Thursday, September 11, 2025

ಸತ್ಯ | ನ್ಯಾಯ |ಧರ್ಮ

ದುರ್ಗಾಪೂಜೆ ವೇಳೆ ಅಗ್ನಿ ಅವಘಡ: ಮೂವರ ಸಾವು 64ಕ್ಕೂ ಹೆಚ್ಚು ಮಂದಿಗೆ ಗಾಯ

ಭದೋಹಿ: ದುರ್ಗಾ ದೇವಿ ಪೂಜೆ ವೇಳೆ ಪೆಂಡಾಲ್‌ಗೆ ಬೆಂಕಿ ಹತ್ತಿ ಮೂವರು ಸಾವನ್ನಪ್ಪಿದ್ದು, 64 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಔರಾಯ್‌ನಲ್ಲಿ ನಡೆದಿದೆ.

ಔರಾಯ್‌ ನಲ್ಲಿ ದುರ್ಗಾಪೂಜೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ವೇಳೆ ಹಾಲೊಜೆನ್‌ ಲೈಟ್‌ ಹೆಚ್ಚು ಬಿಸಿಯಾದ ಕಾರಣ ಪೆಂಡಾಲ್‌ಗೆ ಬೆಂಕಿ ಹತ್ತಿಕೊಂಡಿದೆ. ಹೀಗಾಗಿ 67 ಮಂದಿ ಗಾಯಗೊಂಡಿದ್ದಾರೆ, ಅದರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ರಾತ್ರಿ 9 ಗಂಟೆ ಸುಮಾರಿಗೆ  ಆರತಿ ಮಾಡುತ್ತಿದ್ದಾಗ ಪೆಂಡಾಲ್‌ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಪೆಂಡಾಲ್‌ಗೆ ವ್ಯಾಪಿಸಿದೆ. ಈ ಸಂದರ್ಭದಲ್ಲಿ ಜನರು ಅವಘಡದಿಂದ ತಪ್ಪಿಸಿಕೊಳ್ಳಲು ಓಡಲು ಶುರುಮಾಡಿದ್ದು, ಪೆಂಡಾಲ್‌ ಒಳಗೆ ಕಡಿಮೆ ಸ್ಥಳ ಇರುವುದರಿಂದ ಕಾಲ್ತುಳಿತಕ್ಕೆ ಸಿಲುಕಿ ಪೆಂಡಾಲ್‌ನಿಂದ ಹೊರಬರಲಾಗದೆ ಬೆಂಕಿಗೆ ಸಿಕ್ಕಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಗಾಯಗೊಂಡವರಲ್ಲಿ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದು. ಅದರಲ್ಲಿ 45 ವರ್ಷದ ಮಹಿಳೆ, 12 ಮತ್ತು 10 ವರ್ಷದ ಬಾಲಕರಿಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page