Friday, March 21, 2025

ಸತ್ಯ | ನ್ಯಾಯ |ಧರ್ಮ

ಜಡ್ಜ್‌ ಮನೆಯಲ್ಲಿ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದವರಿಗೆ ಎದುರಾಗಿದ್ದು ಕಂತೆ ಕಂತೆ ದುಡ್ಡು!

ದೆಹಲಿ: ದೆಹಲಿ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ಯಶವಂತ್ ವರ್ಮಾ ಎನ್ನುವವ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿರುವ ಘಟನೆ ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ನ್ಯಾಯಾಧೀಶರ ಮನೆಗೆ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲೆಂದು ಧಾವಿಸಿದ್ದರು. ಈ ಸಂದರ್ಭದಲ್ಲಿ ಬೆಂಕಿ ಆರಿಸಲು ಒಳಗೆ ಹೋದ ಸಿಬ್ಬಂದಿಗೆ ಕಂತೆ ಕಂತೆ ನೋಟು ಎದುರಾಗಿದೆ.

ಅದನ್ನು ನೋಡಿದ ಸಿಬ್ಬಂದಿ ದಂಗಾಗಿ, ಸಂಬಂಧಿತ ಪ್ರಾಧಿಕಾರಕ್ಕೆ ಈ ಕುರಿತು ಸುದ್ದಿ ಮುಟ್ಟಿಸಿದರು.

ಪ್ರಕರಣ ಸುದ್ದಿಯಾಗುತ್ತಿದ್ದಂತೆ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭಗೊಂಡಿದೆ. ಇದೀಗ ಈ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಕೊಲಿಜಿಯಂ ಸಮಿತಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವುದಾಗಿ ಕೊಲಿಜಿಯಂ ಸಮಿತಿ ಹೇಳಿದ್ದು, ಈ ವಿಷಯದ ಕುರಿತು ತನಿಖೆ ನಡೆಸುವುದಾಗಿಯೂ ಹೇಳಿದೆ.

ಆದರೆ ಇದೆಲ್ಲದರ ನಡುವೆ ಪತ್ತೆಯಾದ ಮೊತ್ತವೆಷ್ಟು ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.

ಮಾರ್ಚ್ 14ರಂದು ಬೆಳಿಗ್ಗೆ 11.30ಕ್ಕೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿಯ ನ್ಯಾಯಾಂಗ ಬಡಾವಣೆಯ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆ ಸಂದರ್ಭದಲ್ಲಿ ಬೆಂಕಿ ನಂದಿಸಲು ಬಂದ ಸಿಬ್ಬಂದಿಗೆ ನೋಟು ಸಿಕ್ಕಿದೆ ಎನ್ನಲಾಗಿದೆ. ಆದರೆ ಈ ಸಮಯದಲ್ಲು ನ್ಯಾಯಮೂರ್ತಿ ಮನೆಯಲ್ಲಿ ಇದ್ದಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು 2021ರಲ್ಲಿ ಅಲಹಾಬಾದ್ ಹೈಕೋರ್ಟಿನಿಂದ ದೆಹಲಿ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page