Friday, June 14, 2024

ಸತ್ಯ | ನ್ಯಾಯ |ಧರ್ಮ

ಜೆರೋಸಾ ಶಾಲಾ ಪ್ರಕರಣದಲ್ಲಿ ಇಬ್ಬರು ಶಾಸಕರ ವಿರುದ್ಧ ಎಫ್‌ಐಆರ್‌: ಸದನದಲ್ಲೂ ಮುಂದುವರೆದ ಗಲಾಟೆ

ಬೆಂಗಳೂರು: ಮಂಗಳೂರಿನ ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಮೇಲಿನ ಹಿಂದೂ ಧರ್ಮದ ಅವಹೇಳನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಇಬ್ಬರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.


ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಂಗಳೂರು ಉತ್ತರ ಶಾಸಕ ಡಾ.ಕೆ.ಭರತ್ ಶೆಟ್ಟಿ, ಶಾಲೆಯಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಿಕ್ಷಕಿ ವಿರುದ್ಧ ದೂರು ನೀಡಿದರೂ ಎಫ್.ಐ.ಆರ್. ದಾಖಲಾಗಿಲ್ಲ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿಯನ್ನು ಶಿಕ್ಷಣ ಸಂಸ್ಥೆ ವಜಾ ಮಾಡಿದಾಗ ವಿದ್ಯಾರ್ಥಿಗಳು ಶಾಲೆ ಎದುರು ‘ಜೈ ಶ್ರೀರಾಮ್ ಘೋಷಣೆ’ ಕೂಗುತ್ತಾರೆ. ಹಾಗೆ ಕೂಗಿದವರ ಮೇಲೆ ಹಾಗೂ ಅಲ್ಲಿದ್ದವರ ಮೇಲೆ ಎಫ್.ಐ.ಆರ್. ದಾಖಲಾಗುತ್ತದೆ. ಇದೆಷ್ಟು ಸರಿ ಎಂದು ಆರೋಪಿಸಿದರು.


ಈ ಘಟನೆ ಶಾಲೆ ಎದುರು ನಡೆದಾಗ ತಾನು ಆ ಸ್ಥಳದಲ್ಲಿ ಇರಲೇ ಇಲ್ಲ. ಆದರೂ ತನ್ನ ಮೇಲೆ ಹೇಗೆ ಎಫ್.ಐ.ಆರ್. ದಾಖಲು ಮಾಡಲಾಗಿದೆ ಎಂದು ಭರತ್‌ ಶೆಟ್ಟಿ ತಿಳಿಸಿದರು.


ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಎಫ್.ಐ.ಆರ್. ಹಾಕಿದ ಕೂಡಲೇ ಯಾರೂ ಅಪರಾಧಿ ಆಗುವುದಿಲ್ಲ. ಶಾಲೆಯಲ್ಲಿನ ವಿಚಾರ ಮುಂದಿಟ್ಟು ಕೋಮು ಭಾವನೆ ಕೆರಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಪ್ರತ್ಯುತ್ತರ ನೀಡಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಘಟನಾ ಸ್ಥಳದಲ್ಲಿ ಇಲ್ಲದೇ ಇದ್ದರೂ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್.ಐ.ಆರ್. ಆಗಿದೆ ಎಂದರೆ ಪೊಲೀಸರಿಗೆ ಮೇಲಿನಿಂದ ಒತ್ತಡ ಹೇರಲಾಗಿದೆ.ಎಫ್.ಐ.ಆರ್. ದಾಖಲಿಸಿರುವ ಇನ್ ಸ್ಪೆಕ್ಟರ್ ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ಶಾಸಕ ಭರತ್ ಶೆಟ್ಟಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಉತ್ತರ ನೀಡುವುದಾಗಿ ಚರ್ಚೆಗೆ ಮಂಗಳ ಹಾಡಿದರು.


ಪ್ರಕರಣದ ಹಿನ್ನೆಲೆ: ಇಲ್ಲಿನ ವೆಲೆನ್ಸಿಯಾದ ಸೇಂಟ್‌ ಜೆರೋಸಾ ಶಿಕ್ಷಕಿ ಪ್ರಭಾ ಪಠ್ಯಪುಸ್ತಕದಲ್ಲಿ ದೇವರ ಅಸ್ತಿತ್ವದ ಕುರಿತು ಇರುವ ರವೀಂದ್ರನಾಥ ಠ್ಯಾಗೋರ್ ಅವರ ಕವಿತೆಯನ್ನು ಬೋಧಿಸುತ್ತಿದ್ದರು. ಕವಿತೆಯಲ್ಲಿರುವಂತೆ ದೇವರು ಗರ್ಭಗುಡಿಯಲ್ಲಿ ಇರುವುದಿಲ್ಲ.

ಒಳ್ಳೆಯದನ್ನು ಬಯಸುವವರ ಹತ್ತಿರ, ಒಳ್ಳೆಯದನ್ನು ಮಾಡುವವರ ಹತ್ತಿರ ದೇವರು ಇರುತ್ತಾನೆ ಎಂದು ಹೇಳುತ್ತಾ ರಾಮನ ಹೆಸರನ್ನು ಪ್ರಸ್ಥಾಪ ಮಾಡಿದ್ದರು. ಇದು ಗೊತ್ತಾಗಿ ಬಿಜೆಪಿಯ ಶಾಸಕರು, ಹಿಂದೂ ಸಂಘಟನೆಗಳ ಮುಖಂಡರು ಕ್ರೈಸ್ತ ಶಾಲೆಯ ಬಳಿ ಸೋಮವಾರ ಪ್ರತಿಭಟನೆ ನಡೆಸಿದ್ದರು. ‘ಜೈ ಶ್ರೀ ರಾಮ್’ ಎಂಬ ಘೋಷಣೆ ಕೂಗಿ ಗಲಾಟೆ ಮಾಡಿದ್ದರು. ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿದ ಹಾಗೂ ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರಲು ಬಯಸಿದ ಆರೋಪದ ಮೇಲೆ ಶಾಸಕ ಡಿ.ವೇದವ್ಯಾಸ ಕಾಮತ್‌ ಮತ್ತು ಡಾ.ವೈ.ಭರತ್‌ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯವಾಹ ಶರಣ್‌ ಪಂಪ್‌ವೆಲ್‌, ಪಾಲಿಕೆ ಸದಸ್ಯರಾದ ಸಂದೀಪ್‌ ಗರೋಡಿ ಮತ್ತು ಭರತ್‌ ಕುಮಾರ್‌ ಸೇರಿದಂತೆ ಹಲವರ ವಿರುದ್ಧ ನಗರದ ದಕ್ಷಿಣ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಿಸಲಾಗಿತ್ತು.


ಅನಿಲ್‌ ಜೆರಾಲ್ಡ್‌ ಲೋಬೊ ಎಂಬುವರು ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಪ್ರಭಾ ಅವರು ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಶಾಲಾ ಆಡಳಿತ ಮಂಡಳಿಯ ಜೊತೆ ವಿಚಾರ ವಿಮರ್ಶೆ ಮಾಡಿಲ್ಲ. ಆದರೂ, ಇದೇ 12 ರಂದು ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಶರಣ್ ಪಂಪ್‌ವೆಲ್, ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ಅವರು ಸೇರಿ ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಶಾಲೆಯ ಗೇಟ್ ಎದುರಿನಲ್ಲಿ ಅಕ್ರಮವಾಗಿ ಸೇರಿ, ‘ಜೈ ಶ್ರೀ ರಾಮ್’ ಎಂಬ ಘೋಷಣೆ ಕೂಗಿ, ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿದ್ದಾರೆ. ಹಿಂದೂ ಮತ್ತು ಕ್ರೈಸ್ತ ಧರ್ಮದ ನಡುವೆ ಗಲಭೆ ಉಂಟಾಗುವಂತೆ ಪ್ರಚೋದಿಸಿ ಮಾತನಾಡಿದ್ದಾರೆ. ಕೋಮು ಸೂಕ್ಷವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಶಾಂತಿ ಮತ್ತು ನೆಮ್ಮದಿಗೆ ಭಂಗ ತರಲು ಬಯಸಿದ್ದಾರೆ’ ಎಂದು ಅನಿಲ್‌ ಲೋಬೊ ಅವರು ದೂರಿನಲ್ಲಿ ವಿವರಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು