Home ದೇಶ ಯುದ್ಧ ಭೀತಿ: ಗಗನ ತಲುಪಲಿದೆ ಅಡುಗೆ ಎಣ್ಣೆ ಹಾಗೂ ಡ್ರೈ ಫ್ರೂಟ್ಸ್‌ ಬೆಲೆ!

ಯುದ್ಧ ಭೀತಿ: ಗಗನ ತಲುಪಲಿದೆ ಅಡುಗೆ ಎಣ್ಣೆ ಹಾಗೂ ಡ್ರೈ ಫ್ರೂಟ್ಸ್‌ ಬೆಲೆ!

0

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಭಾರತೀಯರ ಅಡುಗೆಮನೆಯ ಮೇಲೆ ನೇರ ಪ್ರಭಾವ ಬೀರಲಾರಂಭಿಸಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗಳಿಂದಾಗಿ ನಿತ್ಯೋಪಯೋಗಿ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ವಿಶೇಷವಾಗಿ ಪುಣೆಯಂತಹ ನಗರಗಳಲ್ಲಿ ಸಗಟು ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಲೀಟರ್‌ಗೆ 3-4 ರೂಪಾಯಿಗಳಷ್ಟು ಏರಿಕೆಯಾಗಿದೆ. ಯುದ್ಧವು ದೀರ್ಘಕಾಲ ಮುಂದುವರಿದಲ್ಲಿ ಸಾರಿಗೆ ವೆಚ್ಚದ ಏರಿಕೆಯಿಂದಾಗಿ ಎಲ್ಲಾ ರಾಜ್ಯಗಳಲ್ಲಿ ಎಣ್ಣೆ ಬೆಲೆಗಳು ಶೇ. 10-15 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯದ ಸುಮಾರು ಶೇ. 60 ರಷ್ಟು ಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಸೋಯಾಬೀನ್ ಮತ್ತು ಪಾಮ್ ಆಯಿಲ್ ಅನ್ನು ಬಯೋಡೀಸೆಲ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳಿಸಲಾಗುತ್ತಿದೆ. ಇದು ಆಹಾರಕ್ಕಾಗಿ ಬಳಸುವ ಎಣ್ಣೆಯ ಪೂರೈಕೆಯಲ್ಲಿ ಕೊರತೆಯನ್ನುಂಟು ಮಾಡಿದೆ. ಪ್ರಸ್ತುತ ಪಾಮ್ ಆಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಲೀಟರ್‌ಗೆ 5ರಿಂದ 10 ರೂಪಾಯಿಗಳಷ್ಟು ಹೆಚ್ಚಾಗಿದ್ದು, ಹಬ್ಬದ ಸೀಸನ್ ಹತ್ತಿರ ಬರುತ್ತಿರುವುದರಿಂದ ಈ ದರಗಳು ಮತ್ತಷ್ಟು ಏರುವ ಆತಂಕ ಎದುರಾಗಿದೆ.

ಒಣಹಣ್ಣುಗಳ (ಡ್ರೈ ಫ್ರೂಟ್ಸ್) ಬೆಲೆಯ ಮೇಲೆಯೂ ಈ ಯುದ್ಧದ ಬಿಸಿ ತಟ್ಟಿದೆ. ಭಾರತಕ್ಕೆ ಅತಿ ಹೆಚ್ಚು ಒಣಹಣ್ಣುಗಳು ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಆಮದಾಗುತ್ತಿದ್ದು, ಪ್ರಸ್ತುತ ಹಡಗುಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಖರ್ಜೂರದ ಬೆಲೆ ಶೇ. 10-20 ರಷ್ಟು ಹೆಚ್ಚಾಗಿದೆ. ಬಾದಾಮಿ ಮತ್ತು ಪಿಸ್ತಾ ಬೆಲೆಗಳು ಕೂಡ ಶೇ. 5-8 ರಷ್ಟು ಏರಿಕೆಯಾಗಿವೆ. ಗುಜರಾತ್‌ನ ಶೇಂಗಾ ಎಣ್ಣೆ ಮಾರುಕಟ್ಟೆ ಮತ್ತು ಮಧ್ಯಪ್ರದೇಶ, ರಾಜಸ್ಥಾನದ ಸೋಯಾಬೀನ್ ಮಾರುಕಟ್ಟೆಗಳಲ್ಲಿಯೂ ಅಂತರಾಷ್ಟ್ರೀಯ ಬೆಲೆಗಳ ಏರಿಳಿತಕ್ಕೆ ಅನುಗುಣವಾಗಿ ಅಸ್ಥಿರತೆ ಕಂಡುಬರುತ್ತಿದೆ.

You cannot copy content of this page

Exit mobile version