್ಯೆ

ಇದುವರೆಗೆ 685 ರೈತರ ಆತ್ಮಹತ್ಯೆ

ಬಿಜೆಪಿ-ಶಿವಸೇನೆ (ಶಿಂಧೆ ಬಣ) ಆಡಳಿತವಿರುವ ಮಹಾರಾಷ್ಟ್ರದಲ್ಲಿ ರೈತರ ಸಾವಿನ ದನಿ ನಿರಂತರವಾಗಿ ಕೇಳಿಬರುತ್ತಿದೆ. ನೂರಾರು ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ನಷ್ಟ, ಸಾಲದ ಹೊರೆ, ಸಂಕಷ್ಟದ ಸಮಯದಲ್ಲಿ ಸರಕಾರ ಬೆಂಬಲ ನೀಡದ ಕಾರಣ ರೈತರು ಬಲವಂತದ ಸಾವಿಗೆ ಶರಣಾಗುತ್ತಿದ್ದಾರೆ.

ಈ ನಡುವೆ ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಅಷ್ಟಾಗಿ ಇಲ್ಲದ ಮರಾಠವಾಡ ಪ್ರದೇಶದಲ್ಲಿ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ಈ ವರ್ಷದ ಆರಂಭದಿಂದ ಆಗಸ್ಟ್ 31ರವರೆಗೆ ಮರಾಠವಾಡ ಪ್ರದೇಶದಲ್ಲಿ 685 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮರಾಠವಾಡ ಪ್ರದೇಶದಲ್ಲಿ ನಡೆದ ಆತ್ಮಹತ್ಯೆಯಲ್ಲಿ ರಾಜ್ಯದ ಕೃಷಿ ಸಚಿವರಾಗಿರುವ ಧನಂಜಯ್ ಮುಂಡೆ ಅವರ ತವರು ಜಿಲ್ಲೆ ಬೀಡ್‌ನಲ್ಲಿ 186 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಉಸ್ಮಾನಾಬಾದ್ (113) ಮತ್ತು ನಾಂದೇಡ್ (110) ಇವೆಯೆಂದು ಔರಂಗಾಬಾದ್ ವಿಭಾಗೀಯ ಆಯುಕ್ತರ ಕಚೇರಿ ಇತ್ತೀಚಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಜೂನ್ ಮತ್ತು ಆಗಸ್ಟ್ ನಡುವಿನ ಮುಂಗಾರು ಮೂರು ತಿಂಗಳ ಅವಧಿಯಲ್ಲಿ 294 ಭತ್ತದ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

20.7 ರಷ್ಟು ಮಳೆ ಕೊರತೆ

ಮಹಾರಾಷ್ಟ್ರದ ಔರಂಗಾಬಾದ್, ಜಲ್ನಾ, ಬೀಡ್, ಪರ್ಭಾನಿ, ನಾಂದೇಡ್, ಒಸ್ಮಾನಾಬಾದ್, ಹಿಂಗೋಲಿ ಮತ್ತು ಲಾತೂರ್ ಜಿಲ್ಲೆಗಳನ್ನು ಒಟ್ಟಾರೆಯಾಗಿ ಮರಾಠವಾಡ ಪ್ರದೇಶ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಪ್ರಸ್ತುತ ಶೇ.20.7ರಷ್ಟು ಮಳೆ ಕೊರತೆ ಕಂಡುಬಂದಿದೆ. ಈ ಪ್ರದೇಶದಲ್ಲಿ ಸೆಪ್ಟೆಂಬರ್ 11ರವರೆಗೆ ಕೇವಲ 455.4 ಮಿಮೀ ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಸರಾಸರಿ 574.4 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು