Wednesday, December 25, 2024

ಸತ್ಯ | ನ್ಯಾಯ |ಧರ್ಮ

ಮೊದಲು ಮಾನವನಾಗು

“..ಸಚಿವೆಯೊಬ್ಬರಿಗೆ ಬಳಸಿದ್ದಾರೆ ಎನ್ನಲಾದ ಪದದ ಕುರಿತು ಹಲವಷ್ಟು ಚರ್ಚೆ, ಪ್ರತಿಭಟನೆಗಳಾಗುತ್ತಿವೆ. ಉನ್ನತ ಸ್ಥಾನದಲ್ಲಿನ ಹಾಗೂ ಸಚಿವ ಸಂಪುಟದಲ್ಲಿನ ಏಕೈಕ ಮಹಿಳೆಗೆ ಒಂದು ಅಶ್ಲೀಲ ಪದ ಬಳಕೆ ಮಾಡಿದ್ದರ ವಿರುದ್ಧ ಪ್ರತಿಭಟನೆಗಳಾಗುತ್ತಿರುವುದು ಸ್ವಾಗತಾರ್ಹ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಸಚಿವೆಯೊಬ್ಬರಿಗೆ ಬಳಸಿದ್ದಾರೆ ಎನ್ನಲಾದ ಪದದ ಕುರಿತು ಹಲವಷ್ಟು ಚರ್ಚೆ, ಪ್ರತಿಭಟನೆಗಳಾಗುತ್ತಿವೆ. ಉನ್ನತ ಸ್ಥಾನದಲ್ಲಿನ ಹಾಗೂ ಸಚಿವ ಸಂಪುಟದಲ್ಲಿನ ಏಕೈಕ ಮಹಿಳೆಗೆ ಒಂದು ಅಶ್ಲೀಲ ಪದ ಬಳಕೆ ಮಾಡಿದ್ದರ ವಿರುದ್ಧ ಪ್ರತಿಭಟನೆಗಳಾಗುತ್ತಿರುವುದು ಸ್ವಾಗತಾರ್ಹ. ವ್ಯಂಗ್ಯವೆಂದರೆ, ನಮ್ಮ ನೆಲದ ಮುಕ್ಕಾಲುವಾಸಿ ಕುಟುಂಬದಲ್ಲಿ ಹೆಣ್ಣು ಇಂದು ಅದೇ ಪದಬಳಕೆಯಿಂದಲೇ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.

ಪಿತೃಪ್ರಧಾನ ಸಮಾಜದಲ್ಲಿ ಬೆರೆತುಹೋಗಿರುವ ಬೈಗುಳಗಳಲ್ಲಿ ಹೆಚ್ಚಿನ ಪಾಲು ಮಹಿಳೆಯ ಶೋಷಣೆ ಮಾಡುವಂತಹವೇ. ಬೈಯುವುದು ಗಂಡಸಿಗೇ ಆದರೂ ಬೈಗುಳದ ಮೂಲ ಹೆಣ್ಣನ್ನೇ ಶೋಷಿಸುತ್ತದೆ. ಮೊನ್ನೆಯ ಘಟನೆಯು ವ್ಯಂಗ್ಯವಾಗಿ ಬದಲಾಗಿದ್ದು ಒಬ್ಬ ಸಚಿವೆಯನ್ನು ʼಸೂಳೆʼ ಎಂದು ಕರೆದವನನ್ನು ಜನ ರೊಚ್ಚಿಗೆದ್ದು ಸೂಳೆಮಗನೇ ಎಂದು ಕರೆದರು. ಇಲ್ಲಿ ಆತನ ಜೊತೆಗೆ ಅದೇ ಮನಸ್ಥಿತಿ ಹೊಂದಿದ ಸಾವಿರಾರು ಜನರ ಮನಸ್ಥಿತಿ ಬೆತ್ತಲಾಗಿತ್ತು. ಈ ಪದಗಳು ಕೇವಲ ಗಂಡಸರಷ್ಟೇ ಅಲ್ಲ, ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿರುವ ಎಷ್ಟೋ ಹೆಂಗಸರು ಸಹ ಬಳಸುತ್ತಿರುವುದೇ ಆಗಿದೆ. ಗಂಡಸರನ್ನು ಬೈಯುವುದಾದರೂ ಅಲ್ಲಿ ಹೆಣ್ಣಿನ ಮೇಲೆ ಶೋಷಣೆಯಾಗಬೇಕು, ಒಬ್ಬ ಹೆಣ್ಣಿನ ಬಗ್ಗೆ ಮಾತನಾಡುವುದಾದರೂ ಅಲ್ಲಿಯೂ ಆಕೆಯ ಚಾರಿತ್ರ್ಯದ ಬಗ್ಗೆಯೇ ಟೀಕಿಸುವುದಾಗಿರುತ್ತದೆ ಅಷ್ಟೇ.

ದೂರದ ಸಂಬಂಧಿಯೊಬ್ಬರು ದುಡಿಯುವ ಆಸೆಯಿದ್ದವರು. ಮನೆ ನಡೆಸಲು ನಿಮ್ಮ ಮಗ ಮಾತ್ರವಲ್ಲ, ನಾನೂ ದುಡಿಯಬಲ್ಲೆ ಎಂದು ತಮ್ಮ ಅತ್ತೆಯ ಮುಂದೆ ಒಮ್ಮೆ ಮಾತನಾಡಿದ್ದರು. ತಕ್ಷಣವೇ ಆಕೆ, ಈಗ ಬಿಡು ಹೆಂಗಸರು ಹೇಗೆ ಬೇಕಾದರೂ ದುಡಿಯಬಹುದು, ಅದಕ್ಕೇನು ಎಂದು ವ್ಯಂಗ್ಯವಾಡಿದ್ದರು. ಮನೆಯ ಆರ್ಥಿಕತೆಯ ಬಗ್ಗೆಯಿರುವ ಯಾವುದೋ ಚರ್ಚೆಯನ್ನು ಕ್ಷಣಗಳಲ್ಲಿ ಸೊಸೆಯ ಚಾರಿತ್ರ್ಯವಧೆ ಮಾಡುವ ಮೂಲಕ ಒಂದು ಅಸಹ್ಯದ ಮೌನವನ್ನಾಗಿಸಿದ್ದರು ಆಕೆ.

ಕೆಲವೊಂದು ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರನ್ನು, ಹೆಚ್ಚಿನ ಸಾಮಾಜಿಕ ಒಳಗೊಳ್ಳುವಿಕೆ, ಜನರೊಂದಿಗೆ ಬೆರೆಯುವಿಕೆ, ಅಥವಾ ಕ್ಷೇತ್ರಭೇಟಿಗಳಿರುವ ಕೆಲಸದಲ್ಲಿರುವ ಮಹಿಳೆಯರಿಗೆ ಯಾರೋ ಒಬ್ಬರಾದರೂ ತಮ್ಮ ಚಾರಿತ್ರ್ಯದ ಕುರಿತು ಕುಟುಕಿರುತ್ತಾರೆ ಅಥವಾ ಮಾತನಾಡಬಹುದು ಎನ್ನುವ ಅಳುಕಿರುತ್ತದೆ.

ಪರಿಚಯದ ಗೆಳತಿಯೊಬ್ಬಳು ಶಾಲಾ ಶಿಕ್ಷಕಿ, ಒಂದಿಷ್ಟೇ ಮೇಕಪ್‌ ಜಾಸ್ತಿ ಮಾಡಿ ಚಂದದ ಸೀರೆಯುಟ್ಟ ಕೂಡಲೇ ಮನೆಯಲ್ಲಿ ನೀನೇನು ಪಾಠಮಾಡೋಕೆ ಹೋಗ್ತೀಯೋ, ಸೂಳೆಗಾರಿಕೆ ಮಾಡೋಕೆ ಹೋಗ್ತೀಯೋ ಎನ್ನುವ ಬೈಗುಳ ಕೇಳಿಬರುತ್ತದೆ. ಆ ವಾತಾವರಣಕ್ಕೆ ಸರಳವಾಗಿ ಹೋಗಬಹುದೇನೋ ಎನ್ನುವ ಒಂದು ಸೂಕ್ಷ್ಮ ಸಲಹೆಯನ್ನು ಎಷ್ಟು ಅಸಹ್ಯವಾಗಿ ಇಡೀ ಅಸ್ತಿತ್ವವೇ ಕುಸಿದು ಬೀಳುವಂತೆ ಮಾತನಾಡುವುದು ಈ ಬೈಗುಳಗಳ ಭಾಗ.

ಎಷ್ಟೋ ಮನೆಗಳಲ್ಲಿ ಇದು ಅಭ್ಯಾಸ. ಗಂಡ ಕುಡಿದು ಬಂದು ಹೀಗೇ ಬೈತಾನೆ, ಮತ್ತೆ ಮಾರನೆ ದಿನ ಸರಿ ಹೋಗ್ತಾನೆ ಎಂದು ನಿರ್ಲಕ್ಷಿಸುವವರಿಗೂ ಸಹ ಹೆಂಡತಿಯನ್ನು ಅತ್ಯಂತ ಗೌರವದಿಂದ ಕಾಣುವ ಗಂಡಂದಿರನ್ನು, ಮನೆಯವರನ್ನು ಕಂಡಾಗ ತಮ್ಮ ಬದುಕಿನ ವಿಷಾದ ಒಮ್ಮೆಯಾದರೂ ಹಾದು ಹೋಗುತ್ತದೆ.

ಅಷ್ಟಕ್ಕೂ ಸೂಳೆ ಎನ್ನುವುದನ್ನು ಬೈಗುಳವಾಗಿ ಬಳಸುವವರಿಗೆ ಸೆಕ್ಸ್‌ ವರ್ಕರ್‌ ಗಳ ಬದುಕಿನ ಕುರಿತು ಸಣ್ಣ ಸುಳಿವಾಗಲೀ, ತಿಳಿವಾಗಲೀ ಇರುವುದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ಆಶಯಗಳನ್ನು ಧಿಕ್ಕರಿಸುವ ಅಥವಾ ಮೀರಿ ನಿಲ್ಲುವ ಎಲ್ಲರನ್ನೂ ಹೀನಾಯವಾಗಿ ಕಾಣಬಹುದು ಎನ್ನುವವರಿಗೆ, ಬಹುಪಾಲು ಮಹಿಳೆಯರನ್ನು ಈ ಕೂಪಕ್ಕೆ ತಳ್ಳಿರುವುದು ಅದೇ ವ್ಯವಸ್ಥೆ ಎನ್ನುವ ಸೂಕ್ಷ್ಮ ಅರ್ಥವಾಗಿರುವುದಿಲ್ಲ. ಬಡತನ, ವಿದ್ಯಾಭ್ಯಾಸದ ಕೊರತೆ, ತೀರಿಸಲಾಗದಷ್ಟು ಸಾಲ, ಮನೆಯಲ್ಲಿನ ಕುಡಿತ ಮುಂತಾದ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಂಡ ಒಂದು ವರ್ಗದ ಹೆಣ್ಣುಮಕ್ಕಳು ಅನಿವಾರ್ಯವಾಗಿ ಸೆಕ್ಸ್‌ ವರ್ಕರ್‌ ಗಳಾಗಿ ಬದಲಾಗುವ ಪರಿಸ್ಥಿತಿ ನಮ್ಮಲ್ಲಿದೆ.

ಎಂದಿನಿಂದಲೋ ಚಾಲ್ತಿಯಲ್ಲಿರುವ ದೇವದಾಸಿ ಪದ್ಧತಿ ಮುಂತಾದ ಮೂಢ ನಂಬಿಕೆಗಳು, ಸಾಮಾಜಿಕ ಪಿಡುಗುಗಳಿಂದಾಗಿ ವೇಶ್ಯಾವೃತ್ತಿ ಭಾರತದಲ್ಲಿ ಶತಮಾನಗಳಿಂದಲೂ ಇದೆ. ಕಾಲಾನುಕ್ರಮೇಣ ಸಾಮಾಜಿಕ ಮತ್ತು ಆರ್ಥಿಕ ಅನಿವಾರ್ಯತೆಗಳು ಮಹಿಳೆಯರನ್ನು ವೇಶ್ಯಾವೃತ್ತಿಗೆ ದೂಡಿವೆ.

ರಾಷ್ಟ್ಟೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (NACO) ವರದಿಯ ಅನುಸಾರ ಭಾರತದಾದ್ಯಂತ ಸುಮಾರು ಆರು ಲಕ್ಷಕ್ಕೂ ಹೆಚ್ಚು ವೇಶ್ಯೆಯರಿದ್ದಾರೆ. ಮುಂಬೈ, ಕೋಲ್ಕತ್ತಾ, ದೆಹಲಿ ಮುಂತಾದ ಮಹಾನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹಚ್ಚಾಗಿದ್ದು, ಇದರಲ್ಲಿ ಸುಮಾರು 70% ಮಹಿಳೆಯರು ಮತ್ತು 30% ಪುರುಷರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.

ಸುಪ್ರೀಂ ಕೋರ್ಟ್‌ ಲೈಂಗಿಕ ಕಾರ್ಯಕರ್ತರನ್ನು informal sector ನಡಿಯಲ್ಲಿ ಗುರುತಿಸಿ ಮೂಲಭೂತ ಹಕ್ಕುಗಳನ್ನು ಒದಗಿಸಲು ಮಾರ್ಗಸೂಚಿಗಳನ್ನು ನೀಡಿದ್ದರೂ ಸಹ ಸಮಾಜದಲ್ಲಿ ಅವರನ್ನು ನೋಡುವ. ನಡೆಸಿಕೊಳ್ಳುವ ರೀತಿ ಬಹಳಷ್ಟು ಕೀಳುಮಟ್ಟದ್ದಾಗಿದೆ. ಹಲವಾರು ಕಡೆಗಳಲ್ಲಿ ವೇಶ್ಯಾವೃತ್ತಿಗೆ ಇಳಿದವರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಸಾಮಾಜಿಕ, ಆರ್ಥಿಕ ಸಮಸ್ಯೆಯ ಜೊತೆ ಜೊತೆಗೆ ಆರೋಗ್ಯ ಸಮಸ್ಯೆಗಳಾದಲೂ ಅಗತ್ಯ ಸೌಲಭ್ಯಗಳು ದೊರೆಯದ ಅಸಹಾಯಕತೆಗೆ ಒಳಗಾಗುತ್ತಾರೆ.

ಕೆಲ ವರ್ಷಗಳ ಹಿಂದಷ್ಟೇ ಶೌಚಾಲಯದಲ್ಲಿ ಒಬ್ಬ ವೇಶ್ಯೆಯ ವಿಡಿಯೋ ಚಿತ್ರೀಕರಣ ಮಾಡಿ ಆಕೆ ಯಾಕಣ್ಣಾ ಅಂದಿದ್ದನ್ನು ವೈರಲ್‌ ಮಾಡಿ ಆಕೆಯ ಬದುಕನ್ನೇ ನಾಶ ಮಾಡಿದ ಸಮಾಜ ನಮ್ಮದು. ಆಕೆಗೆ ಒಂದು ಹೆಣ್ಣುಮಗುವಿದ್ದು, ಬದುಕು ಕಳೆದುಕೊಂಡ ಈಕೆ ಹುಚ್ಚಿಯಾಗಿದ್ದು ಈ ಸಮಾಜದ ಸಾಧನೆ. ಕೇವಲ ಎರಡು ಹೊತ್ತಿನ ಊಟ, ಮಕ್ಕಳ ಬದುಕು ಭವಿಷ್ಯಕ್ಕೋಸ್ಕರ ವೇಶ್ಯಾ ವೃತ್ತಿಗಿಳಿದಿರುವ ಎಷ್ಟೋ ಹೆಣ್ಣುಮಕ್ಕಳನ್ನು ಈ ಸಮಾಜ ಸಭ್ಯತೆಯಿಂದ ನಡೆಸಿಕೊಳ್ಳಬೇಕಿದೆ. ವ್ಯವಸ್ಥೆ ಪರ್ಯಾಯ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕಿದೆ. ಸಾಮಾಜಿಕ ಭದ್ರತೆ, ಘನತೆ ಒದಗಿಸುವತ್ತ ಹೆಜ್ಜೆಯಿಡಬೇಕಿದೆ. ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಚಟಪಡಿಸುತ್ತಿರುವ ವರ್ಗಗಳನ್ನು ಕನಿಷ್ಟ ಮಾನವೀಯವಾಗಿ ನೋಡದ ಮನುಷ್ಯರು ತಾವು ಹೆಮ್ಮೆಯಿಂದ, ಉಢಾಫೆಯಿಂದ ಬಳಸುವ ಪದಗಳಿಗಿಂದ ಎಷ್ಟೋ ಕೆಳಮಟ್ಟಕ್ಕೆ ಇಳಿದಿದ್ದಾರೆ.

ಇದರ ಜೊತೆಗೇ ಆಗಬೇಕಾದದ್ದು, ಮಹಿಳೆಯರು ತಾವು ಈ ತರಹದ ಬೈಗುಳಗಳನ್ನು ಒಪ್ಪಿಕೊಳ್ಳಬಾರದು ಎನ್ನುವುದನ್ನು ನಿರ್ಧರಿಸುವುದರ ಜೊತೆಗೆ, ಯಾವುದೇ ಬೈಗುಳವಾಗಲೀ ತಮ್ಮ ಘನತೆಗೆ ಕುಂದು ತರುವ ಶಕ್ತಿ ಹೊಂದಿಲ್ಲ ಎನ್ನುವುದನ್ನೂ ಅರಿಯಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page