Thursday, June 13, 2024

ಸತ್ಯ | ನ್ಯಾಯ |ಧರ್ಮ

ಕಲ್ಲಡ್ಕ ಭಟ್ ವಿರುದ್ಧದ ಪ್ರತಿಭಟನೆ : ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಮೇಲೆ FIR

ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ ದಕ್ಷಿಣ ಕನ್ನಡದ ದಕ್ಷಿಣ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ವಿರುದ್ಧ FIR ದಾಖಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ‘ಮುಸ್ಲಿಂ ಮಹಿಳೆಯರಿಗೆ ಹಲವು ಗಂಡಂದಿರು ಇದ್ದರು, ಮೋದಿ ಬಂದ ನಂತರ ಅವರಿಗೆ ನ್ಯಾಯ ಸಿಕ್ಕಿದೆ..’ ಎನ್ನುವ ರೀತಿಯಲ್ಲಿ ಮಾಡಿದ ಭಾಷಣಕ್ಕೆ ರಾಜ್ಯಾದ್ಯಂತ ತೀವ್ರ ವಿಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಹಿಂದೆಯೇ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೂ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.

ಇದೇ ಕಾರಣಕ್ಕೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ಪ್ರತಿಭಟನೆಯಂತೆ ರಾಜ್ಯದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕ್ಷೇತ್ರ ಉಲ್ಲಾಳದಲ್ಲೂ ಸಹ ಪ್ರತಿಭಟನೆ ನಡೆದಿದೆ. ಉಲ್ಲಾಳದ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ರೈತ ಮುಖಂಡ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಮೇಲೆ ಸ್ಥಳೀಯ ಪೊಲೀಸರು ಸುಮೋಟೋ ಕೇಸ್ ಮೂಲಕ FIR ದಾಖಲಿಸಿದ್ದಾರೆ.

ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 20 ಮಂದಿಯ ಮೇಲೂ ಸುಮೋಟೋ ಕೇಸ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಯಾವುದೇ ಮೈಕ್ ಕೂಡಾ ಬಳಸದೇ ಕೇವಲ ಪ್ರೆಕಾರ್ಡ್ ಹಿಡಿದು ಕಲ್ಲಡ್ಕ ಪ್ರಭಾಕರ ಭಟ್ ನನ್ನು ಬಂಧಿಸಲು ಆಗ್ರಹಿಸಲಾಗಿತ್ತು. ಆದರೆ ಸ್ಥಳೀಯ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ಕೊಡದೇ ಸುಮೋಟೋ ದಾಖಲಿಸಿದ್ದು ಪ್ರಗತಿಪರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಪ್ಪ ಸಾಲ್ಯಾನ್ ಅವರ ಬಂಧನದ ಹಿನ್ನೆಲೆಯಲ್ಲಿ ಸದಾ ಶಾಂತಿಯ ಬಗ್ಗೆ ಮಾತನಾಡುವ ಯು.ಟಿ.ಖಾದರ್ ಅವರ ಕ್ಷೇತ್ರದಲ್ಲಿ ಶಾಂತಿಯುತ ಪ್ರತಿಭಟನೆಯೂ ಶಿಕ್ಷಾರ್ಹ ಅಪರಾಧವೇ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿ ಬೆಂಬಲಿತ ವ್ಯಕ್ತಿಯ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿ ಭಾಷಣಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿ ಶಾಸಕರಾಗಿರುವ ಕ್ಷೇತ್ರದಲ್ಲೂ ಸಹ ಇಷ್ಟರ ಮಟ್ಟಿಗೆ ಕಲ್ಲಡ್ಕ ಪ್ರಭಾಕರ್ ಭಟ್ ತನ್ನ ಪ್ರಭಾವ ಉಳಿಸಿಕೊಂಡಿರಬಹುದಾ ಎಂಬ ಅನುಮಾನ ಮೂಡುವಂತಾಗಿದೆ.

ಇನ್ನೊಂದು ಕಡೆ ಪ್ರಭಾಕರ್ ಭಟ್ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸರ್ಕಾರವೇ ಅವರನ್ನು ಬಂಧಿಸಲು ಹಿಂದೇಟು ಹಾಕಿರುವುದರಿಂದ ಸರ್ಕಾರದ ನಿಲುವಿನ ಬಗ್ಗೆಯೂ ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಅಥವಾ ಬಿಜೆಪಿ ಪಕ್ಷದ ಪ್ರತಿಭಟನೆಯ ಮುನ್ಸೂಚನೆಗೆ ಸರ್ಕಾರ ಹೆದರಿತೇ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ.

ಈ ಬಗ್ಗೆ DYFI ರಾಜ್ಯ ಘಟಕದ ನಾಯಕ ಅಬ್ದುಲ್ ಮುನೀರ್ (Muneer Katipalla) ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದಾಗ ‘ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಇದೆಯೇ ಎಂಬ ಬಗ್ಗೆ ನಮಗೆ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸಹ ಇಷ್ಟರ ಮಟ್ಟಿಗೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿ ಕಲ್ಲಡ್ಕ ಪ್ರಭಾಕರ ಭಟ್ ನಿರಾತಂಕವಾಗಿ ಇದ್ದಾರೆ ಎಂದರೆ ಇದೂ ಸಹ ಬಿಜೆಪಿ ಸರ್ಕಾರದ ಮುಂದುವರೆದ ಅವತಾರ’ ಎಂದು ಹೇಳಿದ್ದಾರೆ.

ಮುಂದುವರೆದು “ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಸುಮೋಟೋ ಪ್ರಕರಣ ದಾಖಲಾಗಲ್ಲ.. ಆದರೆ ಇದು ತಪ್ಪು ಎಂದು ಪ್ರತಿಭಟಿಸಿದ 70 ವರ್ಷ ವಯಸ್ಸಿನ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಾಗುತ್ತೆ ಎಂದರೆ ಈ ಸರ್ಕಾರದ ನಿಲುವನ್ನು ಏನೆನ್ನಬೇಕು.? ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಈಗಲೂ ಬಿಜೆಪಿ ಸರ್ಕಾರದ ಛಾಯೆಯೇ ಮುಂದುವರೆದಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕಮೀಷನರ್ ಅಗರ್ವಾಲ್ ಅವರ ಪ್ರೋ ಸಂಘಿ ಮನಸ್ಥಿತಿ. ಹೀಗಾಗಿ ಸಧ್ಯದಲ್ಲೇ ನಾವು ಪೊಲೀಸ್ ಇಲಾಖೆಯ ಇಂತಹ ಬೇಜವಾಬ್ದಾರಿ ನಿಲುವಿನ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು