Friday, June 14, 2024

ಸತ್ಯ | ನ್ಯಾಯ |ಧರ್ಮ

ಅಪ್ಪಂದಿರ ದಿನ ವಿಶೇಷ | ಅಪ್ಪ ಮತ್ತು…..

ಇಂದು ವಿಶ್ವ ಅಪ್ಪಂದಿರ ದಿನ. ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು. ಬದುಕಿಗೊಂದು ಅರ್ಥ ನೀಡಿದ, ಬದುಕುವ ಕಲೆ ಕಲಿಸಿದ, ಪ್ರೀತಿಯ ಪಾಠ ಓದಿಸಿದ, ಇಡೀ ಪ್ರಪಂಚ ತೋರಿಸಿದ ಭೂಮಿ ತೂಕದ ಅಪ್ಪನ ಪ್ರೀತಿಯನ್ನು ಅಕ್ಷರದಲ್ಲಿ ಹಿಡಿದಿಡಲಾಗದ ಅಸಹಾಯಕತೆ ಎಲ್ಲ ಮಕ್ಕಳದು. ಈ ಅಸಹಾಯಕತೆಯೊಳಗೇ ಕವಿ ಬಿ ಶ್ರೀನಿವಾಸ ತನ್ನ ಅಪ್ಪನಿಗೆ ನಮನ ಸಲ್ಲಿಸಿದ್ದಾರೆ. ಬಹುತೇಕ ಎಲ್ಲ ಮಕ್ಕಳ ಮೊದಲ ಹೀರೋ ಆಗಿರುವ, (ಅಪವಾದಗಳು ಇರಬಹುದು) ಅಪ್ಪನೂ ಅಮ್ಮನೂ ಎಲ್ಲಾ ಆದ ಅಪ್ಪಂದಿರಿಗೆ ಪೀಪಲ್‌ ಮೀಡಿಯಾ ಜಾಲತಾಣದ ಶುಭಾಶಯಗಳು.

 ಸುಮಾರು ಐವತ್ತು ವರುಷಗಳ ಹಿಂದೆ ನನ್ನಪ್ಪ ಸೊಂಡೂರಿನ ಬೆಟ್ಟ-ಗುಡ್ಡ, ಕಾಡು ಮೇಡುಗಳಲ್ಲಿ ಆಗಿನ ಕೆ.ಇ.ಬಿ.ಯ ಲೈಟುಕಂಬಗಳನ್ನು ಹೆಗಲಮೇಲೆ ಹೊತ್ತು, ಹಳ್ಳಿ ಹಳ್ಳಿಗೂ ಮೈಸೂರು ಲ್ಯಾಂಪಿನ ಹಳದಿ ಕಲರಿನ ಬೆಳಕನ್ನು ಹರಿಸುವುದರಲ್ಲಿ ದುಡಿದವನು. ಬೆಳಕಿನ ಆ ಕಿರಣಗಳಲ್ಲಿ ತನ್ನಂತಹ ಸಾಮಾನ್ಯ ಕೂಲಿಕಾರನ ಶ್ರಮವೂ ಇತ್ತು ಎಂದು ಹೇಳುವಾಗ ಅಪ್ಪನ ಕಂಗಳಲ್ಲಿ ಅದೆಂತಹ ಬೆಳಕಿತ್ತು ಎಂದರೆ…ಆ ಬೆಳಕಿನಲ್ಲಿ ಜಗತ್ತೇ ಕಾಣಿಸುತ್ತಿತ್ತು. 

ಖಾಲಿ ಪೀಲಿ ಕುಸ್ತಿ ಆಡುತ್ತಾ ಮೈ ಬೆಳೆಸಿಕೊಂಡು ತಿರುಗುತ್ತಿದ್ದ ತನ್ನ ತಮ್ಮನಿಗೆ ಜೀವನಾಧಾರಕ್ಕೆಂದು ತನ್ನ ಬದಲು ಆತನ ಹೆಸರನ್ನು ಇಲಾಖೆಗೆ ಸೇರಿಸಿ ತಾನು ತಣ್ಣಗೆ ಬಡಬ್ಯಾಸಾಯಕ್ಕೆ ಹಿಂದಿರುಗಿದ್ದ.

ಸಾಯುವವರೆಗೂ ತುಂಡು ಭೂಮಿಯ ಪಟ್ಟ ಕೊಟ್ಟ ದೇವರಾಜ್ ಅರಸರ ಋಣ ಮತ್ತು ಆರಾಧನೆಯಲ್ಲಿ, ಆತ ಹರಿಸಿದ ಬೆಳಕಿನಲ್ಲಿ ಸಣ್ಣಪುಟ್ಟ ರಾಜಕಾರಣದ ಕನಸು ಕಂಡರೂ, ಬದಲಾದ ಪರಿಸ್ಥಿತಿಯಲ್ಲಿ ರಾಜಕಾರಣದಿಂದ ನೇಪಥ್ಯದಲ್ಲಿಯೇ ಉಳಿದು ಹೋದವನು.

ಇಂತಹ ಅನೇಕ ಚಿತ್ರಗಳು ನನ್ನಪ್ಪನಂತಹ  ಬಹುತೇಕ ಬಡವರ ಎದೆಗಳಲ್ಲಿ ಇನ್ನೂ ಇರಬಹುದೇನೋ ಎಂಬ ನಿರೀಕ್ಷೆಯಲ್ಲಿಯೇ ನಾನು ಮುದುಕರನ್ನು ಮತ್ತೆಮತ್ತೆ ನೋಡುತ್ತೇನೆ. ಹಾಗೆ ಮತ್ತೆ ಮತ್ತೆ ಬರೆಯುತ್ತೇನೆ ಕೂಡ.

ತನ್ನ ಬದುಕಿನುದ್ದಕ್ಕೂ ಎಂದೂ ಕೂಡ ಒಂದೇ ಒಂದು ಗಿಡವನ್ನು ಅನವಶ್ಯಕವಾಗಿ ಕಡಿದವನಲ್ಲ. ದನಕರುಗಳಿಗೆ ಗದರಿದವನಲ್ಲ. ತನ್ನ ದುಡಿಮೆಗೂ ಮೀರಿದ ತನ್ನದಲ್ಲದ ಅನ್ನವನ್ನು ಉಂಡವನಲ್ಲ. ದಿನನಿತ್ಯವೂ ಜ್ವಾಳದ ಮುದ್ದೆ, ಹುಳ್ಳಿಕಾಳಿನ ಸಾರು, ಇಲ್ಲವೇ ಹೊಲದ ಬದುವಿನಲ್ಲಿ ಬೆಳೆದ ಕೋಲನ್ನೆ, ಬಳೆವಡಕದಂತಹ ಸೊಪ್ಪು ಬೇಯಿಸಿ ತಿಂದವನು. ಕೆರೆಯ ತೂಬಿನ ನೀರಿನಲಿ ಹರಿವ ಮೀನುಗಳಿಗಾಗಿ ತನ್ನ ಹರಿದ ಪಂಚೆಯನ್ನೆ ಅಡ್ಡವಿರಿಸಿ ಹೊತ್ತು ತಂದವನು. ಇಂಥಾ ನಿಸರ್ಗದ ಮನುಷ್ಯ ಯಾವಾಗಲೊಂದು ದಿನ ತನ್ನ ಸಿಲವಾರದ ಗಂಗಾಳದಲ್ಲಿ ಹೋಳಿಗಿ, ಅನ್ನ ಸಾರು, ಹಪ್ಪಳ, ಸಂಡಿಗೆ….ಗಳನ್ನು ಕಂಡು ಬೆಚ್ಚಿಬಿದ್ದುದನ್ನೂ ನೋಡಿರುವೆ. ಆಗೆಲ್ಲ ಈ ಅಪ್ಪ ಹೀಗೇಕೆ? ಎಂದು ಕೇಳಬೇಕೆನಿಸುತ್ತಿತ್ತು. ತನ್ನದಲ್ಲದ ಶ್ರಮದ ಭೂರಿ ಭೋಜನ ತನಗೆ ಕೇವಲದ “ಕೂಳು” ಆಗಿ ತೋರಿದ್ದು ,ನನಗೆ ಅರಿವಾಗುವ ಹೊತ್ತಿಗೆ ಅಪ್ಪ ಹಣ್ಣುಹಣ್ಣು ಮುದುಕನಾಗಿದ್ದ. ಇಂತಹ ಅರಿವಿನ ಸಂದರ್ಭಗಳಲ್ಲೆಲ್ಲ ನನಗೆ “ಈಸಕ್ಕಿಯಾಸೆ ನಮಗೇತಕೆ?” ಎಂದು ಕೇಳಿದ ಆಯ್ದಕ್ಕಿ ಮಾರಯ್ಯನ ಹೆಂಡತಿಯ ಪ್ರಶ್ನೆ ನೆನಪಾಗುತ್ತಿತ್ತು.

***

ಒಮ್ಮೆ ನನ್ನಪ್ಪನನ್ನು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಾಮನಿರ್ದೇಶಿತ ಸದಸ್ಯನನ್ನಾಗಿ ಮಾಡಲಾಯಿತು.ಮಾಸಲು ಪಂಚೆ, ಅಲ್ಲಲ್ಲಿ ಹರಿದು ಹೋದ ಅಂಗಿ ಧರಿಸಿದ ಅಪ್ಪ ನೇರ ನುಡಿಗೆ ಹೆಸರುವಾಸಿಯಾಗಿದ್ದ.

ಸುತ್ತುಬಳಸಿ ಮಾತಾಡಿ ತಿಳಿಯದವನಿಗೆ ಯಾಕೋ ಈ ಸೊಸೈಟಿ, ಸರಕಾರ ಇವೆಲ್ಲ ಜನರಿಗೆ ಸಹಕಾರಿಯಾಗುವ ಬದಲಿಗೆ ಕಿರಿಕಿರಿ ಉಂಟುಮಾಡುತ್ತಿರುವಂತೆ ಕಂಡಿತು. ಅವತ್ತಿನಿಂದಲೇ ಸಂಘದ ಮೀಟಿಂಗುಗಳಿಗೆ ಹೋಗುವುದನ್ನು ನಿಲ್ಲಿಸಿದ. ಹೀಗೆ ಮೂರೂ ಮೀಟಿಂಗುಗಳ ತಪ್ಪಿಸಿದಾಗ ಸೆಕ್ರೆಟರಿ ಕೊತ್ಲಪ್ಪನವರು ಗಳೇವು ಹೊಡಕೊಂಡು ಹೊಲಕ್ಕೆ ಹೊಂಟವನನ್ನ ತಡೆದು ನಿಲ್ಲಿಸಿ “ನೋಡು …ನೀನು ಬರಿ ಹೊಲ ಗದ್ದೆ, ರಂಟೆ ಕುಂಟೆ ಅಂತ ಹೋದ್ರೆ ನಿನಿಗೆ ಬಂದಿರೋ ಪದವಿ ಹೋಗುತ್ತೆ “ಎಂದರು.

“ಪದವಿ ….?”ಅಪ್ಪ ಮುಗ್ಧತೆಯಿಂದ ಕೇಳಿದ್ದ.

“ಹೌದು ಅದು ಪದವೀನೆ. ಅದಕ್ಕಾಗಿ ಎಷ್ಟೊಂದು ಜನ ಕಾದು ಕುಳಿತಿದ್ದಾರೆ ಗೊತ್ತಾ? ನೀನು ಎರಡರಲ್ಲಿ ಒಂದನ್ನು ಮಾಡು, ಒಂದು ಸೊಸೈಟಿ ಡೈರಕ್ಟ್ರಾಗು, ಇಲ್ಲಾಂದ್ರೇ…ಗಳೇವು ಹೊಲ, ಫಲ, ಅಂತ ಸುಮ್ನಿದ್ದುಬಿಡು “ಎಂದರು.

ಈ ಬಾರಿ ಅಪ್ಪ “ನಿಮ್ ಸೊಸೈಟಿ ಪದವಿ ನಿಮಗೇ ಇರಲಿ, ನನಗೆ ಇದೇ ಸಾಕು “ಎಂದು ಗಳೇವು ಹೊಡಕೊಂಡು ಹೊಂಟೇಬಿಟ್ಟ!

 ಅಪ್ಪ…..  ನೆನಪಾಗೋದು ಹೀಗೆ.

ಬಿ.ಶ್ರೀನಿವಾಸ

ಕವಿ, ಲೇಖಕ

ಇದನ್ನೂ ಓದಿ-ಅಪ್ಪನ ಎತ್ತುಗಳ ಪ್ರಪಂಚ…

Related Articles

ಇತ್ತೀಚಿನ ಸುದ್ದಿಗಳು