ಸಂಸತ್ತಿನ ಪೂರ್ವಸೂರಿಗಳು – 27 : ಮೊಟ್ಟ ಮೊದಲ ಮಹಿಳಾ ಕ್ಯಾಬಿನೆಟ್‌ ಮಂತ್ರಿ ರಾಜಕುಮಾರಿ ಅಮೃತ್‌ ಕೌರ್‌

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೇಳನೆಯ ಲೇಖನ

ಅಮೃತ್‌ ಕೌರ್ ಅವರು ಭಾರತದ ಸಂವಿಧಾನ ಸಭೆ (1946-50), ಮಧ್ಯಂತರ ಸರಕಾರ (1950-52), ಲೋಕಸಭೆ (1952-57) ಮತ್ತು ರಾಜ್ಯಸಭೆಗಳಲ್ಲಿ (1957-62) ಸದಸ್ಯರಾಗಿದ್ದವರು.

ಅಪ್ರತಿಮ ದೇಶಪ್ರೇಮಿ, ಪ್ರಖ್ಯಾತ ಸಂಸದೀಯ ಪಟು, ಅಹಿಂಸಾವಾದಿ, ಮಹಿಳೆಯರು ಮತ್ತು ಹಿಂದುಳಿದವರ ವಿಮೋಚನೆಗಾಗಿ ನಿಸ್ವಾರ್ಥವಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದ ಕಾರ್ಯಕರ್ತೆ… ಹೀಗೆ ರಾಜಕುಮಾರಿ ಅಮೃತ್‌ ಕೌರ್‌ ಅವರು ಭಾರತದ ರಾಷ್ಟ್ರೀಯ ಬದುಕು ಮತ್ತು ರಾಜಕಾರಣದ ಮೇಲೆ ಎಂದೂ ಅಳಿಯದ ತಮ್ಮ ಹೆಗ್ಗುರುತನ್ನು ಮೂಡಿಸಿದವರು.

ರಾಜಕುಮಾರಿ ಡೇಮ್‌ ಬೀಬೀಜಿ ಅಮೃತ್‌ ಕೌರ್‌ (ಅಹ್ಲುವಾಲಿಯಾ) ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ಸ್ವತಂತ್ರ ಭಾರತದ ಮೊಟ್ಟ ಮೊದಲ ಮಹಿಳಾ ಕ್ಯಾಬಿನೆಟ್‌ ಮಂತ್ರಿ ಕೂಡ ಅವರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಕಾಲದಿಂದ ಗುರುತಿಸಿಕೊಂಡಿದ್ದ ಅವರು 1947 ರಲ್ಲಿ ದೇಶದ ಮೊದಲ ಆರೋಗ್ಯ ಸಚಿವೆಯಾಗಿ ನೇಮಕಗೊಳ್ಳುತ್ತಾರೆ. 1957 ರ ತನಕವೂ ಅವರು ಮಂತ್ರಿಯಾಗಿ ಮುಂದುವರಿಯುತ್ತಾರೆ. ಕ್ರೀಡೆ, ನಗರಾಭಿವೃದ್ಧಿ ಇಲಾಖೆಗಳ ಉಸ್ತುವಾರಿಯನ್ನೂ ಹೊತ್ತಿದ್ದ ಅವರು ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ನ ಅಧಿಕಾರಾವಧಿಯಲ್ಲಿ ಕೌರ್‌, ದೇಶದಾದ್ಯಂತ ಹಲವು ಆರೋಗ್ಯ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಆರೋಗ್ಯ ವಲಯಕ್ಕೆ ಅವರು ನೀಡಿದ ಕೊಡುಗೆಗಳು ಮತ್ತು ಮಹಿಳಾ ಹಕ್ಕುಗಳ ಬಗೆಗಿನ ಪ್ರತಿಪಾದನೆಗಳಿಂದ ಅವರು ಈಗಲೂ ಸ್ಮರಣೀಯರಾಗಿದ್ದಾರೆ. ದೇಶದ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಪಂಜಾಬಿನ ಕಪುರ್ತಲಾ ರಾಜ್ಯದ ರಾಜನಾಗಿದ್ದ ರಾಜಾ ಹರ್ನಮ್‌ ಸಿಂಗ್‌ ಅವರ ಎಂಟು ಮಕ್ಕಳಲ್ಲಿ ಕೌರ್‌ ಒಬ್ಬಳೇ ಹೆಣ್ಣು ಮಗಳಾಗಿದ್ದರು. ಅವರು 1889 ಫೆಬ್ರವರಿ 2 ರಂದು ಲಕ್ನೋದಲ್ಲಿ ಜನಿಸಿದರು. ಅವರ ತಾಯಿ ರಾಣಿ ಹರ್ನಮ್‌ ಸಿಂಗ್‌ ಬಂಗಾಳದ ಗೋಲಕ್‌ ನಾಥ್‌ ಚಟರ್ಜಿಯವರ ಮಗಳು. ತನ್ನ ತಂದೆಯ ಕಾರಣದಿಂದ ಕ್ರೈಸ್ತ ಧರ್ಮದವರಾಗಿದ್ದ ಕೌರ್‌, ಎಲ್ಲ ಧಾರ್ಮಿಕ ನಂಬಿಕೆಗಳ ಬಗ್ಗೆ ಆಳವಾದ ಗೌರವವನ್ನು ಇಟ್ಟುಕೊಂಡಿದ್ದರು.

ಆ ಕಾಲದ ಇತರ ಶ್ರೀಮಂತ ಮಕ್ಕಳಂತೆ ಕೌರ್‌ ಕೂಡ ತನ್ನ ಪ್ರಾಥಮಿಕ ಶಿಕ್ಷಣವನ್ನು ಯುಕೆಯ ಡಾರ್ಸೆಟ್‌ಶೈರ್‌ನ ಶೆರ್ಬೋರ್ನ್ ಶಾಲೆಯಲ್ಲಿ ಪಡೆದರು. ಸಣ್ಣ ಪ್ರಾಯದಲ್ಲಿಯೇ ಕೌರ್‌ ಅಲ್ಲಿಗೆ ಸೇರಿದ್ದರು. ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರು ಆಕ್ಸ್‌ಫರ್ಡ್‌ ಸೇರುತ್ತಾರೆ. ಅಲ್ಲಿ ಅವರ ಸಾಧನೆ ಅಸಾಮಾನ್ಯವಾಗಿತ್ತು. ಅವರು ಹಾಕಿ, ಕ್ರಿಕೆಟ್‌ ಮತ್ತು ಟೆನಿಸ್‌ಗಳಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದರು. ಆ ಕ್ರೀಡೆಗಳಲ್ಲಿ ಹಲವು ಬಾರಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದರು.

ಇಟಾಲಿಯನ್‌ ಮತ್ತು ಫ್ರೆಂಚ್‌ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಪಿಯಾನೋ ಮತ್ತು ವಯಲಿನ್‌ಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಅವರನ್ನು ಸಾಂಸ್ಕೃತಿಕತೆ ಮತ್ತು ಸೌಂದರ್ಯ ಶಾಸ್ತ್ರಗಳ ಉಪಾಸಕರೆಂದು ಗುರುತಿಸಲಾಗುತ್ತಿತ್ತು. ಇಂಗ್ಲೆಂಡಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸುವ ಕೌರ್, 1918 ರಲ್ಲಿ ತನ್ನ 20 ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳುತ್ತಾರೆ.

ಗಾಂಧೀಜಿಯ ಪ್ರಿಯ ಶಿಷ್ಯೆ
ಇಂಗ್ಲೆಂಡಿನಿಂದ ಭಾರತಕ್ಕೆ ಮರಳುವ ಕೌರ್‌, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ತಳೆಯುತ್ತಾರೆ. 1919 ರಲ್ಲಿ ಬಾಂಬೆಯಲ್ಲಿ ಗಾಂಧೀಜಿಯನ್ನು ಭೇಟಿಯಾಗಿ ಅವರ ವಿಚಾರಧಾರೆಗಳ ಕಡೆಗೆ ಆಕರ್ಷಿತರಾಗುತ್ತಾರೆ. ಬಹಳ ಬೇಗನೆ ಕೌರ್‌ ಗಾಂಧೀಜಿಯ ಆಪ್ತ ಶಿಷ್ಯರಲ್ಲಿ ಒಬ್ಬರಾಗಿ ಬದಲಾಗುತ್ತಾರೆ. ಸುಮಾರು 16 ವರ್ಷಗಳ ಕಾಲ ಅವರು ಗಾಂಧೀಜಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ. ಅವರ ನಡುವಿನ ಪತ್ರವ್ಯವಹಾರಗಳು ನಂತರದಲ್ಲಿ ಲೆಟರ್ಸ್‌ ಟು ಅಮೃತ್‌ ಕೌರ್‌ ಎಂಬ ಸಂಪುಟವಾಗಿ ಪ್ರಕಟವಾಗುತ್ತದೆ.

