ಹೈದರಾಬಾದ್: ನಾಂಪಲ್ಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬಜಾರ್‌ಘಾಟ್‌ನ ಕಟ್ಟಡವೊಂದರ ನಾಲ್ಕು ಮಹಡಿಗಳಿಗೆ ಬೆಂಕಿ ವ್ಯಾಪಿಸಿದ್ದು, ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. GHMC ಮತ್ತು NDRF ಸಿಬ್ಬಂದಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ.
ಕಟ್ಟದ ನೆಲಮಹಡಿಯಲ್ಲಿ ಗ್ಯಾರೇಜ್ ಇದ್ದು ಅಲ್ಲಿ ಕಾರು ರಿಪೇರಿ ಮಾಡುತ್ತಿರುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅದೇ ವೇಳೆ ಅಲ್ಲಿದ್ದ ಡೀಸೆಲ್ ಹಾಗೂ ಇನ್ನಿತರ ಕೆಮಿಕಲ್ ಡ್ರಮ್ಮುಗಳಿಗೆ ಬೆಂಕಿ ವ್ಯಾಪಿಸಿದೆ. ಬೆಂಕಿಯಿಂದ ಹೊಮ್ಮಿದ ಹೊಗೆಗೆ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವ ಜನರು ಪರದಾಡುವಂತಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ‘‘ಅಪಾರ್ಟ್‌ಮೆಂಟ್ ನ ನೆಲ ಮಹಡಿಯಲ್ಲಿ ಗ್ಯಾರೇಜ್ ಇದೆ. ಅಲ್ಲಿ ಕಾರನ್ನು ರಿಪೇರಿ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ನೆಲ ಮಹಡಿಯಲ್ಲಿ ಡೀಸೆಲ್ ಮತ್ತು ರಾಸಾಯನಿಕ ಡ್ರಮ್‌ಗಳಿವೆ. ಇದರಿಂದ ಅವುಗಳಿಗೆ ಬೆಂಕಿ ಹತ್ತಿಕೊಂಡು ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಗಳಿಗೂ ವ್ಯಾಪಿಸಿದೆ. ಕೆಲವು ಕುಟುಂಬಗಳು ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬಾಡಿಗೆಗೆ ಇವೆ. ಕೆಲವರು ಬೆಂಕಿಯ ಹೊಗೆಗೆ ಉಸಿರುಗಟ್ಟಿ ಸತ್ತಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.