Thursday, October 30, 2025

ಸತ್ಯ | ನ್ಯಾಯ |ಧರ್ಮ

ಕುಟುಂಬದ ಆರ್ಥಿಕ ಭದ್ರತೆ ಮಹಿಳೆಯರ ಪಾತ್ರ ಪ್ರಮುಖ – ಕೆನರಾ ಎಂ. ಹರೀಶ್

ಹಾಸನ : ಸಮಾಜದಲ್ಲಿ ಕುಟುಂಬದೊಳಗೆ ಉಳಿತಾಯದ ಚಿಂತನೆ ಬಂದರೆ ಆ ಕುಟುಂಬವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತದೆ. ಈ ಚಿಂತನೆ ಹೆಚ್ಚು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಕೆನರಾ ಬ್ಯಾಂಕ್ ಡಿಜಿಎಂ ಎಂ. ಹರೀಶ್ ಅಭಿಪ್ರಾಯಪಟ್ಟರು.ತಾಲೂಕಿನ ಅಂಬೂಗ ಗ್ರಾಮದಲ್ಲಿರುವ ಅಂಭೇಡ್ಕರ್ ಭವನದಲ್ಲಿ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಚೇರಿ ಹಾಸನ ಹಾಗೂ ಅಂಬೂಗ ಶಾಖೆ ವತಿಯಿಂದ ಬುಧವಾರ ಆಯೋಜಿಸಲಾದ ಆರ್ಥಿಕ ಸೇವೆಗಳ ಸಾಮಾಜಿಕ ಭದ್ರತೆಗಳ ಯೋಜನೆಗಳ ಸ್ಯಾಚರೇಶನ್ ಅಭಿಯಾನ ಮತ್ತು ಖಾತೆಗಳಿಗೆ ರೀ-ಕೆವೈಸಿ ನವೀಕರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಉಳಿತಾಯದ ವಿಷಯದಲ್ಲಿ ಮಹಿಳೆಯರು ಸದಾ ಮುಂಚೂಣಿಯಲ್ಲಿದ್ದಾರೆ. ಒಂದು ಕುಟುಂಬದಲ್ಲಿ ಮಹಿಳೆ ಉಳಿತಾಯ ಮಾಡಲು ಪ್ರಾರಂಭಿಸಿದರೆ, ಆ ಕುಟುಂಬ ಆರ್ಥಿಕವಾಗಿ ಬಲವಾಗುತ್ತದೆ. ಈ ದೃಷ್ಟಿಯಿಂದ ಕೆನರಾ ಬ್ಯಾಂಕ್‌ನಲ್ಲಿ ಅನೇಕ ಉಳಿತಾಯ, ವಿಮೆ ಹಾಗೂ ಸಾಲ ಸೌಲಭ್ಯ ಯೋಜನೆಗಳು ಲಭ್ಯವಿವೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಆರಂಭಿಸಲು ಅಥವಾ ಸ್ವಂತ ವ್ಯವಹಾರ ನಡೆಸಲು ಸಹಾಯಕವಾಗುವ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸ್ವಸಹಾಯ ಸಂಘಗಳ ಮೂಲಕ ಸುಲಭವಾಗಿ ಸಾಲ ಸಿಗುತ್ತದೆ. ಪಡೆದ ಸಾಲದಿಂದ ದುಡಿದು ಲಾಭ ಗಳಿಸಿ, ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಅದು ನಿಮ್ಮ ಕ್ರೆಡಿಟ್ ಹಿಸ್ತ್ರಿಯನ್ನು ಬಲಪಡಿಸುತ್ತದೆ. ಇದೇ ನಿಜವಾದ ಆರ್ಥಿಕ ಪ್ರಗತಿಯ ದಾರಿ ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಲೀಡ್ ಬ್ಯಾಂಕ್ ಕ್ಷೇತ್ರ ಮ್ಯಾನೇಜರ್ ಲತಾ ಸರಸ್ವತಿ ಅವರು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿವರಿಸಿ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ ಅಡಿ ವರ್ಷಕ್ಕೆ ಕೇವಲ ?೪೩೬ ಪಾವತಿಸಿದರೆ ಆಕಸ್ಮಿಕ ಸಾವು ಸಂಭವಿಸಿದಾಗ ?೨ ಲಕ್ಷ ಪರಿಹಾರ ಸಿಗುತ್ತದೆ. ಇದೇ ರೀತಿಯಲ್ಲಿ ಪ್ರಧಾನಮಂತ್ರಿ ಅಪಘಾತ ವಿಮಾ ಯೋಜನೆಯಡಿ ವರ್ಷಕ್ಕೆ ಕೇವಲ ೨೦ ಪಾವತಿಸಿದರೆ ಅಪಘಾತದಲ್ಲಿ ಸಾವು ಸಂಭವಿಸಿದರೆ ೨ ಲಕ್ಷ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ೧ ಲಕ್ಷ ಪರಿಹಾರ ದೊರೆಯುತ್ತದೆ. ಅಟಲ್ ಪೆನ್ಷನ್ ಯೋಜನೆಯಡಿ ೧೮ ರಿಂದ ೪೦ ವರ್ಷ ವಯಸ್ಸಿನವರು ಪಾಲ್ಗೊಳ್ಳಬಹುದು. ೬೦ ವರ್ಷವಾದ ನಂತರ ಇದರ ಪ್ರಯೋಜನ ದೊರೆಯುತ್ತದೆ. ಇದು ವೃದ್ಧಾಪ್ಯದಲ್ಲಿ ಆರ್ಥಿಕ ಸ್ವಾವಲಂಭನೆಗೆ ದಾರಿ ಮಾಡಿಕೊಡುತ್ತದೆ. ೧೮ ವರ್ಷ ದಾಟಿದ ಮಕ್ಕಳಿಗೂ ಈ ವಿಮೆ ಮಾಡಿಸುವುದು ಪೋಷಕರ ಜವಾಬ್ದಾರಿ ಆಗಬೇಕು ಎಂದು ಹೇಳಿದರು.ಹಾಸನ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ ಮಾತನಾಡಿ, ಜೀವನದಲ್ಲಿ ಉಳಿತಾಯ ಮಾಡಿದರೆ ಭವಿಷ್ಯ ಸುಧಾರಿಸುತ್ತದೆ. ಸರ್ಕಾರದ ವಿಮಾ ಯೋಜನೆಗಳು ಸಂಕಷ್ಟದ ಸಮಯದಲ್ಲಿ ಜೀವಧಾರೆ ಆಗುತ್ತವೆ. ಕೆನರಾ ಬ್ಯಾಂಕ್ ಜನಸೇವೆಯತ್ತ ಬದ್ಧವಾಗಿದ್ದು, ಗ್ರಾಮೀಣ ಜನತೆ ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಎಜಿಎಂ ಆಂಥೋನಿ ರಾಜ್ ಅವರು ಮಾತನಾಡಿ, ನಮ್ಮದು ಗ್ರಾಹಕ ಆಧಾರಿತ ಬ್ಯಾಂಕ್. ಜನರ ಆರ್ಥಿಕ ಸುಸ್ಥಿತಿಗಾಗಿ ನಾವಿರುವ ಸೌಲಭ್ಯಗಳನ್ನು ಉಪಯೋಗಿಸಿದರೆ ಪ್ರತಿಯೊಂದು ಕುಟುಂಬವೂ ಸುರಕ್ಷಿತವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಹಕಿ ಭಾರತಿ ಅವರು ತಮ್ಮ ಅನುಭವ ಹಂಚಿಕೊಂಡು, ನನ್ನ ಮಗನು ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ ವಿಮೆ ಮಾಡಿಸಿದ್ದ. ದುರ್ಭಾಗ್ಯವಶಾತ್ ಅವನು ಇಲ್ಲ, ಆದರೆ ಆ ವಿಮೆಯ ಪ್ರಯೋಜನದಿಂದ ಲಕ್ಷಾಂತರ ರೂಪಾಯಿ ಸಿಕ್ಕಿದ್ದು, ಅದು ನಮಗೆ ಬಹಳ ನೆರವಾದುದು. ಇದರಿಂದ ವಿಮೆಯ ಮಹತ್ವ ಅರಿವಾಯಿತು ಎಂದು ಭಾವುಕರಾದರು.ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ವಿಮಾ ಯೋಜನೆಗಳ ಅಡಿ ಪ್ರಯೋಜನ ಪಡೆದವರಿಗೆ ಸೌಲಭ್ಯ ಪತ್ರಗಳನ್ನು ವಿತರಿಸಲಾಯಿತು. ಕೆಲವರಿಗೆ ಸಾಲದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಡಿವಿಜನಲ್ ಮ್ಯಾನೇಜರ್ ಸಂದೀಪ್ ಸಿಂಗ್, ಅಂಬೂಗ ಶಾಖೆ ವ್ಯವಸ್ಥಾಪಕ ಬಿ.ಕೆ. ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ತುಳಸಿರಾಂ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page