“ಹೂ ಪ್ರೇಮದ ಯುಗಾದಿ ಮತ್ತು ಚಂದ್ರ”

ಗೀತಾ ನಾರಾಯಣ್ ಅವರ ಯುಗಾದಿ ವಿಶೇಷದ ನೀಳ್ಗವಿತೆ.. ತಪ್ಪದೇ ಓದಿ

ನಡುರಾತ್ರಿ ಅಮಾವಾಸ್ಯೆಯ ಬೆನ್ನ ಮೇಲೆ ಬೆಳಕ ಚೆಲ್ಲಿದ ಅಮ್ಮ ಒಲೆಯ ಸಖ್ಯದಲ್ಲಿ ಬೇಳೆಬೆಲ್ಲದೊಡನೆ ಮಾತಿಗಿಳಿಯುತ್ತಿದ್ದಳು ಮುಸುರೆ ಹಬ್ಬದ ಜೋರು ಸುಸ್ತು ಹಬ್ಬದ ಹೋಳಿಗೆಯ ಮೇಲೆ ಹದವ ಮೂಡಿಸಿ ಬೇಯುವಾಗ ಅತ್ತೆಯ ಕೈಗಳಲ್ಲಿ ಬೊಬ್ಬೆ ಕಾಣುತ್ತಿದ್ದವು
ಅಮ್ಮನ ಕೈ ಊತ ಮಾತ್ರ ಯಾವಾಗಲೂ ಯಾರ ಕಣ್ಣಿಗೂ ಬಿದ್ದಿಲ್ಲ…….
ದೊಡ್ಡ ಜಗಲಿ, ಸಣ್ಣ ಜಗಲಿಯ ದಡದಲ್ಲೆರಡು ನಿಂತೇ ಕತೆಹೇಳುವ ಕಂಬಗಳು
ಕಣಜ,ವಾಡೆ,ಬಾನಿ, ಕೊಟ್ಟಿಗೆಯಲ್ಲಿ ಬಾಲ ಬೀಸುತ್ತಿದ್ದ ಬೇಸಾಯದ ಎರಡು ಹರೆಯದ ಮಕ್ಕಳು, ಅಡ್ಡ ಕಟ್ಟಿದ “ಗಳ”ದಲ್ಲಿ ಘಮ್ಮೆನ್ನುವ ಬೆಳ್ಳುಳ್ಳಿ,ಉಳ್ಳಿಗೆಡ್ಡೆಯ ಗುದಿಗಳು ಆಗಾಗ ತಲೆಬಾಗಿಲ ಸಜ್ಜೆಯ ಮೇಲೆ ಅರ್ವಾಳೆ ಕುಡ್ಲುಗಳ ಮಗ್ಗುಲಲ್ಲೇ ಸುತ್ತಿ ವಿಶ್ರಾಂತಿಯಲ್ಲಿರುತ್ತಿದ್ದ ನಾಗರ ಉರಗ ;ಎಷ್ಟೆಷ್ಟು ಕಂಬಗಳೇಳುತ್ತಿದ್ದ ಬದುಕಿನ ಸತ್ಯಗಳು……..
ಸರಿರಾತ್ರಿ ದಾಟುವ ವೇಳೆಗೆ ಕರಿಗಂಬಳಿ ಹಜಾರದ ತೊಲೆಗಳಿಗೆ ಅಡ್ಡಕಟ್ಟಿದ್ದು ಇಳಿದು ಪಿಸುಮಾತು ದೊಡ್ಡಮ್ಮನವು….ಬೆಳೆಕಾಳು ಬೆಂದವೇನ ನೋಡ್ರೆ….‌
ಕಾಯೇಸ್ತುರುದ್ರಿ,ಒಣ್ಕಾಯ ನೋಡಿ ತುರೀರಿ….
ತುರಿದು, ಕುಟ್ಟಿ,ಅರೆದು ಹೋಳಿಗೆ ಬೇಯುವಾಗ ಇನ್ನೇನು ನಸುಕು ಮೌನಮುರಿದು ಜೊತೆಯಾಗುತ್ತಿತ್ತು…..
ಉದಾಸ್ಲನ್ನು ಸದಾ ಎಡಬಿಡದೆ ನೋಡುತ್ತಿದ್ದ ಮನೆಯ ಮಕ್ಕಳಂತೆಯೇ ಪೋಷಿಸಿಕೊಂಡು ಬೆಳೆದ ದೊಡ್ಡ ಬಡ್ಡೆಯ ಬೇವಿನ ಮರ ಅಂಗಳದ ತುಂಬೆಲ್ಲ ಹೂ ಚೆಲ್ಲಿ ತಟಸ್ಥವಾಗಲೇ ಇಲ್ಲ.
ಹತ್ತಾರು ಕಂದಮ್ಮಗಳ ಊಗಾಲೆಯಲ್ಲಿ ತೂಗಿ ತೂಗಿ ನಿರಾಳವಾದ ನೀರಗ್ಗ ಕೊಂಬೆಯ ಪ್ರೇಮ ನಿರಂತರ