ಗಾಂಧೀಜಿಯ ವಿಚಾರಧಾರೆಗಳು ಮತ್ತು ಅಯಸ್ಕಾಂತದಂತೆ ಸೆಳೆಯುವ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದ ಅವರು ನಂತರದಲ್ಲಿ ಹೀಗೆ ಹೇಳಿದ್ದರು. “ಅವರೊಳಗೊಂದು ಶಾಂತವಾದ ಶಕ್ತಿಯಿತ್ತು, ಶ್ರದ್ಧೆಯಿತ್ತು ಮತ್ತು ಆಳವಾದ ವಿನಯವಿತ್ತು. ನನ್ನ ಹರೆಯದ ಎದೆಗೆ ಅದು ನೇರವಾಗಿ ನಾಟಿತು. ಅಂದಿನಿಂದ ನಾನು ಅವರಿಗೆ ಮತ್ತು ಅವರ ಗುರಿಗಳಿಗೆ ನಿಷ್ಠವಾಗಿ ಬದುಕುತ್ತಿದ್ದೇನೆ ಎಂದು ಭಾವಿಸಿದ್ದೇನೆ.”

ಗಾಂಧೀಜಿ ಕೂಡ ಆಕೆಯ ಮೇಲೆ ಬಹಳ ವಿಶ್ವಾಸವಿಟ್ಟಿದ್ದರು. ಅವರ ಒಂದು ಪತ್ರದಲ್ಲಿ ಹೀಗೆ ಬರೆಯುತ್ತಾರೆ. “ಬಾಲ್ಯದಿಂದಲೂ ನಾನು ಮಾಡುತ್ತಿರುವ ಒಂದು ವಿಶೇಷ ಕೆಲಸವೆಂದರೆ… ಮಹಿಳೆಗೆ ಆಕೆಯ ಘನತೆಯ ಕುರಿತು ಅರಿವು ಮೂಡಿಸುವುದು. ಒಂದು ಕಾಲದಲ್ಲಿ ನಾನು ಕೂಡ ಈ ಗುಲಾಮಿತನದ ಒಡೆಯನಾಗಿದ್ದೆ. ಆದರೆ, ನನ್ನ ಬಾ ಗುಲಾಮಳಾಗಿರಲು ಸಮ್ಮತಿಸಲಿಲ್ಲ. ಆ ಮೂಲಕ ನನ್ನ ಕಣ್ಣುಗಳನ್ನು ತೆರೆಯಿಸಿದಳು. ಅವಳ ಕೆಲಸ ಅಲ್ಲಿಗೆ ಮುಗಿಯಿತು. ನಾನೀಗ ತನ್ನ ಗುರಿಯನ್ನು ಅರ್ಥ ಮಾಡಿಕೊಂಡು ಸಾಧಿಸುವ ಒಬ್ಬ ಹೆಣ್ಣಿಗಾಗಿ ಹುಡುಕುತ್ತಿದ್ದೇನೆ.” ನಂತರ ಹೀಗೆ ಕೇಳುತ್ತಾರೆ. “ನೀನು ಆ ಹೆಣ್ಣಾ? ಆ ಹೆಣ್ಣು ನೀನಾಗುವೆಯಾ?”

ಇದನ್ನು ಗಮನಿಸಿದರೆ, ಗಾಂಧೀಯನ್‌ ಯುಗದಲ್ಲಿ ಅಷ್ಟೊಂದು ಪ್ರಮಾಣದ ಮಹಿಳಾ ನಾಯಕಿಯರು ಹುಟ್ಟಿ ಬಂದದ್ದರಲ್ಲಿ ಆಶ್ಚರ್ಯ ಅನಿಸುವುದಿಲ್ಲ. ಹಲವು ವರ್ಷಗಳ ಕಾಲ ಗಾಂಧೀಜಿಯ ಜೊತೆಗೆ ನಿಕಟ ಸಂಬಂಧ ಇರಿಸಿಕೊಂಡಿದ್ದ ಮತ್ತು ಅವರ ವಿಶ್ವಾಸವನ್ನು ಗಳಿಸಿಕೊಂಡಿದ್ದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕೌರ್‌ ಕೂಡ ಒಬ್ಬರು.

ರಾಜಕಾರಣಕ್ಕೆ ಧುಮುಕುವ ಕೌರ್‌ ಉಪ್ಪು ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಾಂಬೆಯಲ್ಲಿ ಬಂಧನಕ್ಕೊಳಗಾಗುತ್ತಾರೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗೆ ಸಂಬಂಧಿಸಿದಂತೆ 1932 ರಲ್ಲಿ ಆಗಿನ ಬ್ರಿಟಿಷ್‌ ಪ್ರಧಾನಿಯಾಗಿದ್ದ ರಾಮ್ಸೆ ಮ್ಯಾಕ್‌ಡೊನಾಲ್ಡ್‌ ಜಾರಿಗೆ ತಂದಿದ್ದ ಕಮ್ಯುನಲ್‌ ಅವಾರ್ಡನ್ನು ನಿಜವಾದ ದೇಶಪ್ರೇಮಿಯಾಗಿ ಕೌರ್‌ ಖಂಡಿಸುತ್ತಾರೆ.

1937 ಕೌರ್‌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿನಿಧಿಯಾಗಿ, ನಾರ್ಥ್‌ ವೆಸ್ಟ್‌ ಫ್ರಾಂಟಿಯರ್‌ ಪ್ರಾವಿನ್ಸ್‌ನ ಬನ್ನು (ಈಗ ಪಾಕಿಸ್ತಾನದಲ್ಲಿದೆ) ಎಂಬಲ್ಲಿಗೆ ಸದ್ಭಾವನಾ ಕಾರ್ಯಾಚರಣೆ ಮೇಲೆ ಹೋಗುತ್ತಾರೆ. ಬ್ರಿಟಿಷ್‌ ಅಧಿಕಾರಿಗಳು 1937 ಜುಲೈ 16 ರಂದು ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳುತ್ತಾರೆ. 1942 ರಲ್ಲಿ ಆರಂಭವಾದ ಕ್ವಿಟ್‌ ಇಂಡಿಯಾ ಹೋರಾಟದ ಸಮಯದಲ್ಲಿ ಅವರು ಹಲವಾರು ಜಾಥಾಗಳನ್ನು ಮುನ್ನಡೆಸಿದ್ದರು. ಶಿಮ್ಲಾದಲ್ಲಿ ನಡೆದ ಅಂತಹದ್ದೊಂದು ಜಾಥಾದಲ್ಲಿ ಅತಿಕಠಿಣವಾದ ಲಾಠೀಚಾರ್ಜಿಗೆ ಗುರಿಯಾಗುತ್ತಾರೆ. ಅದರ ನಂತರ ಅವರನ್ನು ಬಂಧಿಸಿ ಮತ್ತೆ ಜೈಲಿಗಟ್ಟಲಾಗುತ್ತದೆ. ಆಕೆಯ ಮಟ್ಟಿಗೆ ಜೈಲಿನ ಸಂಕಷ್ಟಗಳು ಅತಿ ಕಠಿಣವಾಗಿದ್ದವು. ಹಾಗಾಗಿ ನಂತರ ಅವರನ್ನು ಶಿಮ್ಲಾದಲ್ಲಿ ಗೃಹಬಂಧನದಲ್ಲಿಡಲಾಗುತ್ತದೆ.

ಬ್ರಿಟಿಷ್ ಸರಕಾರ ಕೌರ್‌ ಅವರನ್ನು ಶಿಕ್ಷಣ ಸಲಹಾ ಮಂಡಳಿಯ ಸದಸ್ಯರನ್ನಾಗಿ ನೇಮಿಸುತ್ತದೆ. ಆದರೆ 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಸಿಕೊಳ್ಳುವ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಆಗವರು ನಡೆಸಿದ ಚಟುವಟಿಕೆಗಳ ಮೇಲೆ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ.

