Home ರಾಜಕೀಯ ಹಿಂದುಳಿದ 11 ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು; ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ...

ಹಿಂದುಳಿದ 11 ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು; ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹2,500 ಪ್ರೋತ್ಸಾಹಧನ; ಸಚಿವ ಸಂಪುಟ ಅಸ್ತು

0

ಬೆಂಗಳೂರು : ರಾಜ್ಯದ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಕೊಂಡೊಯ್ಯುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಯೋಜನೆಯಡಿ ಹಿಂದುಳಿದ 11 ಜಿಲ್ಲೆಗಳಲ್ಲಿ ಒಟ್ಟು 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಾಗಲಕೋಟೆ ಸೇರಿದಂತೆ ಹಿಂದುಳಿದ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಸ್ತಿತ್ವದಲ್ಲಿರುವ ಉದ್ಯಮಗಳ ವಿಸ್ತರಣೆಗೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಅರ್ಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ಸೇರಿದಂತೆ ಕೈಗಾರಿಕಾ ಸಂಸ್ಥೆಗಳು ಹೆಚ್ಚುವರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡರೆ, ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹2,500ರಂತೆ ಗರಿಷ್ಠ 24 ತಿಂಗಳವರೆಗೆ ಸರ್ಕಾರ ಪ್ರೋತ್ಸಾಹಧನ ನೀಡಲಿದೆ. ಯೋಜನೆಗೆ ವಾರ್ಷಿಕ ₹305 ಕೋಟಿ ಅನುದಾನ ಮೀಸಲಿಡಲಾಗಿದೆ.

ಹೊಸ ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಕೇವಲ ಕಾಗದದ ಮೇಲಿನ ನೇಮಕಾತಿಗಳಿಗೆ ಪ್ರೋತ್ಸಾಹಧನ ಸಿಗದಂತೆ ಸರ್ಕಾರ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಿದೆ. ಉದ್ಯೋಗಿಗಳ ನೇಮಕಾತಿ ಹಾಗೂ ಅವರಿಗೆ ನಿಜವಾಗಿಯೂ ವೇತನ ಪಾವತಿಯಾಗುತ್ತಿರುವುದನ್ನು ಪರಿಶೀಲಿಸಿದ ಬಳಿಕವೇ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ಕೆಲವೇ ಪ್ರಮುಖ ನಗರಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯೋಗಗಳು ಕೇಂದ್ರೀಕೃತವಾಗಿರುವುದನ್ನು ತಪ್ಪಿಸಿ, ರಾಜ್ಯದ ವಿವಿಧ ಭಾಗಗಳಿಗೆ ಹೂಡಿಕೆ ಹರಿಸುವುದು ಸರ್ಕಾರದ ಉದ್ದೇಶವಾಗಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾದರೆ ಯುವಜನರು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಈ ಯೋಜನೆಯನ್ನು ರಾಜ್ಯದ ‘ಯುವ ನಿಧಿ’ ಯೋಜನೆಯೊಂದಿಗೆ ಸಮನ್ವಯಗೊಳಿಸಿ ಜಾರಿಗೊಳಿಸಲಾಗುತ್ತದೆ. ಯುವ ನಿಧಿ ಮೂಲಕ ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಪಡೆಯುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದ್ದರೆ, ‘ಉದ್ಯೋಗ ನಿಧಿ’ ಮೂಲಕ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ನೇರ ಪ್ರೋತ್ಸಾಹ ನೀಡಲಾಗುತ್ತದೆ.

ಅಭಿವೃದ್ಧಿ ಬೆಂಗಳೂರು ಅಥವಾ ಕೆಲವೇ ನಗರಗಳಿಗೆ ಸೀಮಿತವಾಗದೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಹೂಡಿಕೆ ಮತ್ತು ಉದ್ಯೋಗಾವಕಾಶಗಳು ತಲುಪಬೇಕು. ಯುವಜನರು ತಮ್ಮ ಊರು, ಜಿಲ್ಲೆಗಳನ್ನು ತೊರೆದು ಉದ್ಯೋಗಕ್ಕಾಗಿ ದೂರ ತೆರಳಬೇಕಾದ ಪರಿಸ್ಥಿತಿ ಬದಲಾಗಬೇಕು. ಸ್ಥಳೀಯ ಮಟ್ಟದಲ್ಲೇ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಯುವಜನರಿಗೆ ತಮ್ಮ ಪ್ರದೇಶದಲ್ಲಿಯೇ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಸರ್ಕಾರದ ಬೆಂಬಲ ದೊರೆಯುವುದರ ಜೊತೆಗೆ, ಉದ್ಯೋಗಗಳು ನಿಜವಾಗಿಯೂ ಸೃಷ್ಟಿಯಾಗಿವೆ ಹಾಗೂ ವೇತನ ಪಾವತಿಯಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಹೀಗಾಗಿ ‘ಉದ್ಯೋಗ ನಿಧಿ’ಯನ್ನು ಕೇವಲ ಕೈಗಾರಿಕಾ ಪ್ರೋತ್ಸಾಹ ಯೋಜನೆಯಾಗಿ ನೋಡದೆ, ಫಲಿತಾಂಶ ಆಧಾರಿತ ಉದ್ಯೋಗ ಸೃಷ್ಟಿ ಕಾರ್ಯಕ್ರಮವಾಗಿ ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

You cannot copy content of this page

Exit mobile version