Sunday, July 27, 2025

ಸತ್ಯ | ನ್ಯಾಯ |ಧರ್ಮ

ಹಾಸನ : ಬುಡಕಟ್ಟು ಸಮುದಾಯದ ವಿಧ್ಯಾರ್ಥಿನಿಯಿಂದ ಧ್ವಜಾರೋಹಣ

ದೇಶದೆಲ್ಲೆಡೆ 77 ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಾಕ್ಷಿಯಾಗಿದೆ. ಕೆಲವು ಕಡೆಗಳಲ್ಲಿ ಕೆಲವಷ್ಟು ವಿಶೇಷ ಕೆಲವಷ್ಟು ಎಡರು ತೊಡರು ನಡೆದ ಬಗ್ಗೆಯೂ ವರದಿಯಾಗಿದೆ. ಇತ್ತ ಹಾಸನದಲ್ಲಿ ಬುಡಕಟ್ಟು ಸಮುದಾಯದ ವಿಧ್ಯಾರ್ಥಿನಿ ಕೈಯಿಂದ ಧ್ವಜಾರೋಹಣ ನೆರವೇರಿಸಿ ಹೊಸತನಕ್ಕೆ ನಾಂದಿ ಹಾಡಿದ ವಿಶೇಷ ಸಂಭ್ರಮಕ್ಕೆ ಈ ಬಾರಿಯ ಸ್ವಾತಂತ್ರೋತ್ಸವ ಸಾಕ್ಷಿಯಾಗಿದೆ.

ಹಾಸನ ಜಿಲ್ಲೆಯ ಎಸ್ಪಿ ಹರಿರಾಮ್ ಶಂಕರ್ ತಮ್ಮ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆದಿವಾಸಿ ಬುಡಕಟ್ಟು ಬಾಲಕಿಯಿಂದ ಧ್ವಜಾರೋಹಣ ಮಾಡಿಸಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿಯ ವಿದ್ಯಾರ್ಥಿನಿ ಸಂಗೀತಾ ಎಸ್ಪಿ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಮನ ಸೆಳೆದರು.

ಅಲೆಮಾರಿ ಸಮುದಾಯದ ಸಂಗೀತಾ, 2022-23ನೇ ಸಾಲಿನಲ್ಲಿ ಬೇಲೂರಿನ ಅಂಗಡಿಹಳ್ಳಿಯ ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಎಸ್.ಎಸ್.ಎಲ್​ಸಿಯಲ್ಲಿ ಪಾಸಾಗಿದ್ದಾಳೆ. ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರಾದ ಸಂಗೀತಾ, ಹಗರೆ ಸರ್ಕಾರಿ ಪ್ರೌಡ ಶಾಲೆಯಲ್ಲಿ ಪ್ರೌಡ ಶಿಕ್ಷಣ ಪಡೆದು ಇದೀಗ ಹಗರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ.

ಹಾಸನದ ಎಸ್ಪಿ ಕಚೇರಿಯಲ್ಲಿ ನಡೆದ ಈ ಅಪರೂಪದ ಸಂಭ್ರಮಕ್ಕೆ ಪೊಲೀಸ್ ಇಲಾಖೆಯ ಅನೇಕ ಸಿಬ್ಬಂದಿ ಸಾಕ್ಷಿಯಾದರು. ಇಂತಹ ಬಾಲಕಿಯನ್ನ ಕರೆಸಿ ಧ್ವಜಾರೋಹಣ ಮಾಡಿಸೋ ಮೂಲಕ ಸಮಾಜದ ಕಟ್ಟ ಕಡೆಯ ಪ್ರಜೆಗೂ ಸ್ವಾತಂತ್ರ್ಯದ ಸಂಭ್ರಮ ತಲುಪಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾದರಿಯಾಗಿದ್ದಾರೆ‌.

ಎಸ್ಪಿಯವರ ಈ ಕಾರ್ಯ ತಮ್ಮೂರಿನ ಮತ್ತು ನಮ್ಮ ಸಮುದಾಯದ ಹಿರಿಮೆ ಹೆಚ್ಚಿಸಿದೆ ಎಂದು ಸಂಗಿತಾ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದ ನಮ್ಮ ಬುಡಕಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪೂರ್ತಿ ನೀಡಿದೆ ಎಂದು ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page