Wednesday, July 16, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು ಭಾಗ 2 : ದೀರ್ಘಕಾಲದ ಸಂಸದ ಮತ್ತು ಮೊದಲ ಕಮ್ಯುನಿಸ್ಟ್‌ ಗೃಹ ಸಚಿವ ಇಂದ್ರಜಿತ್‌ ಗುಪ್ತಾ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎರಡನೇ ಲೇಖನ

ನಿರ್ಣಯಗಳಿಗೆ ಮಧ್ಯಸ್ಥಿಕೆ ವಹಿಸುತ್ತಿದ್ದ ಅವರ ಶೈಲಿ ಮತ್ತು ದೀರ್ಘ ಕಾಲದ ಅಧಿಕಾರಾವಧಿಗಳೆರಡೂ ಸೇರಿ ಅವರಿಗೆ “ಫಾದರ್‌ ಆಫ್‌ ದಿ ಹೌಸ್”‌ ಎಂಬ ಬಿರುದನ್ನು ತಂದು ಕೊಟ್ಟವು.

ಫೆಬ್ರವರಿ 24, ಕಮ್ಯುನಿಸ್ಟ್‌ ನಾಯಕ ಮತ್ತು ಹಿರಿಯ ಸಂಸದೀಯ ಪಟು ಇಂದ್ರಜಿತ್‌ ಗುಪ್ತಾ ಅವರ ಸಂಸ್ಮರಣಾ ದಿನ. 37 ವರ್ಷಗಳಷ್ಟು ಸುದೀರ್ಘ ಕಾಲ ಸಂಸದರಾಗಿದ್ದ ಅವರಿಗೆ “ಫಾದರ್‌ ಆಫ್‌ ದಿ ಹೌಸ್”‌ ಎಂಬ ಬಿರುದೂ ಲಭಿಸಿತ್ತು. 11 ಬಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಆ ಮೂಲಕ ಸ್ವತಂತ್ರ ಭಾರತದ ಅತ್ಯಂತ ದೀರ್ಘಾವಧಿಯ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1992ರಲ್ಲಿ ಇಂದ್ರಜಿತ್‌ ಗುಪ್ತಾ ಅವರು ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರು ದೇಶ ಕಂಡ ಮೊಟ್ಟ ಮೊದಲ ಕಮ್ಯುನಿಸ್ಟ್‌ ಗೃಹ ಸಚಿವರು. ಇಷ್ಟೆಲ್ಲ ಇದ್ದರೂ ಅವರು ಬಹಳ ನಾಚಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಯುವಕನಾಗಿದ್ದಾಗ ಸುರೈಯ್ಯಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ತನ್ನ ಪ್ರೀತಿಯನ್ನು ಅವರು ಎಂದೂ ಹೇಳಿಕೊಳ್ಳಲೇ ಇಲ್ಲ. ಕೊನೆಗೆ ತನ್ನ 62ನೇ ವಯಸ್ಸಿನಲ್ಲಿ ಅದೇ ಸುರೈಯ್ಯಾರನ್ನು ಮದುವೆಯಾಗುವುದು. ಆಕೆಯ ಮೊದಲ ಪತಿ ಛಾಯಾಗ್ರಾಹಕ ಅಹ್ಮದ್‌ ಅಲಿ (ಸಮಾಜವಾದಿ ನಫೀಸಾ ಅಲಿ ಅವರ ತಂದೆ) ಜೊತೆಗಿನ ತನ್ನ ಮೊದಲ ವಿವಾಹದಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯುವವರೆಗೆ, ಅಂದರೆ ಸುಮಾರು 40 ವರ್ಷಗಳ ಕಾಲ ಅವರು ಕಾದಿದ್ದರು.

ವಿರೋಧ ಪಕ್ಷದ ಕಟ್ಟಾಳಾಗಿ ಮತ್ತು ಭಾರತೀಯ ಕಮ್ಯುನಿಸ್ಟ್‌ ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಅವರ ಭಾಷಣಗಳು ಶಕ್ತಿಶಾಲಿಯೂ, ಹದವಾಗಿಯೂ, ತರ್ಕಬದ್ಧ ಟೀಕೆಗಳಿಂದಲೂ ಕೂಡಿರುತ್ತಿದ್ದವು. ಆ ಮೂಲಕ ಅವರು ತನ್ನ  ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆಯನ್ನು ಗಳಿಸಿದ್ದರು.

ಯುನೈಟೆಡ್‌ ಫ್ರಂಟ್‌ ಸರಕಾರದ (1996-98) ಅವಧಿಯಲ್ಲಿ ಗೃಹ ಸಚಿವರಾಗಿದ್ದ ಅವರು, ಸರಕಾರದ ವೈಫಲ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದ್ದರು. ತಮ್ಮ ಪ್ರಖರ ಮಾತುಗಳಿಂದ ಖಜಾನೆ ಸಂಬಂಧಿ ಅಧಿಕಾರ ವರ್ಗದ ಅನೇಕರು ಹುಬ್ಬೇರುವಂತೆ ಮಾಡಿದ್ದರು. ಅವರು ಗೃಹ ಸಚಿವರಾಗಿದ್ದ ಕಾಲದಲ್ಲಿ, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದ್ದಾಗ, ದೊಡ್ಡ ಮಟ್ಟದ ಚರ್ಚೆಗಳ ನಂತರದ ಖಾಸಗಿ ಭೇಟಿಗಳಲ್ಲಿ ವಿರೋಧ ಪಕ್ಷದ ಸದಸ್ಯರ ಬಳಿ ಅವರು ಹೇಳಿಕೊಳ್ಳುತ್ತಿದ್ದ ಮಾತು ಹೀಗೆ: “ನಾನೇನಾದರೂ ಈಗ ವಿರೋಧ ಪಕ್ಷದ ಸ್ಥಾನದಲ್ಲಿರುತ್ತಿದ್ದರೆ, ನೀವೀಗ ಮಾಡುತ್ತಿರುವುದನ್ನು ಖಂಡಿತಾ ನಾನು ಮಾಡುತ್ತಿರಲಿಲ್ಲ.” ಅವರ ಹಿರಿತನದ ಆಧಾರದಲ್ಲಿಯೇ 1991, 1996, 1998 ಮತ್ತು 1999 ಇಸವಿಗಳಲ್ಲಿ ಹಂಗಾಮಿ ಸ್ಪೀಕರ್‌ ಸ್ಥಾನಕ್ಕೆ ಏರಿದ್ದರು.

ಅವರು ಕೇಂದ್ರ ಗೃಹ ಸಚಿವ ಸ್ಥಾನವನ್ನು ಅಲಂಕರಿಸಿದ ಮೊದಲ ಕಮ್ಯುನಿಸ್ಟ್‌ ಎಂಬುದು ಗಮನಾರ್ಹ. ಅದು ನಡೆದದ್ದು 1996ರಲ್ಲಿ. ಇದೊಂದು ರೀತಿಯಲ್ಲಿ ಇತಿಹಾಸದ ನಾಟಕೀಯ ತಿರುವು ಎಂದು ಹೇಳಬಹುದು. ಸ್ವಾತಂತ್ರ್ಯಾ ನಂತರ ಕೇಂದ್ರ ಗೃಹ ಸಚಿವಾಲಯವು ಮೂರು ಬಾರಿ ಕಮ್ಯುನಿಸ್ಟ್‌ ಪಕ್ಷವನ್ನು ದೇಶದಲ್ಲಿ ನಿಷೇಧಿಸಿತ್ತು. ಆ ಕಾರಣದಿಂದ ಇಂದ್ರಜಿತ್‌ ಗುಪ್ತಾ ಸೇರಿದಂತೆ ಹಲವಾರು ಕಮ್ಯನಿಸ್ಟ್‌ ಕಾರ್ಯಕರ್ತರು ಜೈಲು ಪಾಲಾಗಿದ್ದರು ಅಥವಾ ಭೂಗತರಾಗಿದ್ದರು.

ಸಿಪಿಐ(ಎಂ) ನ ಹಿರಿಯ ಸಂಸದ ದಿವಂಗತ ರೂಪಚಂದ್ ಪಾಲ್ ಅವರ ಪ್ರಕಾರ:
“ಸದನದಲ್ಲಿ ಯಾವುದೇ ರೀತಿಯ ಗದ್ದಲಗಳು ಉಂಟಾದರೂ, ಆ ಗದ್ದಲದ ಆಯಾಮಗಳು ಏನೇ ಇದ್ದರೂ, ಸದನದ ಪ್ರತಿಯೊಂದು ವಿಭಾಗದ ಜನರೂ ನೋಡುತ್ತಿದ್ದದ್ದು, ಮುಂದಿನ ಸಾಲಿನ ಮೂಲೆಯ ಆಸನದಲ್ಲಿ ಸಭಾಪತಿಗಳಿಗೆ ಮುಖಮಾಡಿ ಕುಳಿತಿರುತ್ತಿದ್ದ “ಪಿತಾಮಹ”ನ ಕಡೆಗೆ. ಕೊನೆಗೆ, ಚೆಂದದ ಇಂಗ್ಲಿಷ್‌ ಭಾಷೆಯಲ್ಲಿ “ಪಿತಾಮಹ” ಮಾತನಾಡುತ್ತಾರೆ. ಅಂತೂ ಸಮಸ್ಯೆ ಬಗೆಹರಿಯುತ್ತದೆ. ಗೌರವಾನ್ವಿತ ಸ್ಪೀಕರ್‌ ಅವರ ಕೊಠಡಿಯಲ್ಲಿ “ಪಿತಾಮಹ”ರ ಸಮ್ಮುಖದಲ್ಲಿ ನಡೆಯುವ ಸಣ್ಣ ಚರ್ಚೆಯೊಂದಿಗೆ ಸದನ ಮತ್ತೆ ಸರಾಗವಾಗಿ ಮುಂದುವರಿಯುತ್ತದೆ. 1960ರಿಂದ ಆರಂಭವಾದ ಈ ಇನ್ನಿಂಗ್ಸ್‌ “ಪಿತಾಮಹ”ರ ಮರಣದ ತನಕವೂ ಸುದೀರ್ಘವಾಗಿ ಮುಂದುವರಿದಿತ್ತು.

ಮಾರ್ಚ್ 18, 1919 ರಂದು ನಾಗರಿಕ ಸೇವಾ ವಲಯದ ಸದಸ್ಯರೇ ಇದ್ದ ಒಂದು ಕುಟುಂಬದಲ್ಲಿ ಗುಪ್ತಾ ಅವರ ಜನನ. ಆದರೆ, ಅವರು ತನ್ನ ವೃತ್ತಿ ಬದುಕಿನಲ್ಲಿ ನಾಗರಿಕ ನೇವೆಯ ಬದಲಿಗೆ, ದೇಶ ಸೇವೆಯನ್ನು ಆರಿಸಿಕೊಳ್ಳುತ್ತಾರೆ. ಶಿಮ್ಲಾದಲ್ಲಿ ಶಾಲಾ ಶಿಕ್ಷಣ ಪಡೆದ ನಂತರ 1937ರಲ್ಲಿ ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ. ಆ ನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳುತ್ತಾರೆ. ಅಲ್ಲಿ ಅವರ ವ್ಯಾಸಂಗ ನಡೆಯುವುದು ಕಿಂಗ್ಸ್‌ ಕಾಲೇಜ್‌ ಮತ್ತು ಕೇಂಬ್ರಿಜ್‌ ವಿಶ್ವವಿದ್ಯಾಲಯಗಳಲ್ಲಿ. ಬ್ರಿಟನ್‌ನಲ್ಲಿದ್ದ ವಿದ್ಯಾರ್ಥಿಯಾಗಿದ್ದಾಗ ಕಮ್ಯುನಿಸ್ಟ್‌ ಚಳುವಳಿಯ ಕಡೆಗೆ ಆಕರ್ಷಿತರಾಗುತ್ತಾರೆ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡ ನಂತರ 1940ರಲ್ಲಿ ಅವರು ಭಾರತಕ್ಕೆ ಮರಳುವುದು.

ಗುಪ್ತಾ ಬ್ರಹ್ಮ ಸಮಾಜದ ಸದಸ್ಯರಾಗಿದ್ದರು. ಪಶ್ಚಿಮ ಬಂಗಾಳದ ಅತ್ಯಂತ ವರ್ಚಸ್ವಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಬಿ.ಸಿ. ರಾಯ್‌ ಅವರ ಸಂಬಂಧಿಯಾಗಿದ್ದರು. ಹಾಗಾಗಿಯೇ, ಅವರು ಭಾರತಕ್ಕೆ ಮರಳಿ ಬಂದು ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡಾಗ ತನ್ನನ್ನು ತಾನು “ಮರುವರ್ಗೀಕರಣ” ಮಾಡಿಕೊಳ್ಳಬೇಕಾಗಿ ಬಂದಿತ್ತು.

ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಬದ್ಧ ಕಾರ್ಯಕರ್ತನಾಗಿದ್ದ ಗುಪ್ತಾ ಅವರು 1948-50ರ ಕಾಲದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಭೂಗತರಾಗಿದ್ದರು. 1953, 1959 ಮತ್ತು 1969 ಇಸವಿಗಳಲ್ಲಿ ಅವರು ಜೈಲುಶಿಕ್ಷೆಯನ್ನೂ ಅನುಭವಿಸಿದ್ದರು. ಆದರೆ, ಈ ಯಾವ ಸಂಕಷ್ಟಗಳು ಕೂಡ ಅವರಿಗೆ ಅಡೆತಡೆಯಾಗಿ ಅನಿಸಲೇ ಇಲ್ಲ. ಬದಲಿಗೆ, ಅವರು ಪಕ್ಷಕ್ಕೆ ಮತ್ತಷ್ಟು ನಿಷ್ಟರಾದರು. ತಳಮಟ್ಟದ ಕಾರ್ಮಿಕರು ಮತ್ತು ಟ್ರೇಡ್‌ ಯೂನಿಯನ್ ಚಳುವಳಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಆ ನಂತರದ ವರ್ಷಗಳಲ್ಲಿ ಅವರು ಸಂಸತ್ತಿನಲ್ಲಿ ಕಮ್ಯುನಿಸ್ಟ್‌ ಪಕ್ಷದ ದನಿಯಾದರು.

ಇಂದ್ರಜಿತ್‌ ಗುಪ್ತಾ ಅವರ ಹಳೆಯ ಒಡನಾಡಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಹೇಳುವಂತೆ:
“ಇಂದ್ರಜಿತ್ ಗುಪ್ತಾ ನನಗಿಂತ ಕೆಲವು ವರ್ಷ ಕಿರಿಯರಾಗಿದ್ದರು. ಅವರು ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ, 1936ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಯಾಗಿದ್ದೆ. ಅದು ಫ್ಯಾಸಿಸಂ ವಿರುದ್ಧದ ರೋಮಾಂಚಕ ದಿನಗಳಾಗಿದ್ದವು. ರಾಜಕೀಯ ಉತ್ಸಾಹವು ವಿದ್ಯಾರ್ಥಿ ಸಮೂಹವನ್ನು ವಿಶೇಷವಾಗಿ ಆಕರ್ಷಿಸುತ್ತಿತ್ತು. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಆಕರ್ಷಿತರಾಗುತ್ತಿದ್ದರು. ನಾವು ಲಂಡನ್‌, ಕೇಂಬ್ರಿಜ್‌ ಮತ್ತು ಆಕ್ಸ್‌ಫರ್ಡ್‌ ಮೊದಲಾದ ಕಡೆಗಳಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟ ಮತ್ತು ಮಜ್ಲಿಸ್‌ಗಳನ್ನು ಸಂಘಟಿಸುತ್ತಿದ್ದೆವು. ರಾಜಕೀಯ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಭಾರತದ ಸ್ವಾತಂತ್ರ್ಯದ ಉದ್ಧೇಶಗಳನ್ನು ಪ್ರಚಾರ ಮಾಡುತ್ತಿದ್ದೆವು. ಶ್ರೀಯುತ ಕೃಷ್ಣ ಮೆನನ್‌ ಅವರ ಇಂಡಿಯಾ ಲೀಗ್‌ನ ಪ್ರಚಾರದ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೆವು.  ಇಂದ್ರಜಿತ್ ಗುಪ್ತಾ ಮತ್ತು ನಾನು ಸೇರಿದಂತೆ ನಮ್ಮಲ್ಲಿ ಕೆಲವರು 1940ರಲ್ಲಿ ಪೂರ್ಣಕಾಲಿಕವಾಗಿ ಕಮ್ಯುನಿಸ್ಟ್ ಪಕ್ಷವನ್ನು ಸೇರಿಕೊಂಡೆವು. ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದ ಆ ದಿನಗಳು ನನಗೀಗಲೂ ನೆನಪಿದೆ. ನಾನು ಮತ್ತು ಗುಪ್ತಾ ಕೆಲವು ಕಾಲ ಭೂಗತರಾಗಿ ಜೊತೆಯಾಗಿ ಕಳೆದಿದ್ದೆವು. ಪಕ್ಷ ವಿಭಜನೆಯಾದ ನಂತರ ಇಂದ್ರಜಿತ್‌ ಗುಪ್ತಾ ಸಿಪಿಐನಲ್ಲಿಯೇ ಉಳಿದರು. ನಾನು ಸಿಪಿಐ(ಎಂ) ಸೇರಿದೆ. ನಾವಿಬ್ಬರೂ ಟ್ರೇಡ್ ಯೂನಿಯನ್ ಚಳವಳಿಯಲ್ಲಿ ಕೆಲಸ ಮಾಡುತ್ತಿದ್ದವರು. ಒಬ್ಬ ನಿಜವಾದ ಕಮ್ಯುನಿಸ್ಟ್‌ನಂತೆ ಅವರು ಸಂಸದೀಯ ಮತ್ತು ಸಂಸದೀಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷ ವಿಭಜನೆಯಾದಾಗಲೂ, ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ಆ ಮೂಲಕ ಅವರು ಗೆಲ್ಲಲು ಸಹಾಯ ಮಾಡಿದೆವು.”

1964ರಲ್ಲಿ ಪಕ್ಷವು ಚೀನಾ ವಿಷಯದಲ್ಲಿ ಇಬ್ಭಾಗವಾದಾಗ, ಎಸ್.ಎ. ಡಾಂಗೆ ನೇತೃತ್ವದ ಮಾತೃ ಸಂಘಟನೆಗೆ ನಿಷ್ಠರಾದ ರಾಷ್ಟ್ರೀಯ ಮಂಡಳಿಯ 35 ಸದಸ್ಯರಲ್ಲಿ ಗುಪ್ತಾ ಕೂಡ ಒಬ್ಬರಾಗಿದ್ದರು. ನಿಜದಲ್ಲಿ ಸ್ವತಃ ಗುಪ್ತಾ ಅವರೇ ಆ ಗುಂಪಿನ ಮುಖ್ಯ ನಿರ್ಣಯವನ್ನು ರಚಿಸಿದ್ದರು. ಅವರು ಡಾಂಗೆಯ ಕಾಂಗ್ರೆಸ್‌ ಒಲವನ್ನು ವಿರೋಧಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ತುರ್ತು ಪರಿಸ್ಥಿತಿಯ ನಂತರ. ಆದರೆ, ಎಂದೂ ಅದನ್ನು ಪಕ್ಷದ ಹೊರಗೆ ಸಾರ್ವಜನಿಕವಾಗಿ ತೋರಿಸಿಕೊಂಡವರಲ್ಲ.

1960ರಲ್ಲಿ ಪಶ್ಚಿಮ ಬಂಗಾಳದಿಂದ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗುವುದು. ಅದರ ನಂತರ, 1977-79ರ ಅವಧಿಯನ್ನು ಹೊರತು ಪಡಿಸಿ ತನ್ನ ಮರಣದ ತನಕವೂ ಸಂಸದರಾಗಿದ್ದರು. ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ ಕಾರಣ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ ಸೋಲು ಕಂಡಿತ್ತು.

1968ರಲ್ಲಿ ಗುಪ್ತಾ ಸಿಪಿಐ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1988ರಲ್ಲಿ ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಕೊನೆಗೆ 1990ರಲ್ಲಿ ಅವರನ್ನು ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗುತ್ತದೆ. 1996ರ ವರೆಗೆ, ಅಂದರೆ ಆರು ವರ್ಷಗಳ ಕಾಲ ಅವರು ಆ ಹುದ್ದೆಯಲ್ಲಿದ್ದರು.

ಸಕ್ರಿಯ ಟ್ರೇಡ್ ಯೂನಿಯನ್ ಹೋರಾಟಗಾರರಾಗಿದ್ದ ಗುಪ್ತಾ ಈ ಮೊದಲು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೊತೆಗೆ ವಿಶ್ವ ಟ್ರೇಡ್ ಯೂನಿಯನ್‌ಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. 1998ರಲ್ಲಿ ಅದರ ಅಧ್ಯಕ್ಷರಾಗಿಯೂ ಆಯ್ಕೆಯಾಗುತ್ತಾರೆ. ಸ್ವಾಂತತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ತನ್ನ ಕುಟುಂಬದ ಹಲವಾರು ವ್ಯಕ್ತಿಗಳು ನಾಗರಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ, ತಾನು ಮಾತ್ರ ದೀನದಲಿತ ಮತ್ತು ಶೋಷಿತ ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಡಲು ತೀರ್ಮಾನಿಸಿದ್ದರು. ಅವರು ತನ್ನನ್ನು ತಾನು ಕಾರ್ಮಿಕ ವರ್ಗದೊಂದಿಗೆ ಗುರುತಿಸಿಕೊಳ್ಳಲು ಬಯಸಿದ್ದರು.

ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ ಸಮಸ್ಯೆಗಳೆಲ್ಲವೂ ಗುಪ್ತಾ ಅವರ ಭಾಷಣಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಸಂಸತ್ತಿನ ಒಳಗಾದರೂ ಸರಿ ಹೊರಗಾದರೂ ಸರಿ. ಕಾರ್ಮಿಕರ ಹಕ್ಕುಗಳು, ಕನಿಷ್ಠ ವೇತನ, ಟ್ರೇಡ್‌ ಯೂನಿಯನ್‌ಗಳ ಹಕ್ಕುಗಳು ಮೊದಲಾದ ಸಂಗತಿಗಳ ಬಗ್ಗೆ ಅವರು ಉತ್ಸಾಹದಿಂದ ಮಾತನಾಡುತ್ತಿದ್ದರು. ಲೋಕಸಭೆಯಲ್ಲಿ ಅವರು ಸೆಣಬು ಮಿಲ್ಲಿನ ಕಾರ್ಮಿಕರ, ತಂಬಾಕು ತೋಟದ ಕಾರ್ಮಿಕರ ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿಯ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದರು. ಅಗತ್ಯ ವಸ್ತುಗಳ ಬೆಲೆಯೇರಿಕೆ ಅವರ ಭಾಷಣದಲ್ಲಿ ಪುನರಾವರ್ತನೆಯಾಗುತ್ತಿದ್ದ ಮತ್ತೊಂದು ಸಂಗತಿ. ಬರ, ಆಹಾರದ ಕೊರತೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ದುಸ್ಥಿತಿ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಬಿಕ್ಕಟ್ಟು, ಆರೋಗ್ಯ ವಲಯದ ಮೂಲ ಸೌಕರ್ಯ ಕೊರತೆ, ಅರೆ ಸೈನಿಕ ಪಡೆಗಳ ಸಮಸ್ಯೆಗಳು ಮೊದಲಾದವು ಅವರ ಮನಸಿಗೆ ತಾಕುತ್ತಿದ್ದ ಸಂಗತಿಗಳು.

ಲಿಂಗ ಸಮಾನತೆಯ ವಿಷಯದಲ್ಲಿಯೂ ಅವರು ಮುಂಚೂಣಿಯಲ್ಲಿದ್ದರು. ಶಾಸನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ನಿರ್ದಿಷ್ಟವೂ ಶಕ್ತಿಶಾಲಿಯೂ ಆದ ಯೋಜನೆಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಸಂಸತ್ತಿನಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತ ಚರ್ಚೆಗಳು ನಡೆಯುವಾಗ ಬಹಳ ಉತ್ಸಾಹ ಮತ್ತು ಅಷ್ಟೇ ಸೂಕ್ಷ್ಮತೆಯಿಂದ ಮಾತನಾಡುತ್ತಿದ್ದರು. ಮಹಿಳೆಯರ ಮೇಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕೊನೆಗಾಣಿಸಲೆಂದು ಲೋಕಸಭೆಯು ನಿರ್ಣಯ ಕೈಗೊಳ್ಳಲು ಚರ್ಚಿಸುತ್ತಿದ್ದ ಕಾಲದಲ್ಲಿ, 1975ರ ಹೊತ್ತಿನಲ್ಲಿಯೇ ಅವರು ಮಹಿಳೆಯರಿಗೆ 15% ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಪ್ರತಿಪಾದಿಸಿದ್ದರು. ಅದರ ಜೊತೆಗೇ ಶತಮಾನಗಳಷ್ಟು ಹಳೆಯದಾದ, ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆಯಾದ ಮಹಿಳೆಯರ ಮೇಲಿನ ಪೂರ್ವಾಗ್ರಹಗಳನ್ನು ತೊಡೆದು ಹಾಕಲು ಕರೆ ನೀಡುತ್ತಿದ್ದರು. ಮಹಿಳೆಯರ ಅನಕ್ಷರತೆಯನ್ನು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ, ತೊಡೆದು ಹಾಕಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. 37 ವರ್ಷಗಳ ಕಾಲ ಸಂಸದರಾಗಿದ್ದ ಅವರು ತತ್ವಾದರ್ಶಗಳು ಮತ್ತು ಮೌಲ್ಯಗಳಿಗೆ ಆಳವಾದ ಬದ್ಧತೆಯನ್ನು ಪ್ರದರ್ಶಿಸಿದ್ದರು.

“ಕ್ಯಾಪಿಟಲ್ ಅಂಡ್ ಲೇಬರ್ ಇನ್ ದಿ ಜೂಟ್ ಇಂಡಸ್ಟ್ರಿ” ಮತ್ತು “ಫಾರ್ ಸೆಲ್ಫ್‌ ರಿಲಯನ್ಸ್ ಇನ್ ನ್ಯಾಷನಲ್ ಡಿಫೆನ್ಸ್” ಎಂಬ ಎರಡು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ತಳಮಟ್ಟದ ಅನುಭವ, ತೀಕ್ಷ್ಣ ಬುದ್ಧಿಶಕ್ತಿ ಮತ್ತು ಅದ್ಭುತ ಮಾತುಗಾರಿಕೆಯಿಂದಾಗಿ ಜನರಿಗೆ ಹತ್ತಿರವಾದವರು. ತನ್ನ ಉನ್ನತ ಸ್ಥಾನಮಾನಗಳ ಹೊರತಾಗಿಯೂ ಜನಸಾಮಾನ್ಯರಿಗೆ ಸದಾ ಹತ್ತಿರದಲ್ಲೇ ಇದ್ದ ವ್ಯಕ್ತಿ. ಕೇಂದ್ರ ಗೃಹ ಸಚಿವರಾಗಿದ್ದಾಗಲೂ ಸರಕಾರದ ವಿಶಾಲ ಬಂಗಲೆಯನ್ನು ತಿರಸ್ಕರಿಸಿ, ವೆಸ್ಟರ್ನ್‌ ಕೋರ್ಟ್‌ನಲ್ಲಿರುವ ತನ್ನ ಎರಡು ಕೋಣೆಗಳ ಫ್ಲಾಟ್‌ನಲ್ಲಿಯೇ ವಾಸಿಸುತ್ತಿದ್ದರು.

ಇಂದ್ರಜಿತ್‌ ಗುಪ್ತಾ ಅವರು ಫೆಬ್ರವರಿ 20, 2001 ರಂದು ತಮ್ಮ 82 ನೇ ವಯಸ್ಸಿನಲ್ಲಿ ಕೋಲ್ಕತ್ತಾದಲ್ಲಿ ಕ್ಯಾನ್ಸರ್ ರೋಗದಿಂದ ನಿಧನರಾದರು. ಅವರ ಸಾವಿನಲ್ಲೂ ಕೂಡ, ಪಕ್ಷಬೇಧ ಮರೆತು ಎಲ್ಲ ರಾಜಕೀಯ ನಾಯಕರು ಅವರಿಗೆ ಗೌರವ ಸಲ್ಲಿಸಿ, ಅವರನ್ನು ಪ್ರೀತಿಯಿಂದ ನೆನೆದಿದ್ದರು.

ಅವರ ನಿಧನದ ಸಂದರ್ಭದಲ್ಲಿ, ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಮಹೋನ್ನತ ಸಂಸದೀಯ ಪಟುವಿಗೆ ಗೌರವ ಸಲ್ಲಿಸುತ್ತಾ ಆಡಿದ ಮಾತುಗಳು ಹೀಗಿವೆ:
“ಒಬ್ಬ ಅದ್ಭುತ ಮತ್ತು ಅನುಭವಿ ಸಂಸದೀಯ ಪಟು, ಜನರ ನಿಜವಾದ ನಾಯಕ, ಶ್ರೀಯುತ ಇಂದ್ರಜಿತ್‌ ಗುಪ್ತಾ ಅವರು ನಮ್ಮ ದೇಶದ ಕಮ್ಯುನಿಸ್ಟ್‌ ಚಳುವಳಿಯ ಮುಂಚೂಣಿ ನಾಯಕರು. ತನ್ನ ಕೊನೆಗಾಲದವರೆಗೂ ಜನರ ಹಕ್ಕುಗಳು ಮತ್ತು ಅವರ ಸ್ವಾತಂತ್ರ್ಯಕ್ಕಾಗಿ, ಅದರಲ್ಲೂ ವಿಶೇಷವಾಗಿ ಹಿಂದುಳಿದವರಿಗಾಗಿ ಹೋರಾಡಿದವರು. ಸಾರ್ವಜನಿಕ ಹಿತಾಸಕ್ತಿ, ನಿರರ್ಗಳ ಮಾತುಗಾರಿಕೆ, ಸೂಕ್ಷ್ಮ ಬುದ್ಧಿಯಿಂದ ಸಂಸತ್ತಿನ ಕಲಾಪಗಳನ್ನು ಮತ್ತು ಚರ್ಚೆಗಳನ್ನು ಶ್ರೀಮಂತಗೊಳಿಸಿದವರು. ಗಾಂಧೀಜಿಯ ಸರಳತೆ, ಪ್ರಜಾಪ್ರಭುತ್ವ ದೃಷ್ಟಿಕೋನ, ಮೌಲ್ಯಗಳಿಗೆ ಆಳವಾದ ಬದ್ಧತೆ, ರಾಜಿಯಾಗದ ಪ್ರಾಮಾಣಿಕತೆ ಮೊದಲಾದವುಗಳಿಂದಾಗಿ ತನ್ನ ದೀರ್ಘ ಮತ್ತು ಚಾರಿತ್ರಿಕ ಸಾರ್ವಜನಿಕ ಬದುಕಿನಲ್ಲಿ ಪಕ್ಷ ಮತ್ತು ಸಿದ್ಧಾಂತಗಳನ್ನು ಮೀರಿ ತನ್ನ ಸಂಪರ್ಕಕ್ಕೆ ಬಂದ ಎಲ್ಲ ಜನರ ಪ್ರೀತಿ ಮತ್ತು ಗೌರವಗಳನ್ನು ಗಳಿಸಿದರು.”

ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಕಾರ, ಗುಪ್ತಾ ಅವರು “ಅತ್ಯುನ್ನತ ವ್ಯಕ್ತಿತ್ವ”ವನ್ನು ಹೊಂದಿದ್ದರು. ಅವರ “ಜೀವನವು ತೆರೆದ ಪುಸ್ತಕದಂತೆ” ಇತ್ತು.

ಡಿಸೆಂಬರ್ 5, 2006 ರಂದು, ಆಗಿನ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಸಂಸತ್ ಭವನದಲ್ಲಿ ಇಂದ್ರಜಿತ್‌ ಗುಪ್ತಾರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page