Wednesday, September 10, 2025

ಸತ್ಯ | ನ್ಯಾಯ |ಧರ್ಮ

ಕಂಠಪೂರ್ತಿ ಕುಡಿದು ಬಿಲ್‌ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಹಾಸನ : ಕಂಠಪೂರ್ತಿ ಮದ್ಯ ಸೇವಿಸಿದವರಿಂದ ಸಿಬ್ಬಂದಿ ಬಿಲ್‌ ಕೇಳಿದ್ದಕ್ಕೆ ಕೋಪಗೊಂಡ ಐವರು ಗ್ರಾಹಕರು ರೆಸ್ಟೋರೆಂಟ್‌ನ ಕುರ್ಚಿ, ಕಿಟಕಿ ಗಾಜು ಒಡೆದು, ಮದ್ಯದ ಬಾಟಲಿಯಿಂದ ಸಿಬ್ಬಂದಿ ತಲೆಗೆ ಹೊಡೆದಿರುವ ಘಟನೆ ನಗರದ ಕ್ವಾಲಿಟಿ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ನಗರದ ರಘು, ದರ್ಶನ್‌, ತೇಜು, ಲಕ್ಷ್ಮೀಶ ಹಾಗು ಉಮೇಶ ದಾಂಧಲೆ ಮಾಡಿದವರು. ಸೆ. 7ರ ಮಧ್ಯಾಹ್ನ ರೆಸ್ಟೋರೆಂಟ್‌ಗೆ ಬಂದಿದ್ದ ಅವರು ಮದ್ಯ ಹಾಗು ಊಟ ಆರ್ಡರ್‌ ಮಾಡಿದ್ದಾರೆ. ಸಂಜೆ 7.30ಕ್ಕೆ ಸಿಬ್ಬಂದಿ ಸುದೀಪ್‌ 18,250 ರೂ. ಬಿಲ್‌ ಕೊಟ್ಟಿದ್ದು ಆಗ ಹಣ ಹೊಂದಿಸಲು ಸಾಧ್ಯವಾಗದೆ ಅವರವರೇ ಜಗಳ ಮಾಡಿಕೊಂಡಿದ್ದಾರೆ.

ಈ ನಡುವೆ ರಘು ಏಕಾಏಕಿ ಕುರ್ಚಿಯನ್ನು ಟೇಬಲ್‌ ಮೇಲೆ ಎಸೆದು ಸಾಮಾಗ್ರಿಗಳನ್ನೆಲ್ಲ ಒಡೆದು ಹಾಕಿದ್ದಾನೆ. ಅದನ್ನು ಪ್ರಶ್ನಿಸಿದಕ್ಕೆ ಸುದೀಪ್‌ನ ತಲೆಗೆ ಗಾಜಿನ ಮದ್ಯದ ಬಾಟಲಿಯಿಂದ ಹೊಡೆದಿದ್ದಾನೆ. ರಘು ಜೊತೆಗೆ ಉಳಿದ ನಾಲ್ವರು ಸೇರಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ನಾಶಪಡಿಸಿದ್ದಾರೆ. ಬಾರ್‌ನಲ್ಲಿ ಜೋರು ಗಲಾಟೆಯಾಗುತ್ತಿದ್ದಂತೆ ಬೇರೆ ಟೇಬಲ್‌ನಲ್ಲಿ ಕುಳಿತಿದ್ದವರು ಸಹ ಬಿಲ್‌ ಪಾವತಿಸದೆ ಹಾಗೇ ಹೋಗಿದ್ದಾರೆ. ಈ ಘಟನೆಯಿಂದ ಸುಮಾರು 1 ಲಕ್ಷ ರೂ. ನಷ್ಟವುಂಟಾಗಿದೆ. ನಷ್ಟ ಭರ್ತಿ ಹಾಗು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page