Friday, January 23, 2026

ಸತ್ಯ | ನ್ಯಾಯ |ಧರ್ಮ

ದರ್ಗಾ ಕಡೆಗೆ ಬಾಣದ ಸನ್ನೆ, ಹಿಂದೂ ನಾಯಕಿ ಸೇರಿ ಹಲವರ ವಿರುದ್ಧ ಎಫ್ಐಆರ್

ಬೆಳಗಾವಿ: ಶೋಭಾ ಯಾತ್ರೆ ವೇಳೆ ಹಿಂದೂ ನಾಯಕಿಯೊಬ್ಬರು ದರ್ಗಾ ಬಳಿ ಬಾಣ ಬಿಟ್ಟಂತೆ ಸನ್ನೆ ಮಾಡಿದ  ಘಟನೆ ಬೆಳಗಾವಿಯ (belagavi) ಮಚ್ಚೆ ಗ್ರಾಮದ ಸಮೀಪ ನಡೆದಿದ್ದು, ಈ ಸಂಬಂಧ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಖಂಡ ಹಿಂದೂ ಸಮ್ಮೇಳನದ ಅಂಗವಾಗಿ ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿ ಕಳೆದ ರಾತ್ರಿ (ಜ.18) ಆಯೋಜಿಸಿದ್ದ ಶೋಭಾ ಯಾತ್ರೆ ವೇಳೆ ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಹಿಂದೂ ನಾಯಕಿ ಹರ್ಷಿತಾ ಠಾಕೂರ ಸೇರಿದಂತೆ ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ಮಚ್ಚೆ ಗ್ರಾಮದಲ್ಲಿ ನಡೆಯಲಿದ್ದ ಅಖಂಡ ಹಿಂದೂ ಸಮ್ಮೇಳನಕ್ಕೂ ಮುನ್ನ ಶೋಭಾ ಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ವಾಹನದ ಮೇಲೆ ನಿಂತಿದ್ದ ಹರ್ಷಿತಾ ಠಾಕೂರ ಅವರು, ಶೋಭಾ ಯಾತ್ರೆ ಅನ್ಸಾರಿ ದರ್ಗಾದ ಬಳಿ ಬಂದಾಗ ವಾಹನವನ್ನು ನಿಲ್ಲಿಸಿ ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಸನ್ನೆ ಮಾಡಿದ್ದು, ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೇ, ನಂತರ ನಡೆದ ಸಮಾವೇಶದಲ್ಲಿಯೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಅಬ್ದುಲ್ ಖಾದರ್ ಮುಜಾವರ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ ಅವರ ವಿರುದ್ಧ ಹಾಗೂ ಸಮಾವೇಶದ ಆಯೋಜಕರಾದ ಬೆಳಗಾವಿಯ ಸುಪ್ರೀತ್ ಸಿಂಪಿ, ಶ್ರೀಕಾಂತ ಕಾಂಬಳೆ, ಬೆಟ್ಟಪ್ಪ ತಾರಿಹಾಳ, ಶಿವಾಜಿ ಶಹಾಪೂರಕರ, ಗಂಗಾರಾಮ ತಾರಿಹಾಳ ಮತ್ತು ಕಲ್ಲಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page