ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಅವರ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಎಸ್‌ಎಫ್ ಕಾನ್ಸ್ಟೇಬಲ್ಕುಲ್ವಿಂದರ್ ಕೌರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 323 ಮತ್ತು 341 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಸಿಐಎಸ್‌ಎಫ್ ಕಾನ್ಸ್ಟೇಬಲ್ ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಗುರುವಾರ ಮಧ್ಯಾಹ್ನ 3: 30ರ ಸುಮಾರಿಗೆ ಈ ಘಟನೆ ವರದಿಯಾಗಿತ್ತು.
ಬಿಜೆಪಿ ಸಂಸದೆಯಾದ ಕಂಗನಾ ದೆಹಲಿ ವಿಮಾನ ಹತ್ತುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಘಟನೆಯ ನಂತರ, ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ದೆಹಲಿಗೆ ತೆರಳಿ ಸಿಐಎಸ್‌ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಅವರನ್ನು ಭೇಟಿಯಾಗಿ ಘಟನೆಯ ವಿವರವಾದ ವಿವರಗಳನ್ನು ನೀಡಿದರು.
ಈ ನಡುವೆ ಕಾನ್ಸ್ಟೇಬಲ್ ಬೆಂಬಲಕ್ಕೆ ರೈತ ಸಂಘಟನೆಗಳು ಮುಂದೆ ಬಂದಿದ್ದು ಅವು ʼನ್ಯಾಯಯುತ ತನಿಖೆ ನಡೆಸಬೇಕುʼ ಎಂದು ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 9ನೇ ತಾರೀಖಿನಂದು ಪ್ರತಿಭಟನಾ ಸಭೆಯನ್ನು ನಡೆಸುವುದಾಗಿಯೂ ತಿಳಿಸಿವೆ.