Home ಆಟೋಟ ಫಿಫಾ ವಿಶ್ವಕಪ್ 2026: ಮೂರು ದೇಶಗಳ ಆತಿಥ್ಯದಲ್ಲಿ ಅದ್ಧೂರಿ ಚಾಲನೆ

ಫಿಫಾ ವಿಶ್ವಕಪ್ 2026: ಮೂರು ದೇಶಗಳ ಆತಿಥ್ಯದಲ್ಲಿ ಅದ್ಧೂರಿ ಚಾಲನೆ

0

ಮೆಕ್ಸಿಕೊ ಸಿಟಿ: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಕಾರ್ಯಕ್ರಮವೆನಿಸಿದ ಫಿಫಾ ವಿಶ್ವಕಪ್‌ನ 23ನೇ ಆವೃತ್ತಿಗೆ ಗುರುವಾರ ರಾತ್ರಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮೆಕ್ಸಿಕೊ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭ ವಿಶ್ವದಾದ್ಯಂತ ಕೋಟ್ಯಂತರ ಫುಟ್‌ಬಾಲ್ ಪ್ರೇಮಿಗಳ ಮನ ಗೆದ್ದಿತು.

ಆತಿಥೇಯ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆದ ಈ ಸಮಾರಂಭದಲ್ಲಿ ವಿಶ್ವ ವಿಖ್ಯಾತ ಗಾಯಕಿ ಶಕೀರಾ ಮತ್ತು ಅಂತರರಾಷ್ಟ್ರೀಯ ಸಂಗೀತ ತಾರೆ ಬರ್ನಾ ಬಾಯ್ ಅವರು ಈ ವರ್ಷದ ಅಧಿಕೃತ ವಿಶ್ವಕಪ್ ಗೀತೆ ‘ಡೈ ಡೈ’ ಅನ್ನು ಹಾಡಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಮೆಕ್ಸಿಕೊದ ಖ್ಯಾತ ಗಾಯಕರಾದ ಅಲೆಜಾಂಡ್ರೊ ಫೆರ್ನಾಂಡೆಜ್, ಬೆಲಿಂಡಾ ಮತ್ತು ಲಿಲಾ ಡೌನ್ಸ್, ವೆನಿಜುವೆಲಾದ ಡ್ಯಾನಿ ಓಷಿಯನ್ ಹಾಗೂ ಕೊಲಂಬಿಯಾದ ಜೆ.ಬಲ್ವಿನ್ ಸೇರಿ ಹಲವು ಕಲಾವಿದರು ರೋಚಕ ಪ್ರದರ್ಶನ ನೀಡಿದರು.

ಆಕರ್ಷಕ ನೃತ್ಯ, ವರ್ಣರಂಜಿತ ಲೈಟ್ ಶೋ, ನೂರಾರು ಡ್ರೋನ್‌ಗಳ ಮೂಲಕ ರಚಿಸಲಾದ ಅದ್ಭುತ ಆಕಾಶ ಚಿತ್ರಗಳು ಹಾಗೂ ಮೆಕ್ಸಿಕೊದ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮನ ತಣಿಸಿದವು.

ಈ ಬಾರಿ ವಿಶ್ವಕಪ್‌ಗೆ ವಿಶೇಷತೆಯೊಂದಿದೆ.. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಎಂಬ ಮೂರು ರಾಷ್ಟ್ರಗಳು ಒಟ್ಟಾಗಿ ಆತಿಥ್ಯ ವಹಿಸುತ್ತಿರುವ ಕಾರಣ, ಮೂರು ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ಆಯೋಜಿಸಲಾಗಿವೆ. ಮೆಕ್ಸಿಕೊ ಸಮಾರಂಭದ ಬೆನ್ನಲ್ಲೇ ಶುಕ್ರವಾರ ಕೆನಡಾದ ಟೊರೊಂಟೊದಲ್ಲಿರುವ ಬಿಎಮ್‌ಒ ಫೀಲ್ಡ್ ಕ್ರೀಡಾಂಗಣದಲ್ಲಿ ಮತ್ತೊಂದು ಸಮಾರಂಭ ನಡೆಯಲಿದ್ದು, ಅಮೆರಿಕದ ಲಾಸ್ ಏಂಜಲೀಸ್‌ನ ಸೋಫಿ ಕ್ರೀಡಾಂಗಣದಲ್ಲಿ ಅಮೆರಿಕ-ಪನಾಮ ಪಂದ್ಯಕ್ಕೂ ಮುನ್ನ ಅಂತಿಮ ಉದ್ಘಾಟನಾ ಸಮಾರಂಭ ನಡೆಯಲಿದೆ.

ಶುಕ್ರವಾರ ನಡೆಯಲಿರುವ ಪ್ರಮುಖ ಪಂದ್ಯಗಳಲ್ಲಿ ಬೆಳಗ್ಗೆ 7:30ಕ್ಕೆ ದಕ್ಷಿಣ ಕೊರಿಯಾ ಮತ್ತು ಚೆಕ್ ಗಣರಾಜ್ಯ ಮುಖಾಮುಖಿಯಾಗಲಿದ್ದರೆ, ರಾತ್ರಿ 12:30ಕ್ಕೆ ಕೆನಡಾ ಮತ್ತು ಬೋಸ್ನಿಯಾ ಮೈದಾನಕ್ಕಿಳಿಯಲಿವೆ.

ಈ ಆವೃತ್ತಿಯ ವಿಶ್ವಕಪ್‌ನ ಅಧಿಕೃತ ಚೆಂಡಿನ ಹೆಸರು ಟ್ರಿಯೋಂಡಾ. ಅಡಿಡಾಸ್ ತಯಾರಿಸಿದ ಈ ಚೆಂಡಿನ ಹೆಸರು ವಿಶೇಷವಾಗಿದೆ. ಅದರಂತೆ ಇಂಗ್ಲಿಷ್‌ನ ‘ತ್ರಿ’ (ಮೂರು) ಮತ್ತು ಸ್ಪಾನಿಷ್‌ನ ‘ಒಂಡಾ’ (ಅಲೆ) ಸೇರಿ ‘ಮೂರು ಅಲೆಗಳು’ ಎಂಬ ಅರ್ಥ ನೀಡುತ್ತದೆ. ಆತಿಥೇಯ ದೇಶಗಳನ್ನು ಪ್ರತಿನಿಧಿಸುವ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳ ಅಲೆಯ ವಿನ್ಯಾಸ ಈ ಚೆಂಡಿಗೆ ವಿಶಿಷ್ಟ ಗುರುತಾಗಿದೆ.

You cannot copy content of this page

Exit mobile version