ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳನ್ನು ವಿರೋಧಿಸಿ ಈ ತಿಂಗಳ 22ರಂದು ದೇಶಾದ್ಯಂತ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಐದು ಎಡಪಕ್ಷಗಳು ಜಂಟಿ ಕರೆ ನೀಡಿವೆ.
ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಆರ್‌ಎಸ್‌ಪಿ ಮತ್ತು ಎಐಎಫ್‌ಬಿ ನಾಯಕರಾದ ಎಂ.ಎ. ಬೇಬಿ, ಡಿ. ರಾಜಾ, ದೀಪಂಕರ್ ಭಟ್ಟಾಚಾರ್ಯ, ಮನೋಜ್ ಭಟ್ಟಾಚಾರ್ಯ ಮತ್ತು ಜಿ. ದೇವರಾಜನ್ ಅವರು ಬುಧವಾರ ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಂದಿನ ಯುಪಿಎ ಸರ್ಕಾರದ ಮೇಲೆ ಎಡಪಕ್ಷಗಳು ಹೇರಿದ್ದ ಒತ್ತಡದ ಫಲವಾಗಿ ರೂಪಿತಗೊಂಡಿದ್ದ ನರೇಗಾ ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ಸರ್ಕಾರವು ನರೇಗಾ ಬದಲಿಗೆ ಹೊಸದಾಗಿ ತರಲು ಉದ್ದೇಶಿಸಿರುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಅಥವಾ ‘ಜಿ ರಾಮ್ ಜಿ’ ಬಿಲ್-2025 ಮಸೂದೆಯನ್ನು ವಿರೋಧಿಸಿ ಬೃಹತ್ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಎಡಪಕ್ಷಗಳು ಮನವಿ ಮಾಡಿವೆ. ನರೇಗಾವು ಸಾರ್ವತ್ರಿಕ ಮತ್ತು ಬೇಡಿಕೆ ಆಧಾರಿತವಾಗಿ ಕೆಲಸದ ಹಕ್ಕನ್ನು ಕಲ್ಪಿಸುವ ಕಾಯ್ದೆಯಾಗಿದೆ.
ಹೊಸ ಮಸೂದೆಯು ಈ ಕಾಯ್ದೆಯ ಸ್ವರೂಪವನ್ನೇ ಬದಲಿಸುತ್ತಿದ್ದು, ಕನಿಷ್ಠ ಹಕ್ಕುಗಳನ್ನೂ ಜನರಿಗೆ ಸಿಗದಂತೆ ನಿರಾಕರಿಸುತ್ತಿದೆ. ಅಲ್ಲದೆ, ಬೇಡಿಕೆಗೆ ತಕ್ಕಂತೆ ಅನುದಾನ ನೀಡಬೇಕಾದ ತನ್ನ ಕಾನೂನುಬದ್ಧ ಜವಾಬ್ದಾರಿಯಿಂದ ಕೇಂದ್ರ ಸರ್ಕಾರವು ನುಣುಚಿಕೊಳ್ಳಲು ಇದು ದಾರಿ ಮಾಡಿಕೊಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಉದ್ಯೋಗ ಖಾತರಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸುತ್ತಿರುವುದಾಗಿ ಸರ್ಕಾರವು ಆಕರ್ಷಕವಾಗಿ ಬಿಂಬಿಸುತ್ತಿದ್ದರೂ, ಉದ್ಯೋಗ ಕಾರ್ಡ್‌ಗಳ ವರ್ಗೀಕರಣದ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ಗ್ರಾಮೀಣ ಕುಟುಂಬಗಳನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತಿದೆ. ಕೃಷಿ ಚಟುವಟಿಕೆಗಳು ಹೆಚ್ಚಿರುವ ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗ ಖಾತರಿ ಕೆಲಸಗಳನ್ನು ಸ್ಥಗಿತಗೊಳಿಸುವುದರಿಂದ, ಅತ್ಯಂತ ಅಗತ್ಯವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದಂತಾಗುತ್ತದೆ ಮತ್ತು ಅವರು ಅನಿವಾರ್ಯವಾಗಿ ಭೂಮಾಲೀಕರ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ ಎಂದು ಎಡಪಕ್ಷಗಳು ವಿವರಿಸಿವೆ.
ಇದರೊಂದಿಗೆ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿರುವುದು ಕೆಲಸದ ಒತ್ತಡವನ್ನು ಹೆಚ್ಚಿಸುವುದಲ್ಲದೆ ಕಾರ್ಮಿಕರಿಗೆ ಅನೇಕ ತೊಂದರೆಗಳನ್ನು ತಂದೊಡ್ಡುತ್ತಿದೆ.
ಯೋಜನೆಗೆ ಹಣಕಾಸು ಒದಗಿಸುವ ವಿಧಾನದಲ್ಲಿ ಬದಲಾವಣೆ ತರುವ ಮೂಲಕ ಕೇಂದ್ರವು ತನ್ನ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ವರ್ಗಾಯಿಸುತ್ತಿದೆ ಎಂದು ಎಡಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಇದರಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವಿಲ್ಲದಂತಾಗುವುದಲ್ಲದೆ, ಅತಿಯಾದ ಆರ್ಥಿಕ ಹೊರೆಯು ರಾಜ್ಯಗಳ ಮೇಲೆ ಬೀಳಲಿದೆ. ನಿರುದ್ಯೋಗ ಭತ್ಯೆ ಮತ್ತು ಕೆಲಸ ನೀಡಲು ವಿಳಂಬವಾದರೆ ನೀಡಬೇಕಾದ ನಷ್ಟ ಪರಿಹಾರದ ವೆಚ್ಚವನ್ನೂ ಸಹ ರಾಜ್ಯಗಳೇ ಭರಿಸಬೇಕಾಗುತ್ತದೆ.
ಈ ಎಲ್ಲಾ ಬದಲಾವಣೆಗಳು ಯೋಜನೆಯು ಜನರಿಗೆ ತಲುಪದಂತೆ ಮಾಡಲು ಮತ್ತು ಕೇಂದ್ರದ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ರೂಪಿಸಲಾಗಿದೆ ಎಂಬುದು ಅವರ ವಾದವಾಗಿದೆ.
ಯೋಜನೆಯ ಹೆಸರನ್ನು ನರೇಗಾದಿಂದ ‘ಜಿ ರಾಮ್ ಜಿ’ ಎಂದು ಬದಲಿಸಿರುವುದು ಮಹಾತ್ಮ ಗಾಂಧೀಜಿಯವರಿಗೆ ಮಾಡಿದ ಅವಮಾನವಾಗಿದೆ ಮತ್ತು ಅವರ ಪರಂಪರೆಯ ಬಗ್ಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಇರುವ ಶತ್ರುತ್ವವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ನಾಯಕರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ತಕ್ಷಣವೇ ಈ ಹೊಸ ಬಿಲ್ ಅನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಯೋಜನೆಯನ್ನು ಸಾರ್ವತ್ರಿಕಗೊಳಿಸಿ, ಅಗತ್ಯ ನಿಧಿಯನ್ನು ಕೆಟಾಯಿಸಿ, ವರ್ಷಕ್ಕೆ ಕನಿಷ್ಠ ೨೦೦ ದಿನಗಳ ಉದ್ಯೋಗ ಖಾತರಿ ನೀಡುವ ಮೂಲಕ ನರೇಗಾವನ್ನು ಇನ್ನಷ್ಟು ಬಲಪಡಿಸಬೇಕೆಂದು ಎಡಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.
