Home ಸಿನಿಮಾ ಫಿಲಂಫೇರ್‌ 2022 ಪ್ರಶಸ್ತಿ ಘೋಷಣೆ: ಪುನೀತ್ ರಾಜ್‍ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಫಿಲಂಫೇರ್‌ 2022 ಪ್ರಶಸ್ತಿ ಘೋಷಣೆ: ಪುನೀತ್ ರಾಜ್‍ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

0

ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಷಯವೇನೆಂದರೆ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರತಿಷ್ಟಿತ ಫಿಲಂಪೇರ್‌ ಸೌತ್‌ 2022 ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ವಿಭಾಗದಲ್ಲಿ ಆಕ್ಟ್‌ 1978 ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ, ರಾಜ್‌ ಬಿ ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬಡವಾ ರ್ಯಾಸ್ಕರಲ್‌ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್‌ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ, ಆಕ್ಟ್‌ 1978 ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ, ಅದೇ ಸಿನಿಮಾದ ನಟನೆಗಾಗಿ ಬಿ. ಸುರೇಶ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರತ್ನನ್‌ ಪ್ರಪಂಚ ಸಿನಿಮಾದಲ್ಲಿನ ನಟೆನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿವೆ.

ಅಲ್ಲದೇ ವಾಸುಕಿ ವೈಭವ್‌ ಅವರಿಗೆ ಅತ್ಯುತ್ತಮ ಮ್ಯೂಸಿಕ್‌ ಅಲ್ಬಂ ಪ್ರಶಸ್ತಿ (ಬಡವಾ ರ್ಯಾಸ್ಕಲ್), ಜಯಂತ್‌ ಕಾಯ್ಕಿಣಿ ಅವರಿಗೆ ಅತ್ಯುತ್ತಮ ಗೀತ ರಚನೆ (ಲಿರಿಕ್ಸ್) ಪ್ರಶಸ್ತಿ (ತೇಲದು ಮುಗಿಲೇ – ಆಕ್ಟ್‌ 1978), ರಘು ದೀಕ್ಷಿತ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ (ಮಳೆಯೇ ಮಳೆಯೇ ಮಳೆಯೇ- ನಿನ್ನ ಸನಿಹಕೆ), ಅನುರಾಧಾ ಭಟ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿವೆ. ಹಾಗೆಯೇ ವಿಮರ್ಶಕರ ಅತ್ಯುತ್ತಮ ನಟಿಯಾಗಿ ಅಮೃತಾ ಅಯ್ಯಂಗಾರ್‌, ಮತ್ತು ಮಿಲನಾ ನಾಗರಾಜ್‌, ವಿಮರ್ಶಕರ ಅತ್ಯುತ್ತಮ ನಟರಾಗಿ ಡಾರ್ಲಿಂಗ್‌ ಕೃಷ್ಣ (ಲವ್‌ ಮಾಕ್ಟೇಲ್) ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಕೋರಿಯೋಗ್ರಫಿ ಪ್ರಶಸ್ತಿಗೆ ಯುವರತ್ನ ಸಿನಿಮಾದ ನೃತ್ಯ ಸಂಯೋಜನೆಗಾಗಿ ಜಾನಿ ಮಾಸ್ಟರ್‌ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ರತ್ನನ್‌ ಪ್ರಪಂಚ ಸಿನಿಮಾಕ್ಕಾಗಿ ಶ್ರೀಷ ಕೂದುವಳ್ಳಿ ಪಡೆದಿದ್ದಾರೆ. ಅತ್ಯುತ್ತಮ ಡೆಬ್ಯು ಫೀಮೇಲ್‌ ಪ್ರಶಸ್ತಿಯನ್ನು ಧನ್ಯ ರಾಮ್‌ಕುಮಾರ್‌ ನಿನ್ನ ಸನಿಹಕೆ ಚಿತ್ರಕ್ಕೆ ಪಡೆದಿದ್ದಾರೆ.

ಈ ಪ್ರಶಸ್ತಿಗಳನ್ನು ಕಾಮಾರ್‌ ಫ್ಯಾಕ್ಟರಿ ಸಹಯೋಗದಲ್ಲಿ ನೆನ್ನೆ ತಡರಾತ್ರಿಯವರೆಗೆ ಬೆಂಗಳೂರಿನಲ್ಲಿ ನಡೆದ 67ನೇ ಫಿಲಂಫೇರ್‌ ಅವಾರ್ಡ್ಸ್‌ 2022 ಕಾರ್ಯಕ್ರಮದಲ್ಲಿ ಘೋಷಿಸಲಾಯ್ತು. ಫಿಲಂಫೇರ್‌ ಸೌತ್‌ ಪ್ರಶಸ್ತಿಗಳನ್ನು ದಕ್ಷಿಣ ಭಾರತದ ಕನ್ನಡ, ತೆಲುಗು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ನೀಡಲಾಗುತ್ತದೆ. ಈ ಬಾರಿ 2020 ಮತ್ತು 2021ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಮತ್ತು ಪ್ರತಿ ಭಾಷೆಯ ಸಿನಿಮಾಗಳಿಗೆ ನೀಡಲಾಗಿದೆ.

