‌ಅಸ್ಸಾಮ್‌ | ಎಎನ್-32 ವಿಮಾನ ದುರಂತದಲ್ಲಿ ಐದು ಜನ ಐಎಎಫ್ ಸಿಬ್ಬಂದಿ ಸಾವು: ತನಿಖೆಗೆ ಆದೇಶಿಸಿದ ವಾಯುಪಡೆ

ಗುವಾಹಟಿ: ಅಸ್ಸಾಂನ ಜೋರಹಾಟ್ ವಾಯುನೆಲೆಯಲ್ಲಿ ಸಂಭವಿಸಿದ ಎಎನ್-32 ಮಿಲಿಟರಿ ಸಾರಿಗೆ ವಿಮಾನ ಪತನದ ದುರಂತದಲ್ಲಿ ಐದು ಜನ ವಾಯುಪಡೆ ಸಿಬ್ಬಂದಿ ವೀರಮರಣ ಹೊಂದಿದ್ದಾರೆ ಎಂದು ಭಾರತೀಯ ವಾಯುಪಡೆ (IAF) ಅಧಿಕೃತವಾಗಿ ಪ್ರಕಟಿಸಿದೆ. ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ‌ಜೋರಹಾಟ್‌ನ ರೌರಿಯಾ ವಾಯುನೆಲೆಯಲ್ಲಿ ಸಾಮಾನ್ಯ ಹಾರಾಟ ಮುಗಿಸಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ವಿಮಾನವು ರನ್‌ವೇನಿಂದ ಪಕ್ಕಕ್ಕೆ ಜಾರಿ, ಎರಡು ತುಂಡುಗಳಾಗಿ ಭಾರಿ ಬೆಂಕಿಗೆ ಆಹುತಿಯಾಗಿದೆ. ಕರ್ತವ್ಯಲ್ಲಿದ್ದಾಗಲೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ ವಾಯು ಡ್ಯಾನಿಶ್ ಆಲಂ ಎಂದು ಗುರುತಿಸಲಾಗಿದೆ.

ಈ ಭೀಕರ ಅಪಘಾತದಲ್ಲಿ ವಿಮಾನದ ಕೋ-ಪೈಲಟ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಪ್ರಸ್ತುತ ಮಿಲಿಟರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತಕ್ಕೆ ನಿಖರವಾದ ಕಾರಣವೇನೆಂಬುದನ್ನು ಪತ್ತೆಹಚ್ಚಲು ಭಾರತೀಯ ವಾಯುಪಡೆಯು ಉನ್ನತ ಮಟ್ಟದ ತನಿಖಾ ಸಮಿತಿಯಾದ ‘ಕೋರ್ಟ್ ಆಫ್ ಎನ್‌ಕ್ವೈರಿ’ಗೆ ಆದೇಶಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ಕ್ರಾಶ್ ಸೈಟ್ ಮ್ಯಾನೇಜ್ಮೆಂಟ್ ಮತ್ತು ಪ್ರಾಥಮಿಕ ತನಿಖಾ ಪ್ರಕ್ರಿಯೆಗಳು ಚುರುಕಿನಿಂದ ನಡೆಯುತ್ತಿವೆ.

ಅಧಿಕೃತ ಹಾಗೂ ನಿಖರವಾದ ತನಿಖಾ ವರದಿ ಬರುವ ಮುನ್ನ ಸಾರ್ವಜನಿಕರು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಕುರಿತು ಯಾವುದೇ ಊಹಾಪೋಹದ ವದಂತಿಗಳನ್ನು ಹರಡದಂತೆ ಹಾಗೂ ಚರ್ಚಿಸದಂತೆ ವಾಯುಪಡೆ ಮನವಿ ಮಾಡಿದೆ. ಮೃತಪಟ್ಟ ವೀರ ಯೋಧರ ಕುಟುಂಬಗಳಿಗೆ ವಾಯುಪಡೆಯು ಸಂತಾಪವನ್ನು ಸೂಚಿಸಿದ್ದು, ದೇಶವು ಈ ದುಃಖದ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲಲಿದೆ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು