ಝಾನ್ಸಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ನಡೆದಿದೆ. ರಾಜ್ಯದ ಝಾನ್ಸಿ ಪಟ್ಟಣದ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ನವಜಾತ ಶಿಶುಗಳು ಮರಣಹೊಂದಿವೆ.
ಆಸ್ಪತ್ರೆಯ ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ (ಎಸ್‌ಎನ್‌ಸಿಯು) ವಾರ್ಡ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡ ಸಂಭವಿಸಿದ ವಾರ್ಡಿನಲ್ಲಿ 47 ನವಜಾತ ಶಿಶುಗಳಿದ್ದವು. ಘಟನೆ ನಡೆದ ತಕ್ಷಣ 31 ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.
ಶಿಶುಗಳ ಸಾವು ಆಸ್ಪತ್ರೆ ಆವರಣದಲ್ಲಿ ಹೃದಯವಿದ್ರಾವಕ ವಾತಾವರಣ ಸೃಷ್ಟಿಸಿದೆ. ಮಕ್ಕಳು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬ ಪಾಲಕರ ಗೋಳು ಅಲ್ಲಿ ಕೇಳುತ್ತಿತ್ತು. ಶಾರ್ಟ್ ಸರ್ಕ್ಯೂಟ್ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಳಿದ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.