ಸಂಸದರಾಗಿ ಮತ್ತು ಸಚಿವರಾಗಿ
ಅಮೃತ್‌ ಕೌರ್ ಅವರು ಭಾರತದ ಸಂವಿಧಾನ ಸಭೆ (1946-50), ಮಧ್ಯಂತರ ಸರಕಾರ (1950-52), ಲೋಕಸಭೆ (1952-57) ಮತ್ತು ರಾಜ್ಯಸಭೆಗಳಲ್ಲಿ (1957-62) ಸದಸ್ಯರಾಗಿದ್ದವರು. ಸಂಸದೀಯ ವ್ಯವಹಾರಗಳಲ್ಲಿ ಆಳವಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದ ಅವರು ಸದನದ ವ್ಯವಹಾರಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ಸದನದ ಕಲಾಪಗಳಿಗೆ ಮತ್ತು ಚರ್ಚೆಗಳಿಗೆ ಅವರು ಸಂಪೂರ್ಣ ಸಿದ್ಧವಾಗಿ ಬರುತ್ತಿದ್ದರು. ಸಂಸತ್ತಿನಲ್ಲಿ ಅವರು ಮಾಡಿದ ಭಾಷಣಗಳು ಭಾರತೀಯ ರಾಜಕಾರಣಕ್ಕೆ ಹೊಸ ದಿಕ್ಕನ್ನೇ ನೀಡಿ ಅದನ್ನು ಶ್ರೀಮಂತಗೊಳಿಸಿತು. ಜೊತೆಗೆ ಚಿಂತನೆಗೆ ಮೇವನ್ನು ನೀಡಿತು.

ಸ್ವತಂತ್ರ ಭಾರತದಲ್ಲಿ ಪ್ರಧಾನ ಮಂತ್ರಿ ಜವಹರ್‌ ಲಾಲ್‌ ನೆಹರೂ ಅವರು ಕೌರ್‌ ಅವರನ್ನು ತನ್ನ ಮಂತ್ರಿ ಮಂಡಲದ ಸದಸ್ಯರಾಗುವಂತೆ ಆಗ್ರಹಿಸುತ್ತಾರೆ. ಆ ಮೂಲಕ ಕೌರ್‌ ಸ್ವತಂತ್ರ ಭಾರತದ ಸಚಿವ ಸಂಪುಟದ ಮೊಟ್ಟ ಮೊದಲ ಮಹಿಳಾ ಸಚಿವೆಯೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. 1947 ಆಗಸ್ಟ್‌ 15 ರಿಂದ 1957 ಏಪ್ರಿಲ್‌ 17 ರ ತನಕ ಅವರು ಆರೋಗ್ಯ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ಏಷ್ಯಾದ ಅತ್ಯುತ್ತಮ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ನವದೆಹಲಿಯ ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಸ್ಥಾಪನೆಗೊಳ್ಳುವುದು ಕೌರ್‌ ಅವರ ಅಧಿಕಾರಾವಧಿಯಲ್ಲಿ. 1956 ಫೆಬ್ರವರಿ 18 ರಂದು ಅವರು AIIMS ಮಸೂದೆಯನ್ನು ಮಂಡಿಸುವಾಗ ಹೀಗೆ ಹೇಳಿದ್ದರು:
“ಉನ್ನತ ಅಧ್ಯಯನಕ್ಕಾಗಿ ಮತ್ತು ನಮ್ಮ ದೇಶದ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ನಾವು ನಮ್ಮ ದೇಶದಲ್ಲಿ ಇಂತಹದ್ದೊಂದು ಸಂಸ್ಥೆಯನ್ನು ಹೊಂದಿರಲೇಬೇಕು ಎಂಬುದು ನನ್ನ ಪ್ರೀತಿಯ ಕನಸಾಗಿತ್ತು. ನಮ್ಮ ಯುವಕ ಯುವತಿಯರಿಗೆ ಹಳ್ಳಿಗಳಲ್ಲಿ ಕೆಲಸ ಮಾಡಲು ಬೇಕಾದ ಅಗತ್ಯ ಅನುಭವಗಳನ್ನು ಒದಗಿಸುವುದು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ನಡೆಸಲು ಈ ಮೂಲಕ ಅವರಿಗೆ ಪ್ರಚೋದನೆ ನೀಡುವುದು ನಮ್ಮ ಗುರಿ. ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಇದೊಂದು ಶುದ್ಧವೂ ಪ್ರಾಮಾಣಿಕವೂ ಆದ ಪ್ರಯತ್ನವಾಗಿದೆ.”

ಅಶಕ್ತರ ಸಂತಾನಹರಣ ಮಸೂದೆ, ಬಿಸಿಜಿ ಲಸಿಕಾ ಕಾರ್ಯಕ್ರಮ, ಜಾಂಡಿಸ್‌ ತನಿಖಾ ಸಮಿತಿಯ ವರದಿ, ಆಹಾರದ ಸ್ಥಿತಿಗತಿ, ಕೌಂಟೆಸ್ ಆಫ್ ಡಫರೀನ್ಸ್ ಫಂಡ್ ಮಸೂದೆ 1957 ಮತ್ತು ನೌಕರರ ರಾಜ್ಯ ವಿಮಾ ನಿಗಮದ ವಾರ್ಷಿಕ ವರದಿ ಸಹಿತ ಅವರು ಹತ್ತು ಹಲವು ವಿಷಯಗಳು ಮತ್ತು ಸಂಸದೀಯ ವ್ಯವಹಾರಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು.

ಈ ವಿಷಯಗಳಲ್ಲಿ ಅವರು ಮುಂದಿಡುತ್ತಿದ್ದ ಬಹುತೇಕ ಸಲಹೆಗಳು ಮತ್ತು ಪರಿಹಾರಗಳನ್ನು ಸದನವು ಅಂಗೀಕರಿಸುತ್ತಿತ್ತು.

ಈ ಅವಧಿಯಲ್ಲಿ, ಅವರ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಮುಖ ಮಸೂದೆಗಳಾದ ಭಾರತೀಯ ವೈದ್ಯಕೀಯ ಮಂಡಳಿ ಮಸೂದೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ (ತಿದ್ದುಪಡಿ) ಮಸೂದೆ, ಸರ್ಕಾರಿ ನಿವೇಶನ (ಒಕ್ಕಲೆಬ್ಬಿಸುವಿಕೆ) ತಿದ್ದುಪಡಿ ಮಸೂದೆ, ಆಹಾರ ಕಲಬೆರಕೆ ತಡೆಗಟ್ಟುವಿಕೆ ಮಸೂದೆ, 1954, ದೆಹಲಿ (ಕಟ್ಟಡ ಕಾರ್ಯಾಚರಣೆ ನಿಯಂತ್ರಣ) ಮಸೂದೆ, 1955, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮಸೂದೆ, 1957, ಅನಾಥಾಶ್ರಮಗಳು ಮತ್ತು ಇತರ ಧರ್ಮಾರ್ಥ ನಿವಾಸಗಳ ಮಸೂದೆ, 1959, ಮಕ್ಕಳ ಮಸೂದೆ, 1959, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಸೂದೆ, 1959, ಜಿನೀವಾ ಸಮಾವೇಶ ಮಸೂದೆ, 1960, ಔಷಧ (ತಿದ್ದುಪಡಿ) ಮಸೂದೆ, 1961 ಮೊದಲಾದವುಗಳು ದೀರ್ಘ ಚರ್ಚೆಗೆ ಗುರಿಯಾಗಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದವು.

1927 ರಲ್ಲಿ ಕೌರ್‌ ಅವರು ಆಲ್‌ ಇಂಡಿಯಾ ವುಮೆನ್ಸ್‌ ಕಾನ್ಫರೆನ್ಸಿನ ಸಹಸ್ಥಾಪಕರಾಗಿದ್ದರು. 1930 ರಲ್ಲಿ ಅದರ ಕಾರ್ಯದರ್ಶಿಯಾಗುವ ಅವರು 1933 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ.

1964 ಫೆಬ್ರವರಿ 6 ರಂದು ಕೌರ್‌ ನವದೆಹಲಿಯಲ್ಲಿ ನಿಧನರಾಗುತ್ತಾರೆ. ತಾನು ಸಾಯುವ ಕಾಲದಲ್ಲಿ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದರೂ ಅವರನ್ನು ಕುಟುಂಬ ಪದ್ಧತಿಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುತ್ತದೆ. ಅಂತ್ಯಕ್ರಿಯೆ SGPC ನಡೆಸಿಕೊಡುತ್ತದೆ. ಕೌರ್‌ ವಿವಾಹಿತರಾಗಿರಲಿಲ್ಲ ಮತ್ತು ಮಕ್ಕಳನ್ನೂ ಹೊಂದಿರಲಿಲ್ಲ.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು