Saturday, February 14, 2026

ಸತ್ಯ | ನ್ಯಾಯ |ಧರ್ಮ

ದೇಶದ ಶೇ. 40ರಷ್ಟು ಜನರಲ್ಲಿ ಫ್ಯಾಟಿ ಲಿವರ್ ಸಮಸ್ಯೆ: ಆಘಾತಕಾರಿ ಅಂಕಿಅಂಶ ಹೊರಹಾಕಿದ ಲ್ಯಾನ್ಸೆಟ್ ವರದಿ

ಭಾರತದಲ್ಲಿ ಯಕೃತ್ತು (ಲಿವರ್) ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆಯು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಲ್ಯಾನ್ಸೆಟ್ ಆಗ್ನೇಯ ಏಷ್ಯಾ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೇಶದ ಸುಮಾರು ಶೇಕಡಾ 40 ರಷ್ಟು ಜನರಲ್ಲಿ ‘ಫ್ಯಾಟಿ ಲಿವರ್’ (ಯಕೃತ್ತಿನಲ್ಲಿ ಕೊಬ್ಬು ಶೇಖರಣೆ) ಸಮಸ್ಯೆ ಕಾಣಿಸಿಕೊಂಡಿದೆ. ವಿಶೇಷವೆಂದರೆ, ಕಡಿಮೆ ತೂಕ ಹೊಂದಿರುವ ಭಾರತೀಯರಲ್ಲೂ ಕಿಬ್ಬೊಟ್ಟೆಯ ಭಾಗದಲ್ಲಿ ಅತಿಯಾದ ಕೊಬ್ಬು ಶೇಖರಣೆಯಾಗುತ್ತಿದ್ದು, ಇದು ಇನ್ಸುಲಿನ್ ಪ್ರತಿರೋಧದಂತಹ ಸಮಸ್ಯೆಗಳಿಗೆ ದಾರಿಯಾಗುತ್ತಿದೆ.

ಮದ್ಯಪಾನ ಮಾಡದವರಲ್ಲಿಯೂ ಈ ಕಾಯಿಲೆ ವ್ಯಾಪಕವಾಗಿ ಕಂಡುಬರುತ್ತಿರುವುದು ಸಂಶೋಧಕರಲ್ಲಿ ಕಳವಳ ಮೂಡಿಸಿದೆ.

ಈ ಸಂಶೋಧನೆಯನ್ನು 2023 ರ ಡಿಸೆಂಬರ್‌ನಿಂದ 2024 ರ ಜೂನ್ ಅವಧಿಯಲ್ಲಿ ದೇಶದ 27 ಪ್ರಮುಖ ನಗರಗಳಲ್ಲಿ ನಡೆಸಲಾಗಿದ್ದು, ಶೇಕಡಾ 38.9 ರಷ್ಟು ಜನರಲ್ಲಿ ಮದ್ಯಪಾನಕ್ಕೆ ಸಂಬಂಧವಿಲ್ಲದ ‘ಮೆಟಬಾಲಿಕ್ ಡಿಸ್ಫಂಕ್ಷನ್-ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (MASLD) ಇರುವುದು ದೃಢಪಟ್ಟಿದೆ.

ಸಾಮಾನ್ಯವಾಗಿ ಶೇಕಡಾ 1.7 ರಷ್ಟು ಜನರಲ್ಲಿ ಕಂಡುಬರುವ ಯಕೃತ್ತು ಗಟ್ಟಿಯಾಗುವ (ಫೈಬ್ರೋಸಿಸ್) ಅಪಾಯವು, MASLD ಪೀಡಿತರಲ್ಲಿ ಶೇಕಡಾ 6.3 ರಷ್ಟು ಅಂದರೆ ಸುಮಾರು ನಾಲ್ಕು ಪಟ್ಟು ಅಧಿಕವಾಗಿದೆ. ಒಟ್ಟಾರೆಯಾಗಿ ಶೇಕಡಾ 2.4 ರಷ್ಟು ಭಾರತೀಯರಲ್ಲಿ ಯಕೃತ್ತಿನ ಹಾನಿಯ ಆರಂಭಿಕ ಲಕ್ಷಣಗಳು ಗೋಚರಿಸಿವೆ.

ಈ ಸಮಸ್ಯೆಯನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆಯಲಾಗುತ್ತಿದ್ದು, ಲಿವರ್ ಗಂಭೀರವಾಗಿ ಹಾನಿಗೊಳಗಾಗುವವರೆಗೂ ರೋಗಿಗಳಿಗೆ ಇದರ ಅರಿವಾಗುವುದಿಲ್ಲ. ಈ ಕಾಯಿಲೆಯು ಕೇವಲ ಯಕೃತ್ತಿಗೆ ಸೀಮಿತವಾಗದೆ ಟೈಪ್-2 ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು. ‌

ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಲಿವರ್ ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರ್‌ಗೆ ತಿರುಗುವ ಅಪಾಯವಿದೆ. ಬೊಜ್ಜು, ಮಧುಮೇಹ ಮತ್ತು ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ಸಮಸ್ಯೆಗಳೇ ಈ ಕಾಯಿಲೆಗೆ ಪ್ರಮುಖ ಮೂಲವಾಗಿದ್ದು, ಉತ್ತಮ ಆಹಾರ ಪದ್ಧತಿ ಹಾಗೂ ನಿಯಮಿತ ವ್ಯಾಯಾಮದ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page