Thursday, June 20, 2024

ಸತ್ಯ | ನ್ಯಾಯ |ಧರ್ಮ

ನ್ಯಾಯಾಧೀಶರ ಪೀಠಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳು, ಮಹಿಳೆಯರು ಕಾಣದಿರಲು CLAT ಪರೀಕ್ಷೆಯಲ್ಲಿನ ತೊಡಕುಗಳು ಕಾರಣ – ಸಿಜೆಐ ಚಂದ್ರಚೂಡ್

ಹೊಸದೆಹಲಿ: ದೇಶದ ಕೋರ್ಟುಗಳಲ್ಲಿ ನ್ಯಾಯಾಧೀಶರ ಹುದ್ದೆಗಳಲ್ಲಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಂದ ಬಂದವರ ಪ್ರಾತಿನಿಧ್ಯದ ಕೊರತೆಗೆ ವಕೀಲ ವೃತ್ತಿಗೆ ಪ್ರವೇಶಿಸಲು ಇರುವ ಹಲವು ತೊಡಕುಗಳು ಕಾರಣ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ವಕೀಲ ವೃತ್ತಿಗೆ ಪ್ರವೇಶಿಸುವ ಸಮಯದಲ್ಲಿ ರಚನಾತ್ಮಕ ಅಡೆತಡೆಗಳಿವೆ. ಉದಾಹರಣೆಗೆ, CLAT (ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತದೆ, ಇದರಿಂದಾಗಿ ಅನುಕೂಲ ಹೊಂದಿರುವ ಸಮುದಾಯಗಳಿಂದ ಬಂದ ಸಮುದಾಯಗಳಿಗೆ ಸೇರಿದವರೇ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಾದದಲ್ಲಿ ಮಾತನಾಡಿದ ಅವರು ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರ ಹಂಚಿಕೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಸರ್ಕಾರಗಳು ತಮ್ಮ ವಿರುದ್ಧ ತೀರ್ಪೊಂದು ಬಂದಾಗ ಅವು ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಅವರು ಅದಕ್ಕೆ ಪೂರಕವಾಗಿ ಕಾನೂನಿನಲ್ಲಿ ಅವಕಾಶ ಪಡೆಯಲು ಕಾಯ್ದೆಗಳನ್ನು ತರಬಹುದು” ಎಂದು ಹೇಳಿದರು.

“ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಧಿಕಾರವನ್ನು ವಿಭಜಿಸುವ ತೆಳ್ಳನೆಯ ಗೆರೆಯೊಂದು ಇರುತ್ತದೆ. ಎರಡೂ ಅಂಗಗಳು ಈ ಗೆರೆಯ ನಡುವೆ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸರ್ಕಾರ ಜನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಶಾಸನಗಳನ್ನು ಮಾಡುತ್ತದೆ. ಮತ್ತು ಜನರ ಪರ-ವಿರೋಧಗಳಿಗೆ ಸ್ಪಂದಿಸುತ್ತದೆ. ಆದರೆ ನ್ಯಾಯಾಂಗ ಜನರ ಅಭಿಪ್ರಾಯದ ಕಡೆ ಗಮನ ಕೊಡುವುದಿಲ್ಲ. ನ್ಯಾಯಾಧೀಶರು ತೀರ್ಪು ನೀಡುವಾಗ ಜನರು ಯಾವ ಅಭಿಪ್ರಾಯ ಹೊಂದುತ್ತಾರೆನ್ನುವದರ ಕಡೆ ಗಮನವಿಟ್ಟು ತೀರ್ಪು ಕೊಡುವುದಿಲ್ಲ. ಆದರೆ ಸರ್ಕಾರವೊಂದು ಜನಾಭಿಪ್ರಾಯಕ್ಕೆ ತಲೆ ಬಾಗಿ ಕೆಲಸ ಮಾಡುತ್ತದೆ. ಒಂದು ಸರ್ಕಾರಕ್ಕೂ ಹಾಗೂ ನ್ಯಾಯಾಂಗಕ್ಕೂ ಇರುವ ಮುಖ್ಯವಾದ ವ್ಯತ್ಯಾಸವೇ ಅದು” ಎಂದು ಅವರು ಅಭಿಪ್ರಾಯಪಟ್ಟರು.

“ನ್ಯಾಯಾಧೀಶರು ಜನರಿಂದ ಆಯ್ಕೆಯಾಗದಿರುವುದು ನ್ಯಾಂಯಂಗದಲ್ಲಿನ ದೋಷವಲ್ಲ, ಅದೇ ಅದರ ಶಕ್ತಿ. ನ್ಯಾಯಾಧೀಶರು ಜನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ಕೊಡುವುದಿಲ್ಲ. ಅವರಿಗೆ ತೀರ್ಪು ಕೊಡುವಾಗ ಮುಖ್ಯವಾಗುವುದು ಸಂವಿಧಾನ. ಸಂವಿಧಾನದ ನೀತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ತೀರ್ಪು ಕೊಡುತ್ತಾರೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ನ್ಯಾಯಾಂಗದಲ್ಲಿ ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆಯಲು ವಕೀಲಿ ಕಲಿಕೆಯ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ, ಅದು ಎಲ್ಲರಿಗೂ ಎಟುಕುವಂತಿರಬೇಕು” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು