ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದ ಅಸ್ಥಿಪಂಜರ ಶೋಧ ಕಾರ್ಯಾಚರಣೆಯ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಾಖಲಾದ ಸೆಕ್ಷನ್‌ಗಳು ಮತ್ತು ಆರೋಪಿಗಳು:
ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್ (ಎ3), ಜಯಂತ್ (ಎ4) ಮತ್ತು ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.
ಹಲ್ಲೆ ಮತ್ತು ಪ್ರತಿಭಟನೆ:
ನಿನ್ನೆ ಸಂಜೆ ಅಸ್ಥಿಪಂಜರ ಶೋಧದ ಮಧ್ಯೆ ಧರ್ಮಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಮೂವರು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಕ್ಯಾಮೆರಾಗಳನ್ನು ಹಾಳು ಮಾಡಲಾಗಿದೆ. ನೇತ್ರಾವತಿಯ ಪಾಂಗಳ ಎಂಬಲ್ಲಿ ಈ ಹಲ್ಲೆ ನಡೆದಿದ್ದು, ತೀವ್ರ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ತಡರಾತ್ರಿ ಪೊಲೀಸ್ ಠಾಣೆಯ ಎದುರು ಪರ-ವಿರೋಧ ಗುಂಪುಗಳವರು ಪ್ರತಿಭಟನೆ ನಡೆಸಿದ್ದಾರೆ.
ಕುಡ್ಲ ರ್ಯಾಂಪೇಜ್‌ನ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲ ರ್ಯಾಂಪೇಜಿನ ಕ್ಯಾಮೆರಾಮನ್‌ಗಳ ಮೇಲೆ ಬುಧವಾರ ಸಂಜೆ ಹಲ್ಲೆ ನಡೆಸಲಾಗಿದೆ.