Friday, October 10, 2025

ಸತ್ಯ | ನ್ಯಾಯ |ಧರ್ಮ

ಉತ್ತರ ಪ್ರದೇಶದಲ್ಲಿ ಸಾಕ್ಷಿಗೆ ಬೆದರಿಕೆ; ‘ಲಖೀಂಪುರ’ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತಿತರ ವಿರುದ್ಧ ಎಫ್‌ಐಆರ್

ದೆಹಲಿ: ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರ ಅಕ್ರಮಗಳು ಮಿತಿಮೀರುತ್ತಿವೆ. ಹಿಂಸಾಚಾರ ನಡೆಸುವುದು ಮಾತ್ರವಲ್ಲದೆ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ. ಲಖೀಂಪುರ ಖೇರಿ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ, ಅವರ ಪುತ್ರ ಆಶೀಶ್ ಮಿಶ್ರಾ ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಯುಪಿ ಪೊಲೀಸರು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

2021ರ ಅಕ್ಟೋಬರ್ 3 ರಂದು ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಆಶೀಶ್ ಮಿಶ್ರಾ ಮತ್ತು ಆತನ ಸಹಚರರು ಕಾರು ಹರಿಸಿ ಹಿಂಸಾಚಾರ ನಡೆಸಿದ್ದರು. ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘೋರ ಕೃತ್ಯ ನಡೆದಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದರು.

ಸಾಕ್ಷಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ ಮತ್ತು ಈ ಕುರಿತು ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಪದುವಾ ಪೊಲೀಸ್ ಠಾಣೆಯಲ್ಲಿ ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.

ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಾಕ್ಷಿ ಬಲ್ಜಿಂದರ್ ಸಿಂಗ್ ಅವರು ವಾಸಿಸುತ್ತಿರುವ ಪಂಜಾಬ್‌ಗೆ ಡಿಎಸ್‌ಪಿಯನ್ನು ಕಳುಹಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ವಿಚಾರಣೆ ವೇಳೆ ಏನನ್ನೂ ಹೇಳಬಾರದು ಎಂದು ಆರೋಪಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಸಾಕ್ಷಿ ಬಲ್ಜಿಂದರ್ ಸಿಂಗ್ ದೃಢಪಡಿಸಿದ್ದಾರೆ.

ಜನವರಿಯಲ್ಲಿ ಬಲ್ಜಿಂದರ್ ಸಿಂಗ್ ಅವರು ತಮಗೆ ಬೆದರಿಕೆ ಕರೆ ಬಂದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ಮೇಲೆ ಆಗಸ್ಟ್ 7 ರಂದು ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, ಈ ದೂರಿನ ಬಗ್ಗೆ ಪೊಲೀಸರ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿತ್ತು. ಆ ಹಿನ್ನೆಲೆಯಲ್ಲಿ ಯುಪಿ ಪೊಲೀಸರು ಕ್ರಮ ಕೈಗೊಂಡು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page