ಒರಗ್ಳು ಬೂತಪ್ಪನ ಗುಡಿ,ತಾತುನ್ ಗುಡ್ಡೆ, ಪೂಜುವ ಆಚಾರ ಯಾವ ಧರ್ಮದ ಹೊಗೆಯೂ ಅಲ್ಲದ ಪರಂಪರೆಯಷ್ಟೆ……
ದಾಯಾದಿಗಳೆಂದೂ ಆಗದ ಅಪ್ಪ,ದೊಡ್ಡಪ್ಪ ಕಡೆದೂ ಕಡೆದೂ ಬೇದವತೋರದೆ ನೆಲುವಿನ ತುಪ್ಪದ ಕುಡಿಕೆ ತುಂಬಿಸಿ ಮನೆಮಕ್ಕಳೆಲ್ಲರ ಕಣ್ಣಲ್ಲಿ ಬೆಳಕಿನ ಸೊಡರಿಟ್ಟ ದೊಡ್ಡಮ್ಣನಲ್ಲಿ..ಉಗಾದಿಯೆಂದೂ ತಗಾದೆಯಾಗಲೇ ಇಲ್ಲ
ಅದೆಷ್ಟು ಸವೆದರೊ? ಅಮ್ಮಂದಿರು…..ಮರುದಿನದ ತಿಂಗಳನ ಬಾಗುವಿಕೆ ಕಳವಳ ಈ ಬಾರಿ ಮಳೆಬೆಳೆ ಎಂಗಾಗುತ್ತೋ? ಒಲೆಗೂ ಸಡಗರತಂದ ಮರುದಿನದ ಪರಿಮಳ ತಾಕತ್ತಿನದು….
ಉಗಾದಿಗಳೆಷ್ಟು ಕಾಲಕ್ಕೆ ಸರಿದವೋ? ಜಂತೆಗೆ ಕಟ್ಟಿದ ಹೋಳಿಗೆಯರಡಿದ ಸಿಬ್ಬಲು ಮಾತ್ರ ಸಿಹಿಕಹಿಗಳ ಸಂಕಲನ.
ಅಮ್ಮನ ಕಣ್ಗಡಲು ಒಂದು ದಿನ ಬತ್ತಿದಾಗ ನಾನಿನ್ನೂ ಒಲೆಯ ಕಾವಿಗೆ ಜೊತೆಯಾಗಿ ಸೀಯದೆ ಬೆಂದ ಹೋಳಿಗೆಯ ಕನಸಿನವಳು…..
ಅಮ್ಮಂದಿರ ಸಂಕಟಗಳನ್ನೆಲ್ಲ ಮೌನವಾಗಿ ಆಲಿಸಿದ ದೊಡ್ಡಳ್ಳ ಮುಳುಗಿ ಹೋಗಿದೆ
ಬೇವಿನ ಮರ ವ್ಯಾಪಾರ ಕಲಿತು ಬೇರು ಸಮೇತ ಎದ್ದೇಹೋಯಿತು; ಹಗಲಿರುಳ ಎಣಿಸದೆ ಪಿತ್ತಬೀಸಿದ ಕೈಗಳೆಲ್ಲಿ?ತೂಗಿದ ಹಗ್ಗದ ಗುರುತೆಲ್ಲೂ ಉಳಿದಿಲ್ಲ…..
ಒಂದು ದೊಡ್ಡ ಮಳೆಗೆ ಧರೆಯ ಅಪ್ಪಿದ ಮನೆಯ ಕಂಬಗಳಾದರೂ ಸಿಗಬೇಕಿತ್ತು ಜೋಲಿಯ ನಿದ್ದೆಯಾದರೂ ಸ್ಮರಣೆಗೆ ಬರುತ್ತಿತ್ತು. ಉಗಾದಿ ಉಳಿದು ಬೆಳೆದು ಬದಲಾಗಿ ಸಾಗುತ್ತಲೇ ಇದೆ ಎಲ್ಲವ ಕಳೆದುಕೊಂಡು; ಮತ್ತೇನೋ ಗಳಿಸಿಕೊಂಡು ಹೊಸದನ್ನು….
ಚಂದ್ರನಿಗೂ,ಬೇವುಬೆಲ್ಲಕ್ಕೂ ತಂದಿಟ್ಟವರು ಮಾತ್ರ ಉಬ್ಬುಬ್ಬಿ ಹೋಳಿಗೆಯಿಲ್ಲದ ಉಗಾದಿಗೆ ಸುಡುವ ರೂಪ ಕೊಟ್ಟಿದ್ದಾರೆ…
ನನ್ನ ಉಗಾದಿ ಎಂದೆಂದೂ ತೋರಣವ ಬಿಟ್ಟಿಲ್ಲ…….
ಗಡಿಗಳಲ್ಲಿ ಹಬ್ಬದೂಟವನುಂಡು ಬೇವು ಬೆಲ್ಲ ಹಂಚಿ ಚಂದ್ರನನ್ನು ಸ್ವಾಗತಿಸೋಣ…….

Related Articles

ಇತ್ತೀಚಿನ ಸುದ್ದಿಗಳು