ದಕ್ಷಿಣ ಭಾರತದ ಸಿನಿಮಾಗಳನ್ನು ಮತ್ತು ಸಿನಿರಂಗದ ಪ್ರತಿಭೆಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು 1976ರಿಂದ ಫಿಲಂಫೇರ್‌ ಮ್ಯಾಗನೀನ್‌ ವತಿಯಿಂದ ನೀಡಲಾಗುತ್ತದೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ, ಮೃಣಾಲ್‌ ಥಾಕೂರ್‌, ಕೃತಿ ಶೆಟ್ಟಿ, ಸಾನಿಯಾ ಐಯ್ಯಪ್ಪನ್‌ ಮತ್ತು ಐಂದ್ರಿತಾ ರೇ ಅವರ ನೃತ್ಯ ಪ್ರದರ್ಶನಗಳು ಸಭಿಕರ ಮನಸೂರೆಕೊಂಡವು.
ಕನ್ನಡದಂತೆ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪುಷ್ಪಾ- ದ ರೈಸ್‌ ಸಿನಿಮಾದ ಪಾಲಾಗಿದೆ. ಇದೇ ಸಿನಿಮಾದ ನಿರ್ದೇಶನಕ್ಕಾಗಿ ಸುಕುಮಾರ್‌ ಬಂಡರೆಡ್ಡಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಲವ್‌ ಸ್ಟೋರಿ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ತಮಿಳಿನಲ್ಲಿ ಬಹುಚರ್ಚಿತ ಜೈ ಭೀಮ್‌ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಸೂರರಾಯಿ ಪೊಟ್ಟೂರು ಸಿನಿಮಾ ನಿರ್ದೇಶಕಿ ಸುಧಾ ಕೊಂಗಾರಾ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನೂ ಅದೇ ಚಿತ್ರದಲ್ಲಿ ನಾಯಕ ಪಾತ್ರದ ಅಭಿನಯಕ್ಕಾಗಿ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೈ ಭೀಮ್‌ ಸಿನಿಮಾದಲ್ಲಿನ ನಟನೆಗಾಗಿ ಲಿಜ್ಮೋಲ್‌ ಜೋಸ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಮಲಯಾಳಂ ವಿಭಾಗದಲ್ಲಿ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸಿ ಪಡೆದುಕೊಂಡಿದೆ. ತಿಂಕಳಾಚ್ಚಾ ನಿಶ್ಚಯಂ ಸಿನಿಮಾ ನಿರ್ದೇಶಕ ಸೆನ್ನಾ ಹೆಗ್ಡೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಿಜು ಮೆನನ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ನಟನೆಗಾಗಿ ಪಡೆದಿದ್ದಾರಲ್ಲದೆ ನಿಮಿಷಾ ಸಜಯನ್‌ ಅವರು ದ ಗ್ರೇಟ್‌ ಇಂಡಿಯನ್‌ ಸಿನಿಮಾದಲ್ಲಿನ ತಮ್ಮ ನಟನೆಗೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಬಂದ ಪ್ರಶಸ್ತಿಗಳು

ಉತ್ತಮ ನಟ -ಧನಂಜಯ ( ಬಡವ ರಾಸ್ಕಲ್ )
ಉತ್ತಮ ನಟಿ -ಯಜ್ಞಾ ಶೆಟ್ಟಿ ( ಆಕ್ಟ್ 1978 )
ಉತ್ತಮ ಸಿನಿಮಾ- ಆಕ್ಟ್ 1978
ಉತ್ತಮ ನಿರ್ದೇಶಕ-ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ )
ಉತ್ತಮ ಪೋಷಕ ನಟ- ಬಿ ಸುರೇಶ ( ಆಕ್ಟ್ 1978 )
ಉತ್ತಮ ಪೋಷಕ ನಟಿ-ಉಮಾಶ್ರೀ ( ರತ್ನನ್ ಪ್ರಪಂಚ )
ಉತ್ತಮ ಮ್ಯೂಸಿಕ್ ಆಲ್ಬಮ್ -ವಾಸುಕಿ ವೈಭವ್ (ಬಡವ ರಾಸ್ಕಲ್ )
ಉತ್ತಮ ಸಾಹಿತ್ಯ-ಜಯಂತ್ ಕಾಯ್ಕಿಣಿ (ತೇಲಾಡು ಮುಗಿಲೆ- ಆಕ್ಟ್ 1978 )
ಉತ್ತಮ ಹಿನ್ನಲೆಗಾಯಕ-ರಘು ದೀಕ್ಷಿತ್ (ಮಳೆ ಮಳೆಯೇ ಹಾಡು) ( ನಿನ್ನ ಸನಿಹಕೆ )
ಉತ್ತಮ ಹಿನ್ನಲೆಗಾಯಕಿ-ಅನುರಾಧಾ ಭಟ್ ( ಧೀರ ಸಮ್ಮೋಹಗಾರ ) ಬಿಚ್ಚುಗತ್ತಿ ಸಿನಿಮಾ
ಉತ್ತಮ ಛಾಯಾಗ್ರಹಣ-ಶ್ರೀಶ ಕುಡುವಲ್ಲಿ ( ರತ್ನನ್ ಪ್ರಪಂಚ )
ಉತ್ತಮ ಕೊರಿಯೋಗ್ರಫಿ-ಜಾನಿ ಮಾಸ್ಟರ್ ( ಯುವರತ್ನ )
ಜೀವಮಾನ ಸಾಧನೆ ಪ್ರಶಸ್ತಿ-ಪುನೀತ್ ರಾಜ್‌ಕುಮಾರ್

You cannot copy content of this page

Exit mobile version